ನನ್ನ ಲೇಖನಿ,ನಿರ್ಭೀತಿಯಿಂದ ಬರೆಯಬಲ್ಲೆ !
ಮಾನವ ಇತಿಹಾಸದ ಹಾದಿಯಲ್ಲಿ ಅನೇಕ ಆವಿಷ್ಕಾರಗಳು ನಡೆದಿವೆ. ಆದರೆ, ನಾಗರಿಕತೆಯನ್ನು ರೂಪಿಸುವಲ್ಲಿ ಲೇಖನಿಯ ಪಾತ್ರ ಅಪ್ರತಿಮವಾದದ್ದು. ಲೇಖನಿ ಎಂಬುದು ಕೇವಲ ಪ್ಲಾಸ್ಟಿಕ್ ಅಥವಾ ಲೋಹದ ತುಂಡಲ್ಲ ಅಥವಾ ಕೇವಲ ಕಾಗದಕ್ಕೆ ಬಣ್ಣವನ್ನು ವರ್ಗಾಯಿಸುವ ಸಾಧನವಲ್ಲ.

ಅದು ಜ್ಞಾನದ ಸಂರಕ್ಷಕ, ಕಾನೂನಿನ ಆಧಾರ ಮತ್ತು ಕೋಟಿ ಜನರ ಅಭಿವ್ಯಕ್ತಿಯ ವಾಹಕ. ಇದು ಪೆನ್ನು ಎಂದು ಒಬ್ಬ ವ್ಯಕ್ತಿ ಹೇಳಿದಾಗ, ಅಲ್ಲಿ ಕೇವಲ ವಸ್ತುವಿನ ಮಾಲೀಕತ್ವವಲ್ಲ, ಬದಲಿಗೆ ಸರಿ-ತಪ್ಪನ್ನು ವಿವರಿಸುವ ಜವಾಬ್ದಾರಿಯ ಘೋಷಣೆಯೂ ಅಡಗಿರುತ್ತದೆ.
ಜ್ಞಾನದ ಸಂರಕ್ಷಣೆ ಮಾಡುವ ಮೂಲಕ ಡಿಜಿಟಲ್ ಯುಗ ಕಾಲಿಟ್ಟು, ಇತಿಹಾಸದ ದಾಖಲೆಗಳು, ಶಾಸನಗಳು, ಧರ್ಮಗ್ರಂಥಗಳು ಮತ್ತು ಆಧುನಿಕ ದಾಖಲೆಗಳೆಲ್ಲವೂ ಪೆನ್ನಿನ ಮೂಲಕವೇ ಅಮರತ್ವ ಪಡೆದಿವೆ. ಭೂತಕಾಲದ ಅನುಭವಗಳನ್ನು ಭವಿಷ್ಯದ ಪೀಳಿಗೆಗೆ ದಾಟಿಸುವ ಶಕ್ತಿ ಇದಕ್ಕಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಟೈಪಿಂಗ್ ಸಂಸ್ಕೃತಿ ಹೆಚ್ಚಾಗಿದ್ದರೂ, ಲೇಖನಿಯಲ್ಲಿ ಬರೆಯುವುದು ಮೆದುಳಿನ ಕೇಂದ್ರೀಕರಣ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ವಿಜ್ಞಾನವು ಹೇಳುತ್ತದೆ. ವಿದ್ಯಾರ್ಥಿಗಳು, ಸಾಹಿತಿಗಳು ಮತ್ತು ಪತ್ರಕರ್ತರಿಗೆ ಈ ಆಯುದ ಇಂದಿಗೂ ಸೃಜನಶೀಲತೆಯ ಜೀವಂತ ರೂಪವಾಗಿದೆ.
ಖಡ್ಗಕ್ಕಿಂತ ಹರಿತವಾದ ಅಸ್ತ್ರವಿಲ್ಲ ಎಂಬಂತೆ ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಗಾದೆ ಮಾತು ಇಂದಿಗೂ ಪ್ರಸ್ತುತ. ಯುದ್ಧಗಳು ಸಾವು-ನೋವುಗಳನ್ನು ಉಂಟು ಮಾಡಿದರೆ ಲೇಖನಿ ಮಾತ್ರ ರಕ್ತ ಪಾತವಿಲ್ಲದೆ ಕ್ರಾಂತಿಯನ್ನುಂಟು ಮಾಡಬಲ್ಲದು. ಸಮಾಜದಲ್ಲಿರುವ ಓರೆ-ಕೋರೆಗಳನ್ನು ತಿದ್ದುವ, ಭ್ರಷ್ಟಾಚಾರವನ್ನು ಬಯಲಿಗೆಳೆಯುವ, ದುರ್ಬಲರ ಪರವಾಗಿ ಎತ್ತುವ ಶಕ್ತಿ ಪೆನ್ನಿಗಿದೆ. ಆಳುವ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವ ಛಾಟಿ ಯಾಗಿ ಇದು ಕೆಲಸ ಮಾಡುತ್ತದೆ.
ಪೆನ್ನಿನ ಮೂಲಕ ಒಬ್ಬ ಪರ್ತ್ರಕರ್ತ ನಿರ್ಭೀತಿಯಾಗಿ ಕೆಲಸ ಮಾಡಬೇಕು, ಒಬ್ಬ ಪತ್ರಕರ್ತನಿಗೆ ಭಯವಿದ್ದರೆ ಸತ್ಯವು ಎಂದಿಗೂ ಬೆಳಕಿಗೆ ಬರುವುದಿಲ್ಲ. ಯಾವುದೇ ಒತ್ತಡ, ಆಸೆ ಅಥವಾ ಬೆದರಿಕೆಗಳಿಗೆ ಬಗ್ಗದೆ
ಈ ನನ್ನ ಲೇಖನ ಸತ್ಯದ ದೀವಿಗೆಯಾಗಬೇಕು. ಕತ್ತಲಲ್ಲಿ ದೀಪವು ತಾನು ಉರಿದು ಇತರರಿಗೆ ದಾರಿ ತೋರಿಸುವಂತೆ, ಪತ್ರಕರ್ತನು ಸಮಾಜದಲ್ಲಿ ಟೀಕೆ ಮತ್ತು ಸವಾಲುಗಳನ್ನು ಎದುರಿಸಿ ಸಮಾಜಕ್ಕೆ ಜ್ಞಾನದ ಬೆಳಕನ್ನು ನೀಡಬೇಕು. ಅನ್ಯಾಯ ಮತ್ತು ಸುಳ್ಳಿನ ಕೋಟೆಗಳು ಕುಸಿಯ ಬೇಕಾದರೆ ಜ್ಯೊತಿಯಿಂದ ಸತ್ಯದ ಕಿಡಿಗಳು ಮೂಡಲೇ ಬೇಕು.
ಈ ನನ್ನ ಬರವಣಿಗೆ ಕೇವಲ ಅಕ್ಷರಗಳಲ್ಲಿ ಮಾಲೆಗಳ ಪದ ಪುಂಜಗಳಲ್ಲಿ, ಇದು ಸಮಾಜದ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ಶಕ್ತಿ, ಕತ್ತಲೆ ಕವಿದ ದಾರಿಯಲ್ಲಿ ಸತ್ಯದ ದೀವಿಗೆ. ಈ ಅಕ್ಷರ ಕ್ರಾಂತಿಯು ಉತ್ತಮ ಸಮಾಜದ ಶಾಂತಿಯ ಸಂಕೇತವಾಗಿ ಜ್ಯೋತಿಯಾಗಿ ಬೆಳಗ ಬೇಕು.