ಖಾಲಿ ತಲೆಗಳ ಸೃಷ್ಠಿಕರ್ತರು
ನಮ್ಮ ಸಮಾಜದಲ್ಲಿ ಈ ಮೂರು ಸ್ಥಾನಗಳಿಗೆ ತುಂಬಾ ಗೌರವ ಇದೆ ಎಂದು ಭಾವಿಸಬೇಕು ಅಥವಾ ಒಂದು ಕಾಲದಲ್ಲಿ ಇತ್ತು ಎಂದು ಬೀಗಬೇಕು. ಕುಟುಂಬ-ಗುರುಗಳು ಹಾಗೂ ಶಾಲೆಗಳು. ಸತ್ಯ ಹೇಳಿದರೆ ನಿಮಗೆಲ್ಲಾ ಕೋಪ ಬರಬಹುದು. ಈ ಮೂರು ಸ್ಥಾನಗಳು ಖಾಲಿ ತಲೆಗಳನ್ನು ಸೃಷ್ಟಿಸುವ ಪ್ರಾಥಮಿಕ ಕೇಂದ್ರಗಳಾಗಿವೆ ಎಂಬುದೇ ದುಃಖದ ವಿಚಾರ.
ಖಾಲಿ ತಲೆಗಳೆಂದರೆ ಏನೂ ಇಲ್ಲ ಎಂದಲ್ಲ. ಇರಬೇಕಾದುದು ಬಿಟ್ಟು, ಬೇಕಿಲ್ಲದ್ದೆಲ್ಲಾ ತುಂಬಿಕೊಳ್ಳುವ ಅದೊಂದು ರೀತಿಯ ಗಹನ ಗಮನ. ಈ ಪದವಿ ಮಕ್ಕಳನ್ನು ನಾನಿಲ್ಲಿ ಉದಾಹರಣೆಯಾಗಿ ಉಲ್ಲೇಖಿಸುತ್ತೇನೆ. ಈ ಮಕ್ಕಳು ಓದುವುದು, ಬರೆಯುವುದು, ಪರೀಕ್ಷೆಗಳೆಂದರೆ ಶತ್ರುವಂತೆ ಕಾಣುವುದು. ತಂದೆ, ತಾಯಿ, ಗುರುಗಳ ಬಳಿ ಅರ್ಧ ತಾಸು ಈ ಬದುಕಿನ ಕುರಿತು ಮಾತನಾಡಿದರೆ ಅದು ಯಾವುದೋ ಜನ್ಮದ ಪುಣ್ಯವೆಂದು ತಿಳಿಯ ಬೇಕು ಬೇಗ ಉದ್ಯೋಗ ಬೇಕು ಎನ್ನುವ ಹಂಬಲಕ್ಕೆ ಅತಿ ಹೆಚ್ಚು ಸಂಬಳ ಬೇಕು ಎನ್ನುವ ಹಪಾಹಪಿ. ಈ ಮಕ್ಕಳನ್ನು ಈ ಅವಸ್ಥೆಗೆ ದೂಡಿದ್ದು ಯಾರು? ನಾಳೆಯ ಭವಿಷ್ಯದಲ್ಲಿ ಖಾಲಿ ತಲೆಗಳ ಕಾರುಬಾರು(ಈ ಕಾರು ಮತ್ತು ಬಾರು ಇವುಗಳು ಕೂಡ ಇಂದಿನ ವ್ಯವಸ್ಥೆಗೆ ‘ಬೇಸಿಕ್ ನೀಡ್ಸ್’ನಲ್ಲಿ ಸೇರಿಹೋಗಿವೆ)ಏನೆಲ್ಲಾಆಗಬಹುದು. ಈಗಾಗಲೇ ಸೃಷ್ಠಿಗಿಂತದೃಷ್ಟಿಯೇ ಮಿಗಿಲಾಗಿ ಎಲ್ಲವೂ ಗಾಳಿ ಗೋಪುರದಂತೆ ‘ಬಳಸುಬಿಸಾಡು’ಪ್ರಪಂಚ ಸೃಷ್ಟಿಯಾಗಿದೆ. ಈಸಂದರ್ಭದಲ್ಲಿ ಕೆಲವು ಆಲೋಚನೆಗಳುಇಲ್ಲಿವೆ.
ಈ ಹೋಣೆಗಾರಿಕೆಯನ್ನು ಸ್ಪಲ್ಪ ಪರಿಶೀಲಿಸೋಣ…
ಪೋಷಕರು : ಮಹಾನಗರದಿಂದ ಕುಗ್ರಾಮದವರೆಗೂ ಮಕ್ಕಳ ಎದುರು ಕುಳಿತು ಮೌಲ್ಯಗಳನ್ನು ತುಂಬುವ ಪೋಷಕರನ್ನು ಹೇಗೆ ಹುಡುಕುವುದು. ಎಲ್ಲರೂ ಬ್ಯುಸಿಯಾಗಿದ್ದಾರೆ. ಇವರ ಒತ್ತಡಕ್ಕಾಗಿ ಒಳ್ಳೆಯ ಶಾಲೆ, ಕಾಲೇಜು ಹಾಗೂ ಇನ್ನೂ ತೊಂದರೆ ಆಗಬಾರದೆಂದು ಟ್ಯೂಶನ್ ಎಂಬ ಕಾಲಹರಣ ಕಾಪಿಕೂಪಗಳು ಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬಂತೆ ಬಾಲ್ಯದಲ್ಲಿ ಕೊಟ್ಟ ಅರ್ಥವಿಲ್ಲದ ಸ್ವಾತಂತ್ರ್ಯವು ದೊಡ್ಡವರಾದ ಮೇಲೆ ಪೋಷಕರು ಮತ್ತು ಮಕ್ಕಳ ನಡುವೆ ಬಾಂಧವ್ಯವೇ ಇಲ್ಲದಂತಾಗುತ್ತಿದೆ. ಹಿಂದಿನ ಕಾಲದವರು ಜಗಳವಾಡುತ್ತಲಾದರೂ ಒಟ್ಟಿಗೆ ಬಾಳುತ್ತಿದ್ದರು. ಈಗ ‘ಮನೆಯೇ ಮೂರು ಬಾಗಿಲು ಎಂಬಂತೆ ಪ್ರತ್ಯೇಕ ಲೋಕದಲ್ಲಿ ಪ್ರವೇಶವಿಲ್ಲದಂತಾಗಿದೆ
ಗುರುಗಳು : ಪಠ್ಯ ಪುಸ್ತಕವನ್ನು ಮುಗಿಸುವ, ನೂರು ಮಾರ್ಗ ಹುಡುಕಿ, ನೂರಕ್ಕೆ ನೂರು ಅಂಕ ತೆಗೆಸುವ ಆಡಳಿತ ಮಂಡಳಿಯ ಕೈಗೊಂಬೆಗಳು. ಗುರುಗಳಿಗೂ ಈಗ ಹಣದ ಚಿಂತೆ. ಹಣಕ್ಕಾಗಿ ಅನ್ಯಮಾರ್ಗಗಳನ್ನೆಲ್ಲಾ ಹುಡುಕಿ, ತರಗತಿಯನ್ನು ಕೂಡ ‘ಹಣಾಹಣಿ’ಯಾಗಿಸಿ, ಅಂಕಪಟ್ಟಿಯ ಮಾಂತ್ರಿಕರಾಗಿಹೊಮ್ಮುತ್ತಿದ್ದಾರೆ.
ಶಾಲಾ ಕಾಲೇಜುಗಳು : ಕಲಿಕೆಯು ಹೊರಗಿದೆ. ಇದು ಅದರ ಪ್ರದರ್ಶನ ತಾಣವೆಂಬಂತೆ ನೂರಾರು ವಿಧಗಳ ಸಾಧನೆಯನ್ನು ತೋರಿಸುವ, ಆಕರ್ಷಿಸುವ ವ್ಯವಹಾರ ಕೇಂದ್ರಗಳಾಗಿವೆ.
ಹಾಗಾದರೆ ಈ ಮೂರು ಸ್ಥಾನಗಳು ಹಾಳಾಗಿವೆ, ಕೆಟ್ಟುಹೋಗಿವೆ ಎಂದರ್ಥವಲ್ಲ. ೨೫%ರಷ್ಟು ಉತ್ತಮವಾದ ಈ ತ್ರಿಕೋನಗಳು ಕೂಡ ಕಾಣಬಹುದು. ಒಂದು ಮಗು ತಾನು ಇರುವಲ್ಲಿಯೇ ಶಿಕ್ಷಣವನ್ನು ಸಮಗ್ರವಾಗಿ ಕಲಿಯಲು ಆಯಾ ಸ್ಥಳೀಯ ಮನಸ್ಸುಗಳು ಹೆಚ್ಚು ಕೆಲಸಮಾಡಬೇಕಿದೆ. ಖಾಲಿ ತಲೆಗಳನ್ನು ಸೃಷ್ಟಿಸುವ ಪಾಪ ಕಾರ್ಯವನ್ನು ಪ್ರತಿ ಮನೆ-ಮನಗಳು ಹೊರಬೇಕಿದೆ. ಒಂದು ಊರು, ಜಿಲ್ಲೆ, ತಾಲ್ಲೂಕು, ಆಡಳಿತ, ಸರ್ಕಾರದ ನಿಯಮಗಳು ಈ ದಿಕ್ಕಿನ ಶಿಕ್ಷಣವನ್ನು ಮನೆಯಿಂದಲೇ ಪ್ರಾರಂಭಿಸಬೇಕಿದೆ. ‘ಅರಿವಿಲ್ಲದ’ ತೋರಿಕೆಯನ್ನು ನಿಲ್ಲಿಸಿ, ಅರಿವಿನ ಕಾಣಿಕೆ ಕಟ್ಟಬೇಕಿದೆ.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ನಕಲಿ ವ್ಯವಸ್ಥೆಯು ರಕ್ತನಾಳಗಳನ್ನು ಸೇರಿ ಬೀದಿ ಬೀದಿಗೂ ಆಸ್ಪತ್ರೆ, ಆಹಾರ ಮಳಿಗೆಗಳು ಬೃಹದಾಕಾರವಾಗಿ ಬೆಳೆದು ನಿಲ್ಲುತ್ತಿದೆ. ಪ್ರತಿ ಮಳಿಗೆ ಹೇಗಾದರೂ ಮಾಡಿ ಗ್ರಾಹಕನಿಂದ ಹಣ ಸಂಗ್ರಹಿಸುವ ಕೇಂದ್ರಗಳಂತೆ ಕಾಣುತ್ತಿವೆ. ‘ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕಿದ್ದನ್ನು ನೋಡಿ ಅಚ್ಚರಿ ಪಡುತ್ತಾ ಇದ್ದು ಬಿಡುವುದು ಒಳ್ಳೆಯದು’ ಎಂಬ ತೇಜಸ್ವಿ ನುಡಿಯಂತೆ ತಾಳ್ಮೆ – ಅಗತ್ಯ ಬದುಕು ಮತ್ತು ನಕಲಿ ಜಗತ್ತಿನ ಮಾಂತ್ರಿಕ ಜಾಲವನ್ನು ಸರಳವಾಗಿ ಕುಟುಂಬಗಳು ಹೇಳಿಕೊಡಬೇಕಿದೆ. ಆಲಿಸುವ ಕಿವಿಗಳು ಮನೆಯಿಂದಲೇ ಸೃಷ್ಟಿಯಾದರೆ, ಗುರುಗಳು ಮತ್ತು ಶಾಲೆಗಳು ಈ ಪ್ರಪಂಚವನ್ನು ಬದಲಿಸಬಹುದು. ಪಠ್ಯಕಷ್ಟೇ ಸೀಮಿತವಾಗದೆ, ಸಂಬಳಕ್ಕಾಗಿಯೇ ಈ ಗುರು ವೃತ್ತಿ ಆಯ್ಕೆಮಾಡದೆ, ಈ ಸಮಾಜವನ್ನು ನಿರ್ಮಿಸುವ ಮೊದಲ ಚಿಕಿತ್ಸಕನಾಗಿ ಗುರುವು ಪರಿವರ್ತನೆಗೊಳ್ಳಬೇಕಿದೆ. ಶಾಲೆ ಮತ್ತು ಕಾಲೇಜುಗಳು ಕೊರತೆಗಳನ್ನು ಮಕ್ಕಳಿಗೆ ಕಲಿಸುವ, ತೋರಿಸುವ ಹಾಗೂ ಅದರಿಂದ ಆಚೆ ಬರುವ ಧೀಮಂತಿಕೆಯನ್ನು ಕಲಿಸುವ ಕೇಂದ್ರಗಳಾಗಬೇಕಿದೆ. ಶಿಕ್ಷಣ ಒಳಗಿದೆ, ಜೀವನಕ್ಕೆ ಬೇಕಾದ ವಸ್ತುಗಳು ಹೊರಗಿವೆ. ಅವುಗಳನ್ನು ಸರಿಯಾದ ಕ್ರಮದಲ್ಲಿ ಪಡೆಯಲು ಶಿಕ್ಷಣ ಕಲಿಯಬೇಕು ಎಂಬ ಸಿದ್ಧಾಂತವು ಶಿಕ್ಷಣ ಕೇಂದ್ರಗಳಿಗೆ ತುರ್ತಾಗಿ ಅಳವಡಿಕೆಯಾಗಬೇಕಿದೆ.
ಇದು ಸಾಧ್ಯವಿಲ್ಲ ಎನ್ನುವುದಕ್ಕಿಂತ, ಸ್ವಲ್ಪ ಸ್ವಲ್ಪವೇ ಚೂರ್ಣದಂತೆ ಸೇವಿಸಿದರೆ, ನಾಳೆ ಎಂಬುದು ಯಾವುದೋ ರೂಪದಲ್ಲಿ ಬದಲಾವಣೆಯ ಸ್ವರೂಪ ಪಡೆಯಬಹುದು. ಚೂರ್ಣವೇ ಆಯುರ್ವೇದವಾಗಬಹುದು.