ಏನಿದು ಭಾಷೆಯ ‘ರಾಜಕಾರಣ’ !
ಒಂದು ಭಾಷೆಯು ಪ್ರತಿ ಜೀವಿಯಲ್ಲೂ ಅಸ್ಮಿತೆಯಾದ ಕಾರಣ, ಅದನ್ನು ಕುರಿತು ಯಾರು ಮಾತನಾಡಿದರೂ ಆ ಕಡೆ ಪ್ರತಿಯೊಬ್ಬರ ಆಸಕ್ತಿ ಸದಾ ಇರುತ್ತದೆ. ಈ ವಿಚಾರದಲ್ಲಿ ಎರಡು ರೀತಿಯ ಚಿಂತನೆಗಳು ನಮ್ಮಲ್ಲಿ ಕೆಲಸಮಾಡುತ್ತವೆ. ಮಾತೃಭಾಷೆಯ ಅಸ್ಮಿತೆ ಹಾಗೂ ಪ್ರಿಯ ಭಾಷೆಯ ಅಸ್ಮಿತೆ. ಈ ಭಾಷೆಯ ವಿಚಾರಗಳ ರಾಜಕಾರಣವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಿದೆ.
ಭಾಷೆಯು ನಮ್ಮ ಸಂವಹನ ಮಾಧ್ಯಮ. ಅಷ್ಟೇ ಉಳಿದಿದ್ದರೆ ಅದರ ಅಸ್ಮಿತೆ ರಾಜಕಾರಣವಾಗಿ ಬದಲಾಗುತ್ತಿರಲಿಲ್ಲ. ಇದೊಂದು ನಮ್ಮನ್ನು ಪ್ರತ್ಯೇಕವಾಗಿ ಗುರ್ತಿಸಿಕೊಳ್ಳುವ ‘ಕಾಣಿಸುವಿಕೆ’. ಪ್ರತಿಯೊಬ್ಬರು ನೀವು ಕಾಣುವ ಮತ್ತು ಕಾಣಿಸುತ್ತಿರುವ ಭಾಷೆ ಯಾವುದು ಎಂಬುದನ್ನು ಯೋಚಿಸಿದರೆ ಇದರ ರಾಜಕಾರಣ ತಿಳಿಯುತ್ತದೆ. ನೀವು ಕಾಣುವ ಭಾಷೆಯ ಕುರಿತು ನಿಮಗೆಷ್ಟು ಗೊತ್ತಿದೆ ಹಾಗೂ ಗೊತ್ತಿಲ್ಲದಿರುವಿಕೆಯ ಕುರಿತು ನಿಮಗೆಷ್ಟು ಆಸಕ್ತಿ ಇದೆ. ಶಬ್ದಕೋಶಗಳ ಕುರಿತು ನೀವು ತೋರುವ ಒಲವು ಹೇಗಿದೆ. ಆ ಭಾಷೆಯ ವೈವಿಧ್ಯತೆಯನ್ನು ನೀವು ಅದೆಷ್ಟು ಪ್ರೀತಿಸಬಲ್ಲಿರಿ. ಈ ಎಲ್ಲಾ ಪ್ರಶ್ನೆಗಳನ್ನು ಒಮ್ಮೆ ಪ್ರತಿಯೊಬ್ಬರು ತಮ್ಮೊಳಗೆ ಕಾಣುವುದು, ಹಾಗೂ ಈ ಹಿನ್ನೆಲೆಯೊಳಗೆ ನೀವು ಕಾಣಿಸುತ್ತಿರುವ ಭಾಷೆ ಯಾವುದು ಎಂಬ ಸೂಕ್ಶ್ಮಮತೆಗಳು ನಿಮ್ಮ ‘ಭಾಷೆಯ ಅಸ್ಮಿತೆ’ಯನ್ನು ಧೃಡಪಡಿಸುತ್ತವೆ.
ಇಲ್ಲಿ ನಮ್ಮ ಕನ್ನಡ ಭಾಷೆಯು ಕಾಣುವ ಮತ್ತು ಕಾಣಿಸುವ ನೆಲೆಯಲ್ಲಿ ಇರುವ ಶಕ್ತಿಯನ್ನು ಚರ್ಚಿಸುತ್ತಿರುವೆ. ಕನ್ನಡ ಭಾಷೆಯು ದ್ರಾವಿಡ ಭಾಷಾವರ್ಗದಿಂದ ಬಂದಿದೆ. ಇತರ ಯಾವುದೇ ಭಾಷೆಗಳಿಂದ ಜನಿಸಿಲ್ಲ. ಸಂಸ್ಕತದಿAದಲೂ ಕನ್ನಡ ಜನಿಸಿಲ್ಲ, ಜಗತ್ತಿನ ಎಲ್ಲಾ ಭಾಷೆಗಳಂತೆ ಸಂಸ್ಕೃತದ ಹಲವು ಪದಸಂಪತ್ತನ್ನು ಸ್ವೀಕರಿಸಿದೆ. ೧೮೩೮ರಲ್ಲಿ ಭಾಷಾ ವಿಜ್ಞಾನಿಗಳಾದ ಪ್ರಾನ್ಸಿಸ್ವೈಟ್ ಎಲ್ಲೀಸ್, ೧೮೭೫ರಲ್ಲಿ ರಾಬರ್ಟ್ ಕಾಲ್ಡ್ವೆಲ್, ಆರ್. ನರಸಿಂಹಾಚಾರ್ಯ ಅವರು ಈ ಕುರಿತು ಸ್ಪಷ್ಟಪಡಿಸಿದ್ದಾರೆ.
ನಮ್ಮ ದ್ರಾವಿಡ ಭಾಷಾ ವೃಕ್ಷವನ್ನು ಸರಿಯಾಗಿ ಗ್ರಹಿಸಿದರೆ ಭಾಷೆಗಳ ಕುರಿತು ಗೊಂದಲಗಳು ಇರುವುದಿಲ್ಲ.
ಮೂಲ ದ್ರಾವಿಡ ಭಾಷೆಯಿಂದ.
೧. ಉತ್ತರ ದ್ರಾವಿಡ ಭಾಷೆ
೨. ಮಧ್ಯ ದ್ರಾವಿಡ ಭಾಷೆ
೩. ದಕ್ಷಿಣ ದ್ರಾವಿಡ ಭಾಷೆ ಎಂಬ ವಿಭಾಗಗಳಿವೆ.
ಇವುಗಳನ್ನು ವಿಸ್ತೃತವಾಗಿ ಅರಿಯಲು ಅವುಗಳ ವೃಕ್ಷ ಚರಿತ್ರೆಯನ್ನು ನೋಡೋಣ.
೧. ಉತ್ತರ ದ್ರಾವಿಡ ಭಾಷೆ
ಇದರಲ್ಲಿ ಬ್ರಾಹೂಈ, ಮಲ್ತೋ, ಕುರಖ್ ಭಾಷೆಗಳು ಕಂಡುಬರುತ್ತವೆ.
೨. ಮಧ್ಯ ದ್ರಾವಿಡ ಭಾಷೆ
ಇದರಲ್ಲಿ ತೆಲುಗು, ಗೋಂಡಿ, ಗದಬ, ಕೊಂಡ, ಪೆಂಗೋ ಭಾಷೆಗಳು ಕಂಡುಬರುತ್ತವೆ.
೩. ದಕ್ಷಿಣ ದ್ರಾವಿಡ ಭಾಷೆ
ಇದರಲ್ಲಿ ತಮಿಳು, ಕನ್ನಡ, ತೆಲುಗು, ಮಲಯಾಳಂ, ತುಳು ಭಾಷೆಗಳು ಕಂಡುಬರುತ್ತವೆ.
ಈ ಮೇಲ್ಕಂಡ ಭಾಷಾ ವೃಕ್ಷವನ್ನು ಶತಮಾನಗಳಿಗೂ ಹೆಚ್ಚು ಆಳವಾಗಿ ಅಧ್ಯಯನ ಮಾಡಿದ ವಿದೇಶಿ ಹಾಗೂ ದೇಸಿಯ ವಿದ್ವಾಂಸರ ಅಧ್ಯಯನದಿಂದ ತೀರ್ಮಾನಿಸಲಾಗಿದೆ. ಆದರೂ ಇದನ್ನು ರಕ್ತಗತ ಚರಿತ್ರೆಯಂತೆ ಹೇಳಲಾಗದು. ಒಂದು ಭಾಷೆಗೆ ಅಂತಹ ಚರಿತ್ರೆಯೂ ಇರುವುದಿಲ್ಲ. ತಮಿಳು, ಕನ್ನಡ, ತೆಲುಗು, ಮಲಯಾಳಂ, ತುಳು ಇವು ದಕ್ಷಿಣ ದ್ರಾವಿಡ ಭಾಷೆಗಳಾಗಿದ್ದು ಸೋದರ ಸಂಬಂಧದಂತೆ ತಮ್ಮದೇ ಶಾಸ್ತ್ರೀಯ ಚರಿತ್ರೆಯನ್ನು ದಾಖಲಿಸಿವೆ.
ದ್ರಾವಿಡ ಭಾಷೆಯು ಯಾವುದೋ ಕಾಲದಲ್ಲಿ ಭಾರತಕ್ಕೆ ವಲಸೆ ಬಂದಿರಬಹುದು. ಮೊದಲಿಗೆ ನಿಗ್ರೋ ಜನಾಂಗ, ನಂತರ ಆಸ್ಟ್ರಿಕ್ ಜನಾಂಗ, ನಂತರ ದ್ರಾವಿಡ ಜನಾಂಗ, ನಂತರ ಆರ್ಯ ಜನಾಂಗ, ಅಂತಿಮವಾಗಿ ಮಂಗೋಲಿಯನ್ ಜನಾಂಗಗಳು ಭಾರತಕ್ಕೆ ಆಗಮಿಸಿರುವುದನ್ನು ಅಧ್ಯಯನಗಳು ಭಾಷಾ ವಿಜ್ಞಾನದಲ್ಲಿ ದಾಖಲಿಸಿವೆ. ವಿಶ್ವದ ಭಾಷಾ ಸಂಸ್ಕೃತಿಯಲ್ಲಿ ‘ನವ ನಾಗರೀಕತೆಯ ತೊಟ್ಟಿಲು’ ಎಂಬ ಪ್ರಸಿದ್ಧತೆಯನ್ನು ಪಡೆದಿರುವ ನಮ್ಮ ದ್ರಾವಿಡ ಸಂಸ್ಕೃತಿಯು ತನ್ನದೇ ಸುದೀರ್ಘ ಚರಿತ್ರೆಯನ್ನು ತೆರೆಯುತ್ತದೆ. ಭೂ ಸಂಶೋಧನೆ ಮತ್ತು ಸಿಂಧೂ ಲಿಪಿಯ ಆಧಾರದ ಮೇಲೆ ‘ಹರಪ್ಪ – ಮಹೆಂಜೋದಾರೊ ಸಂಸ್ಕೃತಿ’ಯು ದ್ರಾವಿಡ ಸಂಸ್ಕೃತಿಯಾಗಿರುವುದನ್ನು ಅಧ್ಯಯನಮಾಡಿ ತಿಳಿಸಲಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ದ್ರಾವಿಡ ಭಾಷೆಗಳು ಪರಸ್ಪರ ಸಾಮ್ಯತೆಯನ್ನು ಒಳಗೊಂಡು ಮೇಲು-ಕೀಳು ಇಲ್ಲದೆ ‘ಅನ್ಯೋನ್ಯತೆ’ಯ ಭಾಷಾ ಶಕ್ತಿಯನ್ನು ಪಡೆದಿವೆ. ಈ ಕಾರಣದಿಂದಲೇ ಬೆಂಗಳೂರಿನಂತಹ ಮಹಾನಗರದಲ್ಲಿ ವಾಸಿಸುವವರಿಗೆ ಕನ್ನಡ ಮಾತೃಭಾಷೆಯಾದರೂ ತೆಲುಗು, ತಮಿಳು, ಮಲಯಾಳಂ, ತುಳು ಭಾಷೆಗಳ ಪರಿಚಯವಿರುತ್ತದೆ.
ಕನ್ನಡವನ್ನು ಕಾಣಿಸುವ ಭಾಷೆಯಾಗಿ ಗಮನಿಸುವುದಾದರೆ, ಈ ಬಹುತ್ವ ಕನ್ನಡ ಭಾಷೆಯು ಅಖಂಡ ಕರ್ನಾಟಕದಲ್ಲಿ ಏಕರೂಪಿ ಅಭಿಮಾನ ಹೊಂದಿರುವ ‘ನಾಡಭಾಷೆ’ಯಾಗಿದೆ. ಪ್ರತಿ ಮೂವತ್ತು ಕಿ.ಮೀ ದೂರಕ್ಕೂ ತನ್ನ ಶಬ್ದಕೋಶಗಳನ್ನು, ಶೈಲಿಯನ್ನು ವಿಸ್ತರಿಸುವ ವಿಭಿನ್ನತೆಯು ಕನ್ನಡಕ್ಕಿದೆ. ಸೂಕ್ಷ್ಮತೆಯನ್ನು ದಾಟಿ ಮುಖ್ಯ ವ್ಯತ್ಯಾಸದಂತೆ ಕಾಣಿಸುವ ಉತ್ತರ ಕರ್ನಾಟಕದ ಭಾಷೆಯ ವೈವಿಧ್ಯತೆ, ದಕ್ಷಿಣ ಕನ್ನಡದ ಭಾಷೆಯ ವೈವಿಧ್ಯತೆ, ಉತ್ತರ ಕನ್ನಡ, ಉಡುಪಿ, ಕೊಡಗು, ಮೈಸೂರು ಕನ್ನಡ, ಮಲೆನಾಡು ಕನ್ನಡ, ಚಿತ್ರದುರ್ಗ ಭಾಗದ ಕನ್ನಡ, ತುಮಕೂರು ಭಾಗದ ಕನ್ನಡ, ಕೋಲಾರ ಕನ್ನಡ, ಬೆಂಗಳೂರು ಕನ್ನಡ ಹೀಗೆ ಕನ್ನಡದೊಳಗಿನ ಹಲವು ಕನ್ನಡಗಳ ವೈವಿಧ್ಯತೆಯು ವಿಭಿನ್ನವಾಗಿವೆ. ಈ ವಿಭಿನ್ನತೆಯ ಮೂಲಕ ಸಾವಿರಾರು ಶಬ್ದಕೋಶಗಳು ಸೃಷ್ಟಿಯಾಗಿವೆ. ನಾವು ಇಷ್ಟು ಸಮೃದ್ಧಿ ಇರುವ ಬಹುತ್ವ ಕನ್ನಡವನ್ನು ಎಷ್ಟೆಲ್ಲಾ ವಿಸ್ತಾರವಾಗಿ ಪ್ರೀತಿಸಬಹುದು, ಅಭಿಮಾನಿಸಬಹುದು. ಈ ಎಲ್ಲಾ ದೃಷ್ಟಿಕೋನಗಳಿಂದಲೂ ನಮ್ಮ ಭಾಷೆಯನ್ನು ಜಗತ್ತಿಗೆ ಕಾಣಿಸಬಹುದು. ಇದನ್ನು ‘ಸೊಲ್ಲಿನ ಹಿರಿಮೆ’ ಎನ್ನಬಹುದು. ನಮ್ಮ ಶಬ್ದ ಸಂಪತ್ತನ್ನು ಮೊದಲು ಪ್ರಚಲಿತಗೊಳಿಸಬೇಕಿದೆ. ಕನ್ನಡದಲ್ಲಿ ಪದಗಳಿಲ್ಲವೆಂಬ ‘ಅಲ್ಪಜ್ಞಾನ’ವನ್ನು ಅಳಿಸಿ, ನಮ್ಮಲ್ಲೂ ಸಾವಿರಾರು ಪದಕೋಶಗಳ ಸಂಪತ್ತೇ ಅಡಗಿರುವ ಕುರಿತು ತಿಳಿದು ಬಳಸಬಹುದು. ನಾವು ಮತ್ತೊಂದು ಭಾಷೆಗೆ ಕಾಣ್ಕೆಯಾಗಿ ಕೊಡಬಹುದು.
ರಾಜಕಾರಣವು ಏಕೆ?
ಭಾಷೆಗಳ ನಡುವೆ ಮೇಲು-ಕೀಳು ಭಾವನೆಯನ್ನು ಹೊಂದುವ ಯಾವುದೇ ಮನಃಸ್ಥಿತಿಯು ಸರಿಯಾಗಿ ಗ್ರಹಿಸಿದೆ ವ್ಯವಹಾರಕ್ಕಾಗಿ ಗಮನಿಸುತ್ತದೆ. ಇವರು ಲಾಭಕ್ಕಾಗಿ ಯಾವುದೇ ಭಾಷೆಯನ್ನು ಬಳಸುತ್ತಾರೆ. ನಾವೆಲ್ಲರೂ ಇಂಗ್ಲಿಷ್ ಭಾಷೆಯನ್ನು ಅನ್ನಕ್ಕಾಗಿ ಬಳಸುತ್ತಿಲ್ಲವೇ.. ಆ ರೀತಿಯಲ್ಲಿ ಕೆಲವರು ಅಧಿಕಾರಕ್ಕಾಗಿ, ಪ್ರಚಾರಕ್ಕಾಗಿ, ಅಜ್ಞಾನದ ಪರಮಾವಧಿಯಾಗಿ ಯಾವುದೇ ಭಾಷೆಯನ್ನು ಮೇಲು-ಕೀಳು ಎಂಬ ಪಂಕ್ತಿ ಭೇದದಲ್ಲಿ ಕುಳಿತು ಆಲೋಚಿಸುತ್ತಾರೆ. ಅದು ಬರಿ ಭಾಷೆಯೇ ಅಲ್ಲ, ಜಾತಿ, ಧರ್ಮ ಮೊದಲಾದಂತೆ ಯಾವುದೋ ಒಂದು ನೆಪವು ಸದಾ ಇವರಿಗೆ ಕಾರ್ಯಕಾರಣ ಸಂಬಂಧ ಕಲ್ಪಿಸುತ್ತದೆ.
ಭಾಷೆಯು ರಾಜಕಾರಣವಲ್ಲ. ನಮ್ಮನ್ನು, ನಮ್ಮ ಸಂಸ್ಕೃತಿಯನ್ನು ಪಸರಿಸಲು, ಅಷ್ಟೇ ಜ್ಞಾನದಿಂದ ಸ್ವೀಕರಿಸಲು ಇರುವ ಅಸ್ಮಿತೆಯ ಗುರುತು. ಅದು ಯಾವಾಗಲೂ ನಮ್ಮೊಳಗೆ ಹರಿಯುವ ನೀರು. ಶುದ್ಧ ಹಾಗೂ ನವನವೀನತೆಯ ಸಂವೇದನೆ.
ಡಾ. ರವಿಶಂಕರ್ ಎ.ಕೆ
ಕನ್ನಡ ಅಧ್ಯಾಪಕ, ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ, ಬೆಂಗಳೂರು