ಸ್ವಾತಂತ್ರ್ಯ: ಹೊಸ ವ್ಯಾಖ್ಯಾನ !
ಸ್ವಾತಂತ್ರ್ಯ ಈ ಪದವು ಭಾರತೀಯ ಮಣ್ಣಿನಲ್ಲಿ ನಾಲ್ಕು ನೂರು ವರ್ಷಗಳ ಇತಿಹಾಸದೊಂದಿಗೆ ಬೆರೆತು ಹೋಗಿದೆ. ಆದರೆ, ಇಂದಿಗೂ ಅದು ನಿಯಮವೇ, ವೈಯಕ್ತಿಕವೇ ಮೊದಲಾದ ಗೊಂದಲಗಳೊಂದಿಗೆ ಹೊಸ ವ್ಯಾಖ್ಯಾನಗಳನ್ನು ಪಡೆದುಕೊಳ್ಳುತ್ತಿದೆ. ಮೂಲತಃ ಈ ಪದವು ಪ್ರಾಚೀನ ಗ್ರೀಕ್ ನಾಗರೀಕತೆಯಲ್ಲಿ ಕಂಡು ಬರುತ್ತದೆ. ಗ್ರೀಕರು ಸಮಾಜದ ಸ್ವಾತಂತ್ರ್ಯ ಹಾಗೂ ವ್ಯಕ್ತಿ ಸ್ವಾತಂತ್ರ್ಯ ನಡುವೆ ಸ್ಪಷ್ಟವಾದ ನಿಯಮ ಹೊಂದಿದ್ದರು. ಅರಿಸ್ಟಾಟಲ್ ಪ್ರಕಾರ ರಾಷ್ಟ್ರವು ಮಾನವ ಸ್ವಭಾವದ ಕೆಲವೊಂದು ಮೂಲಭೂತಗತ್ಯತೆಗಳನ್ನು ಈಡೇರಿಸಿಕೊಳ್ಳುವ ಸಾಧನವಾಗಿದೆ. ಬಾಂಧವರ ಜೊತೆಗೂಡಿ ವ್ಯಕ್ತಿತ್ವ ಬೆಳವಣಿಗೆ ಮಾಡುವ ಸಾಧನವಾಗಿದೆ. ಹಾಗೂ ಪ್ಲೇಟೋ ತನ್ನ ರಿಪಬ್ಲಿಕ್ನಲ್ಲಿ ಸ್ವಾತಂತ್ರ್ಯ ಜನರ ಆತ್ಮ ಸಾಕ್ಷಾತ್ಕಾರದ ಸಾಕಾರಕ್ಕೆ ಅತ್ಯುತ್ತಮ ಆಕರವೆಂದು ತಿಳಿಸಿದ್ದರು.
ಈ ಹಿನ್ನಲೆಯಲ್ಲಿ ಸ್ವಾತಂತ್ರ್ಯವೆಂಬುದನ್ನು ಗಮನಿಸೋಣ. ಭಾರತವು ಈಗಾಗಲೇ ವಿಶ್ವದ ಹಿನ್ನಲೆಯಲ್ಲಿ ಸ್ವಾತಂತ್ರ್ಯದೇಶ. ಇಲ್ಲಿ, ಎರಡು ಅಂಶಗಳನ್ನು ಸ್ಪಷ್ಟಪಡಿಸುತ್ತಿದ್ದೇನೆ. ವ್ಯಕ್ತಿಯು ಸಮಾಜದೊಂದಿಗೆ ಪಡೆಯುವ ಸ್ವಾತಂತ್ರ್ಯ ಹಾಗೂ ತಾನು ವೈಯಕ್ತಿಕವಾಗಿ ಅನುಸರಿಸುವ ಸ್ವಾತಂತ್ರ್ಯ. ಸ್ವಾತಂತ್ರ್ಯವೆಂದರೆ, ಬೇರೆಯವರ ಗುಲಾಮಗಿರಿಯಿಂದ, ನಿಯಮಗಳನ್ನು ಕಳಚಿ, ನಮ್ಮದೇ ನಿಯಮಗಳಲ್ಲಿ ಬದುಕುವುದು. ಹಾಗಾದರೆ ನಿಯಮಗಳಿಂದ ಆವೃತವಾದ ಶಿಸ್ತನ್ನು ಸ್ವಾತಂತ್ರ್ಯ ಎನ್ನುತ್ತೇವೆ ಅಲ್ಲವೇ ನಿಯಮಗಳೆಂದರೆ ಬಂಧನಗಳಲ್ಲ. ನಮ್ಮನ್ನು ಮತ್ತು ನಮ್ಮ ಸಮಾಜವನ್ನು ಆರೋಗ್ಯವಾಗಿ ರೂಪಿಸುವ ಸೂತ್ರಗಳು. ಇವು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿವೆ. ಈ ಸೂತ್ರಗಳನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
ಸಂವಿಧಾನವನ್ನು ಪಾಲಿಸುವುದು ಎಂದರೆ, ನಾವು ಸ್ವಾತಂತ್ರ್ಯವಾಗಿ ಬದುಕುತ್ತಿದ್ದೇವೆ ಎಂದರ್ಥ. ಸಂವಿಧಾನದ ಪೀಠಿಕೆಯಲ್ಲಿ ನಿರೂಪಿಸಿರುವಂತೆ ಇವು ಮುಖ್ಯ ಅಂಶಗಳಾಗಿವೆ. ಈ ಸಂವಿಧಾನವನ್ನು ನಮ್ಮ ರಾಜಕೀಯ ಕ್ಷೇತ್ರದವರು, ಆಡಳಿತ ಕ್ಷೇತ್ರದವರು ಪರಿಪೂರ್ಣವಾಗಿ ಪಾಲಿಸಲು ಸಾಧ್ಯವಿಲ್ಲ. ಆದರೆ, ಈ ದೇಶದ ಪ್ರಜೆಯಾಗಿ ಪ್ರತಿಯೊಬ್ಬ ವ್ಯಕ್ತಿಯೂ ಪಾಲಿಸಬಹುದು. ಭಾರತವು ಇನ್ನೂ ಸಂವಿಧಾನ ಸ್ವರೂಪವಾದ ಕಾನೂನುಗಳನ್ನು ಪಾಲಿಸುತ್ತಿಲ್ಲ. ಕಾರಣ, ನಮ್ಮ ವ್ಯಕ್ತಿ ಸ್ವಾತಂತ್ರವೆಂಬುದು, ಜೀವಿಸುವ, ಮಾತನಾಡುವ ಮೊದಲಾದಂತೆ ಪ್ರತಿ ಹೆಜ್ಜೆಗೂ ನಿರಾಕರಿಸಲಾಗುತ್ತಿದೆ. ಸಮಾಜದ ಕಾನೂನುಗಳು ಅಸ್ಪಷ್ಟವಾಗಿವೆ, ಇಲ್ಲವೇ ಪುಸ್ತಕದಲ್ಲಿ ಮಾತ್ರ ಇವೆ. ಸಂವಿಧಾನವನ್ನು ಹಾಗೂ ಅದರ ಪೀಠಿಕೆಯನ್ನು ಒಂದು ಸುಂದರ ಪ್ರದರ್ಶನ ಚಿತ್ರವೆಂಬಂತೆ ಬಳಸಲಾಗುತ್ತಿರುವುದು ದುರಂತ. ಸಾರ್ವಜನಿಕವಾದ ಕಾನೂನುಗಳನ್ನು ಕೆಲವರಷ್ಟೇ ಪಾಲಿಸುವ ಪ್ರಜಾಸತ್ತಾತ್ಮಕ ದೇಶವಿದು. ಕಾನೂನು ಬಾಹಿರವಾದ ಘಟನೆಗಳು, ವಸ್ತುಗಳ ಮಾರಾಟ ಹಾಗೂ ಬಳಕೆ ನಿತ್ಯವೂ ತೆರೆದ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ದೇಶದಲ್ಲಿ ನಾವು ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಹೇಗೆ ನಿರೂಪಿಸಲು ಸಾಧ್ಯ. ಸ್ವಾತಂತ್ರ್ಯದ ನಿಯಮಗಳೆಂದರೆ, ಅಗತ್ಯದಲ್ಲಿ ಮಾತನಾಡುವ, ಬಳಸುವ ಶಕ್ತಿಗಳಲ್ಲ. ಒಬ್ಬ ಮನುಷ್ಯನನ್ನು ಸಮಾಜದಲ್ಲಿ ಸದೃಢರನ್ನಾಗಿಸಲು ನಮ್ಮ ಹಿರಿಯಚಿಂತಕರು ರೂಪಿಸಿದ ತತ್ವಗಳು.
ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬರೋಣ ಧೂಮಪಾನ, ಮಧ್ಯಪಾನ, ಸುಖಭೋಗ ಸ್ವಾತಂತ್ರ್ಯಗಳನ್ನು ಅನುಭವಿಸುತ್ತಿರುವ ಈ ಮನುಷ್ಯನು ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲವೇ ನಮ್ಮನ್ನು ನಾವು ಆರೋಗ್ಯವಂತ-ಸದೃಢರನ್ನಾಗಿ ಹೇಗೆ ರೂಪಿಸಿಕೊಳ್ಳುತ್ತಿದ್ದೇವೆ. ಪ್ಲೇಟೋ ಹೇಳುವ ಆತ್ಮಸಾಕ್ಷಾತ್ಕಾರ ಎಲ್ಲಿದೆ ಇದು ಪ್ರತಿಯೊಬ್ಬರೂ ಆಲೋಚಿಸ ಬೇಕಾದ ವಿಷಯ. ನಮ್ಮ ಸ್ವಾರ್ಥಕ್ಕಾಗಿ ನಿಯಮಗಳನ್ನು ಪಾಲಿಸುವ, ನಿರಾಕರಿಸುವ ಮನೋಚಿಂತನೆಯು ಸ್ವಾತಂತ್ರ್ಯವಾಗಿರುವುದಿಲ್ಲ. ಉದ್ಯೋಗವು ಲಾಭಕ್ಕಾಗಿರೂಪಿಸುವ ಕ್ಷೇತ್ರವೇ ಆಲೋಚಿಸಿ. ಸಮಾಜದ ಬೆಳವಣಿಗಾಗಿ ನಿರ್ವಹಿಸುವ ಘಟಕವು, ಇಂದು ವೈಯಕ್ತಿಕ ಲಾಭಕ್ಕಾಗಿ ನಿರ್ಮಿಸಿಕೊಂಡಿರುವ ಸಂಸ್ಥೆಯಾಗಿದೆ. ಸರ್ಕಾರದ ಅನುಮತಿಯೂ ಇರುತ್ತದೆ. ಇದು ಹೇಗೆಂದರೆ, ನಾವು ಸಂಬಳ ಪಡೆದು, ನಾವೇ ತೆರಿಗೆ ಕಟ್ಟುವಂತೆ. ತೆರಿಗೆರಹಿತ ಸಂಬಳವನ್ನು ಪಡೆಯುವ, ತೃಪ್ತಗೊಳ್ಳುವ ಆಲೋಚನೆಗಳು ನಮ್ಮಲ್ಲಿಲ್ಲ. ಇಂದಿನ ಯುವಕರಲ್ಲಿ ನಗರಮುಖಿ ಸ್ವಾತಂತ್ರ್ಯವು ಹೀಗಿದೆ. ಸಿಗರೇಟು ಸೇದುವುದು, ಮಧ್ಯ ಕುಡಿಯುವುದು, ವೈಯಕ್ತಿಕ ಸುಖಕ್ಕಾಗಿ ವಸ್ತು-ವ್ಯಕ್ತಿಗಳನ್ನು ಬಳಸಿಕೊಳ್ಳುವುದು ಈ ಅಂಶಗಳಲ್ಲಿ ಯಾವುದಾದರೂ? ಆರೋಗ್ಯ? ವಿಚಾರ ಇದೆಯೇ? ಸ್ವಾತಂತ್ರ್ಯವಿದೆಯೆಂದು ನಮ್ಮ ಆರೋಗ್ಯವನ್ನು ನಾಶಮಾಡಿ ಕೊಳ್ಳುತ್ತಿಲ್ಲವೇ ಆಲೋಚಿಸಿ. ವೈಯಕ್ತಿಕ ಸ್ವಾತಂತ್ರ್ಯದ ಜೊತೆಯಲ್ಲಿ ನಮ್ಮ ಪರಿಸರದ ಮೇಲೆ ಏನೆಲ್ಲಾ ಪರಿಣಾಮ ಬೀರಬಹುದು ನಮಗೆ ಅರಿವಿಲ್ಲವೇ.
ಸ್ವಾತಂತ್ರ್ಯದ ದುರ್ಬಳಕೆಗೆ ಕಾರಣಗಳು:
ಇಲ್ಲಿ ಮೂರು ವಿಚಾರಗಳನ್ನು ಕಾರಣ ಹಾಗೂ ಪರಿಹಾರದೊಂದಿಗೆ ಚರ್ಚಿಸಲಾಗಿದೆ. ಇದೇ ಮಾದರಿಯಲ್ಲಿ ಹಲವು ವಿಚಾರಗಳಿವೆ.
1. ಉದ್ಯಮವಾದ ಶಿಕ್ಷಣ
ಶಿಕ್ಷಣವು ಮನುಷ್ಯನನ್ನು ಸ್ವತಂತ್ರಗೊಳಿಸುವ ಮೊದಲ ಬಾಗಿಲು. ಅದನ್ನು ದುಡಿಮೆಯ ತೊಟ್ಟಿಲಾಗಿಸಿ, ಮುಚ್ಚಿ ಬಿಟ್ಟರೆ, ಅಲ್ಲಿನ ಉತ್ಪನ್ನವು ಯಾವ ಮಾದರಿಯಲ್ಲಿ ಇರುತ್ತದೆ ಆಲೋಚಿಸಿ. ಶಿಕ್ಷಣದಲ್ಲಿ ಭಾಷೆ, ಸಂಸ್ಕೃತಿ ಹಾಗೂ ಸ್ಥಳೀಯ ಚಿಂತನೆಗಳನ್ನು ನೆಪವಾದ ಪಠ್ಯವಾಗಿಸಿ ಸಂಪೂರ್ಣ ಹೊರಗಿಡಲಾಗಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಹತ್ತು ವರ್ಷಗಳ ಕಲಿಕೆಯಲ್ಲಿ ಭಾಷಾ ತರಗತಿಗಳು ಹೇಗಿವೆ ಎಂಬುದನ್ನು ಪೋಷಕರು ಆಲೋಚಿಸ ಬೇಕಿದೆ. ಮಗುವಿನ ಪರಿಪೂರ್ಣ ವ್ಯಕ್ತಿತ್ವ ರೂಪಿಸುವ ಸಂಸ್ಕೃತಿಯ ತರಗತಿಗಳೇ ಬರಿ ನೆಪವಾದರೆ, ಬರಿ ಉತ್ತೀರ್ಣರಾದರೆ ಸಾಕು ಎನ್ನುವಂತಿದ್ದರೆ ಮಗುವಿಗೆ ಸಂಸ್ಕಾರವು ಹೇಗೆ ಲಭಿಸಲು ಸಾದ್ಯ. ನಗರಮುಖಿ ವಿದ್ಯಾರ್ಥಿಗಳಿಗಂತೂ ಸಮಗ್ರವಾಗಿ ಯಾವುದೇಒಂದು ಭಾಷೆಯು ಬರುತ್ತಿಲ್ಲ. ಹೀಗಿರುವಾಗತನ್ನ ಸ್ವಾತಂತ್ರ್ಯವನ್ನು ಹೇಗೆ ರೂಪಿಸಿಕೊಳ್ಳಬಲ್ಲರು. ಔದ್ಯಮಿಕವಾದ ಶಿಕ್ಷಣವು, ಹಣವನ್ನು ಸಂಪಾದಿಸುವ ಯಂತ್ರ ಮಾದರಿಯ ಶರೀರಗಳನ್ನು ಸೃಷ್ಟಿಸುತ್ತದೆ. ಇಂದಿನ ಮಕ್ಕಳು ಯಂತ್ರಗಳಾಗುತ್ತಿದ್ದಾರೆಯೇ ಹೊರೆತು, ಮನುಷ್ಯರಾಗುತಿಲ್ಲ. ಪದವಿ ಹಂತಗಳ ಶಿಕ್ಷಣಕ್ಕೆ ಕಾಲಿಡುವ ವಿದ್ಯಾರ್ಥಿಯು ಆಗ ತಾನೇ ಆಲೋಚಿಸುವ, ಚಿಂತಿಸುವಆಯಾಮ ಹೊಂದಿರುತ್ತಾರೆ. ಆದರೆ ಆ ಹಂತದಲ್ಲಿಯೇ ಸಂಸ್ಕೃತಿ ಚಿಂತನೆಯ ಯಾವುದೇ ಅಧ್ಯಯನವು ಇಲ್ಲದೆ, ಭಾಷಾ ತರಗತಿಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದು ಇಲ್ಲವೆ ನೆಪವಾಗಿಸುವುದು ಕೂಡ ಬಹುದೊಡ್ಡ ಸಮಸ್ಯೆಯಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ, ರಂಗಭೂಮಿ, ಸಿನೆಮಾ ಮೊದಲಾದ ಕ್ಷೇತ್ರಗಳಿಗೆ ಅತಿಹೆಚ್ಚು ಯುವಕರು ಆಸಕ್ತಿ ತೋರುತ್ತಿದ್ದಾರೆ. ಇವರು ತಾಂತ್ರಿಕ ಹಾಗೂ ವೈದ್ಯಕೀಯ ಕ್ಷೇತ್ರದಿಂದ ಬಂದವರಾಗಿರುತ್ತಾರೆ. ಈ ದೃಷ್ಟಿಯಿಂದ ಗಮನಿಸುವುದಾದರೆ, ಅವರಿಗೆ ಭಾಷೆ-ಸಂಸ್ಕೃತಿ ಮೊದಲಾದಂತೆ ಕಲಾತ್ಮಕ ಜ್ಞಾನಗಳು ಶಿಕ್ಷಣದ ಹಂತದಲ್ಲಿಯೇ ಲಭಿಸಿದ್ದರೆ ಅದೆಷ್ಟು ಅನುಕೂಲವಾಗುತ್ತಿತ್ತಲ್ಲವೇ. ಒಬ್ಬ ಹಾಡುಗಾರ ಕನ್ನಡ ಹಾಡು ಕಲಿಯಲು ಅದನ್ನು ಇಂಗ್ಲಿಷ್ನಲ್ಲಿ ಬರೆದುಕೊಂಡು ಹಾಡುವಂತೆ ಸ್ವಾತಂತ್ರ್ಯದ ಹರಣವು ನಮ್ಮ ಸಂಸ್ಕೃತಿಯ ಕಲಿಕೆಯಲ್ಲಿದೆ. ಬಲಿಷ್ಠತೆಯನ್ನು ನಾಶಮಾಡಿ, ಸಿದ್ಧ ಮಾದರಿಗಳನ್ನು ತುಂಬಲೆತ್ನಿಸುವುದು ಇಂದಿನ ಯುವಕರ ಸ್ವಾತಂತ್ರ್ಯ ಹರಣವಾಗಿದೆ.
2.ಉತ್ತಮ ಆರೋಗ್ಯ ಕೇಂದ್ರಗಳ ಸ್ಥಾಪನೆ
ಉತ್ತಮ ಆರೋಗ್ಯವನ್ನು ಒದಗಿಸುವುದು ಸರ್ಕಾರದ ಶ್ರೇಷ್ಠ ಕೆಲಸವೇ ಆದರೂ, ಚಿಕಿತ್ಸೆ ಇರುವ ಕಾರಣ, ಕಾಳಜಿ ರಹಿತ ಬದುಕು ಹೆಚ್ಚಾಗುತ್ತಿದೆ. ಆಸ್ಪತ್ರೆಗಳನ್ನು ಪರಿಶೀಲಿಸಿದರೆ ತಿಳಿಯುತ್ತದೆ ಅಪಘಾತ, ಮಧ್ಯಪಾನ-ಧೂಮಪಾನ ಹಾಗೂ ಇಂತಹ ಚಟಗಳಿಂದ ಕ್ಯಾನ್ಸರ್, ಲೇಸರ್ ಚಿಕಿತ್ಸೆಗಳು ಮೊದಲಾದಂತೆ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಿರುವಾಗ ಸ್ವಾತಂತ್ರ್ಯದ ದುರ್ಬಳಕೆ ಎದ್ದು ಕಾಣುತ್ತಿದೆ. ಆರೋಗ್ಯ ಕೇಂದ್ರಗಳು ಇಂತಹ ಉತ್ತಮ ಸೇವೆ ನೀಡುವಾಗಲೇ ಅದನ್ನು ದುರ್ಬಳಕೆ ಮಾಡಿಕೊಳ್ಳುವುದು ಕೂಡ ಸ್ವಾತಂತ್ರ್ಯಕ್ಕೆ ಅಪವಾದವಾಗಿದೆ.
3.ಕಾನೂನಿನ ಶಿಸ್ತು
ಮನುಷ್ಯನನ್ನು ರೂಪಿಸುವ ಕಾನೂನುಗಳಿಗಿಂತ ಮನುಷ್ಯನನ್ನು ಶಿಕ್ಷಿಸುವ ಕಾನೂನುಗಳೇ ಹೆಚ್ಚಾಗಿರುವುದು ಈ ದೇಶದ ದುರಂತವಾಗಿದೆ. ಉದಾಹರಣೆಗೆ ರಸ್ತೆ ನಿಯಮಗಳನ್ನು ಹೇಳಿಕೊಡುವ, ಜಾಗೃತಿ ಮೂಡಿಸುವ ಕಾನೂನುಗಳು ಎಷ್ಟಿವೆ ಆಲೋಚಿಸ ಬೇಕಿದೆ. ಆದರೆ, ಬೀದಿ ಬೀದಿಯಲ್ಲೂ ನಿಂತು ಶಿಕ್ಷೆ ವಿಧಿಸುವ ಪೋಲಿಸರನ್ನು ನೋಡಬಹುದು. ಭಯದಿಂದ ಯಾವುದೇ ಜ್ಞಾನವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಕಾನೂನು ಶಿಕ್ಷಣದ ಒಂದು ಭಾಗವಾಗ ಬೇಕು. ಮನೆ-ಪರಿಸರಗಳಲ್ಲಿ ಜಾಗೃತಿ ಇರಬೇಕು. ಒಬ್ಬ ಮನುಷ್ಯನ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಶಿಸ್ತು ಕೂಡ ಒಂದು ಭಾಗವಾದರೆ ಕಾನೂನು ಪಾಲನೆಯು ಅತ್ಯಂತ ಅರ್ಥಪೂರ್ಣವಾಗಿ ಪಾಲನೆಯಾಗುತ್ತದೆ.
ಹೀಗೆ ಚಿಂತನೆ ನಡೆಸುವಾಗ ಸ್ವಾತಂತ್ರ್ಯವು ನಿರಾಕರಿಸುವ ಹಕ್ಕಲ್ಲ, ಅದು ಸ್ವೀಕರಿಸುವ ಬದ್ಧತೆ. ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುವ ಸಂವಿಧಾನವಲ್ಲ. ಸಮತೆಗಾಗಿ ಸೃಷ್ಠಿ ಮಾಡುವ ನೈತಿಕ ಶಿಸ್ತು. ನಾವು ಇದನ್ನು ಅರ್ಥಪೂರ್ಣವಾಗಿ ಆಲೋಚಿಸಿದರೆ ಮನುಷ್ಯನನ್ನು ಸಮಗ್ರವಾಗಿ ರೂಪಿಸುವಲ್ಲಿ ಸ್ವಾತಂತ್ರ್ಯವು ಮುಖ್ಯ ಪಾತ್ರವಹಿಸುತ್ತದೆ. ಆದರೆ ಅದು ರೂಪುಗೊಳ್ಳಲು ಶಿಕ್ಷಣ, ಕಾನೂನು ಹಾಗೂ ಕೌಟುಂಬಿಕ ಪರಿಸರದ ಬದಲಾವಣೆಗಳು ತುರ್ತಾಗಿ ನಡೆಯಬೇಕಿದೆ. ಇದನ್ನು ಸ್ವ-ಗುಲಾಮಗಿರಿ ಎನ್ನಬಹುದು. ಈ ಸ್ವ-ಗುಲಾಮಗಿರಿಯಿಂದ ಮುಕ್ತರಾಗ ಬೇಕಾದ ಹಕ್ಕು ಇಲ್ಲಿ ಪ್ರತಿಯೊಬ್ಬರದೂ ಆಗಿದೆ.
