ಜಾನಪದ ಆಟಗಳು ಮತ್ತು ಮೌಲ್ಯಗಳು
ಈಗಿನ ಮಕ್ಕಳು ಸಂಕೀರ್ಣತೆಯಿಲ್ಲದೆ ಆಡುವ ಆಟಗಳನ್ನು ಗಮನಿಸಿದಾಗ ನನಗೆ ನನ್ನ ಬಾಲ್ಯದ ಆಟಗಳು ನೆನಪಾಗುತ್ತವೆ. ಅವು ಈಗಲೂ ಮನಸ್ಸಿಗೆ ಮುದ ನೀಡುತ್ತವೆ. ಶಾಲಾ ಕಾಲೇಜು ಬಿಡುವಿನ ದಿನಗಳಲ್ಲಿ ನಾನು ಮತ್ತು ನನ್ನ ಸ್ನೇಹಿತರು ದನ-ಕರು, ಕುರಿ, ಎಮ್ಮೆ ಮೇಯಿಸಲು ಹೋಗುತ್ತಿದ್ದೆವು. ಕೂಲಿ ನಾಲಿ ಮಾಡುವವರು ನಮ್ಮಂತೆ ಸಂಜೆ ಮನೆಗಳಗೆ ಬಂದಾಗ ಆಯಾಸವನ್ನು ತೀರಿಸಿಕೊಳ್ಳಲು ಹಾಗೂ ಮನರಂಜನೆಗಾಗಿ ಬೆಳದಿಂಗಳಲ್ಲಿ ಜಾನಪದ ಆಟಗಳನ್ನು ಆಡುತ್ತಿದ್ದೆವು. ಹೆಣ್ಣು-ಗಂಡು, ಹಿರಿ-ಕಿರಿ, ಅಕ್ಷರಸ್ಥ-ಅನಕ್ಷರಸ್ಥ, ಬಡವ-ಬಲ್ಲಿದ, ಜಾತಿ, ಮತ, ಭೇದ ಭಾವವಿಲ್ಲದೆ ಬುಗುರಿ, ಕುಂಟೆಬಿಲ್ಲೆ, ಕಣ್ಣಾ ಮುಚ್ಚಾಲೆ, ಸಬ್ಜಾ, ಲಗೋರಿ ಆಟಗಳನ್ನು ಆಡುವಾಗ ನಮ್ಮ ತಂದೆ-ತಾಯಂದಿರು, ಪೋಷಕರು ನಮ್ಮ ಸಂಕೀರ್ಣತೆ ಮತ್ತು ಭಾವಪರತೆಯನ್ನು ಕಂಡು ಆನಂದಿಸಿ ಪ್ರೋತ್ಸಾಹಿಸುತ್ತಿದ್ದರು.
ಹಬ್ಬ-ಹರಿದಿನಗಳಲ್ಲಂತೂ ಹಿರಿಯರೆಲ್ಲರು ಸೇರಿ ಆಡುತ್ತಿದ್ದ ಕೋಲಾಟ, ಜಕ್ಕೀಕಿ, ಪಂಡರೀಪುರ ಭಜನೆ, ಚಕ್ಕೆ ಭಜನೆ, ಪಿಲ್ಲಂಗೋವಿ ಆಟ ಮುಂತಾದ ಆಟಗಳನ್ನು ನೋಡಲು ನಮಗೆ ಎಲ್ಲಿಲ್ಲದ ಉತ್ಸುಕತೆ ಮೂಡುತ್ತಿತ್ತು. ಊರಿನವರು ಮತ್ತು ಬಂದಿದ್ದ ನೆಟ್ಟರಿಷ್ಟರೆಲ್ಲರೂ ರಾತ್ರಿಯಿಡೀ ಭಾಗವಹಿಸಿ ಆನಂದದ ಸವಿಯನ್ನು ಅನುಭವಿಸುತ್ತಿದ್ದರು.
ಸರಿಯೋ, ತಪ್ಪೋ ಸಂಬಂಧಿಕರೊಂದಿಗೆ ನಾವೂ ಹೆಜ್ಜೆ ಹಾಕಲೋಗುತ್ತಿದ್ದೆವು. ಆ ಹಿರಿಯರು ನಮ್ಮನ್ನು ಅವರ ಭುಜದ ಮೇಲೆ ಏರಿಸಿಕೊಂಡು ಹೆಜ್ಜೆ ಹಾಕುತ್ತಿದ್ದರು. ನಮ್ಮಲ್ಲಿ ಅವರು ಎಲ್ಲಿ ಬೀಳಿಸಿ ಬಿಡುವರೋ ಎನ್ನುವ ಆತಂಕ ಉಂಟಾಗುತ್ತಿತ್ತು. ಇದು ಒಂದುಕಡೆಯಾದರೆ; ಮಂದಿ ಹೊಡೆಯುತ್ತಿದ್ದ ಸಿಳ್ಳೆಗಳಿಗೆ, ಮೊಳಗುತ್ತಿದ್ದತಮಟೆ, ತಾಸು, ಡೊಳ್ಳು, ನಗಾರಿ, ಕೊಂಬು, ಕಹಳೆ ಮುಂತಾದ ವಾದ್ಯಗಳ ನಾದಕ್ಕೆ ಮೈ ಜುಂಮ್ಮೆನ್ನುತ್ತಿತ್ತು. ಸೇರಿದ್ದ ಜನ ತಟ್ಟುತ್ತಿದ್ದಚಪ್ಪಾಳೆ ಸದ್ದಿಗೆ ನಿರ್ಭಯತೆ ಮೂಡುತ್ತಿತ್ತು. ನಾವೇ ಕುಣಿದಷ್ಟು ಉಲ್ಲಾಸ, ಸಂತಸ ಒಡಮೂಡುತ್ತಿತ್ತು.
ಇವೆಲ್ಲಾ ಆಟಗಳು ದೇಸಿ ಜನಪದ ಸಂಸ್ಕೃತಿಯನ್ನು ಒಳಗೊಂಡಿದ್ದಂತಹವು. ಜಾನಪದ ಜೀವನ ಶೈಲಿಯನ್ನು ಬಿಂಬಿಸುತ್ತಿದ್ದಂತಹವು. ಬದುಕನ್ನು ರೂಪಿಸಿದಂತಹವು. ಅವಿರತಭಾವನಾ ಸಂಬಂಧವನ್ನು ಗಟ್ಟಿಗೊಳಿಸಿದಂತಹವು. ಅನುಭವದ ಸಂಕೇತಗಳಾಗಿ ರೂಪುಗೊಂಡಂತಹವು ಆಗಿದ್ದವು ಎನ್ನುವುದು ಸತ್ಯದ ಮಾತು.
ಅಂದಿನ ಅನಕ್ಷರತೆ, ಅಜ್ಞಾನ, ಅನಾಗರೀಕತೆ, ಮೌಢ್ಯತೆ, ಲಿಂಗ ಭೇದ, ಜಾತಿ ಭೇದ ಎಲ್ಲಕ್ಕಿಂತ ಮಿಗಿಲಾದ ವರ್ಣ ವ್ಯವಸ್ಥೆ ಕಟುಪಾಲನೆಯಲ್ಲಿದ್ದಿತ್ತಾದರೂ ಸಾಂಸ್ಕೃತಿಕ ಬದುಕು ಎಲ್ಲವನ್ನೂ ಮರೆಮಾಚಿ ಸಮುದಾಯದಲ್ಲಿ ಪ್ರೀತಿ, ಪ್ರೇಮ, ನೀತಿ-ನಿಯಮ, ಗೌರವ-ಗಾಂಭೀರ್ಯ, ಶಿಸ್ತು, ಸೇವೆ ಮುಂತಾದ ಮಾನವೀಯ ಮೌಲ್ಯಗಳನ್ನು ಬೆಸೆಯುತ್ತಿತ್ತು ಎನ್ನುವುದನ್ನು ನಾವು ಕಾಣಬಹುದು. ಇದಕ್ಕೆಲ್ಲಾ ಕಾರಣ ಜಾನಪದ ಸಂಸ್ಕೃತಿ ಒಳಗೊಂಡಿದ್ದ ಮುಕ್ತ ಅವಕಾಶ ಮತ್ತು ಸಂಕೀರ್ಣತೆಯೇ ಕಾರಣವಾಗಿತ್ತು.
ಆದರೆ ಇಂದು ಆಟ ಆಡುವ ಮಕ್ಕಳನ್ನು ಬಹುತೇಕ ವಿದ್ಯಾವಂತ, ಉದ್ಯೋಗಸ್ಥ ಪೋಷಕರು ಶುಚಿತ್ವದ ನೆಪದಲ್ಲಿ ಮಣ್ಣಿನೊಂದಿಗಿನ ಸಂಬಂಧವನ್ನು, ಅಪರೂಪದ ನೆಪದಲ್ಲಿ ಅಕ್ಕ-ಪಕ್ಕದವರ ಸಂಬಂಧವನ್ನು, ಮರ್ಯಾದೆ ನೆಪದಲ್ಲಿ ಗುಂಪಿನ ಸಂಬಂಧವನ್ನು ಕಳಚಿಬಿಡುತ್ತಿದ್ದಾರೆ. ಬದಲಾಗಿ ಯಂತ್ರಗಳ ಮೂಲಕ ಆಟವಾಡಿಸಿ; ನೋಡಿಸಿ ಯಾಂತ್ರಿಕ ಬದುಕಿಗೆ ಒಗ್ಗಿಸಿಬಿಡುತ್ತಿದ್ದಾರೆ. ಇದಕ್ಕೆ ಕ್ರಿಕೆಟ್, ಇಂಟರ್ನೆಟ್ ಗೇಮ್, ವೀಡಿಯೋ ಗೇಮ್ಗಳಂತಹವು ಸ್ಪಷ್ಟ ಉದಾಹರಣೆಗಳಾಗಿವೆ. ಕೊನೆಗೊಮ್ಮೆ ಆ ಮಕ್ಕಳು ತಮ್ಮಲ್ಲಿರುವ ಕ್ರಿಯಾತ್ಮಕ ಚಟುವಟಿಕೆಯನ್ನು, ಸೃಜನಶೀಲ ಬೆಳವಣಿಗೆಯನ್ನು ಕಾಣಲಾರದೆ ಕ್ರಮೇಣ ಸಮುದಾಯದೊಂದಿಗಿನ ಸುಮಧುರ ಬಾಂಧವ್ಯದ ಕೊಂಡಿಯನ್ನೂ ಕಳಚಿಕೊಳ್ಳುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ಹೀಗಾಗಿ ಇಂದಿನ ಆಧುನಿಕ ಸಮಾಜದಲ್ಲಿ ಹೊಸ ಆವಿಷ್ಕಾರಗಳ ಲಾಭದ ಮಡುವಲ್ಲಿ ದಕ್ಕುವುದನ್ನು ಬಾಚಿಕೊಳ್ಳಲು ಹೆಣಗಾಡುತ್ತಿರುವ ಸಂಸ್ಕೃತಿ ನಮ್ಮದಾಗುತ್ತಿರುವುದು ಸೋಜಿಗವೆನಿಸುತ್ತದೆ. ಆಧುನೀಕರಣ ಮತ್ತು ಜಾಗತೀಕರಣದ ಜಗತ್ತಿನಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವ ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನದಿಂದ ನಮಗೆ ರೇಡಿಯೋ, ಟಿ.ವಿ., ಸಿನೆಮಾ, ಕಂಪ್ಯೂಟರು, ಮೊಬೈಲು, ಡಿ.ಟಿ.ಎಚ್ಚು ಏನೆಲ್ಲಾ ಮಾಧ್ಯಮಗಳು ಉದಯಿಸಿ ಸಾಂಸ್ಕೃತಿಕ ಬದುಕನ್ನು ಪ್ರತಿನಿಧಿಸುತ್ತವೆ. ?ಸೃಜನಶೀಲತೆ? ಮಾನವನ ಬುದ್ಧಿ ಕೌಶಲದ ಪ್ರತಿಬಿಂಬ ಎನ್ನುವುದರಲ್ಲಿ ಇದು ಸಂತೋಷದ ವಿಚಾರ. ಆದರೆ ಈ ಕೊಡುಗೆಗಳನ್ನು ಅಗತ್ಯತೆಗೆ ತಕ್ಕಂತೆ ಸದುಪಯೋಗಪಡಿಸಿಕೊಳ್ಳುವ ಅರಿವು ನಮಗಿರಬೇಕು. ಇವುಗಳ ಆವಿಷ್ಕಾರದಲ್ಲಿ ಲೋಪವಿಲ್ಲ ಎನ್ನುವುದೂ ನಮ್ಮ ಮತಿಗೆ ತಟ್ಟಬೇಕಾದ ಅನಿವಾರ್ಯತೆ ಇದೆ. ಹಾಗೆಯೇ ಬಳಕೆಯ ರೀತಿಗಳ ಅರಿವಿರಬೇಕಾಗಿದೆ.
ಇಂದಿನ ಖೋ-ಖೋ, ವಾಲಿಬಾಲ್, ಟೆನ್ನಿಸ್ಬಾಲ್, ಬ್ಯಾಸ್ಕೆಟ್ಬಾಲ್, ಥ್ರೋಬಾಲ್, ಚೆಸ್, ಕೇರಂ, ಕ್ರಿಕೆಟ್ ಪಂದ್ಯಾವಳಿಗಳು ಮತ್ತು ರನ್ನಿಂಗ್, ಹೈಜಂಪ್, ರಿಲೆ, ಲಾಂಗ್ಜಂಪ್, ಡಿಸ್ಕ್ಥ್ರೋ ಮುಂತಾದ ಆಟಗಳು ಸ್ಪರ್ಧಾತ್ಮಕ ನೆಲೆಯಿಂದಲೇ ರೂಪುಗೊಂಡಿರುವುದಾಗಿವೆ. ಸ್ಪರ್ಧಾನಿಯಮಗಳಂತೆ ನಿಗದಿತ ಸಂಖ್ಯೆಯ ಪ್ರತಿಭಾನ್ವಿತ ಕ್ರೀಡಾ ಪಟುಗಳು ಆಯಾ ಕ್ರೀಡೆಗಳಲ್ಲಿ ಭಾಗವಹಿಸಲೇಬೇಕಾಗಿದೆ. ಹೀಗಾಗಿ ಈ ಎಲ್ಲ ಆಟಗಳಲ್ಲಿ ಜಾನಪದ ಆಟಗಳಲ್ಲಿ ಇದ್ದಂತಹ ಸಂಕೀರ್ಣತೆಯನ್ನು ಮತ್ತು ಪಾಲ್ಗೊಳ್ಳುವಿಕೆಯನ್ನು ಕಾಣಲು ಸಾಧ್ಯವಿಲ್ಲ. ಪ್ರತಿ ಸ್ಪರ್ಧೆಯೂ ನಿರ್ಣಾಯಕ ಹಂತಕ್ಕೆ ಬಂದ ಕೂಡಲೇ ಸೋಲು-ಗೆಲುವು ಜೊತೆಯಲ್ಲೇ ದ್ವೇಷ, ಅಸೂಯೆ, ಮತ್ಸರ, ದುರಾಭಿಮಾನ, ಆತಂಕ, ಆವೇಶ, ಖಿನ್ನತೆ, ಆಕ್ರೋಷ, ಪ್ರತ್ಯೇಕತೆ, ಎಲ್ಲವೂ ಮೈಗೂಡಿ ಸ್ಪರ್ಧಾಳುಗಳಲ್ಲಿನ ಮಾನವೀಯ ಮೌಲ್ಯಗಳಿಗೆ ಪೆಟ್ಟಾಗುತ್ತದೆ. ಎಂದರೆ ಈ ಕ್ರೀಡೆಗಳು ಸೂಕ್ತವಲ್ಲವೆಂದಲ್ಲ. ಗ್ರಾಮೀಣ ಆಟಗಳಲ್ಲಿರುವ ನಿಸ್ವಾರ್ಥ ಗುಣ ಇವುಗಳಲ್ಲಿ ತೀರಾ ಕಡಿಮೆ ಎಂದು ಮನವರಿಕೆ ಮಾಡಿಕೊಳ್ಳಬೇಕು.
ಒಟ್ಟಾರೆ ಯಾವುದೇ ಒಂದು ಆಟ ಅಥವಾ ಕ್ರೀಡೆ ಯಾವುದೇ ಭೇದ-ಭಾವವಿಲ್ಲದೆ ಸಮುದಾಯವನ್ನು ಬೆಸೆಯುವ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಮೌಲ್ಯ ಮತ್ತು ಸಂಕೀರ್ಣತೆಯನ್ನು ಕಟ್ಟಿಕೊಡುತ್ತೆ ಎಂದರೆ ಅದು ಜಾನಪದ ಆಟಗಳಲ್ಲಿ ಮಾತ್ರ ಕಾಣಲು ಸಾಧ್ಯ ಎನ್ನುವುದು ನಿಚ್ಚಿತ.
ಇಂತಹ ಜಾನಪದ ಆಟಗಳಿಗೆ ವಿಶ್ವ ಮಾನ್ಯತೆ ಇಲ್ಲದಿರುವ ಖೇದ ಗ್ರಾಮೀಣ ಜನತೆಯಲ್ಲಿದೆ. ಅದನ್ನು ಬಿಟ್ಟರೆ ಮನರಂಜನೆ ಜೊತೆಗೆ ಮಾನವ ಸಂಬಂಧವನ್ನು ಇಮ್ಮಡಿಸುವ ಮೌಲ್ಯಗಳ ನಿಧಿಗಳೆನ್ನುವುದರಲ್ಲಿ ಸಮಾಧಾನದ ಒಪ್ಪಿಗೆಯಿದೆ. ಹೀಗಾಗಿ ಈ ಆಟಗಳನ್ನು ಉಳಿಸುವುದರ ಜೊತೆಗೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಪರಸ್ಪರ ಒಂದುಗೂಡುವ ಮೌಲ್ಯಗಳನ್ನು ಬೆಳೆಸಬೇಕಾಗಿದೆ. ಮತ್ತು ನಮ್ಮ ಗ್ರಾಮೀಣ ಆಟ/ಕ್ರೀಡೆಗಳ ಗಮ್ಮತ್ತನ್ನು ಉಳಿಸಿ ಬೆಳೆಸಿ ಉತ್ತಮ ಸಂಸ್ಕಾರವಂತಿಕೆಯನ್ನು ಕೊಡುಗೆಯನ್ನಾಗಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.
ಇಲ್ಲವಾದರೆ ನಮ್ಮ ಜನಪರ ಕವಿ ಗೊಲ್ಲಹಳ್ಳಿ ಶಿವಪ್ರಸಾದ್ರವರ ?ಎಲ್ಲಾ ಮಾಯ? ಹಾಡಿನಲ್ಲಿ ಈಗಾಗಲೇ ಏನೆಲ್ಲಾ ಮಾಯವಾಗಿವೆಯೋ ಅದರ ಜೊತೆಗೆ ಜಾನಪದ ಆಟಗಳು ಮತ್ತು ಅದರ ಮೌಲ್ಯಗಳು ಮಾಯವಾಗಿ ಗ್ರಾಮೀಣ ಮನರಂಜನೆಯ ಭವಿಷ್ಯ ಮಾಯವಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಮಾಯಗಳನ್ನೇಲ್ಲಾ ಮಾಯ ಮಾಡಿ ನಮ್ಮ ಮುಂದಿನ ಪೀಳಿಗೆಗಾಗಿ ಜಾನಪದ ಆಟಗಳು ಮತ್ತು ಅದರ ಮೌಲ್ಯಗಳನ್ನು ನಾವೆಲ್ಲರೂ ಉಳಿಸಿಕೊಳ್ಳೋಣವಲ್ಲವೇ…?