ಮರೆತು ಹೋದ ಹಳ್ಳಿಯ ಬಾಲ್ಯ !
ಕಳೆದ ಮುವತ್ತು- ನಲವತ್ತು ವರ್ಷಗಳಲ್ಲಿ ಆಧುನಿಕತೆಯ ಸ್ಪರ್ಶದಿಂದ ಹಳ್ಳಿಯ ಚಿತ್ರಣವೇ ಬದಲಾಗಿಬಿಟ್ಟಿದೆ. ಆಧುನಿಕತೆ ಜಾಗತೀಕರ ಣದ ಪ್ರಭಾವವು ಗ್ರಾಮೀಣ ಸಂಸ್ಕೃತಿನ್ನೇ ಬದಲಿಸಿಬಿಟ್ಟಿದೆ. ಗೋಧೂಳಿಂದ ತುಂಬಿದ್ದ ಮಣ್ಣಿನ ರಸ್ತೆಗಳೆಲ್ಲವು ಸಿಂಮೆಂಟಿನ ಡಾಂಬರಿನ ರಸ್ತೆಗಳಾಗಿಬಿಟ್ಟಿವೆ. ಎತ್ತಿನಗಾಡಿಗಳು – ಸೈಕಲ್ಗಳು ಕಣ್ಮರೆಯಾಗಿ, ಟ್ಯಾಕ್ಟರ್ಗಳು ಸ್ಕೂಟರ್ ಕಾರುಗಳೇ ಓಡಾಡುತ್ತಿವೆ. ಪಡಸಾಲೆಗಳಲ್ಲಿ ಕುಳಿತು ಚೌಕಾಬಾರ, ಹುಲಿಮನೆಯಾಟ ಆಡುತ್ತಿದ್ದ ಚಿತ್ರಣಗಳು ಮರೆಯಾಗಿ, ಎಲ್ಲೆಲ್ಲೂ ಮೊಬೈಲ್ ಫೋನ್ ಹಿಡಿದು ಕುಳಿತ ಯುವಕರೇ ಕಾಣಸಿಗುತ್ತಾರೆ.
ನಾವು ಮೆಲಕು ಹಾಕಿದಷ್ಟು ಆನಂದವನ್ನು ಒಸರಿಸುವಂತದ್ದು ನಮ್ಮ ಹಳ್ಳಿಯ ಬಾಲ್ಯ ಜೀವನ. ಅದರೊಂದಿಗೆ ಇಂದಿನ ಹಳ್ಳಿಯ ಮಕ್ಕಳ ಬಾಲ್ಯ ಜೀವನವನ್ನು ತಳುಕು ಹಾಕಿದರೆ ನೋಡಿದಗ, ಅಜಗಜಾಂತರ ವ್ಯತ್ಯಾಸ ಗೋಚರಿಸುತ್ತದೆ. ಬಿಸಿಲಲ್ಲಿ ಆಟವಾಡಿ ಸುಸ್ತಾಗಿ ಮನೆಗೆ ಬಂದಾಗ, ಅಜ್ಜಿಯು ಅಕ್ಕರೆಂದ ಘಮ್ಮನೆ ವಾಸನೆಯ ಮಣ್ಣಿನ ಮಡಕೆಯಲ್ಲಿಟ್ಟಿದ್ದ ಹೊಳೆಯ ನೀರನೀಡುತ್ತಿದ್ದಳು. ಆ ನೀರಿನಿಂದ ಮಾಡಿಕೊ ಡುತ್ತಿದ್ದ ನಿಂಬೆಹಣ್ಣಿನ, ಬೇಲದಹಣ್ಣಿನ ಬೆಲ್ಲದ ಪಾನಕವು ಅಮೃತ ಸಮಾನವಾಗಿರುತ್ತಿತ್ತು. ಈಗ ಕಾಲ ಬದಲಾಗಿಬಿಟ್ಟಿದೆ. ಇಂದು ಅವುಗಳ ಸ್ಥಾನವನ್ನು ಫ್ರಿಡ್ಜ್ನಲ್ಲಿಟ್ಟಿರು ಬೋರ್ವೆಲ್ ನೀರು, ಪೆಪ್ಸಿ ಕೋಲಾ ಮುಂತಾದವು ಆಕ್ರಮಿಸಿಬಿಟ್ಟಿವೆ.
ಅಂದು ನಾವು ಶಾಲೆಗೆ ಹೋಗುವಾಗ ನಮ್ಮ ತಾಯು ಇದ್ದಿಲನ್ನು ಮಾರಿ ಸೆರಗಲ್ಲಿ ಗಂಟಿಕ್ಕುತ್ತಿದ್ದ ಹತ್ತುಪೈಸೆ ಅಥವಾ ನಾಕಾಣೆಯನ್ನು ಕೊಟ್ಟರೆ ನಾವೇ ಶ್ರೀಮಂತರು. ಅಂಗಡಿಗೆ ಹೋಗಿ ಆ ಹಣದಿಂದ ಚಕ್ಕುಲಿಯನ್ನೋ, ಬತ್ತಾಸನ್ನೋ, ರಸಗುಲ್ಲಾವನ್ನೋ, ನಿಂಬೆಹುಳಿ ಪೆಪ್ಪರ್ಮೆಂಟನ್ನೋ ಅಥವಾ ಬೋಟಿಯನ್ನೋ ತೆಗೆದುಕೊಂಡು ಗೆಳೆಯರೊಡನೆ ಹಂಚಿಕೊಂಡು ತಿನ್ನುತ್ತಿದ್ದ ನೆನೆಪು ಎಂದಿಗೂ ಮಾಸದು. ಹಣವಿಲ್ಲದಿದ್ದರೂ ಚಡ್ಡಿಜೇಬಿನಲ್ಲಿ ಹುರಿದ ಹುರುಳಿಕಾಳಗಳನ್ನು, ಅವರೆಕಾಳುಗಳನ್ನು ಕಡಲೆಕಾ ತುಂಬಿಕೊಂಡು ಶಾಲೆಯ ಬಿಡುವಿನ ವೇಳೆಯಲ್ಲಿ ತಿನ್ನುತ್ತಿದ್ದೆವು. ಕೆಲವೊಮ್ಮೆ ಹುರಿದ ಹುಣಸೆ ಬೀಜಗಳನ್ನೂ ಒಣ ಅಡಕೆಯನ್ನು ಅಗಿಯುವಂತೆ ಅಗಿಯುತ್ತಿದ್ದೆವು. ಅದು ನಮ್ಮ ಹಲ್ಲುಗಳ ಗಟ್ಟಿತನಕ್ಕೆ ಸಾಕ್ಷಿಯಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಹಳ್ಳಿಯ ಮಕ್ಕಳು ಬಹುರ್ಟ್ರಾಯ ಕಂಪನಿಗಳ ಬಣ್ಣದ ಆಹಾರಕ್ಕೆ ಮೊರೆ ಹೋಗಿದ್ದಾರೆ. ಆ ತಿನಿಸುಗಳ ಜಾಗದಲ್ಲಿ ಇಂದು ಪ್ಲಾಸ್ಟಿಕ್ಕವರ್ನಿಂದ ಆವರಿಸಲ್ಪಟ್ಟ ಲೇಸು ಕುರ್ಕುರೆ, ಬಗೆಬಗೆಯ ಬಿಸ್ಕತ್ ಚಾಕಲೇ ಟುಗಳು ಹಳ್ಳಿಗೂ ದಾಳಿಟ್ಟಿವೆ. ಹಾಗೆಯೇ ಇವುಗಳ ಜೊತೆ ಹಲ್ಲಿನ ಸಮಸ್ಯೆಗಳೂ, ಅಜೀರ್ಣದ ಸಮಸ್ಯೆಗಳೂ ಸಹ ಬಂದಿವೆ.
ನಾವು ಚಿಕ್ಕವರಿದ್ದಾಗ ಗೆಳೆಯರೊಡನೆ ಸೇರಿ ಸುಡುವ ಬಿಸಿಲನ್ನೂ, ಸುರಿವ ಬೆವರನ್ನೂ ಲಕ್ಕಿಸದೆ ಆಡುತ್ತಿದ್ದ ಆಟಗಳನ್ನು ಇಂದು ನಾವು ನಮ್ಮ ಹಳ್ಳಿಗಳಲ್ಲಿ ಕಾಣಲು ಸಾಧ್ಯವಿಲ್ಲ. ಊರಿನ ಪಕ್ಕದಲ್ಲಿ ಜುಳುಜುಳು ಹರಿಯುತ್ತಿದ್ದ ಹಳ್ಳಗಳಲ್ಲಿ ಈಜಾಡುತ್ತಾ, ಮರಿಮೀನುಗಳನ್ನು ಏಡಿಗಳನ್ನು ದುಡಿಯುತ್ತಿದ್ದ ಆ ಅನುಭವವನ್ನು ವರ್ಣಿಸಲಾಗದು. ತುಂಬಿತುಳುಕುತ್ತಿದ್ದ ಕೆರೆಯ ದಡದಲ್ಲಿ ಕುಳಿತು ಬಿದುರಿನ ಕೋಲಿಗೆ ಉದ್ದವಾದ ದಾರ ಕಟ್ಟಿ, ಅದರ ಕೊರಳ ಭಾಗಕ್ಕೆ ಜೋಳದ ಬೆಂಡನ್ನು ಕಟ್ಟಿ, ದಾರದ ತುದಿಗೆ ಮೀನಿನ ಗಾಳವನ್ನು ಕಟ್ಟಿ, ಗಾಳದ ಮೂತಿಗೆ ಎರೆಹುಳುವನ್ನು ಸಿಕ್ಕಿಸಿ, ಬಂಗಾರದಂತೆ ಥಳಥಳನೆ ಹೊಳೆಯುತ್ತಿದ್ದ ಮೀನುಗಳನ್ನು ಹಿಡಿಯುವುದು ನಮಗೆಲ್ಲ ಅತಿ ಆನಂದದ ಆಟವಾಗಿತ್ತು. ಬೇಸಿಗೆ ಕಾಲವು ನಮಗೆಲ್ಲಾ ಆಟದ ಕಾಲವೇ ಆಗಿರುತ್ತಿತ್ತು. ಬೆಳದಿಂಗಳಲ್ಲಿ ಹುಡುಗರು ಹುಡುಗಿಯರೆಲ್ಲಾ ಗುಂಪಾಗಿಸೇರಿ ಸುರಸುರ ಬತ್ತಿ, ಟೋಪಿಬೇಕೆ ಟೋಪಿ, ಕಣ್ಣಮುಚ್ಚಾಲೆ ಮುಂತಾದ ಆಟಗಳನ್ನು ಆಡುತ್ತಿದ್ದೆವು. ಬಿರುಬಿಸಿಲಿನಲ್ಲಿ ಗೆಳೆಯರೊಂದಿಗೆ ಸೇರಿ ಚಿಣ್ಣಿದಾಂಡು, ಬುಗುರಿಯಾಟ, ಗೋಲಿಯಾಟ, ಕುಂಟೆಬಿಲ್ಲೆ, ಚೌಕಾಬಾರ, ಹುಲಿಮನೆಯಾಟ, ಲಗೋರಿ, ಮುಂತಾದ ಆಟಗಳನ್ನು ಆಡುವುದು ಸಂತಸದ ವಿಷಯವಾಗಿತ್ತು. ಇವುಗಳಿಂದ ದೈಹಿಕ ವ್ಯಾಯಮವನ್ನೂ ಮನಸ್ಸಿಗೆ ಆನಂದವನ್ನು ನೀಡುತ್ತಿದ್ದವು.
ಒಂದು ಕಾಲಕ್ಕೆ ಸಾಮೂಹಿಕವಾಗಿ ಸಾರ್ವತ್ರಿಕವಾಗಿದ್ದ , ಗ್ರಾಮೀಣ ಸಂಸ್ಕೃತಿಯ ಒಂದು ಭಾಗವಾಗಿದ್ದ ಈ ಆಟಗಳು ಇಂದು ಕಣ್ಮರೆಯಾಗಿವೆ. ಈಗ ಇವುಗಳ ಬದಲಿಗೆ ಕ್ರಿಕೆಟ್ ಆಟ ಒಂದೇ ಹಳ್ಳಿಯ ಮಕ್ಕಳ ಆಟವಾಗಿದೆ. ಅಲ್ಲದೆ ಬಯಲಲ್ಲಿ ಆಡಿ ನಲಿಯಬೇಕೆದ್ದ ಮಕ್ಕಳನ್ನು ಟಿವಿ. ಮೊಬೈಲ್ ಫೋನ್ಗಳು ಕಟ್ಟಿಹಾಕಿಬಿಟ್ಟಿವೆ. ಮಕ್ಕಳು ಇತರ ಮಕ್ಕಳೊಡನೆ ಬೆರೆಯುವುದೂ ವಿರಳವಾಗಿಬಿಟ್ಟಿದೆ. ಹಾಗೇ ಯೋಚಿಸಿ ನೋಡಿದಾಗ, ನಮ್ಮ ಹಳ್ಳಿಯ ಬಾಲ್ಯವೆಂಬುದು ಮತ್ತೆಂದೂ ಕಾಣಸಿಗದ ಕಾಲದ ಹೊಳೆಯಲ್ಲಿ ತೇಲಿ ಹೋದ ನೆನಪಿನ ದೋಣಿಯಾಗಿದೆ ಎಂದು ಹೇಳಬಹುದು.
ಲೋಕೇಶ್. ಎಂ
ಕನ್ನಡ ಅಧ್ಯಾಪಕರು, ಬೆಂಗಳೂರು