‘ಮಹಿಳೆ’ ಕುರಿತು ಪ್ರತ್ಯೇಕ ಮನೋಧರ್ಮವೇಕೆ?
ಕಾಲ ಧರ್ಮಗಳನ್ನು ಮೀರಿಸದ ಪ್ರಶ್ನಾತೀತ ಚಿಂತನೆಯಾಗಿರುವುದು ‘ಮಹಿಳೆ’ ಎಂಬ ವಿಷಯ. ಎಲ್ಲಿಯ ತನಕ ಲಿಂಗ ತಾರತಮ್ಯ ಇರುತ್ತದೆಯೋ ಅಲ್ಲಿಯತನಕ ಮೇಲು-ಕೀಳು ಮನೋಭೂಮಿಕೆಗಳು ಸೃಷ್ಟಿಯಾಗಿ ಈ ತಾರತಮ್ಯವನ್ನು ಪಾಲಿಸುತ್ತಲೇ ಸಾಗುತ್ತವೆ. ‘ಮಹಿಳೆ’ ನಿರ್ಮಿತ ಪದವಿಯಲ್ಲ, ಅದೊಂದು ಹುಟ್ಟು. ಮನುಷ್ಯ ಪ್ರಾಣಿಯಲ್ಲಿ ಸೃಷ್ಟಿಗಾಗಿ ಗಂಡು-ಹೆಣ್ಣು ಎಂಬ ಎರಡು ಮಾದರಿಯ ಮನುಷ್ಯ ಜೀವಗಳು, ಇವು ಪ್ರತ್ಯೇಕಗಳಲ್ಲ. ನಾವು ಈ ಕಾರ್ಯಕಾರಣದಲ್ಲಿ ಸದಾ ಹೊಸ ಹುಡುಕಾಟದಲ್ಲಿದ್ದೇವೆ. ಅದರ ಭಾಗವಾಗಿ ಕೆಲವು ಸೋಲುಗಳನ್ನು ನಮ್ಮ ಮನೋಭಿತ್ತಿಗಳಲ್ಲಿ ತುಂಬಿಕೊಂಡಿದ್ದೇವೆ. ಅದನ್ನು ಕಳಚುವ ಪುಟ್ಟ ಮನೋಶೋಧವಿಲ್ಲಿದೆ.
ಮಹಿಳೆ ಎಂದರೇನು ಎಂಬುದಕ್ಕೆ ಲಕ್ಷಾಂತರ ಪುಟಗಳ ಸಂಶೋಧನೆ, ಅಧ್ಯಯನ, ಅಭಿಪ್ರಾಯಗಳು ಈಗಾಗಲೇ ನಮ್ಮ ಸಮಾಜದ ಮುಂದಿವೆ. ಎಲ್ಲವುಗಳ ತಿರುಳು ಕೂಡ ಪ್ರತ್ಯೇಕವಲ್ಲ. ಮಹಿಳೆ ಕೂಡ ಪುರುಷನಂತೆ ಸಮ ಮನುಷ್ಯ ಜೀವಿ ಎಂಬುದನ್ನೇ ತಿಳಿಸುತ್ತವೆ. ಆದರೆ, ನಮ್ಮ ಮನೋ ಭೂಮಿಕೆಯಲ್ಲಿ ಎರಡನೇ ದರ್ಜೆಯನ್ನು ರೂಪಿಸಿಕೊಂಡಿರುವ ಕೊಂಡಿಯನ್ನು ಕಳಚಬೇಕಿದೆ. ಮಹಿಳೆ ಕೂಡ ಮಹಿಳೆಯನ್ನು ಮೊದಲ ದರ್ಜೆಯಲ್ಲಿ ಯೋಚಿಸದಿರುವುದು, ಪುರುಷ ನನ್ನಷ್ಟೇ ದೂರುತ್ತಿರುವುದು ಪ್ರತ್ಯೇಕ ನಿಲುವಿಗೆ ಪ್ರಮುಖ ಕಾರಣ. ಇನ್ನೂ ಹಲವು ಕಾರಣಗಳನ್ನು ಚರ್ಚಿಸೋಣ. ಅದಕ್ಕೂ ಮುನ್ನ ಮಹಿಳೆ ಪ್ರತ್ಯೇಕವಲ್ಲ ಎಂಬುದಕ್ಕೆ ಸೂಕ್ತ ಕೆಲವು ಕಾರಣಗಳನ್ನು ಪಟ್ಟಿ ಮಾಡುತ್ತಿದ್ದೇನೆ. ಹೆಣ್ಣು ಕುರಿತ ಅಸ್ತಿತ್ವವನ್ನು ಪ್ರತ್ಯೇಕವಾಗಿ ನೋಡುವ ಅಗತ್ಯವಿಲ್ಲ, ಏಕೆಂದರೆ, ಪುರುಷನಂತೆಯೇ ಮಹಿಳೆ ಜನನ, ಬಾಲ್ಯ, ಯೌವನ ಹಾಗೂ ಸಾವು ಇರುವ ಸತ್ಯವನ್ನು ಅರಿಯಬೇಕಿದೆ. ಸೃಷ್ಟಿ ಕ್ರಿಯೆಯು ಆಕೆಯ ಪ್ರತ್ಯೇಕ ಕ್ರಿಯೆಯಲ್ಲ, ಸಹಜಕ್ರಿಯೆ. ಅದನ್ನು ನಾವು ಗೌರವಿಸ ಬೇಕು ಏಕೆಂದರೆ ನಾವು ಆ ಕ್ರಿಯೆಯಿಂದಲೇ ಜನಿಸಿದ್ದೇವೆ. ಅದನ್ನು ಆರೋಗ್ಯ ಯುತವಾಗಿ ಕಾಪಾಡುವ ಜವಾಬ್ದಾರಿ ಪ್ರತಿ ಮನುಷ್ಯನದು.
ಋತು ಚಕ್ರವು ಸೃಷ್ಟಿ ಭಾಗವಾದ ಕಾರಣ ಅದು ಮೈಲಿಗೆಯಲ್ಲ, ಈ ವಿಚಾರದಲ್ಲಿ ಮಹಿಳೆಯೇ ಮೊದಲು ಬಿಡುಗಡೆ ಪಡೆದು ಅದು ವಿಶ್ರಾಂತ ಸಮಯವೆಂದು ಪರಿಗಣಿಸಬೇಕು. ಪುರುಷನಿಗೆ ಅರ್ಥಪಡಿಸಬೇಕು. ಇದು ಕಾನೂನಾತ್ಮಕವಾಗಿ ತಿಂಗಳ ಒಂದು ದಿನ ವೃತ್ತಿ ಬಿಡುವು ನೀಡಿದಾಗ ಮಾತ್ರ ಮಹಿಳೆಯ ಆರೋಗ್ಯವನ್ನು ಗೌರವಿಸಿದಂತಾಗುತ್ತದೆ. ಇದು ಪ್ರತ್ಯೇಕವಲ್ಲ. ದೇಹ ಪ್ರಕ್ರಿಯೆಯ ಸಹಜ ಕಾರ್ಯ.
ಮಹಿಳೆ ಎರಡನೇ ದರ್ಜೆಯಾಗಲಿ, ಪುರುಷನ ನಂತರದ ಸ್ಥಾನವಾಗಲಿ ಅಲ್ಲ. ಆಕೆ ಸಮಾನಳು. ಮನುಷ್ಯ ಜೀವ. ಕೌಟುಂಬಿಕವಾಗಿ, ಔದ್ಯೋಗಿಕವಾಗಿ ಪ್ರತ್ಯೇಕಿಸುವ ಮನೋ ಧರ್ಮಗಳನ್ನು ಬದಲಿಸಿಕೊಳ್ಳಬೇಕು. ಅದು ಹಕ್ಕಾಗಿ, ಹೋರಾಟವಾಗಿ ಕೇಳುವ ವಿಷಯವೇ ಅಲ್ಲ. ಇದು ಸಹಜ ವಿಚಾರ.
ಕಾರ್ಯಕಾರಣ ಸಂಬಂಧ
ಮಹಿಳೆಯನ್ನು ಕಾರ್ಯಕಾರಣ ಸಂಬಂದದ ‘ಪ್ರತ್ಯೇಕ ನೆಲೆ’ಯಲ್ಲಿ ನೋಡುವುದನ್ನು ಪ್ರತಿ ಮನಸ್ಸು ಒಪ್ಪಿಕೊಂಡು ಕೈ ಬಿಡಬೇಕಾದುದು ಮೊದಲ ಧರ್ಮ. ಆಕೆಯನ್ನು ಶಕ್ತಿ ಮೊದಲಾದ ವಿಚಾರದಲ್ಲಿ ಕಡಿಮೆ ಎಂದು ಭಾವಿಸಿ, ಪುರುಷ ಮುಖಿನೆಲೆಯ ಶಕ್ತಿ ನೋಟಗಳನ್ನು ಬದಲಿಸಿಕೊಳ್ಳಬೇಕಿದೆ. ಪುರುಷ – ಮಹಿಳೆ ಪ್ರತ್ಯೇಕ ಮಾದರಿಯ ಶಕ್ತಿ ಉತ್ಪಾದಕರು. ಆದರೆ ಇದು ಭಿನ್ನತೆಯಲ್ಲ. ಇದು ಜೀವ ಸೃಷ್ಟಿಯ ಕ್ರಮ. ಈ ವೈಜ್ಞಾನಿಕ ಸತ್ಯವನ್ನು ಅರಿಯದಿದ್ದರೆ ನಾವು ಸೋಲುತ್ತೇವೆ. ಮಹಿಳೆಯೇ ನಿರ್ಮಿಸಿಕೊಂಡ ಚೌಕಟ್ಟಿನಲ್ಲಿ ಮತ್ತೆಮತ್ತೇ ದೇಹ ಮೀಮಾಂಸೆ ಹಕ್ಕುಗಳ ಪ್ರತಿಪಾದನೆಗಾಗಿ ಹೋರಾಡುವ ಚಿಂತನೆಗಳನ್ನು ಬದಲಿಸಿಕೊಳ್ಳಬೇಕಿದೆ.
ಮಹಿಳೆಯನ್ನು ಕೆಲವು ಕೆಲಸಗಳಿಗೆ ಮಾತ್ರವೆಂದು ಗಮನಿಸಿ, ಪ್ರತ್ಯೇಕಿಸುವುದನ್ನು ನಿಲ್ಲಿಸಬೇಕಿದೆ. ಮಹಿಳೆ ಮತ್ತು ಪುರುಷ ಎಂಬ ಪ್ರತ್ಯೇಕತೆ ಇಲ್ಲ. ಈ ಎರಡು ಜೀವಗಳು ಪ್ರಕೃತಿಯ ಸಹಜ ಸೃಷ್ಟಿಗಳು. ನಾವು ಕಾಣಿಸುವ ಸಿನೆಮಾ, ನಾಟಕ, ಕೇಳಿಸುವ ಹಾಡು ಇತರ ಸಂಗೀತಗಳಲ್ಲಿ ಸಹಜವಾದ ಅಂದರೆ ವ್ಯತ್ಯಾಸವಿಲ್ಲದ ಕಥನಗಳನ್ನು ನಿರೂಪಿಸ ಬೇಕಿದೆ.
ಮಹಿಳೆ ಪ್ರತ್ಯೇಕ ನೆಲೆಯಲ್ಲ. ಆಕೆಯು ಪುರುಷನಂತೆಯೇ ಎಂಬ ಪಠ್ಯಗಳು, ಓದುಗಳು ರಚನೆಗೊಳ್ಳಬೇಕು. ಎಲ್ಲಿಯ ವರೆಗೆ ಪ್ರತ್ಯೇಕವಾದ ಹಕ್ಕುಗಳಿಗಾಗಿ ಹೋರಾಡುತ್ತೇವೆಯೋ ಅಲ್ಲಿಯ ವರೆಗೂ ಶೋಷಣೆ ಇರುತ್ತದೆ. ಸಹಜತೆ ಇರುವ ಕಡೆಯಲ್ಲಿ ಬೇಧವಿರುವುದಿಲ್ಲ. ನಾವು ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕ ವಾಗಿ ಇನ್ನೂ ಅನಕ್ಷರಸ್ಥ ನೆಲೆಯಲ್ಲೇ ಯೋಚಿಸುತ್ತಿದ್ದೇವೆ. ಈ ಕ್ಷೇತ್ರಗಳಲ್ಲಿ ನಾವೇ ನಿರ್ಮಿಸಿಕೊಂಡಿರುವ ಬೇಲಿಯನ್ನು ಮುಕ್ತವಾಗಿ ಕಳಚಬೇಕಿದೆ.
ಡಾ. ರವಿಶಂಕರ್ ಎಂ.ಕೆ
ಕನ್ನಡ ಅಧ್ಯಾಪಕರು,
ಬೆಂಗಳೂರು,