ಬೌದ್ಧಿಕ ದಿವಾಳಿತನಕ್ಕೆ ಭಾಷ್ಯ ಬರೆಯುತ್ತಿರುವ ಸರ್ಕಾರ !

ಭಾರತ ಇಂದು, ಜಾಗತೀಕ ಮಟ್ಟದಲ್ಲಿನ ಉದಾರೀಕರಣದ ನೀತಿಯಿಂದ, ವಿಶ್ವದ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಮನುಷ್ಯನ ಬೇಕುಗಳಿಗಿಂತ, ಬೇಡಗಳನ್ನು ತುಂಬಿಕೊಂಡು ಮುಂದುವರೆದ ರಾಷ್ಟ್ರಗಳು ಕಸದ ತೊಟ್ಟಿಯಾಗಿರುವುದು ಮಾತ್ರ ವ್ಯವಸ್ಥೆಯ ವ್ಯಂಗ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕಾಗದದಲ್ಲಿನ ದಾಖಲೆಗಳಲ್ಲಿ ಮಾತ್ರ ಪ್ರಕಾಶ ಮಾನದ ದೇಶವಾಗಿ ಬೆಳೆಯುತ್ತದೆಯೇ ಹೊರತು, ಸರ್ವಾಂಗೀಣ ಸಾಮಾಜಿಕ ಸ್ತರದಲ್ಲಲ್ಲ.
ಗಾಂಧೀಯ ಚಿಂತನೆಯನ್ನು ಒಮ್ಮೆ ಮೆಲುಕು ಹಾಕ ತೊಡಗಿದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಮಹಾನ್ ಬರಹಗಾರರು, ಚಿಂತಕರು, ನೇರವಾಗಿ, ಪರೋಕ್ಷವಾಗಿ ಆ ವ್ಯಕ್ತಿಗೆ ಪ್ರಭಾವ ಬೀರಿರುವುದು ಕಂಡು ಬರುತ್ತದೆ. ಅದಕ್ಕೆ ಕಾರಣವಾದರೂ ಏನು ? ಎಂಬುದನ್ನು ನೋಡ ಹೊರಟರೆ ಅವರ ಮೇಲಿನ ಬಹುಪಾಲು ಸಮಾಜವಾದಿ ಚಿಂತಕರು ಪ್ರಭಾವ ಬೀರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಗದರೆ ಆ ಸಮಾಜವಾದಿಗಳ ಕೊಡುಗೆಗಳೇನು ? ಎಂಬುದನ್ನು ಗಮನಿಸಿದಾಗ ವಿಶ್ವ ಭ್ರಾತೃತ್ವದ ಕಲ್ಪನೆ ನೀಡಿದ ಟಾಲ್ಸ್ಟಾಯಂಥವರು, ರೂಸೋ, ಮ್ಯಾಕ್ಸಿಂ ಗಾರ್ಕಿ, ತಮ್ಮ ವಿಚಾರಧಾರೆಗಳ ಮೂಲಕ ಪ್ರಭಾವವನ್ನು ಬೀರಿದ್ದಾರೆ.

ಇನ್ನೂ ಹಿಂದಿನ ಇತಿಹಾಸದ ಪುಟವನ್ನು ತಿರುವಿದರೆ ಪ್ಲೇಟೋ, ಆನಂತರದಲ್ಲಿ ಧರ್ಮದ ವಿರುದ್ದವೇ ಹೋರಾಟ ನಡೆಸಿದಂತಹ ಮಾರ್ಟಿನ್ ಲೂಥರ್ ಕಿಂಗ್, ಕಾರ್ಲಮಾರ್ಕ್ಸರಂಥವರು ದೇಶದ ದರ್ಪಿಷ್ಟ ಪ್ರಭುಗಳ, ಚರ್ಚಿನ ಪೋಪ್ಗಳ ವಿರುದ್ಧ ಹೋರಾಟ ನಡೆಸಿದ ಫಲವಾಗಿಯೇ, ಪ್ರಪಂಚಾದ್ಯಂತಹ ಅನೇಕ ದೇಶಗಳಲ್ಲಿ ಕ್ರಾಂತಿಗಳಾದವು, ಬದಲಾವಣೆಯ ದಿಕ್ಕಿನತ್ತ ಹೊರಟವು. ಇಂಗ್ಲೆಂಡ್, ರಷ್ಯಾ, ಅಮೇರಿಕಾ, ಫ್ರಾನ್ಸನಂತಹ ರಾಷ್ಟ್ರಗಳಲ್ಲಿ ರಕ್ತಕ್ರಾಂತಿಗಳು ನಡೆದಿರುವುದನ್ನು ಇತಿಹಾಸ ಸಾಬೀತು ಪಡಿಸಿದೆ. ಕ್ರಾಂತಿಗಳ ಪರಿಣಾಮವಾಗಿ ಆ ಬಹುಪಾಲು ರಾಷ್ಟ್ರಗಳಲ್ಲಿ ಬೌದ್ಧಿಕವಾಗಿ, ಜನತೆ ಬೆಳೆಯಲಾರಂಭಿಸಿದರು. ಕೇವಲ ಅಕ್ಷರಸ್ಥರಷ್ಟಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ತಮ್ಮ ಚಿಂತನೆಗಳ ಮೂಲಕ ದೇಶಗಳನ್ನು ಸರ್ವಾಂಗೀಣ ಅಭಿವೃದ್ದಿಯತ್ತ ಕೊಂಡೋಯ್ದರು. ಭಾರತದಂತಹ ರಾಷ್ಟ್ರಗಳು ಮಾತ್ರ ಇಂಥ ಬೌದ್ಧಿಕ ಚಿಂತನೆಗಳು, ಬೆಳವಣಿಗೆಯ ದೃಷ್ಟಿಯಿಂದ ವಂಚಿತವಾದವು.
ಮುಂಬರುವ ವರ್ಷಗಳ ನಂತರದ ಹೊತ್ತಿಗೆ ನಮ್ಮ ದೇಶದಲ್ಲಿ ಒಂದಿಷ್ಟು ದೇಶದ ಪ್ರಭುತ್ವಗಳು ಹಾಗೂ ಸಂಪನ್ಮೂಲಗಳನ್ನು ನಾಶಪಡಿಸಿ, ಇಲ್ಲಿನ ಬಹುಪಾಲು ಅನಕ್ಷರಸ್ಥ ಪ್ರಜೆಗಳನ್ನು, ತಮ್ಮ ದುಡಿಮೆಗೆ ಬೇಕಾದ ಗುಲಾಮರನ್ನಾಗಿ ಪರಿವರ್ತಿಸಿ, ಶೈಕ್ಷಣಿಕವಾಗಿ ಮತ್ತಷ್ಟು ಹಿಂದುಳಿಯುವಂತೆ ಮಾಡಿದರು. ಬಡತನದ ಜೊತೆಗೆ ಧರ್ಮಾಧಾರಿತ ಜಾತಿಗಳಲ್ಲಿ ಶಾಶ್ವತವಾಗಿ ಸಿಲುಕಿ ನರಳುವಂತೆ ಮಾಡಿದರು. ಅದರ ಘೋರ ಪರಿಣಾಮವನ್ನು ಇಂದಿಗೂ ಸಹ ಅನುಭವಿಸುತ್ತಿದ್ದೇವೆ. ಮುಂದಿನ ಜನಾಂಗದವರು ಕೂಡ ಅನುಭವಿಸುವುದರಮುನ್ಸೂಚನೆ ಯನ್ನು ನಮ್ಮನ್ನು ಆಳುವ ರಾಜಕೀಯ ಪಕ್ಷಗಳು ತೀರ್ಮಾನಿಸಿವೆ.
ಕಾಲದ ಮಹಿಮೆಯೇನೋ, ಇಂದು ಶ್ರೀಮಂತ ರಾಷ್ಟ್ರಗಳೆನ್ನಿಸಿದ ಅಮೇರಿಕಾ, ರಷ್ಯಾ, ಇಂಗ್ಲೆಂಡ್, ಫ್ರಾನ್ಸ್ ನಂತಹ ರಾಷ್ಟ್ರಗಳು, ಬೌದ್ಧಿಕ ದಿವಾಳಿಯತ್ತ ಸಾಗಿವೆ. ತಂತ್ರಜ್ಞಾನದಲ್ಲಿ ಮುಂದುವರೆದು ಅಭಿವೃದ್ದಿ ಹೊಂದುತ್ತಿರುವಂತೆ, ಬೌದ್ಧಿಕ ದಾಸ್ಯತನಕ್ಕೆ ತಮ್ಮನ್ನು ತಾವು ತೆರೆದುಕೊಂಡಿವೆ. ಬೆಳೆಯನ್ನು ಬೆಳೆಯುವುದಕ್ಕಿಂತ, ಹೆಚ್ಚಾಗಿ ತೃತೀಯ ರಾಷ್ಟ್ರಗಳನ್ನು ಬೆಳೆಯನ್ನು ತೆಗೆಯುವ ಆಯುಧವನ್ನಾಗಿ ಮಾಡಿಕೊಂಡಿವೆ. ತಮ್ಮ ರಾಷ್ಟ್ರಗಳಲ್ಲಿ ಸಂಕುಚಿತ ಯೋಚನೆಗಳಿಂದ, ಮೀತಿ ಮೀರಿದ ಯುದ್ಧದ ರಣೋತ್ಸಾಹ ನೀತಿಯಿಂದ, ಇಂದು ಜಗತ್ತನ್ನೇ ರಕ್ತದ ಓಕುಳಿ ಆಡುವ ಸ್ಥಿತಿಗೆ ಕೊಂಡೊಯ್ಯುತ್ತಿವೆ. ಸಾವಿರಾರು ಕೋಟಿ ರೂಪಾಯಿಗಳ ಯುದ್ಧದ ಉಪಕರಣಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ.
ದೇಶದಲ್ಲಿ ಕಮೀಷನ್ ಏಜೆಂಟ್ರನ್ನು ಸೃಷ್ಟಿಸಿ ಲಾಭವನ್ನು ನೀಡುತ್ತಿವೆ. ತಾವು ನಾಶ ಹೊಂದುತ್ತಿವೆ. ಮತ್ತೊಂದು ರಾಷ್ಟ್ರವನ್ನು ನಾಶ ಪಡಿಸುತ್ತಿವೆ. ಭಾರತದಂತಹ ನಮ್ಮ ದೇಶಕ್ಕೆ ಸೀಮಿತಗೊಳಿಸಿ ನೋಡುವುದಾದರೆ, ಇದರ ಅಪಾಯ ದಿನೇ ದಿನೇ ಹೆಚ್ಚಾಗ ತೊಡಗಿದೆ. ನಮ್ಮ ದೇಶವು, ಆರ್ಥಿಕವಾಗಿ ಮುಂದುವರೆದ ಬಲಿಷ್ಠ ರಾಷ್ಟ್ರಗಳ ಪ್ರಯೋಗ ಶಾಲೆಯಾಗತೊಡಗಿದೆ. ಆ ರಾಷ್ಟ್ರಗಳು, ತಮ್ಮ ಸಿದ್ದಾಂತಗಳನ್ನು ಆಕರ್ಷಣೆಯಾಗಿ ಇಲ್ಲವೇ ಬಲವಂತವಾಗಿ ಹೇರತೊಡಗುತ್ತಿವೆ. ಪ್ರಾಥಮಿಕ ಕ್ಷೇತ್ರವಾದ ಕೃಷಿ ಈಗಾಗಲೇ ತನ್ನ ಅಸ್ತಿತ್ವನ್ನೇ ಕಳೆದುಕೊಂಡಿದೆ. ಇನ್ನೂ ಶೈಕ್ಷಣಿಕ ಜಗತ್ತು ಸೇವಾ ವಲಯದಿಂದ ಹೊರ ಬಂದಿದೆ. ಉದ್ಯೋಗದ ರೂಪುರೇಖೆಯೇ ಬದಲಾಗಿದೆ. ಯಾರಿಗೆ ಯಾವ ಕಾರಣಕ್ಕೆ ದುಡಿಯಬೇಕು ಎಂಬುದನ್ನೇ ಮರೆತಂತಾಗಿದೆ.
ಮುಂದುವರೆದ ರಾಷ್ಟ್ರಗಳಲ್ಲಿ, ಅತಿಯಾದ ತಂತ್ರಜ್ಞಾನವನ್ನು ವಿವೇಚನೆ ರಹಿತವಾಗಿ ಅಭಿವೃದ್ದಿ ಪಡಿಸಿದ ಪರಿಣಾಮವಾಗಿ, ವಾಸ್ತವಾಗಿ ಮನುಷ್ಯನ ವಿಕಾಸಕ್ಕೆ ಬೇಕಾದ ಚಿಂತನೆಯುಳ್ಳ ಮನುಷ್ಯತ್ವದ ಬದುಕಿಗಿಂತ, ದೋಚುವ ಬದುಕಿಗೆ ದಾರಿಮಾಡಿಕೊಟ್ಟ ಪರಿಣಾಮದಿಂದ, ಆ ರಾಷ್ಟ್ರಗಳು ಬೌದ್ಧಿಕ ದಿವಾಳಿತನದಿಂದ ತತ್ತರಿಸಿವೆ. ಅತಿಯಾದ ಸಾಮಾಜಿಕ ಮಾಧ್ಯಮಗಳ ಹಾವಳಿ ಅಲ್ಲಿನ ಚಿಂತನೆಯುಳ್ಳ ಓದನ್ನು ಕಿತ್ತುಕೊಳ್ಳತೊಡಗಿದೆ. ಯೋಚಿಸುವ ಶಕ್ತಿ ಕುಸಿದಿದೆ. ಅನುಮಾನಗಳು ಹೆಚ್ಚಾಗಿ ವಿಶ್ವ ಭಾತೃತ್ವ ಸಂಪೂರ್ಣ ನಾಶವಾಗತೊಡಗಿದೆ.
ಇತ್ತೀಚೆಗೆ ಅಮೇರಿಕಾ, ಇಸ್ರೇಲ್, ಅಸ್ಟ್ರೇಲಿಯಾ, ಇಂಗ್ಲೆಂಡ್ಗಳಂತಹ ದೇಶಗಳಲ್ಲಿ, ಜನಾಂಗೀಯ ದ್ವೇಶಗಳು ಹೆಚ್ಚಾಗಲು ಕಾರಣವೇನು ಎಂದು ಅವಲೋಕಿಸಿದಾಗ, ಬದುಕನ್ನು ಕಿತ್ತುಕೊಳ್ಳುತ್ತಿರುವ ಅಲ್ಲಿನ ಬಂಡವಾಳ ಶಾಹಿ ಧೋರಣೆ, ಅತಿಯಾದ ಶ್ರೀಮಂತ ದೇಶಗಳ ಆರ್ಥಿಕ ಬಕಾಸುರತನದ ಯೋಚನೆಗಳು ಕಾರಣಗಳಾಗಿವೆ. ಈ ಮುಂದುವರೆದ ರಾಷ್ಟ್ರಗಳಲ್ಲಿ, ಗಂಡು-ಹೆಣ್ಣಿನ ಸಹವಾಸವಿಲ್ಲದೇ ಮಕ್ಕಳು ಸೃಷ್ಟಿಸುವ ಸಂಸ್ಥೆಗಳಂತಹವುಗಳನ್ನು ಉತ್ತೇಚಿಸುವುದು, ಹಸುಗಳಲ್ಲಿ ಹಾಲನ್ನು ಹೆಚ್ಚಿಸುವುದಕ್ಕೆ ಬೇಕಾಗುವ ಕೆಮಿಕಲ್ ಕಂಡುಹಿಡಿಯುವುದೇ ಶ್ರೇಷ್ಟವೆಂದು ಜಗತ್ತಿಗೆ ಸಾರಿರುವುದು,
ಬಟ್ಟೆ ತೊಳೆಯಲು ರೋಬಾರ್ಟ್ಗಳನ್ನು ಕಂಡು ಹಿಡಿಯುವುದೇ ಅವಿಷ್ಕಾರವೆಂದು ತೀರ್ಮಾನಿಸಿದವೇ ಹೊರತು, ಮನುಷ್ಯನನ್ನು ಮನುಷ್ಯತ್ವದಲ್ಲಿ ರೂಪಿಸುವ ಅವಿಷ್ಕಾರಗಳನ್ನು ಏನು ಮಾಡಬೇಕು ಎಂದು ತಿಳಿಯಲಿಲ್ಲ. ಆದ್ದರಿಂದಲೇ ಆ ರಾಷ್ಟ್ರಗಳು ಅದರ ಫಲವನ್ನು ಅನುಭವಿಸುತ್ತಿವೆ. ಅಮೇರಿಕಾದಂತಹ ದೇಶದಲ್ಲಿ ಮೂಲಭೂತ ಹಕ್ಕುಗಳು ಮನುಷ್ಯನನ್ನು ರೂಪಿಸಲು ಸಹಕಾರಿಯಾದವು. ಆದರೆ ಅಲ್ಲಿನ ಬಂಡವಾಳ ಶಾಹಿ ನೀತಿಗಳೇ ಅವುಗಳನ್ನು ತಿಂದು ಹಾಕಿದವು. ಅದರ ಪರಿಣಾಮವೇ ಇಂದು ಜನಾಂಗೀಯ ದ್ವೇಷಕ್ಕೆ ಕಾರಣವಾಯಿತು. ಇಲ್ಲಿ ಮ್ಯಾಕ್ಸಿಂಗಾರ್ಗಿ-ರೂಸೋ-ಟಾಲ್ಸ್ಟಾಯ್,ಮಾರ್ಕ್ಸ್, ಬರ್ನಾಡ್ ಶಾ ಬರಹಗಳು ಹಾಸ್ಯಸ್ಪದವಾಗಿ ಕಂಡವು. ಇಲ್ಲವೇ ಬೇಡವಾದ ವಿಶ್ವವಿದ್ಯಾಲಯಗಳಲ್ಲಿ ಬಚ್ಚಿಟ್ಟುಕೊಂಡವು. ಕಾರಣವಿಷ್ಟೇ ಮುಂದುವರೆದ ಅಲ್ಲಿನ ಇಂದಿನ ಯುವ ಜನಾಂಗಕ್ಕೆ ಇವರ ಚಿಂತನೆಗಳು 21 & 22 ನೇ ಶತಮಾನದ ದೊಡ್ಡ ಜೋಕ್ಗಳಾದವು. ಹೊಸತನ್ನು ಹುಡುಕಲು ಹೋಗಿ, ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ಅನಿವಾರ್ಯತೆಯನ್ನು ಉಂಟುಮಾಡಿಕೊಂಡಿದ್ದಾರೆ. ಕೇವಲ ಹಣದಿಂದಲೇ ಮಾತ್ರ ತೃಪ್ತಿ-ಮೋಜುಗಳೆಂದು ತೀರ್ಮಾನಿಸಿ ಪುನಃ ಆಧುನಿಕ ರೂಪದ ಕ್ರೆಡಿಟ್ದಾರರ ಅರ್ಥಾತ್ ಸಾಲಗಾರರಾಗಿ ರೂಪುಗೊಳ್ಳತೊಡಗಿದ್ದಾರೆ.
ನಮ್ಮ ದೇಶವಂತೂ ಮೊದಲಿಂದಲೂ ಏಡಬಿಡಂಗಿತನವನ್ನು ಪ್ರದರ್ಶಿಸುತ್ತಲೇ ಬಂದಿತು. ಸ್ವಾತಂತ್ರ್ಯದ ಹಿಂದೆ ಹೆಚ್ಚಾಗಿ ಚಿಂತನೆಗಳಿಂದ ಓದುವ ಸ್ಥಿತಿ ಇರಲಿಲ್ಲ. ಕಾರಣವಿಷ್ಟೆ ಅಂದು ಹೊಟ್ಟೆಗಾಗಿ ಹೋರಾಟ ಮಾಡುತ್ತಿದ್ದ ಕಾಲದಲ್ಲಿ ಓದು ಹೇಗೆ ತಾನೇ ಸಾಧ್ಯ. ಸ್ವಾತಂತ್ರ್ಯದ ನಂತರ ಓದಲು ಪ್ರಾರಂಭಿಸಿದರು. ಸಂಪೂರ್ಣ ಸಾಕ್ಷರತೆ ಹೊಂದುವ ಹೊಸ್ತಿಲನಲ್ಲಿ, ಜಾಗತೀಕರಣ ಪ್ರಭಾವದಿಂದ ಸಾಮಾಜಿಕ ಮಾಧ್ಯಮಗಳು ಅವರ ಓದನ್ನು ನಾಶ ಪಡಿಸತೊಡಗಿದವು. ಜೊತೆಜೊತೆಯಲ್ಲಿಯೇ ಶೈಕ್ಷಣಿಕ ಜಗತ್ತು ಮುಂದುವರೆದ ರಾಷ್ಟ್ರಗಳಿಗೆ ಹಾಲನ್ನು ಕೊಡುವ ಹಸುವಾಗಿ ಏನನ್ನು ಓದಿದರೆ ಕೆಲಸ ಸಿಗುತ್ತದೆ? ಎಂಬ ಅವಿವೇಕತನಕ್ಕೆ ಧುಮುಕಿ ಅವರ ಬೇಡಿಕೆಗೆ ಪೂರೈಕೆದಾರವಾದವು. ಪರಿಣಾಮ ಇಂದು ಓದಿದರೂ ತಮ್ಮ ಬದುಕನ್ನು ರೂಪಿಸಿಕೊಳ್ಳತೊಡಗುವ ಉದ್ಯೋಗಗಳು ಸಿಗದೇ, ಅಲರ್ಜಿ ಬರುವ ಫಿಲಾಸಫಿಯನ್ನು ಮಾತನಾಡುತ್ತಾ ಕಾರಿನ ಡ್ರೈವರಾಗಿ ರೂಪತಾಳುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಹಣ ದೋಚುವ ಶಿಕ್ಷಣದ ಪ್ರಮಾಣಪತ್ರಗಳು ಇಂದು ಯಥೇಚ್ಚವಾಗಿ ಸಿಗುತ್ತಿವೆಯೇ ಹೊರತು, ಮುಂದಿನ ಬದುಕನ್ನು ಖಂಡಿತಾ ರೂಪಿಸಲಾರವು. ಇಂದಿನ ಯುವ ಜನಾಂಗವಂತೂ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಲಾಭ- ನಷ್ಟದ ಬಗ್ಗೆ ಯೋಚಿಸುತ್ತಿಲ್ಲ. ನಮ್ಮ ಆಳುತ್ತಿರುವ ಸರ್ಕಾರದ ಬೊಕ್ಕಸವಂತೂ ತುಂಬುತ್ತಿದೆಯೇ ಹೊರತು ಮುಂದಿನ ನಾಡಿನ ಪ್ರಜೆಗಳಿಗೆ ಏನನ್ನು ಕೊಡಬೇಕು? ಯಾವುದನ್ನು ಉಳಿಸಬೇಕು ಎಂಬ ಕನಿಷ್ಠ ಜ್ಞಾನವಂತೂ ಆಳ್ವಿಕೆ ನಡೆಸುತ್ತಿರುವ ಆಧುನಿಕ ಮಹರಾಜರುಗಳಿಗೆ ತಿಳಿಯುತ್ತಿಲ್ಲ. ತಿಳಿದರೂ ಅವರು ಮುಂದೆ ಬರುತ್ತಿಲ್ಲ. ಸರ್ಕಾರ ಹೆಸರೇಳಿ ತಮ್ಮ ಖಜಾನೆ ತುಂಬಿಸಿಕೊಳ್ಳವ ಇವರಿಂತ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ.
ಇನ್ನೂ ನಮ್ಮ ಕೃಷಿ ಪದ್ಧತಿಯಂತೂ ದಿಕ್ಕು ದಿವಾಳಿಯಿಲ್ಲದೇ ನಾಶವಾಗುತ್ತಿದೆ. ಏನನ್ನು? ಯಾರಿಗಾಗಿ? ಏಕೆ ಬೆಳೆಯಬೇಕು? ಎನ್ನುವುದಕ್ಕಿಂತ ಹೆಚ್ಚು ಲಾಭ ಬಂದರೆ ಸಾಕು. ಯಾರಿಗಾಗಿ ಬೆಳೆದರೂ ಏನನ್ನು ಬೆಳೆದರೂ ತೊಂದರೆ ಇಲ್ಲ. ಎಂಬ ಲೆಕ್ಕಚಾರಕ್ಕೆ ಬಂದ ನಮ್ಮ ರೈತ ಇಂದು ಆಧುನಿಕ ಸಾಫ್ಟವೇರ್ಗಾರನಾಗಿ ಬೇರೊಬ್ಬರಿಗೆ ಬೆಳೆದು ಲಾಭ ನೋಡುತ್ತಿದ್ದಾನೆ. ಮುಂದೊಂದು ಕಾಲಕ್ಕೆ ನಿರುದ್ಯೋಗಿಗಳಾಗಿ ಏನಾಗುತ್ತಿದ್ದಾರೆ? ಎಂಬ ತಿಳುವಳಿಕೆಯಿಲ್ಲದೆ ರೈತರು ದುಡಿಯುತ್ತಿದ್ದಾರೆ. ಮುಂದೊಂದು ಕಾಲಕ್ಕೆ ಭೂಮಿಯೂ ಇಲ್ಲದೆ, ಬೆಳೆಯೂ ಇಲ್ಲದೆ, ಅಕ್ಕಿಭಾಗ್ಯಕ್ಕೆ ಕೈ ಚಾಚುವ ಭಿಕ್ಷುಕರಾಗುವುದರಲ್ಲಿ ಯಾವ ಸಂಶಯವೂ ಬೇಡ.
ನಾನು ಇಲ್ಲಿ ಕೇವಲ ಕೆಲವೊಂದು ಉದಾಹರಣೆಗಳನ್ನು ಅಷ್ಟೇ ತೆಗೆದುಕೊಂಡು ಚರ್ಚಿಸಿದ್ದೇನೆ. ಈ ಹಿನ್ನಲೆಯಲ್ಲಿ ಮುಂದುವರೆದು ಯೋಚಿಸಿದರೆ ಇನ್ನು ಹತ್ತುಹಲವು ಅಪಾಯಗಳು ಕಾಣುತ್ತವೆ. ಇವೆಲ್ಲವುದಕ್ಕೆ ನಿಜವಾದ ಕಾರಣಗಳೇನು ? ಪರಿಹಾರಗಳು ಇಲ್ಲವೇ? ಎಂಬ ಪ್ರಶ್ನೆಗಳನ್ನು ಹುಡುಕುತ್ತಾ ಹೊರಟಂತೆ ನಮ್ಮನ್ನು ನಾವು ಮೊದಲು ತಿಳಿದುಕೊಂಡು, ನಮ್ಮ ತನವನ್ನು ನಾವು ಜಗತ್ತಿಗೆ ತೋರಿಸಿ, ಯೋಗ್ಯ ರೀತಿಯಲ್ಲಿ ತೆರೆದುಕೊಳ್ಳಬೇಕು. ಆಗ ಮಾತ್ರ ಹಂತಹಂತವಾಗಿ ನಾವು ಬೌದ್ಧಿಕವಾಗಿ ಶ್ರೀಮಂತರಾಗುವುದಲ್ಲದೇ, ಜನಾಂಗೀಯ ದೃಷ್ಟಿಯಿಂದ ಸಮಗ್ರವಾಗಿ ಬೆಳೆಯಲು ಸಾಧ್ಯ.