ಬಾಂದವ್ಯಗಳು ಬದಲಾಗದಿರಲಿ ಹಿರಿಯರೊಟ್ಟಿಗೆ ಬಾಳ್ಮೆ ಸಾಗಲಿ !
ಭಾರತೀಯ ಸಮಾಜವನ್ನು ಕಾಡುವಂತಹ ಸಾಮಾಜಿಕ ಸಮಸ್ಯೆಗಳಲ್ಲಿ ವೃದ್ಧಾಪ್ಯವೂ ಒಂದು. ಮಾನವ ಜೀವನದ ಕೊನೆಯ ಹಾಗೂ ಕೌಟುಂಬಿಕ ಜೀವನದ ವೃದ್ಧಾಪ್ಯ ಕೊನೆಯ ಹಂತ. ಸುಮಾರು 21 ನೇ ಶತಮಾನದ ಮಧ್ಯಭಾಗದಿಂದೀಚೆಗೆ ಉಂಟಾದ ಸಾಮಾಜಿಕ, ಕೌಂಟುಂಬಿಕ ವ್ಯವಸ್ಧೆಯಲ್ಲಿ ಅನೇಕ ಬದಲಾವಣೆಗಳು ಕಂಡು ಬಂದಿದ್ದು ಪ್ರಾಥಮಿಕ ಸಂಬಂಧಗಳು ದೂರ ಸರಿಯುವಂತೆ ಮಾಡಲಾರಂಭಿಸಿದೆ.
ಭಾರತಿಯ ಕೌಟುಂಬಿಕ ವ್ಯವಸ್ಧೆಯಲ್ಲಿ ತಂದೆ ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ, ಅತ್ತೆ-ಮಾವ, ಅಜ್ಜ-ಅಜ್ಜಿ ಹಿರಿಯರ ಸಾಮೀಪ್ಯದಿಂದ ದೂರ ಸರಿದ ನಾವುಗಳು ಹಿರಿಯರನ್ನು ನೋಡಿಕೊಳ್ಳುವ ರೀತಿ, ಪಾಲನೆ ಮತ್ತು ಪೋಷಣೆ, ಜೊತೆಗೂಡಿ ಬದುಕುವ ಕಲೆ, ಅವರಿಗೆ ಕೊಡುವ ಸ್ಥಾನಮಾನಗಳು ಅಷ್ಟಕಷ್ಟೆ! ಹಾಗಾದರೆ ನಮ್ಮ ರಾಮಾಯಣ, ಮಾಹಾಭಾರತ, ವೇಧ, ಉಪನಿಷತ್ಗಳಲ್ಲಿ ‘’ಪೂಜ್ಯ’’ ಎಂಬ ಪದ ಬಳಕೆ ಅದೆಷ್ಟು ಅರ್ಥಗರ್ಭಿತ ಎಂಬುದು ಕಲ್ಪನೆಯಾಗಿಯೇ ಉಳಿಯಿತು.
ದಶಕದಿಂದಲೂ ಭಾರತೀಯ ಕೌಟುಂಬಿಕ ವ್ಯವಸ್ಧೆಗೆ ಒಂದು ಅರ್ಥ, ಸ್ಥಿರತೆ ಹೊಂದಿದ್ದು ಗ್ರಾಮೀಣ, ನಗರ, ಪಟ್ಟಣವಾಸಿಗಳಲ್ಲಿ ಹಿರಿಯರಿಗೆ ಪೂಜ್ಯನೀಯ ಭಾವನೆಯನ್ನು ನೀಡುತ್ತಿದ್ದಿದ್ದು ನಿಜ. ಆದರೆ ಕೌಟುಂಬಿಕ ಜೀವನಕ್ಕೆ ಕಾಲಿಡುವ ಹೆಣ್ಣು ಮತ್ತು ಗಂಡು ಮಕ್ಕಳಿಗೆ ವಧು-ವರನ್ನು ನೋಡುವ ಸಂಪ್ರದಾಯ, ಸಂಬಂಧಗಳು ಮಾಡುವಂತಹ ಕೌಟುಂಬಿಕ ಮತ್ತು ಸಾಮಾಜಿಕ ಕಾರ್ಯಗಳು ಹಿರಿಯರ ಮೂಲಕವೆ ನಡೆಯುತ್ತಿತ್ತು. ನಮ್ಮ ಹಿರಿಯರು ತಗೆದುಕೊಳ್ಳುವ ನಿರ್ಣಯಗಳು, ನಿರ್ಧಾರಗಳು ಮುಂದಿನ ಜೀವನಕ್ಕೆ ಗಟ್ಟಿಯಾಗಿರುತ್ತಿದವು ಹಾಗೂ ಬದಲಾದ ಪರಿಸರಕ್ಕೆ ಹೇಗೆ ಹೊಂದಾಣಿಕೆಯಾಗಬೇಕು ಎಂಬ ಮಾತನ್ನು ನೀಡಿ, ಗಂಡ, ಹೆಂಡತಿಯ ಮತ್ತು ಮಕ್ಕಳ ನಡುವೆ ಸಾಮರಸ್ಯ ಹೇಗೆ ಬೆಳೆಸಿಕೊಳ್ಳಬೇಕು, ಅತ್ತೆ-ಮಾವಂದಿರ ಜೊತೆ ಮುಂದೆ ಯಾವ ರೀತಿಯಲ್ಲಿ ನಡೆದುಕೋಳ್ಳಬೇಕು ಎಂಬ ಪಾತ್ರನಿರ್ವಹಕರಾಗಿದರು.
ಹಿರಿಯೊಟ್ಟಿಗೆ ನೆಲೆಸಿದಾಗ ನವ ದಂಪತಿಗಳಿಗೆ ಸಾಂಸಾರಿಕ ಸಂಬಂಧಗಳ ಅರಿವನ್ನು ನೀಡಲಾಗಿತ್ತು ಆದರೆ ನಾವು ಈಗಿನ ಎಲೆಕ್ಟ್ರಾನಿಕ್ ಯುಗದಲ್ಲಿ ಮುಂದುವರೆದು ಟಿವಿ, ಕಂಪ್ಯೂಟರ್, ಫೇಸ್ಬುಕ್, ಮೊಬೈಲ್, ಟ್ವಿಟ್ಟರ್ , ಯೂಟೂಬ್ ಮತ್ತು ವಾಟ್ಸ್ ಆಫ್, ಇನ್ ಸ್ಟಾ, ಲಿಕ್ಡ್ ಇನ್ ಅಪ್ಗಳಲ್ಲಿ ನಮ ಜನ ಹೆಚ್ಚಿನ ಸಮಯವನ್ನು ಕಳೆಯುವುದರಿಂದ ಕೌಟುಂಬಿಕ ಸಂಬಂಧಗಳಲ್ಲಿ ಒಡನಾಟ, ಪೋಷಣೆ, ಪಾಲನೆ, ಸಂಪ್ರದಾಯ, ರೂಢಿಗಳು, ಆಚರಣೆಗಳು, ನಿಯಮ ಮೌಲ್ಯಗಳನ್ನು ಗಾಳಿಗೆ ತೂರಿದ್ದೇವೆ.
ಸಾಮಾಜಿಕ ಮತ್ತು ಸಂಪ್ರದಾಯ ಸಂಬಂಧಗಳು ಮೂಲೆಗುಂಪು ಮಾಡುವ ಮೌಢ್ಯ ನಮ್ಮಲ್ಲಿ ಬೆಳವಣಿಗೆ ಯಾಗುತ್ತಿದೆ. ನಾವುಗಳು ಬದಲಾವಣೆ ಮತ್ತು ಪರಿವರ್ತನೆ ಎಂಬ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಭಾವಿಸಿಕೊಂಡು ಸದಾ ಬದಲಾವಣೆಯಾಗುವ ಮೂಲಕ ನಮ್ಮ ಸಂಪ್ರದಾಯಗಳು, ಸಂಸ್ಕೃತಿ ಮತ್ತು ನಡವಳಿಕೆಗಳನ್ನು ತ್ಯೆಜಿಸುವ ಬದುಕು ನಮ ಪೀಳಿಗೆಗೆ ಮಾರಕವಾಗಬಹುದು ? ಹಾಗೆ ನೋಡುವುದಾದರೆ 15 ನೇ ಶತಮಾನದ ಕೌಟುಂಬಿಕ ಬದಲಾವಣೆಗಳು ಮಂದಗತಿಯಲ್ಲಾಗುತ್ತಿತ್ತು. ಇಂತಹ ಬದಲಾವಣೆಗಳಿಂದ ವ್ಯಕ್ತಿಗಳ ಹಾಗೂ ಸಮೂಹಗಳ ಜೊತೆ ಹೊಂದಾಣಿಕೆ ಸಾಕಷ್ಟು ಇದ್ದು, ಸಂಪ್ರದಾಯ ಬದ್ಧ ಸಾಮೀಪ್ಯ ಜೀವನ ಹಿರಿಯ-ಕಿರಿಯರಲ್ಲೂ ಸಾಗಿತ್ತು.
ಇಂದಿನ ಜಗತ್ತಿನ ಜನರ ವೇಗದ ಜೀವನ ಶೈಲಿಗೆ ಹೊಂದಿಕೊಳುವುದಕೊಸ್ಕರ ನಮ್ಮ ಯುವಕ, ಯುವತಿಯರು ತಮ್ಮ ಮೂಲ ಸಾಮಾಜಿಕ ಸಂಬಂಧಗಳಿಂದ ದೂರಸರಿಯುತ್ತಿದ್ದಾರೆ. ಇಂದಿನ ತಾಂತ್ರಿಕ ಯುಗದಲ್ಲಿ ಧರ್ಮ, ಸತ್ಯ, ಗೌರವ ಭಾವನೆ ಮತ್ತು ಜೀವನ ಮೌಲ್ಯಗಳು ಇತ್ಯಾದಿಗಳನ್ನು ಕಾಪಾಡಿಕೊಂಡು ಬರಲು, ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳಲು ಯುವ ಪೀಳಿಗೆಗೆ ಅಸಾಧ್ಯವೆನಿಸುತ್ತಿದೆ. ಪ್ರತಿಯೊಂದು ಸಮಾಜ ಮತ್ತು ಸಮೂಹದಲ್ಲಿ ಹಿರಿಯರಿಗೆ ಸಿಗುವ ಗೌರವ ಭಾವನೆ, ಮೌಲ್ಯಗಳನ್ನು ತಿರಸ್ಕರಿಸಿ ಹೊಸ ಜೀವನ ಮೌಲ್ಯಗಳನ್ನು ಸ್ವೀಕರಿಸಬೇಕಾದಂತ ಪರಿಸ್ಥಿತಿಯಲ್ಲಿ ನಮ್ಮ ಬದುಕು ಸಾಗುತ್ತಿದೆಯಲ್ಲವೇ?
ನಮ್ಮ ಸಾಮಾಜಿಕ ಜೀವನದ ಶ್ರೇಷ್ಠ ಮೌಲ್ಯಗಳ ಅವನತಿಗೆ ಆಧುನಿಕತೆ ಮತ್ತು ತಾಂತ್ರಿಕತೆ ಮೂಲ ಕಾರಣ ಎಂದು ಪ್ರೊ. ಸಾರೊಕಿನ್ ಅಭಿಪ್ರಾಯ ಪಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಹಿರಿಯರನ್ನು ಪೋಷಿಸುವ, ರಕ್ಷಣೆ ಮಾಡುವ ರೀತಿ ಅಧೋಗತಿಗೆ ಇಳಿದಾಗ, ಸಾಮಾಜಿಕ ಮೌಲ್ಯ ಕುಸಿಯುತ್ತಿದೆ. ಸಂಪ್ರದಾಯ ಬದ್ಧ ನಡವಳಿಕೆಗಳು ವಿನಾಸವಾಗುತ್ತಿವೆ ಎಂಬ ಜಿಜ್ಞಾಸೆಗೆ ಒಳಗಾಗಬೇಕಾಗಿದೆ. ಪ್ರಸ್ತುತ ದಿನಗಳಲ್ಲಿ ಅಜ್ಜ-ಅಜ್ಜಿ, ಅತ್ತೆ-ಮಾವ, ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ ಇತ್ಯಾದಿಯರ ಸಂಬಂಧಗಳೇ ಬೇಡ ಎಂಬ ಸ್ವಾರ್ಥ ಭಾವನೆ ನಮ್ಮಲ್ಲಿ ಬೆಳೆದುಕೊಳ್ಳುತ್ತಿದೆ.
ಜೀವನದಲ್ಲಿ ನಾವೆಷ್ಟೆ ದೊಡ್ಡವರಾದರೂ ಶ್ರೀಮಂತರಾದರೂ ಸಮಾಜಕ್ಕಾಗಲಿ, ದೇಶಕ್ಕಾಗಲಿ ಯಾವ ಲಾಭವೂ ಇಲ್ಲ. ನಾವು ಕೆಲವು ಅಂಕಿ-ಅಂಶಗಳನ್ನು ಅವಲೋಕಿಸಿದಾಗ ಜಗತ್ತಿನಾದ್ಯಂತ ಅಂದಾಜು ಸುಮಾರು 400 ಮಿಲಿಯನ್ ವೃದ್ಧರು ನೆಲೆಸಿದ್ದು, 2011 ರ ಭಾರತೀಯ ಸಮೀಕ್ಷೆಯ ಪ್ರಕಾರ 2021 ರ ವೇಳೆಗೆ ಸುಮಾರು 179 ಮಿಲಿಯನ್ ಹಿರಿಯ ನಾಗರೀಕರು ಅಥವಾ ವೃದ್ಧರನ್ನು ಜಗತಿನಾದ್ಯಂತ ನಾವು ನೋಡಬಹುದು ಎಂದು ಅಂದಾಜಿಸಲ್ಪಟ್ಟಿದೆ. ಭಾರತದಲ್ಲಿ ಅಂದಾಜು ಸುಮಾರು 50% ರಿಂದ 60% ಹಿರಿಯ ನಾಗರೀಕರು ತೀವ್ರ ತರವಾದ ಕಾಯಿಲೆಯಿಂದ ಬಳಲುತ್ತಿದ್ದು, ಅಂದಾಜು ಸುಮಾರು 50% ರಷ್ಟು ಹಿರಿಯರು ತಮ್ಮ ಮಕ್ಕಳಿಂದ ತಿರಸ್ಕೃತ ಭಾವನಗೆ ಒಳಪಟ್ಟಿದಾರೆ 15 % ಹಿರಿಯ ನಾಗರೀಕರು ತಮ್ಮ ಸೊಸೆಯಂದಿರ ಜೊತೆಯಲ್ಲಿ ವಾಸ ಮಾಡಲು ನಿರಾಕರಿಸುವ ಮೂಲಕ ಹಾಗೂ ಸೊಸೆಯಂದಿರು ಸರಿಯಾಗಿ ಪಾಲನೆ-ಪೋಷಣೆ ಮಾಡದೆ ಇರುವುದು ಒಂದು ಕಾರಣವಾಗಿದೆ ಈ ಪರಿಸ್ದಿತಿ ಕೇವಲ ಪಟ್ಟಣಕ್ಕೆ ಸೀಮಿತವಾಗಿರದೇ ಗ್ರಾಮೀಣ ಪ್ರದೇಶದ ಯುವಕ-ಯುವತಿಯರು ಹಿರಿಯರ ಸೇವೆಯಾದ ಪಾಲನೆ-ಪೋಷಣೆ ಮಾಡದೆ ಸಾಮಾಜಿಕ ವಿಘಟನೆಯಾಗಿ, ಕೆಲವು ಹಿರಿಯರು ಆಶ್ರಮಗಳಲ್ಲಿ ತಮ್ಮ ವಯೋಸಹಜ ಜೀವನ ಸಾಗಿಸುತ್ತಿದ್ದಾರೆ.
ಕೆಲವು ಹಿರಿಯ ನಾಗರೀಕರು ಮಾನಸಿಕ ಮತ್ತು ದೈಹಿಕ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿದು ದೈಹಿಕ ಸಾಮರ್ಥ್ಯ ಕಡಿಮೆಯಾಗುವುದರ ಜೊತೆಗೆ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು, ರಕ್ತದಲ್ಲಿ ಏರುಪೇರು, ಅಸ್ಥಿಪಂಜರಕೆ ಸಂಬಂಧಿಸಿದ ಕಾಯಿಲೆ, ಕಣ್ಣಿನ ಸಮಸ್ಯೆ, ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪ್ರಗತಿಶೀಲ ಸಮಾಜದಲ್ಲಿ ಹಿರಿಯ ಜೀವಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಪಾಠ ಮುಂದುವರೆಯುತ್ತಿದೆ.
ಇತ್ತಿಚಿನ ದಿನಗಳಲ್ಲಿ ವಿವಾಹದ ವಿಚಾರದಲ್ಲಿ ವಧು-ವರನ ತಂದೆ-ತಾಯಿಯರು ನಿರ್ವಹಿಸುವ ಪಾತ್ರಗಳು ತೀರ ಮರೆಯಾಗುತ್ತಿವೆ ಎಂಬ ಪ್ರಶ್ನೆ ವಸ್ತುನಿಷ್ಠವಾಗಿದೆ. ನಮ್ಮ ಸಾಮಾಜಿಕ ಸಂಬಂಧಗಳು ಸಡಿಲಗೊಂಡು ವಿವಾಹವಾದ ಕೆಲವೇ ದಿನಗಳಲ್ಲಿ ವೈವಾಹಿಕ ಸಂಬಂಧ ಕಳಚಿ ವಿಚ್ಚೇದನ ಕೋರ್ಟ್, ಕಛೇರಿ ಎಂಬ ಸುಲಭ ಮಾರ್ಗವನ್ನು ಕಂಡು ಹಿಡಿಯುವ ಮೂಲಕ ಸಂಬಂದಗಳಿಗೆ ಬೆಲೆ ಇಲ್ಲದಂತಾಗಿದೆ.ಇಂದು ನಾವು ವಿವೇಕದಿಂದ ಬಾಳಲು ಪ್ರಯತ್ನಿಸಿಬೇಕು ಹಾಗಿದ್ದಾಗ ಮಾತ್ರ ಸಹ ಬಾಳ್ವೆ ಸಾಧ್ಯ. ಜೀವನವೂ ಸಾರ್ಥಕ.
ಹೀಗೆ ಭಾರತೀಯ ಸಂಸ್ಕೃತಿಯಲ್ಲಿ ವೈಜ್ಞಾನಿಕ ಕ್ರಾಂತಿ, ಔದ್ಯೋಗಿಕ ಕ್ರಾಂತಿ ಎಷ್ಟೇ ಮುಂದುವರೆದರೂ ಯುವಕ-ಯುವತಿಯರ ಮನಸ್ಥಿತಿಗಳು ಬೇರೆಯಾಗದೆ ಜೊತೆಗೂಡಿ ಕಲೆತು ಬೆರೆತು ಜೀವನ ನಡೆಸಿ, ಹಿರಿಯರೊಟ್ಟಿಗೆ ಪಾಲನೆ ಮತ್ತು ಪೋಷಣೆ ಜೊತೆ ನಮ್ಮ ಜವಾಬ್ದಾರಿಯನ್ನು ಅರಿತತು ಈ ನಿಟ್ಟಿನಲ್ಲಿ ಸಂಬಂಧಗಳನ್ನು ವೃದ್ಧಿಸಿಕೊಳ್ಳುವ ಮಾರ್ಗದಲ್ಲಿ ಮುಂದುವರೆಯಬೇಕು ಹಾಗೂ ನಿರ್ಬಂಧಗಳಿಂದ ದೂರ ಸರಿದು ನಾವು ನಮ್ಮವರು ಎಂಬ ಭಾವನಾತ್ಮಕ ಸಂಬಂಧಗಳ ಮೂಲಕ ಸ್ವಚ್ಛಂದವಾಗಿ ಹಿರಿರೊಟ್ಟಿಗೆ ಬೆರೆತಾಗ ಮಾತ್ರ ನಮ್ಮ ಸಂಸ್ಕೃತಿ ಮತ್ತು ಕೌಟುಂಬಿಕ ವ್ಯವಸ್ಥೆಗೆ ಒಂದು ಅರ್ಧ ಉಳಿದೀತು.
ಪಟೇಲ್. ಸಿಜಿ.