ಓದುವುದು ಆತ್ಮಸುಖ
ಮನೆಯಲ್ಲಿ ಪತ್ರಿಕೆಗಳು, ಪುಸ್ತಕಗಳು ಕಾಣಿಸುವಂತಿರಲಿ. ಓದು ಸಂಸ್ಕೃತಿಯು ತಾನಾಗಿಯೇ ಸೃಷ್ಟಿಯಾಗುತ್ತದೆ.
(ಮೆಟ್ರೋ ಕಥನ)

ಭಾರತೀಯ ಪರಂಪರೆಯಲ್ಲಿ ಎಲ್ಲ ಕಲೆಗಳಿಗೂ ಮೂಲವಾಗಿ ಜ್ಞಾನವನ್ನು ಗುರುತಿಸಲಾಗಿದೆ; ಆ ಜ್ಞಾನಕ್ಕೆ ದಾರಿ ತೋರಿಸುವ ಮೊದಲ ಮೆಟ್ಟಿಲೇ ಓದು. ಓದುವುದು ಕಣ್ಣುಗಳ ಕಾರ್ಯ ಮಾತ್ರವಲ್ಲ, ಅದು ಮನಸ್ಸಿನ ಚಲನೆ, ಆತ್ಮದ ಚಿಂತನೆ. ಒಂದು ಪುಸ್ತಕವನ್ನು ಓದುವಾಗ, ಅಕ್ಷರಗಳು ಕೇವಲ ಮಾಹಿತಿ ಕೊಡುವುದಿಲ್ಲ, ಅವು ಓದುಗರ ಮನೋಲೋಕವನ್ನು ರೂಪಿಸುತ್ತವೆ, ಅನುಭವಗಳನ್ನು ರೂಪಿಸಿಕೊಂಡು, ಮನಸ್ಸನ್ನು ಪ್ರಶ್ನಿಸಲು ಕಲಿಸುತ್ತವೆ.
ಓದುವುದು ಒಂದು ಕಲೆ. ಈ ಕಲೆಯು ಪುಟಗಳನ್ನು ಮುಗಿಸುವ ಕಾರ್ಯವಾಗಿರುವುದಿಲ್ಲ; ಪುಟಗಳೊಳಗಿನ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ನೀಡುತ್ತದೆ. ಇಲ್ಲಿ ಕಲೆ ಎಂಬ ಅಂಶ ಮುಖ್ಯವಾಗುತ್ತದೆ – ಕಲೆ ಎಂದರೆ ಜಾಗೃತ ಆಯ್ಕೆಗಳು, ಸವಿದ ಅನುಭವ, ಒಳನೋಟ ಮತ್ತು ಅಭಿವ್ಯಕ್ತಿ. ಓದುಗಾರನು ಏನು ಓದಬೇಕು, ಹೇಗೆ ಓದಬೇಕು, ಓದಿದನ್ನು ಜೀವನಕ್ಕೆ ಹೇಗೆ ಜೋಡಿಸಬೇಕು ಎಂಬುದರಲ್ಲಿ ಕಲಾತ್ಮಕತೆ ತೋರಿಸಿದಾಗ, ಓದು ಒಂದು ಸೃಜನಶೀಲ ಕ್ರಿಯೆಯಾಗಿ ರೂಪಾಂತರಗೊಳ್ಳುತ್ತದೆ.
ಭಾರತೀಯ ಸಮಾಜದಲ್ಲಿ ಓದು ಎಂಬುದು ಮನೆ, ಶಾಲೆಗಳ ಮೂಲಕ ಮಾತೃಭಾಷೆ ಮತ್ತು ಗುರು ಪರಂಪರೆಗಳೊಂದಿಗೆ ರೂಪಿತವಾಗಿದೆ. ಪುರಾತನ ಕಾಲದ ಅಕ್ಷರಾಭ್ಯಾಸ ಮಠಗಳು, ಇವೆಲ್ಲ ಓದುವಿನ ಸಾಂಸ್ಕೃತಿಕ ಚರಿತ್ರೆಯನ್ನು ದಾಖಲಿಸಿವೆ. ಇಲ್ಲಿ ಓದಿದವರು ಯಾರು, ಓದಿನಿಂದ ಹೊರಗೆ ಉಳಿದವರು ಯಾರು ಈ ಶೋಷಣೆಯ ಚರ್ಚೆ ಪ್ರತ್ಯೇಕವಾಗಿ ಗ್ರಹಿಸಬಹುದು.
ಓದುವುದು ಎಂಬುದನ್ನು ವರ್ತಮಾನದೊಂದಿಗೆ ಚರ್ಚಿಸುತ್ತಾ ಆತ್ಮದ ಸುಖವಾಗುವ ಬಗೆಯನ್ನು ಆಲೋಚಿಸೋಣ.
ಓದು ಎಂಬುದು ಕಣ್ಣಿನ ಮೂಲಕ ಅಕ್ಷರ, ಭಾವನೆಗಳು, ಚಿತ್ರಗಳು, ಚಲನೆಗಳು ಹೀಗೆ ಮೊದಲಾದಂತೆ ಓದುತ್ತೇವೆ. ಇದು ಬಾಹ್ಯ ಸ್ವರೂಪದ ಓದು ಎನ್ನಬಹುದು. ಇದರಿಂದ ದೇಹ ಸುಖ ಲಭಿಸುತ್ತದೆ.
ಮನಸ್ಸಿನ ಮೂಲಕ ಒಂದು ಸನ್ನಿವೇಶ, ಘಟನೆ, ಭಾವನೆಗಳು ಮೊದಲಾದಂತೆ ಓದುವ ಕ್ರಮವೇ ಆಂತರಿಕ ಓದು. ಈ ಬಾಹ್ಯ ಓದು ಕೂಡ ಅಂತರಂಗದಲ್ಲಿ ಚಲಿಸುವುದು ಸಹಜ. ಈ ಸಹಜತೆಗೆ ಧ್ಯಾನ ಎನ್ನುವರು. ಓದುವ ವಿಚಾರವನ್ನು ಧ್ಯಾನಿಸಿ ನೋಡಿದಾಗ ಆಂತರಿಕ ಓದುವಿನ ನೆಲೆ ತಲುಪುತ್ತದೆ. ಪು.ತಿ.ನ ರೂಪಿಸಿದ ಭವನೀ ಮಜ್ಜನ – ಲಘಿಮಾ ಕೌಶಲದಂತೆ ಅರ್ಥಪೂರ್ಣ ಕ್ರಿಯೆಗೆ ಅಷ್ಟೇ ವೇಗದ ಸಾರ್ಥಕ ತೃಪ್ತಿ ಲಭಿಸುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಓದು ಎಂದರೆ ಕೇವಲ ಪರೀಕ್ಷಾ ಕೇಂದ್ರಿತ ಕ್ರಿಯೆಯಲ್ಲ; ತತ್ವಶಾಸ್ತ್ರ, ಇತಿಹಾಸ, ಸಾಹಿತ್ಯ, ಧರ್ಮ, ವಿಜ್ಞಾನ, ಕಲೆಯ ಎಲ್ಲಾ ವಿಭಾಗಗಳಿಗೂ ಓದು ಆಧಾರ ಸ್ತಂಭದಂತೆ ಕೆಲಸ ಮಾಡುತ್ತದೆ. ವೇದಗಳಿಂದ ಹಿಡಿದು ಅಂಬೇಡ್ಕರರ ಸಂವಿಧಾನ ರಚನೆವರೆಗೂ, ನಮ್ಮ ರಾಷ್ಟ್ರದ ನಿರ್ಮಿತಿಯಲ್ಲಿ ಅಕ್ಷರದ ಶ್ರಮ ಮತ್ತು ಓದುಗರ ಮನೋಯತ್ನ ಜೀವರಕ್ತದಂತೆ ಕೆಲಸಮಾಡಿದೆ. ಅಷ್ಟೇ ಏಕೆ ನಮ್ಮನ್ನು ಆಳಿದ ಜರ್ಮನ್ನರು, ಪ್ರೆಂಚರು, ಬ್ರಿಟೀಷರು ಪುಸ್ತಕ, ಪೆನ್ನು ಹಿಡಿದು ಓದಿನ ಅಸ್ತ್ರದಲ್ಲಿ ನಮ್ಮನ್ನು, ನಮ್ಮ ಸಂಪತ್ತನ್ನು ಆಳಿ ಸವಿದರು.
ಮನೋವಿಜ್ಞಾನಿಗಳು ಸೂಚಿಸುವಂತೆ, ಆಳವಾಗಿ ಓದುವುದರಿಂದ ಏಕಾಗ್ರತೆ ಹೆಚ್ಚುತ್ತದೆ, ಚಿತ್ತ ಒಂದು ವಿಷಯದ ಮೇಲೆ ದೀರ್ಘ ಕಾಲ ನೆಲೆಗೊಳ್ಳಲು ಅಭ್ಯಾಸಗೊಳ್ಳುತ್ತದೆ. ನಿಯಮಿತ ಓದಿನಲ್ಲಿರುವವರು ನಿರ್ಧಾರಗಳನ್ನು ಹೆಚ್ಚು ತಾಳ್ಮೆಯಿಂದ ತೆಗೆದುಕೊಳ್ಳುವ ಪ್ರವೃತ್ತಿ ಹೊಂದಿರುವುದನ್ನು ಅನೇಕ ಅಧ್ಯಯನಗಳು ತೋರಿಸುತ್ತಿವೆ. ಇಂದಿನ ಯಂತ್ರನಾಗರೀಕತೆಯ ಜಾಲತಾಣದ ಜಗತ್ತಿನಲ್ಲಿ ಓದುವಿನ ಸ್ವರೂಪಗಳು ಬದಲಾಗಿವೆ. ಆದರೆ, ಒತ್ತಡದಿಂದ ಬಳಲುತ್ತಿರುವ ನಗರ ಜೀವನಕ್ಕೆ ಓದು ಉತ್ತಮ ಔಷಧಿಯಾಗಿ ಪರಿಣಮಿಸಬಹುದು. ದಿನದ ಕೆಲವೇ ನಿಮಿಷಗಳನ್ನು ಪುಸ್ತಕದ ಪುಟಗಳಿಗೆ ಕೊಡುವುದು ಮನಸ್ಸಿಗೆ ವಿಶ್ರಾಂತಿ, ಭಾವನೆಗೆ ನಿರ್ಗಮ, ಆಲೋಚನೆಗೆ ಹೊಸ ದಿಕ್ಕನ್ನು ನೀಡುತ್ತದೆ. ವಿಶೇಷವಾಗಿ ಬಾಲ್ಯದಿಂದಲೇ ಓದಿನ ಕಲೆ ಬೆಳೆಸಿದರೆ, ಭವಿಷ್ಯದಲ್ಲಿ ಮಾನಸಿಕ ಧೈರ್ಯ, ತಾಳ್ಮೆ ಮತ್ತು ಸ್ವಯಂ ಅರಿವು ಹೆಚ್ಚು ಆಳವಾಗಿ ನೆಲೆಗೊಳ್ಳುತ್ತದೆ.
ಇಂಟರ್ನೆಟ್, ಸ್ಮಾರ್ಟ್ಫೋನ್, ಸಾಮಾಜಿಕ ಜಾಲತಾಣಗಳ ಮೂಲಕ ಓದುವಿನ ದಾರಿಯನ್ನೇ ಬದಲಿಸಿದ ಇಂದಿನ ಸಂದರ್ಭದಲ್ಲಿ, ಮುದ್ರಿತ ಪುಸ್ತಕಗಳಿಗೂ, ಆಳವಾದ ಓದಿಗೂ ಸವಾಲು ಎದುರಾಗಿದೆ. ಚಿಕ್ಕ, ತ್ವರಿತ, ತುರ್ತು ಮಾಹಿತಿಯ ಬಳಕೆಗೆ ಮನಸ್ಸು ಅಭ್ಯಾಸಗೊಳ್ಳುತ್ತಿದ್ದಂತೆ, ನೆಮ್ಮದಿಯ ಓದು ಮರೆಯಾದ ಭೀತಿ ವ್ಯಕ್ತಪಡಿಸಲಾಗುತ್ತಿದೆ. ಆದರೆ ಈ ಯುಗವೇ ಹೊಸ ಅವಕಾಶಗಳನ್ನೂ ನೀಡಿದೆ. ಇ–ಪುಸ್ತಕಗಳು, ಆಡಿಯೋ ಪುಸ್ತಕಗಳು, ಆನ್ಲೈನ್ ಗ್ರಂಥಾಲಯಗಳು, ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ದೂರದ ಹಳ್ಳಿಗಳಿಗೂ ಜ್ಞಾನವನ್ನು ತಲುಪಿಸುವ ಸಾಮರ್ಥ್ಯ ಹೊಂದಿವೆ. ಸವಾಲು, ಉಪಕರಣದಲ್ಲಲ್ಲ; ಉಪಯೋಗದ ಶಿಸ್ತು ಮತ್ತು ಅಭ್ಯಾಸದಲ್ಲಿ. ಡಿಜಿಟಲ್ ಸಾಧನಗಳನ್ನು ಜಾಣ್ಮೆಯಿಂದ ಬಳಸಿದರೆ, ಓದುವ ಕಲೆ ಇಂದು ಹಿಂದೆಂದಿಗಿಂತಲೂ ವಿಬಿನ್ನವಾವಿ ಜನರಿಗೆ ತಲುಪಬಹುದಾಗಿದೆ.
ಓದುವ ಕಲೆ ಯಾವ ವಯಸ್ಸಿನಲ್ಲಿ ಬೆಳೆದರೆ ಒಳ್ಳೆಯದು ಎಂಬ ಪ್ರಶ್ನೆಗೆ ಜ್ಞಾನಿಗಳು ನೀಡುವ ಉತ್ತರ ಒಂದೇ – ಬಾಲ್ಯದಲ್ಲಿ ಮನೆಯಲ್ಲಿರುವ ಹಿರಿಯರು ಪುಸ್ತಕವನ್ನು ಗೌರವದಿಂದ ಹಿಡಿದುಕೊಳ್ಳುವುದನ್ನು, ಕಾಲ ಸಿಕ್ಕಾಗ ಓದುವ ಅಭ್ಯಾಸವನ್ನು ಪ್ರದರ್ಶಿಸುವುದನ್ನು ಮಕ್ಕಳ ಕಣ್ಣು ನೋಡಿ ಕಲಿಯುತ್ತವೆ. ‘ಪುಸ್ತಕವು ನಿಜವಾದ ಸ್ನೇಹ ಜೀವ’ ಎಂಬ ತಿಳುವಳಿಕೆ ಮಾತಿನಲ್ಲಿ ಮಾತ್ರವಲ್ಲ, ವರ್ತನೆಯಲ್ಲಿ ಗೋಚರಿಸಬೇಕಾಗಿದೆ. ಶಾಲೆಗಳು ಪರೀಕ್ಷೆ ಎಂಬ ಭಯದ ಮಂತ್ರದಂಡವನ್ನು ಬಿಟ್ಟು, ಆತ್ಮಸುಖಕ್ಕಾಗಿ ಓದುವ ಕಲೆಯನ್ನು ಪ್ರೋತ್ಸಾಹಿಸಬೇಕಾಗಿದೆ. ಪಠ್ಯಪುಸ್ತಕ ಎಂಬ ಚೌಕದಿಂದ ಹೊರಬಂದು ಮಕ್ಕಳಿಗೆ ಕಥೆ–ಕಾದಂಬರಿ, ಜೀವನಚರಿತ್ರೆ, ವಿಜ್ಞಾನ ಜನಪ್ರಿಯ ಪುಸ್ತಕಗಳು, ಪರಿಸರ ಮತ್ತು ಇತಿಹಾಸ ಕುರಿತ ಸರಳ ಗ್ರಂಥಗಳನ್ನು ಓದಲು ಅವಕಾಶ ನೀಡಿದಾಗ, ಓದುವಿಕೆ ಪರೀಕ್ಷಾ ಭಯದ ಬಂಧನದಿಂದ ಮುಕ್ತವಾಗಿ ಸಂತೋಷದ ಕ್ರಿಯೆಯಾಗುತ್ತದೆ. ಗ್ರಂಥಾಲಯ ಅವಧಿಗಳು, ಓದು ಸ್ಪರ್ಧೆಗಳು, ಚಿಂತನ ಮಾದರಿಯ ಚಟುವಟಿಕೆಗಳು ಮಕ್ಕಳಲ್ಲಿ ಓದಿನ ಕಲೆ ಬೆಳೆಸಲು ಪರಿಣಾಮಕಾರಿ. ಕಳೆದ ಶತಮಾನದ ಶಾಲೆಗಳಲ್ಲಿ ಈ ಸೆಮಿಸ್ಟರ್ ಸಾಂಕ್ರಮಿಕವು ಇರಲಿಲ್ಲ. ಇಡೀ ವರ್ಷ ಆನಂದದಿಂದ ಓದುತ್ತಿದ್ದೆವು. ಗುರುಗಳೇ ಇಂದಿನ ಗೂಗಲ್ ಆಗಿದ್ದರು.
ಭಾರತೀಯ ಸಮಾಜದ ವಿಶೇಷತೆ ಭಾಷಾ ವೈವಿಧ್ಯ. ಈ ವೈವಿಧ್ಯ ಓದುವಿಗೆ ಸವಾಲಲ್ಲ, ಬದಲಾಗಿ ಶ್ರೀಮಂತಿಕೆ. ಮಾತೃಭಾಷೆಯಲ್ಲಿ ಓದಿದಾಗ ಮನಸ್ಸು ಶಬ್ದಗಳಿಗಿಂತಲೂ ಅನುಭವಗಳತ್ತ ನೇರವಾಗಿ ಸಾಗುತ್ತದೆ; ಅರ್ಥ ತ್ವರಿತವಾಗಿ ಒಳಗೊಳ್ಳುತ್ತದೆ, ಭಾವನೆ ಹೆಚ್ಚು ಆಳವಾಗಿ ಬೆಸೆದುಕೊಳ್ಳುತ್ತದೆ. ಇದಕ್ಕೆ ಸಮಕಾಲಿಕವಾಗಿ, ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳ ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ, ಜಾಗತಿಕ ರಾಜಕೀಯದ ಕುರಿತ ಓದು, ಯುವ ಪೀಳಿಗೆಗೆ ವಿಶ್ವನಾಗರಿಕ ದೃಷ್ಟಿಕೋನವನ್ನು ನೀಡುತ್ತಿದೆ. ಹೀಗಾಗಿ ‘ಮಾತೃಭಾಷೆಯ ಆಳ + ಇತರ ಭಾಷೆಗಳ ವ್ಯಾಪ್ತಿ’ ಎಂಬ ಸಮತೋಲನವೇ ಓದುವಿನ ಸಮಗ್ರ ಸಂಪತ್ತಾಗಿದೆ.
ಓದಿನ ಕಲೆ: ಆಯ್ಕೆ, ವಿಧಾನ, ಫಲಿತ
ಓದುವಿಗಾಗಿ ಸೃಷ್ಟಿಯಾಗುವ ಮೂರು ಪ್ರಮುಖ ಚಿಂತನೆಗಳು ಹೀಗಿವೆ – ಏನು ಓದಬೇಕು, ಹೇಗೆ ಓದಬೇಕು, ಓದಿದ ಮೇಲೆ ಏನು ಮಾಡಬೇಕು.
ಏನು ಓದಬೇಕು: ವಯಸ್ಸು, ಆಸಕ್ತಿ, ವೃತ್ತಿ, ಸಮಾಜದ ಅಗತ್ಯ – ಇವೆಲ್ಲ ಗಮನದಲ್ಲಿಟ್ಟು ಪುಸ್ತಕದ ಆಯ್ಕೆ ಮಾಡಬೇಕಾಗಿದೆ. ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಸ್ವ–ವಿಕಾಸ, ಸಮಾಜ ಅರಿವು, ಔದ್ಯೋಗಿಕ ಜ್ಞಾನದ ಗ್ರಂಥಗಳು ಮೊದಲ ಆಯ್ಕೆಗಳು.
ಹೇಗೆ ಓದಬೇಕು: ಓದುವಾಗ ಮನಸ್ಸು ನಿರಂತರ ದಿಕ್ಕುತಪ್ಪದಂತೆ ಪರಿಸರ ಸಜ್ಜುಗೊಳಿಸಿಕೊಳ್ಳುವುದು, ಸ್ವಲ್ಪ ಶಾಂತ ವಾತಾವರಣ, ಒಂದು ಪುಸ್ತಕಕ್ಕೆ ನಮ್ಮ ಸಮಯದ ಬದ್ಧತೆ, ಓದಿದದನ್ನು ಚಿಕ್ಕ ಟಿಪ್ಪಣಿಗಳ ರೂಪದಲ್ಲಿ ದಾಖಲಿಸುವ ಅಭ್ಯಾಸ – ಇವೆಲ್ಲ ಓದನ್ನು ಆಳಗೊಳಿಸುತ್ತವೆ.
ಓದಿದ ಮೇಲೆ ಏನು ಮಾಡಬೇಕು: ಓದಿದ ವಿಚಾರಗಳನ್ನು ಕುಟುಂಬದಲ್ಲಿ, ಸ್ನೇಹಿತರಲ್ಲಿ, ತರಗತಿಗಳಲ್ಲಿ ಚರ್ಚಿಸುವುದು, ತನ್ನ ತೀರ್ಮಾನಗಳನ್ನು, ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವುದು, ಅಗತ್ಯವಿದ್ದಲ್ಲಿ ನೋಟ್ಸ್ ಅಥವಾ ಚಿಕ್ಕ ಲೇಖನ ರೂಪದಲ್ಲಿ ಬರೆಯುವುದು – ಈ ಕ್ರಮಗಳು ಓದನ್ನು ಜ್ಞಾನದ ಬದುಕಿಗೆ ಜೋಡಿಸುತ್ತವೆ.
ಒಂದು ಪತ್ರಿಕೆಯು ಸಂಪೂರ್ಣ ಓದುವಿನ ದೃಷ್ಟಿಯಲ್ಲಿ ಸಿದ್ಧಗೊಳ್ಳುವುದಿಲ್ಲ. ಆಯಾ ಮನೋ ಆಸಕ್ತಿಗಳ ಆಯ್ಕೆಯಂತೆ ನೂರಾರು ಆಯ್ಕೆಗಳ ಸಮಗ್ರ ಕೈಪಿಡಿಯಂತೆ ರಚನೆಗೊಳ್ಳುತ್ತದೆ. ಪತ್ರಿಕೆಗಳು ನಿಜವಾಗಿಯೂ ಪ್ರಯೋಗಾಲಯಗಳಿದ್ದಂತೆ. ಓದುಗರನ್ನು ಕೇಂದ್ರೀಕರಿಸಿ, ಹೊಸ ಆವಿಷ್ಕಾರಗಳನ್ನು ನೆಡೆಸುತ್ತಲೇ ಮನಸ್ಸುಗಳನ್ನು ಹದ ಮಾಡುತ್ತವೆ.
ಓದುವ ಕಲೆ ಸಾಕಷ್ಟು ಆಳವಾದಾಗ, ಅದು ಸಹಜವಾಗಿ ಬರವಣಿಗೆಯ ಕಡೆ ಮನಸ್ಸುಮಾಡುತ್ತದೆ. ಓದುಗರ ಮನಸ್ಸಿನಲ್ಲಿ ಸುಪ್ತಗೊಂಡಿದ್ದ ಕಲ್ಪನೆಗಳು, ಪ್ರಶ್ನೆಗಳು, ವ್ಯಥೆಗಳು, ಸಂತೋಷಗಳು ಒಂದು ಹಂತದಲ್ಲಿ ಶಬ್ದವನ್ನು ಹುಡುಕುತ್ತವೆ; ಅಲ್ಲಿನಿಂದಲೇ ಬರಹಗಾರ ಹುಟ್ಟುತ್ತಾನೆ. ಅನೇಕ ಪ್ರಸಿದ್ಧ ಭಾರತೀಯ ಲೇಖಕರು ತಮ್ಮ ಜೀವನಕಥೆಗಳಲ್ಲಿ ‘ಸಣ್ಣ ವಯಸ್ಸಿನ ಓದು’ ಅವರನ್ನು ಬರವಣಿಗೆಯತ್ತ ಎಳೆದ ಕಥೆಗಳನ್ನು ಹೇಳಿಕೊಂಡಿದ್ದಾರೆ. ಕನ್ನಡದ ಕುವೆಂಪು ತನ್ನ ಇಡೀ ಸಾಹಿತ್ಯದ ಕೇಂದ್ರಬಿಂದುವನ್ನಾಗಿ ಬಾಲ್ಯ, ಬಾಲ್ಯದ ನೆನಪು, ಓದು ಇವುಗಳನ್ನೇ ಮೂಲವಾಗಿಸಿ ಸೃಷ್ಠಿಸಿದರು.
ಹೀಗಾಗಿ, ಓದು ಮತ್ತು ಬರಹ ಎರಡೂ ವಿಭಿನ್ನ ಚಟುವಟಿಕೆಗಳಾಗಿದ್ದರೂ, ಒಳಾರ್ಥದಲ್ಲಿ ಒಂದರನ್ನೊಂದು ಪೋಷಿಸುವ ಕಲೆಗಳಾಗಿವೆ. ಓದು ಇಲ್ಲದ ಬರಹ ಬಹುಮಟ್ಟಿಗೆ ರುಚಿ ಇಲ್ಲದ. ಊಟದಂತೆ; ಆದರೆ ಮೌಲಿಕ ಓದಿನಿಂದ ಸೃಷ್ಠಿಗೊಂಡ ಬರಹವು ಅನುಭವಜನ್ಯವಾಗಿ ಸಮಾಜದ ಮನಸ್ಸಿನಲ್ಲಿ ದೀರ್ಘಕಾಲ ನೆಲೆಗೊಳ್ಳುತ್ತದೆ.
ಅಕ್ಷರಗಳು ನಿರ್ಜೀವ ಸೃಷ್ಟಿಗಳು. ಪರಂಪರೆ, ಇತಿಹಾಸ ತುಂಬಿಕೊಂಡು ವರ್ತಮಾನದೊಂದಿಗೆ ಮಾತನಾಡುತ್ತಾ ಭವಿಷ್ಯಕ್ಕೂ ಸಾಧ್ಯತೆಗಳನ್ನು ಹೇಳುವ ಜೀವಂತ ಸಂಸ್ಕೃತಿಗಳು.
(ಮೆಟ್ರೋ ಕಥನ)
ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಮಟ್ಟದ ಗ್ರಂಥಾಲಯಗಳ ಅಭಿವೃದ್ಧಿ, ಬಸ್–ಲೈಬ್ರರಿ, ಬೀದಿ ಗ್ರಂಥಾಲಯ, ಪುಸ್ತಕ ಓದುತ್ತಿರುವ, ಓದುಗರ ವಲಯಗಳಂತಹ ಯೋಜನೆಗಳು ಬೆಳೆಯುತ್ತಿರುವುದು ಓದುವಿನ ಶಕ್ತಿ ಬಲಗೊಳ್ಳುತ್ತಿರುವುದರ ಸೂಚನೆ. ರೈತರಿಗಾಗಿ ಕೃಷಿ ಮಾಹಿತಿಯ ಪುಸ್ತಕಗಳು, ತರಬೇತಿ ಕೈಪಿಡಿಗಳು, ಕಾರ್ಮಿಕರಿಗಾಗಿ ಸರಳ ಕಾನೂನು–ಹಕ್ಕುಗಳ ಪುಸ್ತಕಗಳು, ಮಕ್ಕಳ ಪುಸ್ತಕಗಳು ಎಂಬ ಹೆಜ್ಜೆಗಳು ಓದುವನ್ನು ವರ್ಗ–ವಲಯ ಮೀರಿ ಎಲ್ಲರಿಗೂ ತಲುಪಿಸುವ ಪ್ರಯತ್ನಗಳಾಗಿವೆ.
ನಗರಗಳಲ್ಲಿ ಮೆಟ್ರೋ ರೈಲು, ಉದ್ಯಾನ, ಆಟೋ, ಬಸ್ಸು ಮೊದಲಾದ ಕಡೆ ಹಾಗೂ ಕಚೇರಿ ವಿರಾಮ ಸಮಯಗಳಲ್ಲಿ ಪುಸ್ತಕ ಹಿಡಿದಿರುವ ಯುವ ಮುಖಗಳು ಗಮನಸೆಳೆಯುತ್ತಿರುವುದೂ ಆಶಾದಾಯಕ. ಪುಸ್ತಕ ಸಂತೆ, ಸಾಹಿತ್ಯ ಸಮ್ಮೇಳನಗಳು, ಕೃತಿ ಬಿಡುಗಡೆ ಕಾರ್ಯಕ್ರಮಗಳು ಓದು, ಬರಹ, ಸಂವಾದ ಈ ಮೂರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಲು ನೆರವಾಗುತ್ತಿವೆ. ಇವೆಲ್ಲ ಓದುವ ಕಲೆ ಕೇವಲ ವೈಯಕ್ತಿಕ ಹವ್ಯಾಸವಲ್ಲ, ಸಾರ್ವಜನಿಕ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿ ಕಾಣಿಸುತ್ತಿದೆ. ಆದರೆ, ಮುಂದಿನ ಪೀಳಿಗೆಯ ಕೈಯಲ್ಲಿ ಒಂದು ಪುಸ್ತಕ ಹಿಡಿಸುವ ಆಲೋಚನೆಯನ್ನು ಮೊದಲು ಪೋಷಕರು ಇದಕ್ಕೆ ಪೂರಕವಾಗಿ ಶಾಲೆಗಳು ಪಣತೊಟ್ಟು ಕೈಗೊಂಡರೆ ಖಾಲಿತಲೆಗಳ ಸೃಷ್ಠಿ ಕರ್ತರಿಂದಲೇ ಜ್ಞಾನ ತುಂಬುವ ಶ್ರೇಷ್ಠ ಕಾರ್ಯ ನಡೆಯುತ್ತದೆ. ನಾವು ವಿದ್ಯಾವಂತರಾಗುತ್ತಿರುವುದು ಅಕ್ಷರಗಳೊಂದಿಗೆ ಅನುಭವಗಳೆಡೆಗೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕಿದೆ.
ಓದುವುದು ಆತ್ಮ ಸುಖ. ಆದರೆ, ಯಾರಿಗೂ ತೊಂದರೆ ನೀಡದೆ ಎಲ್ಲರಿಗೂ ಉಪಕರಿಸುವ ಅನಂತಮಾರ್ಗ.
(ಮೆಟ್ರೋ ಕಥನ)