ಭಾಷಾಶೂಲವೀ ತ್ರಿಭಾಷಾ ಸೂತ್ರ
ಭಾಷಾಶೂಲವೀ ತ್ರಿಭಾಷಾ ಸೂತ್ರ, ಬಾಲಕರ ರಕ್ಷಿಸೈ ಹೇ ತ್ರಿನೇತ್ರ’ ಎಂದು ತ್ರಿಭಾಷಾ ನೀತಿಯ ವಿರುದ್ಧ ಕುವೆಂಪು ಅವರು ಬಹಳ ಹಿಂದೆಯೇ ದನಿಯೆತ್ತಿದ್ದರು. ಕರ್ನಾಟಕ ಅಥವಾ ಕನ್ನಡದ ಪರವಾಗಿ ದನಿಯೆತ್ತುವುದು ರಾಜಕೀಯ ಕಾರಣಕ್ಕಾಗಿ ಅಲ್ಲ, ಅದು ನಮ್ಮ ಅಸ್ತಿತ್ವದ ಪ್ರಶ್ನೆ. ಹಲವು ವರ್ಷಗಳಿಂದ ಹಿಂದಿ ಭಾಷೆ ಕಲಿಕೆಯ ಹೇರಿಕೆಯನ್ನು ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರು ವಿರೋಧಿಸುತ್ತಾ ಬಂದಿದ್ದರೂ, ರಾಜ್ಯ ಸರ್ಕಾರಗಳು ದಿಟ್ಟ ನಿರ್ಧಾರ ಕೈಗೊಳ್ಳುವಲ್ಲಿ ಮನಸ್ಸು ಮಾಡಿರಲಿಲ್ಲ.
ಕನ್ನಡದ ಸ್ಥಿತಿ ಕ್ಷೀಣಿಸುತ್ತಿರುವ ಈ ಪರಿಸ್ಥಿತಿಯಲ್ಲಿ, ಕರ್ನಾಟಕದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪನವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಶಿಕ್ಷಣ ತಜ್ಞರು ಹಾಗೂ ಕನ್ನಡ ಹಿತಚಿಂತಕರ ಜೊತೆ ಚರ್ಚಿಸಿ, ಶಿಕ್ಷಣದಲ್ಲಿ ತೃತೀಯ ಭಾಷೆ ಕಲಿಕೆ ಕಡ್ಡಾಯವಲ್ಲ ಎಂಬ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದಾರೆ. ಇದು ಅತ್ಯಂತ ಶ್ಲಾಘನೀಯವಾದ ಕೆಲಸ. ಇವರ ತಂದೆಯಾದ ಮಾಜಿ ಮುಖ್ಯಮಂತ್ರಿ ಶ್ರೀಯುತ ಬಂಗಾರಪ್ಪನವರು ಕಾವೇರಿ ನದಿ ನೀರಿನ ವಿಚಾರದಲ್ಲಿ ಮತ್ತು ಗ್ರಾಮೀಣ ಕೃಪಾಂಕ ನೀಡಿದ ವಿಚಾರದಲ್ಲಿ ಇಂದಿಗೂ ಒಬ್ಬ ಶ್ರೇಷ್ಠ ಕರ್ನಾಟಕದ ಅಭಿಮಾನಿಯಾಗಿ ಜನಮಾನಸದಲ್ಲಿ ಗೌರವದ ಸ್ಥಾನ ಪಡೆದು ಅವಿಸ್ಮರಣೀಯರಾಗಿದ್ದಾರೆ. ಕೇವಲ ರಾಜಕೀಯ ಕಾರಣಕ್ಕಾಗಿ ವಿರೋಧ ಪಕ್ಷಗಳ ಕೆಲವು ನಾಯಕರು ಇದನ್ನು ವಿರೋಧಿಸುತ್ತಿರುವುದು ಶೋಚನೀಯ ಹಾಗೂ ಅತ್ಯಂತ ಬಾಲಿಶವಾದ ವರ್ತನೆ.

ಹಲವು ವರ್ಷಗಳ ನಿರಂತರ ಉಗ್ರ ಹೋರಾಟದ ಫಲವಾಗಿ ತಮಿಳುನಾಡಿನಲ್ಲಿ ದ್ವಿಭಾಷಾ ನೀತಿಯನ್ನು ಬಹಳ ಹಿಂದೆಯೇ ಅನುಷ್ಠಾನಕ್ಕೆ ತರಲಾಯಿತು. ಹಿಂದಿ ಕಲಿಯದೆ ತಮಿಳುನಾಡಿಗೆ ಆಗಿರುವ ನಷ್ಟವಾದರೂ ಏನು? ಕೆಲವರು ‘ವಿದೇಶಿ ಭಾಷೆ ಇಂಗ್ಲಿಷ್ ಓಕೆ ಆದರೆ, ದೇಶೀಯ ಭಾಷೆ ಹಿಂದಿ ಏಕೆ ಬೇಡ?’ ಎಂದು ಒಣವಾದ ಮಾಡುವವರಿದ್ದಾರೆ. ಇವರಿಗೆ ಬಹಳ ಸರಳವಾದ ಉತ್ತರ: ‘ಯಾವ ಕಾರಣಕ್ಕಾಗಿ ಉತ್ತರದವರಿಗೆ ಇಂಗ್ಲಿಷ್ ಬೇಕೋ ಆ ಕಾರಣಕ್ಕಾಗಿ ಕನ್ನಡಿಗರಿಗೂ ಇಂಗ್ಲಿಷ್ ಬೇಕು. ಯಾವ ಕಾರಣಕ್ಕಾಗಿ ಉತ್ತರದವರು ಕನ್ನಡ ಕಲಿಯುವುದಿಲ್ಲವೋ ಆ ಕಾರಣಕ್ಕಾಗಿ ನಮಗೆ ಹಿಂದಿ ಬೇಕಾಗಿಲ್ಲ’. ಇಂಗ್ಲಿಷ್ ಜಗತ್ತಿನ ಕಿಟಕಿ ಇದ್ದ ಹಾಗೆ. ವೈಜ್ಞಾನಿಕ ಶಿಕ್ಷಣದ ಅವಶ್ಯಕತೆಗಾಗಿ ಹಾಗೂ ಪ್ರಪಂಚದೊಂದಿಗಿನ ಕೊಂಡಿಯಾಗಿ ಇಂಗ್ಲಿಷ್ ನಮಗೆ ಬೇಕು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ಹಿಂದಿ ಅಥವಾ ಯಾವುದೇ ಭಾಷೆಯ ಕಲಿಕೆಗೆ ವಿರೋಧವಿಲ್ಲ. ಆದರೆ ಅದನ್ನು ಶಿಕ್ಷಣದಲ್ಲಿ ಸೇರಿಸಿ ಬಲವಂತವಾಗಿ ಮಕ್ಕಳ ಮೇಲೆ ಹೇರುವುದನ್ನು ಕನ್ನಡಿಗರು, ಅನೇಕ ಕನ್ನಡಪರ ಸಂಘಟನೆಗಳು, ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು ವಿರೋಧಿಸುತ್ತಾ ಬಂದಿದ್ದಾರೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಮಕ್ಕಳು ಹಿಂದಿ ಭಾಷೆ ಕಲಿಕೆಯಲ್ಲಿ ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುಮಾರು ಒಂದು ಲಕ್ಷ ನಲವತ್ತು ಸಾವಿರ ವಿದ್ಯಾರ್ಥಿಗಳು ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ. ತಮಗೆ ಅವಶ್ಯವಲ್ಲದ ಯಾವುದೋ ಒಂದು ಭಾಷೆಯಿಂದ ಅವರ ಶಿಕ್ಷಣ ಮೊಟಕುಗೊಳ್ಳುವುದು ಬೇಡ ಎಂಬ ಕಾರಣಕ್ಕೆ ಮಾನ್ಯ ಶಿಕ್ಷಣ ಸಚಿವರು ಹಿಂದಿಗೆ ಗ್ರೇಡ್ ನೀಡಲಾಗುತ್ತದೆ ಎಂದಿದ್ದಾರೆ. ಅಂದರೆ ಅಂಕಪಟ್ಟಿಯಲ್ಲಿ ಅದರ ಅಂಕಗಳನ್ನು ನಮೂದಿಸುವುದಿಲ್ಲ. ಇದರಿಂದ ಹಿಂದಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಫೇಲ್ ಎಂದು ಪರಿಗಣಿಸಲಾಗದು. ಇಲ್ಲೂ ಸಹ ಸಚಿವರು ಹಿಂದಿ ಶಿಕ್ಷಕರಿಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಭಾಷೆಯ ಕಲಿಕೆಯನ್ನು ತೆಗೆಯದೆ, ಗ್ರೇಡ್ ನೀಡಲಾಗುವುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಇದರಿಂದ ಹಿಂದಿ ಶಿಕ್ಷಕರಿಗೆ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗದು. ಏಕೆಂದರೆ ಕ್ರೀಡೆ, ಚಿತ್ರಕಲೆ ಮುಂತಾದ ವಿಷಯಗಳಂತೆ ಹಿಂದಿ ವಿಷಯಕ್ಕೂ ಸಹ ಗ್ರೇಡ್ ನೀಡಲಾಗುವುದು ಮತ್ತು ಹಿಂದಿ ಬೋಧನೆ ಮುಂದುವರಿಯುತ್ತದೆ. ಐ.ಸಿ.ಎಸ್.ಇ, ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಎಂಟನೇ ತರಗತಿವರೆಗೆ ಮಾತ್ರ ತ್ರಿಭಾಷೆ ಇದ್ದು, ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿ ದ್ವಿಭಾಷಾ ನೀತಿಯನ್ನು ಅನುಸರಿಸಲಾಗುತ್ತಿದೆ. ಆದರೆ ಇಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿಲ್ಲ. ಕರ್ನಾಟಕದ ಹಲವು ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಇಂಗ್ಲಿಷ್ ಅನ್ನು, ದ್ವಿತೀಯ ಭಾಷೆಯಾಗಿ ಹಿಂದಿಯನ್ನೋ ಅಥವಾ ಸಂಸ್ಕೃತವನ್ನೋ ಆಯ್ಕೆ ಮಾಡಿಕೊಂಡು ಕನ್ನಡಕ್ಕೆ ಕೊಕ್ ಕೊಟ್ಟ ಹಲವು ಶಾಲೆಗಳಿವೆ. ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಶಾಲೆಗಳಿಗೂ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಬೇಕಿದೆ. ಈ ಬಗ್ಗೆ ಸರ್ಕಾರವು ಗಮನ ಹರಿಸಬೇಕಿದೆ.
ಪ್ರೌಢಶಾಲೆ ಹಾಗೂ ಪಿ.ಯು.ಸಿ ಹಂತದಲ್ಲಿ ಹಿಂದಿ, ಸಂಸ್ಕೃತ ಮತ್ತು ಇತರೆ ಭಾಷೆಗಳಲ್ಲಿ ಪ್ರಶ್ನೆಪತ್ರಿಕೆಯನ್ನು ಸರಳೀಕರಣಗೊಳಿಸುವ ಹಾಗೂ ಹೆಚ್ಚು ಅಂಕಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಆಕರ್ಷಿಸಲಾಗುತ್ತಿದೆ. ಇದರಿಂದ ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆ ಕಲಿಯದೆ ಹಿಂದಿ, ಫ್ರೆಂಚ್ ಇತರೆ ಭಾಷೆಗಳನ್ನು ಮಕ್ಕಳು ಆಯ್ಕೆ ಮಾಡಿಕೊಂಡು ಕನ್ನಡದಿಂದ ದೂರವಾಗುತ್ತಿದ್ದಾರೆ. ಇದು ಸಹ ನಿಲ್ಲಬೇಕಿದೆ.
೧೯೮೨ರಲ್ಲಿ ಗೋಕಾಕ್ ಸಮಿತಿಯು ಕನ್ನಡವನ್ನು ಕಡ್ಡಾಯಗೊಳಿಸಿ ೧೫೦ ಅಂಕಗಳಿಗೆ ಶಿಫಾರಸು ಮಾಡಿತ್ತು. ಇದನ್ನು ಅಲ್ಪಸಂಖ್ಯಾತ ನಾಯಕರು ವಿರೋಧಿಸಿದ್ದರಿಂದ ಅಂದಿನ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರು ಮೌನವಹಿಸಿದ್ದರು. ನಂತರದಲ್ಲಿ ಗೋಕಾಕ್ ಚಳವಳಿಯ ಹೋರಾಟಕ್ಕೆ ಸರ್ಕಾರ ಮಣಿಯಬೇಕಾಯಿತು. ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ಕುರಿತ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರಗಳು ಸೋತಿವೆ. ಕನ್ನಡವನ್ನು ಎಲ್ಲಾ ಹಂತದಲ್ಲೂ ಕಡ್ಡಾಯಗೊಳಿಸುವಲ್ಲಿ ಸರ್ಕಾರಗಳು ಇಂದಿಗೂ ವಿಫಲವಾಗಿವೆ. ಹಲ್ಲಿಲ್ಲದ ಹಾವಿನಂತಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರವು ಹೆಚ್ಚಿನ ಬಲವನ್ನು ನೀಡುವ ಮೂಲಕ ಕನ್ನಡ ಬಲವರ್ಧನೆಗೆ ತೊಡಗಬೇಕು. ನಿರಂತರವಾಗಿ ಕರ್ನಾಟಕಕ್ಕಾಗಿ, ಕನ್ನಡಿಗರ ದನಿಯಾಗಿ ಹೋರಾಡುತ್ತಿರುವ ಕನ್ನಡಪರ ಸಂಘಟನೆಗಳು ಹೆಚ್ಚಾಗಬೇಕು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ನಾಡಪ್ರೇಮ ಮತ್ತು ದೇಶಪ್ರೇಮ ಎರಡೂ ಪರಸ್ಪರ ವಿರೋಧಿಗಳಲ್ಲ. ಹಿಂದಿ ರಾಷ್ಟ್ರಭಾಷೆ ಎಂಬ ಅಪಪ್ರಚಾರ ನಿಲ್ಲಬೇಕಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಆಯಾ ರಾಜ್ಯಭಾಷೆಗಳೇ ರಾಷ್ಟ್ರಭಾಷೆಗಳು. ಸಂವಿಧಾನವೂ ಸಹ ಇದನ್ನೇ ಹೇಳಿದೆ. ಕುವೆಂಪು ಹೇಳುವಂತೆ ‘ನುಡಿ ಬಿಟ್ಟರೆ ನಾಡು ಬಿಟ್ಟಂತೆ, ಭಾಷೆಗೇಡಿ ದೇಶಗೇಡಿಯೂ ಆಗುತ್ತಾನೆ’. ಹಾಗಾಗಿ ಯಾವುದೋ ಒಂದು ಭಾಷೆಯಿಂದ ದೇಶಪ್ರೇಮ ಬಂದುಬಿಡುತ್ತದೆ ಎಂಬ ಅಪನಂಬಿಕೆಯನ್ನು ತೊಲಗಿಸಿ ಕನ್ನಡವನ್ನು ಎಲ್ಲರೂ ಅಪ್ಪಿಕೊಳ್ಳಬೇಕು. ಬಹಳ ವರ್ಷಗಳಿಂದ ಇಲ್ಲಿಯೇ ನೆಲೆಸಿ, ಕನ್ನಡ ಕಲಿಯುವುದಿಲ್ಲವೆಂದು ದರ್ಪ ಪ್ರದರ್ಶಿಸುವ ಅನ್ಯಭಾಷಿಕರಿಗೆ ‘ಕನ್ನಡ ಕಲಿಯಿರಿ ಇಲ್ಲವೇ ತೊಲಗಿರಿ’ ಎಂಬ ಕಟು ಸಂದೇಶವನ್ನು ನೀಡಬೇಕಿದೆ. ಕರ್ನಾಟಕದಲ್ಲೇ ನೆಲೆಸಿ, ಕನ್ನಡದ ಅನ್ನ ತಿಂದೂ ಕನ್ನಡದ ವಿರುದ್ಧ ಮಾತನಾಡುವ ಕೃತಘ್ನ ಕನ್ನಡಿಗರಿಗೆ ಇನ್ನಾದರೂ ಬುದ್ಧಿ ಬರಲಿ. ‘ನನ್ನ ನುಡಿ ಕನ್ನಡ, ನನ್ನ ನಾಡು ಕರ್ನಾಟಕ, ನನ್ನ ದೇಶ ಭಾರತ’ ಎಂಬ ಹೆಮ್ಮೆ ಸದಾ ಜಾಗೃತವಾಗಿರಲಿ.