ನೆನಪಿನ ಅಂಗಳದಲ್ಲೇ ಮರೆಯಾದ ಬಾಲ್ಯದ ಬದುಕು !
ನಾವು ಹುಟ್ಟಿದ್ದು ಒಂದು ಸಣ್ಣ ಹಳ್ಳಿಯಾದರು ಸಹ ಶಿಸ್ತು-ಸಂಸ್ಕಾರ ಬದ್ದರಾಗಿದ್ದೆವು. ನಮ್ಮ ಹಳ್ಳಿಯ ಸುತ್ತಲು ಹಸಿರು ತುಂಬಿದ ಎತ್ತರದರ ಬೆಟ್ಟ-ಗುಡ್ಡ, ಅದರ ಮದ್ಯೆ ಜುಳು ಜುಳು ಹರಿಯುವ ಹಳ್ಳ. ಊರಿನ ಹುಡಗರು ಎಲ್ಲರೂ ಕುಣಿದು-ಕುಪ್ಪಳಿಸಿ ತಿಂದು-ತೊಳೆದು ಕೊಳ್ಳುವ ಆ ಜಾಗ ಇಂದು ನೆನೆಪು ಮಾತ್ರ.
ಹಳ್ಳಿಯಲ್ಲಿ ನಾವು ಕುಡಿದ ದೇಶಿ ತಳಿಯ ಹಸುವಿನ ಹಾಲು, ಮೊಸರು, ಮಜಿಗೆ ಇರುತ್ತಿತ್ತು, ಕೊಟ್ಟಿಗೆ ಗೊಬ್ಬರ ಹಾಕಿ ಬೆಳೆದಂತಹ ಬೆಳೆ, ಕಾಳು ಮತ್ತು ತರಕಾರಿಗಳಾದ ಹಿರೇಕಾಯಿ, ಪಡವಲಕಾಯಿ, ಅವರೆಕಾಯಿ, ಉರುಳಿಕಾಯಿ, ಕುಂಬಳಕಾಯಿ, ಸೋತೆಕಾಯಿ, ಇದರೊಟ್ಟಿಗೆ ಹೊಲದಲ್ಲಿ ಬೆಳೆದಂತಹ ಆಣ್ಣೆ ಸೊಪ್ಪು, ಖಾರೆ ಸೊಪಿನ ಸಾಂಬರ್, ದಂಟಿನ ಸೊಪು, ಸೋರೆ ಕಾಯಿ ಪಲ್ಯ, ಸುಂಡೆ ಕಾಯಿ ಸಾರು, ಕಳಲೆ ಪಲ್ಯ ತಿಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಗಟ್ಟಿಯಾಗಿದ್ದೆವು.
ನಮ್ಮ ಹಳ್ಳಿಯ ರೈತರು ಮೂಟೆಗಟ್ಟಲೆ ಬೆಳೆಯುತ್ತಿದ್ದ ರಾಗಿ, ನೆಲಗಡಲೆ, ಜೋಳ, ಹುರುಳಿ, ಆರಕ, ನವಣೆ, ಸಜ್ಜೆ ಮುಂತಾದ ಆಹಾರ ಪದಾರ್ಥಗಳು ಪ್ರತಿ ಮನೆಯಲ್ಲೂ, ಬೀದಿ-ಬೀದಿಯಲ್ಲಿ ತುಂಬಿ ತುಳುಕುತ್ತಿತ್ತು.
ಹುಡುಗರೆಲ್ಲಾ ರಜಾ ದಿನಗಳಲ್ಲಿ ಎಮ್ಮೆ-ಹಸು ಮೇಯಿಸಿ ಕೊಂಡು, ಹೊರೆ ಹುಲ್ಲು ತಂದು ಕೊಟ್ಟಿಗೆಗೆ ಹಾಕುತ್ತಿದ್ದೆವು. ಶಾಲೆ ಮುಗಿದ ನಂತರ ಅಪ್ಪನ ಜೊತೆ ಹೋಗಿ ಹಸು, ಎಮ್ಮೆ, ಕೋಣ, ಕುರಿ ಮೇಕೆ ಮೇಯಿಸಿ ಅವುಗಳ ಜೊತೆ ಆಟವಾಡಿಕೊಂಡು ಮೈ ತೊಳೆದು ಮನೆಗೆ ಬರುತ್ತಿದ್ದ ಬಾಲ್ಯ ನಮ್ಮದಾಗಿತ್ತು. ನಮ್ಮ ಬಾಲ್ಯದ ನೆಚ್ಚಿನ ಆಟಗಳಾದ ಟೋಫಿ ಆಟ, ಕಣ್ಣಾ ಮುಚ್ಚಾಲೆ, ಗಿಲ್ಲಿ-ದಾಂಡುದಂತಹ ಆಟಗಳನ್ನು ಹಾದಿ ಬೀದಿಗಳಲ್ಲಿ ಆಡುತ್ತಿದ್ದೆವು.
ಹುಣಸೆ ಹಣ್ಣು, ಬೀದಿ ತಿಂಡಿಗಳನ್ನು ತಿಂದು ಆನಂದಿಸುತ್ತಿದ್ದೆವು. ಕೆಲವೊಂದು ಬಾರಿ ಅನಿವಾರ್ಯವೋ ಅಥವಾ ಹಸಿವಿಗೋ ಗೊತ್ತಿಲ್ಲ ರಸ್ತೆ ಬದಿಯಲ್ಲಿ ಸಿಗುವಂತಹ ನೇರಲೆ ಹಣ್ಣು, ಕೋಳಿ ಹಣ್ಣು, ಬೆಲ್ಲದ ಹಣ್ಣು , ಕಾರೆ ಹಣ್ಣು ತಿಂದ ಸಂದರ್ಭಗಳು ಅತಿ ಹೆಚ್ಚು.
ಹಬ್ಬ ಹರಿದಿನಗಳಲ್ಲಿ ಅಜ್ಜ-ಅಜ್ಜಿಯರ ಮನೆಗಳಿಗೆ ಹೋಗಿದ ನೆನಪುಗಳು, ಹಳ್ಳಿಯಲ್ಲಿ ಐಸ್ ಕ್ಯಾಂಡಿ ಶಬ್ಧ ಕೇಳಿ ಮೈ ರೋಮಾಂಚನವಾಗಿತ್ತು. ನಮ್ಮ ಬಾಲ್ಯದ ಆಹಾರ ಪದ್ದತಿ ಹೆಚ್ಚಾಗಿ ಮನೆಯಲ್ಲಿಯೇ ಬೇಯಿಸಿದ ಆಹಾರವಾಗಿತ್ತು, ಹಳ್ಳಿಯ ಆಹಾರದ ಪದ್ದತಿ, ತಿಂಡಿ-ತಿನಿಸುಗಳು ರುಚಿಯಾಗಿರುತ್ತಿತ್ತು.
ಶಾಲೆಗೆ ಹೋಗಬೇಕಾದರೆ ನಮಗೆ ಸರಿಯಾಗಿ ರಸ್ತೆ ಇರಲಿಲ್ಲ, ಬಸ್ಸಿನ ವ್ಯವಸ್ಧೆ ಇರಲಿಲ್ಲ. ಅಂದಿನ ದಿನಗಳಲ್ಲಿ ಬಾವಿ, & ಹಳ್ಳದ ನೀರನ್ನು ಕುಡಿಯುತ್ತಿದ್ದೆವು. ರಜಾ ದಿನಗಳಲ್ಲಿ ಹಳ್ಳದ ನೀರಿನಲ್ಲಿ ಬಿದ್ದು-ಎದ್ದು ಸ್ನಾನ ಮಾಡಿ, ದಡದ ಪಕ್ಕದಲ್ಲೇ ಇದ್ದಂತಹ ಬೆಲ್ವಪತ್ರೆ ಹಣ್ಣು, ಎರೆಮಣ್ಣು ತಲೆಗೆ ಹಾಕಿ ಜಳಕ ಮಾಡಿಕೊಂಡು, ಪಕ್ಕದಲೇ ಇದ್ದಂತಹ ಬಂಡೆಯ ಮೇಲೆ ಕುಳಿತು ಮೈ ಒಣಗಿಸಿಕೊಳ್ಳುತ್ತಿದ್ದೆವು. ಆ ವೊತ್ತಿಗೆ ಹಸಿವು ತಾಳಲಾರದೆ ಓಡೋಡಿ ಹೋಗಿ ಜೆಂಬು ನೆರೆಳೆ ಹಣ್ಣು, ತಿನ್ನುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ನಾವು ತಿಂದಂತಹ ನೇರೆಲೆ ಹಣ್ಣು ಕೆಮ್ಮು ಬರುತ್ತದೆ ಎಂದು ಅಪ್ಪ-ಅಮ್ಮ ಬೈಯುತ್ತಿದ್ದರು ಆದರೆ ಪ್ರಸ್ತುತ ಅದೇ ನೆರೆಲೆ ಹಣ್ಣು ಆರೋಗ್ಯಕ್ಕೆ ಉತ್ತಮ ಎಂದು ಹೇಳುವ ಮಟ್ಟಿಗೆ ನಾವೇ ಬದಲಾಗಿದ್ದೇವೆ.
ಹುಡುಗರೆಲ್ಲಾ ಜೊತೆ ಸೇರಿ ಬೀದಿಗಳಲ್ಲಿ, ಪಡಶಾಲೆಗಳಲ್ಲಿ ಗಂಟೆಗಟ್ಟಲೆ ದೊಡ್ಡ ಗುಂಪುಗಳನ್ನು ಮಾಡಿಕೊಂಡು ರಾಜರಾಣಿ, ಕಣ್ಣಾಮುಚ್ಚಾಲೆ ಮತ್ತು ಗಾಳಿಪಟ ಹಾರಿಸುವಂತಹ ಆಟಗಳು ಜನಪ್ರಿಯವಾಗಿದ್ದವು. ಹಬ್ಬಗಳಲ್ಲಿ ಹಳ್ಳಿಯ ಸೊಗಡಿನ ಆಹಾರ ಮತ್ತು ತಿಂಡಿಗಳನ್ನು ಪೋಷಕರು ತಯಾರಿಸುತ್ತಿದ್ದರು. ನಾವು & ನೆರೆಹೊರೆಯವರ ಮನೆಗಳಿಂದ ಮಾವು, ಪೇರಲ ಹಣ್ಣುಗಳನ್ನು ಕೊಟ್ಟು ತಿನ್ನುವ ಪದ್ದತಿ ಜೀವನ ಸಾಗಿತು.
ನಮ್ಮ ಹಳ್ಳಿಯ ಸುತ್ತಲು ಇದ್ದಂತಹ ಕೆಲವು ಸ್ದಳಗಳನ್ನು ನೋಡಿದರೆ ಆ ಸ್ದಳಗಳು ಸ್ವಾಭಾವಿಕವಾಗಿ ಬದಲಾಗಿವೆ ಕೆಲವು ಸ್ಧಳಗಳು ಶಾಶ್ವತ ಸ್ಧಾನ ಪಡೆದುಕೊಂಡಿದ್ದು ನಮನ್ನು ನೆನಪಿಸಿವೆ. ನಾವು ಶಾಲೆಯ ಕೊನೆಯ ದಿನಗಳಾದ ಶನಿವಾರ ಮತ್ತು ಭಾನುವಾರ ಓಡಿ ಹೋಗಿ ನೀರಿಗೆ ಹಾರುತ್ತಿದ ದುಮಕು ಕಲ್ಲು, ಬೆಲ್ಲದ ಅನ್ನ ಮಾಡಿ ಬೆಟ್ಟದ ಮೇಲಿರರುವ ಮೋಪರಿ ಬಸವಣ್ಣನ ಪೊಜೆ, ದೇವಸ್ಧಾನದಿಂದ ಮನೆಗೆ ವಾಪಸ್ಸು ಬರುವ ಮದ್ಯೆ ದಾರಿಯಲ್ಲಿ ಮೊಳಕೆ ಹೊಡೆದ ಬಿದಿರು (ಕಳೆ) ರಸ್ತೆಯ ಪಕ್ಕದಲ್ಲೇ ಬೆಳದು ನಿಂತ ಬೆಲ್ಲದ ಕಾಯಿ ತಿಂದು ಹಳ್ಳದಲ್ಲಿ ಹರಿಯುವ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ ಸನ್ನಿವೇಶಗಳು ಪ್ರಸ್ತುತ ಮರೆಯಾಗಿ ಹೋಗಿದೆ.
1980 ರ ಕಾಲಘಟ್ಟ ಹಳ್ಳಿಗಳಲ್ಲಿ ಪಟೇಲ್, ಗೌಡ, ಶೆಟ್ಟಿ, ಶಾನುಬೋಗ ಎಂಬ ಕುಂಟುಬಗಳು ಮಾತ್ರ ಹಣಕಾಸಿನ ವಹಿವಾಟು ಮಾಡುತ್ತಿದರು. ಹಳ್ಳಿಯ ಜೀವನ ಕೃಷಿಯ ಮೇಲೆ ಅವಲಂಬನೆಯಾಗಿತ್ತು, ಆಧುನಿಕ ಸೌಲಭ್ಯಗಳಿಂದ ದೂರವಾಗಿತ್ತು, ವಿವಿಧ ಸಮುದಾಯಗಳೊಂದಿಗೆ ನಿಕಟ ಸಂಪರ್ಕವಿತ್ತು.
ಹಳ್ಳಿಯ ಜೀವನೋಪಾಯವು ಕೃಷಿಯೊಡನೆ ಮುಳುಗಿತ್ತು. ಮಹಿಳೆಯರು ಹೆಚ್ಚಾಗಿ ಕೃಷಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದರು. ಹಿಂದಿನ ಸಾಮಾಜಿಕ ಜೀವನ ಸಂಪ್ರಾದಾಯ ಜೊತೆ ಆಳವಾಗಿ ಬೇರೂರಿತ್ತು ಆದರೆ ಶಿಕ್ಷಣ, ಆರೋಗ್ಯ ಸೇವೆ ಕೆಲವೇ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು.
”ನಾವು ಓದುವಾಗ ಕುಂಟು ಮಾಸ್ತರು ತನ್ನ ಮನೆಯನ್ನೇ ಶಾಲೆಯಾಗಿ ಮಾಡಿದಂತಹ ಓರ್ವ ಶಿಕ್ಷಕ, ನೂರಾರು ವಿದ್ಯಾರ್ಧಿಗಳ ಬದುಕಿನ ರಕ್ಷಕ. ಆ ಮಾಸ್ತರು ಎರಡು ಕಾಲ್ಗಳನ್ನು ಕಳೆದು ಕೊಂಡಿದರೂ ಶಿಕ್ಷಣ ಮತ್ತು ಸಂಸ್ಕಾರ ಕಲಿಸಿದ ನೂರಿತ ವ್ಯಕ್ತಿ. ಆದರ್ಶಗಳ ಅರಿವನ್ನು ಮೈಗೂಡಿಸಿದ ಮಾರ್ಗದರ್ಶಿ, ಎಂಬುದು ಮರೆಯಲಾಗದ ಆಳಿಸಲಾಗದ ಮಾತು.
ನಮ್ಮ ನೆನಪಿನಾಳದಲ್ಲಿ ಮರುಕಳಿಸುವ ಮಾತುಗಳಿಗೆ ನೀರೆರೆದವರು ಗುರು-ಹಿರಿಯರು. ಬಾಲ್ಯ ವ್ಯಾಸಂಗದ ಅವಧಿಯಲ್ಲಿ ಕುಂಟು ಮೇಷ್ಟ್ರು ತನ್ನ ಮನೆಯ ಸಗಣಿ- ಗಂಜಲಗಳ ಮದ್ಯೆ ನಮಗೆ ಪಾಠ ಪ್ರವಚನ ನಡೆಯುತ್ತಿತ್ತು. ಶಾಲೆಯಲ್ಲಿ ಬಟ್ಟೆ ಬ್ಯಾಂಗು, ಬಳಪ್ಪ, ಕಪ್ಪು ಹಲಗೆಯಲ್ಲಿ ಕಷ್ಟಪಟ್ಟು ಓದಿದ್ದು ಬರಿ ನೆನಪು.
ಬಿ.ದೊಡ್ಡಯ್ಯ ಮಾಸ್ತರು ತನ್ನ ಮನೆಯ ಅಂಗಳ ದ ಹರಿದ ಖಾಕಿ ಚಡ್ಡಿಯಲ್ಲಿ ಕುಳಿತು ಕಲಿತ ಶ್ರದ್ಧೆಯ ಪಾಠ ಪ್ರಸುತ ಬದುಕಿನ ಉತ್ಸಾಹ, ಆತ್ಮಸ್ಧೆರ್ಯ ಮತ್ತು ನಿರ್ಭಯ ಜೊತೆಗೆ ನಿಷ್ಠುರವಾದರೂ ಸರಿ, ಸತ್ಯವನೇ ಪ್ರಕಟಿಸು ಎಂಬ ವ್ಯಾಖ್ಯೆಗೆ ಪ್ರೇರಕವಾಯಿತು.
ಇಂದು ನಾನು ನೆನಪಿಸಿಕೊಳ್ಳುವ, ಸ್ಮರಿಸಿಕೊಳ್ಳುವ ಅತ್ಯಮೂಲ್ಯ ಸಂಗತಿ ಎಂದರೆ ‘’ಗುರುವಿಗೆ ನಾವು ಶಿಷ್ಯರು ಎಂದು ಸಿದ್ಧರಾದಾಗ ಗುರುವು ನಮಗೆ ಪ್ರತ್ಯಕ್ಷನಾಗುತ್ತಾನೆ,” ಎಂಬ ನಾಣ್ಣುಡಿ. ಆ ದಿನಗಳಲ್ಲಿ ನಾವು ಗುರುವಿನ ಸೇವೆಗೆ ಸಿದ್ಧರಾಗಿದ್ದೆವು ಆ ಸೇವೆ ಅನಿವಾರ್ಯವೋ ಅಧವಾ ಅವಶ್ಯಕತೆಯೋ ನಮಗೆ ತಿಳಿದಿರಲಿಲ್ಲ. ನಮ್ಮ ಬಾಲ್ಯದ ಗುರುವಿಗೆ ಎರಡು ಕಾಲ್ಗಳು ಶಾಶ್ವತವಾಗಿ ಇರಲಿಲ್ಲ ಗುರುವು ತನ್ನ ನಿತ್ಯ ಕರ್ಮಗಳನ್ನು ಮಾಡಿಕೊಳಲು ಸಾದ್ಯವಾಗುತ್ತಿರಲಿಲ್ಲ ಅಂತಹ ಸಂದರ್ಭದಲ್ಲಿ ಗುರುವಿನ ನಿತ್ಯದ ಕರ್ಮವನ್ನು ಸ್ವತಹ: ತರಗತಿಯ ವಿಧ್ಯಾರ್ಧಿಗಳೆಲ್ಲಾ ಸೇರಿ ಒಂದು ಬಾರಿ ಗುರುವಿನ ಕಾಯಕ ಮಾಡಲು ಕಾಯುತ್ತಿದ್ದೆವು. ದಿನದಲ್ಲಿ ಕನಿಷ್ಟ ಎರಡು ಬಾರಿ ಗುರುವಿನ ಮೂತ್ರ ವಿಸರ್ಜನೆ ಮಾಡಿದ ನಂತರ ಪ್ಲಾಸ್ಟಿಕ್ ಬಟ್ಟಲಲ್ಲಿ ಕೈಯಲ್ಲಿ ಹಿಡಿದು ಬೇರೊಂದು ಸ್ಧಳಕ್ಕೆ ಸುರಿದು ಕೈ ಸ್ವಚ್ಚಗೊಳಿಸದೆ ಸಹಪಾಠಿಗಳ ಜೊತೆ ವಿಧ್ಯೆಯನ್ನು ಕಲಿಯುತ್ತಿದ್ದೆವು.
ನಮ್ಮ ಜೀವನದಲ್ಲಿ ಗುರುವಿಗೆ ಮಾಡಿದ ಕಾಯಕ ಸೇವೆಗೆ ಇಂದು ನಮ್ಮ ಬದುಕಿನಲ್ಲಿ ಶಿಸ್ತು-ಸಂಸ್ಕಾರ ಬೆಳೆಸಿಕೊಂಡು, ಸಮಾಜದಲ್ಲಿ ಒಂದಿಷ್ಟು ಸರಿ-ತಪ್ಪುಗಳನ್ನು ನಿರ್ಭೀತವಾಗಿ ತಿಳಿಸಲು ಸಾದ್ಯವಾಯಿತು ಎಂದರೆ ತಪ್ಪಾಗಲಾರದು.
ನಮ್ಮ ಊರಿನ ಮನೆಯಲ್ಲಿ ಓದಿ, ಪರೀಕ್ಷೆಯಲ್ಲಿ ಅಂಕಗಳನ್ನು ಕಡಿಮೆಗಳಿಸಿದರೆ ಬಾಸುಂಡೆ ಬರುವಂತೆ ಬಿದಿರಿನ 3 ಅಡಿ ಉದ್ದದ ಕೋಲಿನಲ್ಲಿ ಬಾರಿಸುತ್ತಿದರು ಆ ನೋವಿನ ಸೆಳೆತ ನಮನ್ನು ಶಿಖರದತ್ತ ಎಳೆಯುತ್ತಿತ್ತು.
ನಮಗೆ ಆಗಲೆ ಅನುಭವ ಶುರುವಾಗಿತು ಇದು ನನ್ನ ಆಯ್ಕೆಯ ಭವಿಷ್ಯ, ನನಗೆ ಸಾಮರ್ಥ್ಯ ಇದೆ ಎಂದು, ಮತ್ತೊಂದು ಕಡೆ ನನ್ನೊಳಗಿನ ಮಹತ್ವಾಕಾಂಕ್ಷಿ ಉತ್ತಿಷ್ಟಿತನಾಗುವುದು ಬೇಕಿತ್ತು. ಬಾಲ್ಯದಲ್ಲಿ ನಮ್ಮ ಹಿರಿಯರೊಟ್ಟಿಗೆ ಕಲಿತ ಜೀವನದ ಪಾಠ ಪ್ರವಚನ ಯಾವ ವಿಶ್ವವಿದ್ಯಾಲಯವೂ ಬೋಧಿಸಲು ಸಾಧ್ಯವಿಲ್ಲ ಅದು ನಮ್ಮ ಸಮಾಜದೊಟಿಗೆ ನಮಗೆ ಕಲಿಸುವ ಪಾಠವಾಗಿತ್ತು. ನಮ್ಮ ಬಾಲ್ಯದ ಜೀವನದಲ್ಲಿ ನಾವು ಅನುಭವಿಸುವ ಸುಖ-ದುಃಖಗಳು ಆಟೋಟಗಳು ನಮ್ಮ ಸುಂದರ ಅನುಭವಗಳನ್ನು ಮೆಲುಕು ಹಾಕುವಂತೆ ಮಾಡಿತ್ತು.
ಈಗೆ ಬದುಕಿನ ಹಿಂದೆ ನೂರಾರು ಜನರು ಏನೇ ಹೇಳಿದರು, ಏನೇ ಮಾತನಾಡಿದರು, ಒಬ್ಬ ಪತ್ರಕರ್ತನಾಗಿ ರೂಪಿಸಿ, ವಿಶೇಷವಾದ ಒಂದು ಸ್ಧಾನ ಕೊಟ್ಟು ಬಹುಶಃ ಗುರು-ಹಿರಿಯರು, ಜನ್ಮವಿತ್ತವರಿಗೂ ನುಡಿನಮನ.
ಈ ಬದುಕಿಗೆ ಆ ಗೋಚರ ಶಕ್ತಿಯ ದೇವರಿಗೆ ಪ್ರಣಮಾಗಳು ತಿಳಿಸುತ್ತಾ, ಜೀವನದ ಸುಖ, ಸಮೃದ್ಧಿ, ಸಂತೋಷಗಳ ಜೊತೆಗೆ ಮೌನ, ಏಕಾಂತ, ಸವಾಲು, ಹೋರಾಟ, ಸಾಹಸ ಪ್ರವೃತ್ತಿಯನ್ನು ಈ ಜಗತ್ತಿಗೆ ತಿಳಿಸಿಕೊಟ್ಟು ತಿಳಿಸಿಕೊಟ್ಟು ನೀನು ಸಾಧಿಸಿಯೇ ತೀರಬೇಕು ಎಂದು ಹೇಳಿಕೊಟು ಬಿಟ್ಟುಕೊಟು ದಿವಂಗತ ಪೂಜ್ಯ ಕಾಯಕ ಯೋಗಿ ಜನ್ಮವಿದಾತರಿಗೆ ನಮ್ಮ ನುಡಿನಮನಗಳು.
ಈ ಜಗತ್ತಿಗೆ ನಾವು ಒಂದಿಷ್ಟು ಗಳಿಸಿ, ಒಂದಿಷ್ಟು ಮರುಕಳಿಸಲೇ ಬೇಕು. ಒಂದಿಷ್ಟು ಬಿಟ್ಟು ಹೋದ ಎಲ್ಲಾ ಸತ್ಯಗಳು & ಆಸತ್ಯಗಳು ಸಾಮಾನ್ಯರ ಬಾಯಲ್ಲಿ ಸ್ಮರಿಸಬೇಕು ಎಂಬ ಸಾರಂಶ.
ಪಟೇಲ್.ಎಸ್