ಸರ್ಕಾರ ರಕ್ಷಣೆಗೆ ಮುಂದಾಗಬೇಕು: ಸರ್ಕಾರಿ ಕೆರೆ, ಕುಂಟೆ, ಕಾಲುವೆ, ಗೋಮಾಳ, ಶ್ಮಾಸನ, ಗುಂಡು ತೋಪುಗಳು ಗ್ರಾಮ ಜೀವ ಸಂಕುಲದ ಜೀವನಾಡಿಗಳು !
ಸರಿ ಸುಮಾರು ಮೂವತ್ತು ವರ್ಷಗಳ ಹಿಂದಿನ ನನ್ನ ಬಾಲ್ಯದ ಸಂದರ್ಭ. ಮಳೆಗಾಲ ಬಂತೆಂದರೆ ನನಗೆ ಮಳೆಯಲ್ಲಿ ನೆನೆಯುವುದು, ಆಟ ಆಡುವುದು ತುಂಬಾ ಇಷ್ಟವಾಗುತ್ತಿತ್ತು. ನೀರು ಹರಿದು ಮಣ್ಣಿನ ಸವಕಳಿಯಿಂದ ಉಂಟಾಗುತ್ತಿದ್ದ ದಪ್ಪ ಕಾಲುವೆ, ಅಗಲ ಗುಂಡಿ ಹಾಗೂ ಕೆರೆ-ಕುಂಟೆಗಳಲ್ಲಿ ನಿಂತ ನೀರಲ್ಲಿ ಆಟವಾಡುತ್ತಿದ್ದ, ಈಜಾಡುತ್ತಿದ್ದ ಅಕ್ಕ ಪಕ್ಕದ ಮನೆಯ ಗೆಳೆಯರ ಜೊತೆ ಈಜಿ ಆಡುವುದು ನನಗೆ ಅಚ್ಚು ಮೆಚ್ಚು ಆಗಿರುತ್ತಿತ್ತು.
ಅದಕ್ಕೆಂತಲೇ ಶಾಲೆಗೆ ಹೋಗುತ್ತಿದ್ದ ಜೊತೆಗಾರರೆಲ್ಲಾ ವಾರದ ರಜೆ ಭಾನುವಾರಕ್ಕಾಗಿ ಬಲು ಕಾತುರದಿಂದ ಕಾಯುತ್ತಿದ್ದೆವು. ಅಂತೂ ರಜೆ ದಿನ ಬಂತೆಂದರೆ ಎಲ್ಲಿಲ್ಲದ ಸಂತೋಷ. ಎಲ್ಲರೂ ಮಧ್ಯಾಹ್ನದ ತಂಗಳಿಗೆ ಮುದ್ದೆ, ಅನ್ನದ ಬುತ್ತಿ ಚೀಲ ಹೆಗಲಿಗೆ ಏರಿಸಿಕೊಂಡು ಮನೆಯಲ್ಲಿರುವ ದನ-ಕರು, ಎಮ್ಮೆ, ಕುರಿ, ಮೇಕೆಗಳನ್ನು ಹೊಡೆಕೊಂಡು ಕೆರೆಯಂಗಳ, ಗುಂಡು ತೋಪು, ಗೋಮಾಳಕ್ಕೆ ಹೋಗುತ್ತಿದ್ದೆವು. ದಿನವಿಡೀ ನಮ್ಮ ಆಟದ ಆನಂದಕ್ಕೆ ಮಿತಿಯೇ ಇರುತ್ತಿರಲಿಲ್ಲ. ಮಧ್ಯಾಹ್ನದ ಊಟದ ಜೊತೆಗೆ ಉಪ್ಪು, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ, ಬೆಂಕಿ ಕಡ್ಡಿ ಪಟ್ಟಣ ತಪ್ಪದೇ ಜೇಬಿಗೇರಿಸಿಕೊಂಡು ಹೋಗುತ್ತಿದ್ದೆವು. ಕೆರೆ-ಕುಂಟೆಯಲ್ಲಿ ಸಿಗುತ್ತಿದ್ದ ಮೀನು, ಏಡಿಯನ್ನು ಹಿಡಿದು, ಗೆಡ್ಡೆ, ಗೆಣಸು ಅಗೆದು ಸುಟ್ಟು ಉಪ್ಪು, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಅರೆದು ಹಚ್ಚಿ ತಂಗಳಿಟ್ಟು ಹಸಿ ಗೊಜ್ಜು ಜೊತೆ ನಂಜಿಕೊಂಡು ತಿನ್ನುತ್ತಿದ್ದ ರುಚಿ ಅನುಭವಿಸಿದವರಿಗೇ ಗೊತ್ತು. ಇದನ್ನು ನೆನೆದರೆ ಈಗಲೂ ನನಗೆ ಬಾಯಲ್ಲಿ ನೀರೂರುತ್ತೆ. ಕೆರೆ ಕಟ್ಟೆಯ ಕೆಳಗಿನ ತೋಟಗಳಲ್ಲಿ ರೈತರು ಬೆಳೆದಿದ್ದ ಕಬ್ಬು, ಜೋಳ, ಹಣ್ಣು, ತರಕಾರಿಗಳನ್ನು ಬೇಕಾದಷ್ಟು ಕಿತ್ತು ತಿಂದರೂ ಯಾರೂ ಕೇಳುತ್ತಿರಲಿಲ್ಲ.
ಪಶುಗಳು ಅವುಗಳ ಪಾಡಿಗೆ ಅವು ಮೇಯುತ್ತಿದ್ದರೆ; ನಮ್ಮ ಪಾಡಿಗೆ ನಾವು ತಿಂದು ದಟ್ಟವಾಗಿ ಬೆಳೆದಿದ್ದ ಮರಗಳಲ್ಲಿ ಕೋತಿ ಕೊಂಬೆ ಆಟ, ಗುಂಡು ತೋಪುಗಳಲ್ಲಿ ಕಣ್ಣಾ ಮುಚ್ಚಾಳೆ, ಸಬ್ಜಾ ಆಟ, ಮರಳು ದಿಬ್ಬಗಳಲ್ಲಿ ಕಾಗೆ ಗೂಡು ಕಟ್ಟಿ, ಜೇಡಿ ಮಣ್ಣಲ್ಲಿ ಗೊಂಬೆ ಮಾಡಿ ಆಟ ಆಡಿ ಆನಂದಿಸುತ್ತಿದ್ದೆವು. ಜೊತೆಗೆ ಅಡವಿ ಮತ್ತು ಬೆಟ್ಟ ಗುಡ್ಡಗಳಲ್ಲಿ ಹಿಂಡಿಂಡು ಕಾಣಿಸಿಕೊಳ್ಳುತ್ತಿದ್ದ ವಿವಿಧ ಬಗೆಯ ಹಕ್ಕಿ, ಮೊಲ, ಜಿಂಕೆಗಳ ದೃಶ್ಯ ಕುತೂಹಲವನ್ನು ಮೂಡಿಸುತ್ತಿದ್ದವು. ಆ ತಂಪಾದ ವಾತಾವರಣದಲ್ಲಿ ಹಾಗೇ ನಿದ್ದೆಗೆ ಜಾರುತ್ತಿದ್ದದ್ದೂ ಸಾಮಾನ್ಯವಾಗಿರುತ್ತಿತ್ತು. ಅಂತಹ ಸಮಯದಲ್ಲೇ ಒಮ್ಮೊಮ್ಮೆ ಗೋಮಾಳದಲ್ಲೂ ಥಟ್ಟನೆ ಕಾಣಿಸಿಕೊಳ್ಳುತ್ತಿದ್ದ ನರಿ, ತೋಳ ಮೇಯುತ್ತಿದ್ದ ಕುರಿ, ಮೇಕೆಗಳನ್ನು ಎಳೆದೋಗಿ ತಿಂದು ತೇಗಿ ಭಯವನ್ನೂ ಉಂಟುಮಾಡುತ್ತಿದ್ದವು. ಇಂತಹ ಸಂದರ್ಭದಲ್ಲಿ ನಾವು ಜೋರಾಗಿ ಕೂಗಿಕೊಂಡರೆ ಅಕ್ಕ ಪಕ್ಕದ ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದವರು ಓಡೋಡಿ ಬಂದು ಸಹಾಯಕ್ಕೆ ನಿಲ್ಲುತ್ತಿದ್ದರು.
ಮಧ್ಯಾಹ್ನದ ಮೇಲೆ ಆಕಾಶದಲ್ಲಿ ಮೋಡಗಳು ಕಾಣಿಸಿಕೊಳ್ಳುತ್ತಿದ್ದವು. ನೋಡು ನೋಡುತ್ತಿದ್ದಂತೆಯೇ ಮಳೆ ಸುರಿಸಿಬಿಡುತ್ತಿದ್ದವು. ಅದೂ ಅಂತಿಂಥ ಮಳೆ ಅಲ್ಲ. ಗಂಟೆಗಟ್ಟಲೇ ಸುರಿಯುತ್ತಿದ್ದ ಮಳೆಯ ಜೊತೆಗೆ ಬಿರುಗಾಳಿಯೂ ಸೇರಿಕೊಂಡುಬಿಡುತ್ತಿತ್ತು. ದೊಡ್ಡ ದೊಡ್ಡ ಮರಗಳೇ ಉರುಳಿ ಕೊಚ್ಚಿ ಹೋಗಿ ಕೆರೆ-ಕುಂಟೆಗಳಲ್ಲಿ ತೇಲಾಡುತ್ತಿದ್ದವು. ಒಮ್ಮೊಮ್ಮೆ ಮೇಯಲು ಹೋಗಿದ್ದ ದನ-ಕರು, ಎಮ್ಮೆ, ಕುರಿ, ಮೇಕೆಗಳೂ ನೀರು ಪಾಲಾಗುತ್ತಿದ್ದವು. ಚಿಕ್ಕ ವಯಸ್ಸಿನ ನಮಗಂತೂ ಹೇಳತೀರದ ಭಯ ಕಾಡುತ್ತಿತ್ತು. ನಮ್ಮ ಹಿರಿಯರಂತೂ ಗೋಣಿ ಚೀಲ, ಛತ್ರಿ ಹಿಡಿದು ದಾರಿ ಹುಡಿಕಿ ಬರುತ್ತಿದ್ದದ್ದು ನಮಗೆ ರಕ್ಷಣೆಯಾಗುತ್ತಿತ್ತು. ಮನೆ ಸೇರುವಷ್ಟರಲ್ಲೇ ಕುಂಟೆಗಳು ತುಂಬಿ ಹರಿಯುತ್ತಿದ್ದವು. ಬೆಳಗಾಗುವಷ್ಟರಲ್ಲಿ ಕೆರೆಗಳು ಅರ್ಧ-ಮುಕ್ಕಾಲು ಭಾಗದಷ್ಟು ತುಂಬುತ್ತಿದ್ದವು. ಹೀಗೆ ಎರಡು ಮೂರು ದಿನದಲ್ಲೇ ಕೋಡಿಯೂ ಹರಿಸಿ ಮೈ ರೋಮಾಂಚನವಾಗಿಸುತ್ತಿದ್ದವು.
ಆ ತಂಪಿಗೆ ಊರೊಳಗಿನ ಕುಡಿಯಲು ಯೋಗ್ಯವಾಗಿದ್ದ ಸೇದು ಬಾವಿಗಳು, ಊರ ಹೊರಗಿನ ಚಕ್ರ ಬಾವಿ, ಏತ ಬಾವಿ ಹಾಗೂ ದೊಡ್ಡ ದೊಡ್ಡ ಬಾವಿಗಳೆಲ್ಲಾ ತುಂಬಿ ತಳಕು ಹಾಕುತ್ತಿದ್ದವು. ಕೊಳವೆ ಬಾವಿಗಳ ಅವಶ್ಯಕತೆಯೇ ಇರಲಿಲ್ಲ. ರೈತರು ಹೊಲ ಗದ್ದೆಗಳಲ್ಲಿ ಬಿಡುವಿಲ್ಲದೆ ದುಡಿಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಇಟ್ಟ ಬೆಳೆ ಮನೆ ತುಂಬಿ ರಾಶಿ ರಾಶಿ ನೆಲೆಗೊಳ್ಳುತ್ತಿತ್ತು. ಬೇಡುವವರಿಗೆ ಬೆಳೆದವರು ಬಳ್ಳ, ಕೊಳಗಗಳಲ್ಲಿ ದವಸ ಧಾನ್ಯಗಳನ್ನು ದಾನವಾಗಿ ನೀಡುತ್ತಿದ್ದರು. ವಸ್ತು ವಿನಿಮಯವೇ ಪ್ರಧಾನವಾಗಿದ್ದು ದುಡ್ಡಿಗೆ ಅಷ್ಟು ಮಹತ್ವವಿರಲಿಲ್ಲ. ಮೋಸ, ವಂಚನೆಗಳು ಬಹುತೇಕ ನಡೆಯುತ್ತಿರಲಿಲ್ಲ. ಒಂದು ವೇಳೆ ಹಾಗೆ ನಡೆದುಕೊಂಡವರು ಊರ ಪಂಚಾಯಿತಿಯಲ್ಲಿ ತಪ್ಪು ಒಪ್ಪಿ ಅವರೇ ಪಶ್ಚಾತಾಪ ಪಡುವಷ್ಟು ನ್ಯಾಯ ನೀತಿ ಜನರಲ್ಲಿ ನೆಲೆಗೊಂಡಿತ್ತು. ಹಳ್ಳಿ ಜನರಲ್ಲಿ ಅಕ್ಷರಾಭ್ಯಾಸ ಇಲ್ಲದಿದ್ದರೂ ಜೀವನದಲ್ಲಿ ಸಂಸ್ಕಾರ ಬೇರೂರಿತ್ತು. ಹೀಗಾಗಿ ಜನ ಜಲ ಮೂಲಗಳನ್ನು, ಸಸ್ಯ ಮೂಲ ಹಾಗೂ ನೆಲ ಮೂಲಗಳನ್ನು ಸಂರಕ್ಷಿಸಿಕೊಂಡು ಸಮೃದ್ಧ ಜೀವನ ನಡೆಸುತ್ತಿದರು.
ಆದರೆ ಈಗಿನ ಪರಿಸ್ಥಿತಿ ಸಂಪೂರ್ಣ ವ್ಯತಿರಿಕ್ತವಾಗಿದೆ. ಸತತ ಎಂಟ್ಹತ್ತು ವರ್ಷಗಳಿಂದ ಬಹುತೇಕ ಪ್ರದೇಶಗಳನ್ನು ಬರಗಾಲ ಕಾಡುತ್ತಿದೆ. ಬಯಲುಸೀಮೆ ಪ್ರದೇಶಗಳಲ್ಲಂತೂ ಕುಡಿಯಲೂ ಸಹ ಯೋಗ್ಯ ನೀರಿಲ್ಲ. ಪಶು-ಪಕ್ಷಿಗಳ ಬವನೆ ಹೇಳತೀರದು. ಸಾವಿರಾರು ಅಡಿ ಭೂಮಿ ಕೊರೆದರೂ ಹನಿ ನೀರೂ ಸಿಗುತ್ತಿಲ್ಲ. ಅಂತರ್ಜಲ ಕೈ ಮೀರಿ ಬತ್ತಿದೆ. ರೈತರು ಇಟ್ಟ ಬೆಳೆ ಕೈಗೆ ಬರುತ್ತಿಲ್ಲ. ಸಾಲ ಬಾದೆ ನೀಗದೆ ರೈತರ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಜನಸಂಖ್ಯೆಗೆ ತಕ್ಕಷ್ಟು ಆಹಾರದ ಪದಾರ್ಥಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಸಿಗುವಷ್ಟಕ್ಕೆ ದುಬಾರಿ ಬೆಲೆ ಕೊಡಬೇಕಾಗಿದೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಿದ್ದರೂ ರೈತರ ಪಾಲಿಗೆ ಮಾತ್ರ ಬಿಡಿಗಾಸೇ ಲಭ್ಯವಾಗುವುದು. ಇದಕ್ಕೆ ದಲ್ಲಾಳಿಗಳ ದರ್ಬಾರೇ ಕಾರಣ. ಏನೇ ಆದರೂ ಸಾಮಾನ್ಯನ ಬದುಕು ದುಸ್ಥರವಾಗಿರುವುದು ಸತ್ಯದ ಮಾತು. ಇಷ್ಟೆಲ್ಲದರ ನಡುವೆ ಸ್ವಲ್ಪ ಪ್ರಜ್ಞೆಯಿಂದ ಯೋಚನೆ ಮಾಡಿದರೂ ಸಾಕು ಸಮಸ್ಯೆಗೆ ಮೂಲ ಕಣ್ಣೆದುರಿಗೆ ಬಿಂಬಿತವಾಗುತ್ತದೆ. ಪ್ರಕೃತಿಯನ್ನು ವಿರೂಪಗೊಳಿಸಿ ನಾಜೂಕಾದ ಜೀವನ ಮಾಡಲು ಹೊರಟಿರುವ ನಮ್ಮ ನಾಗರೀಕ ಜನರ ಆತ್ಮ ವಂಚನೆಯ ಕಾರ್ಯಗಳೇ ಇದಕ್ಕೆಲ್ಲಾ ಕಾರಣ.
ಅಕ್ಷರಸ್ಥ, ವಿದ್ಯೆಯುಳ್ಳ ಬುದ್ಧಿವಂತ ಮಂದಿ ಎನಿಸಿರುವವರೇ ಇಂದು ಪಟ್ಟಣ ಹಾಗೂ ನಗರ ಸಮೀಪದಲ್ಲಿದ್ದ ಜಲ ಮೂಲಗಳಾದ ರಾಜ ಕಾಲುವೆ, ಗೋಕುಂಟೆ, ಬಾವಿ, ಕೆರೆ ಮುಂತಾದ ಜಲ ಮೂಲಗಳನ್ನು ಮುಚ್ಚಿದ್ದಾರೆ. ಅಲ್ಲೆಲ್ಲಾ ಸಿನೆಮಾ ಮಂದಿರ, ಉದ್ಯಾನವನ, ಕ್ರೀಡಾಂಗಣ, ಮಾಲ್ ಮಾರ್ಟ್, ದೊಡ್ಡ ದೊಡ್ಡ ಸ್ಟಾಲ್ಗಳು, ಕಾಂಪ್ಲೆಕ್ಸ್, ಕಾಂಕ್ರೆಟ್ ಕಟ್ಟಡಗಳನ್ನು ಕಟ್ಟಿದ್ದಾರೆ. ಇದು ಖಾಸಗಿ ಅಥವಾ ಸರ್ಕಾರ ಆಗಿರಬಹುದು. ಹಳ್ಳಿಗಳಲ್ಲಿ ಹೊಲ, ಗದ್ದೆ, ತೋಟ, ಎಸ್ಟೇಟ್ ಹಾಗೂ ರೆಸಾರ್ಟ್ ಇತ್ಯಾದಿ ಮಾಡಿಕೊಂಡು ದುಡಿದುಕೊಳ್ಳುತ್ತಿದ್ದಾರೆ. ಕೋಟಿಗಟ್ಟಲೇ ಹಣದ ವ್ಯವಹಾರವನ್ನು ನಡೆಸುತ್ತಿದ್ದಾರೆ. ಬಿಳಿ-ಕಪ್ಪಿನ ಭೇದವಿಲ್ಲದೇ ಹಣವನ್ನು ಬಚ್ಚಿಡುತ್ತಿದ್ದಾರೆ. ಸಸ್ಯ ಮತ್ತು ನೆಲಮೂಲವಾದ ಗಿಡ-ಮರ, ಗುಂಡುತೋಪು, ನೆಡುತೋಪು, ಕಾಡು, ಅರಣ್ಯ, ಗೋಮಾಳ ಮತ್ತಿತರ ಪ್ರದೇಶಗಳನ್ನು ಅತಿಕ್ರಮಿಸಿ ಮೂಲ ಸ್ಥಿತಿಗಳನ್ನು ಬದಲುಗೊಳಿಸಿ ಅಲ್ಲೂ ಬೃಹದಾಕಾರದ ಕಟ್ಟಡಗಳನ್ನು, ಎಸ್ಟೇಟ್ ಹಾಗೂ ರೆಸಾರ್ಟ್ಗಳನ್ನು ಮಾಡಿ ಮಜಾ ಮಾಡುತ್ತಿದ್ದಾರೆ.
ಇಂದು ಪ್ರಕೃತಿಯಲ್ಲಿ ವೈಪರಿತ್ಯಗಳು ಕಾಣಿಸಿಕೊಳ್ಳುತ್ತಿವೆ. ಭೂಕಂಪ, ಸುನಾಮಿ, ಬಿರುಗಾಳಿ, ಚಂಡಮಾರುತ, ಅತಿವೃಷ್ಠಿ ಹಾಗೂ ಅನಾವೃಷ್ಠಿಗಳು ಉಂಟಾಗುತ್ತಿವೆ. ಅಂತರ್ಜಲ ಬತ್ತಿ ಹೋಗಿದೆ. ಅಷ್ಟಿಷ್ಟು ಸಿಗುವ ನೀರು ಪ್ಲೋರೈಡ್ಯುಕ್ತವಾಗಿ ಖಾಯಿಲೆಯನ್ನು ಸೃಷ್ಠಿಸುತ್ತಿದೆ. ಹವಾಮಾನ ಏರುಪೇರಾಗಿ ದೀರ್ಘ ಖಾಯಿಲೆ, ಮಾರಣಾಂತಿಕ ರೋಗಗಳು ಜೀವ ಜಗತ್ತನ್ನು ಬಲಿ ತೆಗೆದುಕೊಳ್ಳುತ್ತಿವೆ. ವನ್ಯ ಜೀವಿಗಳು ನೆಲೆಯಿಲ್ಲದೆ ನಾಡನ್ನು ಪ್ರವೇಶಿಸಿ ಆತಂಕವನ್ನು ಉಂಟುಮಾಡುತ್ತಿವೆ. ಹೀಗೆ ನೈಸರ್ಗಿಕ ಪ್ರಕೃತಿ ಮೂಲಗಳನ್ನು ಅತಿಕ್ರಮಿಸಿದ ಫಲವಾಗಿ ತಮ್ಮ ತಮ್ಮ ಗೋರಿಗಳನ್ನು ತಾವೇ ನಿರ್ಮಿಸಿಕೊಳ್ಳಲು ಹೊರಟಿರುವುದು ನಿಜವಾಗಿದೆ.
ಆದ್ದರಿಂದ ನಮ್ಮ ಪ್ರಜ್ಞೆ ಏನಿದ್ದರೂ ನಮ್ಮ ಉಳಿವಿಗಾಗಿ ಇರಬೇಕು. ನಮ್ಮ ಉಳಿವು ಬೇಕೆಂದರೆ ಪ್ರಕೃತಿ ಮೂಲಗಳನ್ನು ಉಳಿಸಬೇಕು. ನಮಗೆ ಯಾವುದೇ ಸರ್ಕಾರದ ಆಜ್ಞೆ, ಆದೇಶಗಳು ಜಾಗೃತಿಯನ್ನು ಮೂಡಿಸಬೇಕಾಗಿಲ್ಲ. ಇದು ನಮ್ಮ ಅಂತರಂಗದ ಪ್ರಜ್ಞೆಯ ಜಾಗೃತಿಯಾಗಬೇಕು. ನಾವು ಯಾರೇ ಆದರೂ ಅತಿಕ್ರಮಣ ಎನ್ನುವ ಶಬ್ಧಕ್ಕೇ ಕಿವಿಯನ್ನು ತೆರೆದುಕೊಳ್ಳಬಾರದು. ಕಣ್ಣಿಂದ ನೋಡಬಾರದು. ಈ ರೀತಿಯ ಸ್ವ-ಪ್ರತಿಜ್ಞೆ ಕೈಗೊಂಡಲ್ಲಿ ನಮ್ಮನ್ನು ಪ್ರಕೃತಿ ಸಂರಕ್ಷಿಸುತ್ತದೆ. ಹೀಗಾದಾಗ ನಾವು ಸಮಾಜಮುಖಿಯಾಗಿ ಬಾಳಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವಲ್ಲಿ ಯಾವುದೇ ಸಂದೇಹವಿರುವುದಿಲ್ಲ. ಒಂದು ವೇಳೆ ಆಕ್ರಮಣಕಾರರು ಯಾವುದೇ ಪ್ರಭಾವಕ್ಕೊಳಗಾಗಿದ್ದರೂ ಅಂತಹವರನ್ನು ಮುಲಾಜಿಲ್ಲದೇ ಶಿಕ್ಷೆಗೆ ಒಳಪಡಿಸಿ ಜೀವ ಮೂಲಗಳ ಒತ್ತುವರಿಗಳನ್ನು ಬಿಡಿಸಿ ಜನ ಕಲ್ಯಾಣಕ್ಕಾಗಿ ಸಮರ್ಪಿಸುವ ಜವಾಬ್ದಾರಿ ಆಳುವ ಸರ್ಕಾರಗಳದ್ದಾಗಬೇಕು. ಇದಕ್ಕೆ ಸಮಾಜದ ಪರ ಕಾಳಜಿಯುಳ್ಳ ಎಲ್ಲರ ಸಹಕಾರ ಸದಾ ಸಿಗುತ್ತಿರಬೇಕು. ಜೀವ ಸಂಕುಲದ ಜೀವನಾಡಿಗಳ ರಕ್ಷಕರು ನಾವಾಗಬೇಕು. ಇದು ನಮ್ಮೆಲ್ಲರ ಕಾಳಜಿ ಹಾಗೂ ಜವಾಬ್ದಾರಿ ಆಗಲಿ.
ಪಟೇಲ್. ಎಸ್