ಕರ್ನಾಟಕದ ಶಿಕ್ಷಣ ಕ್ರಾಂತಿ: ‘ಭರವಸೆ’ಗಳ ವಾಸ್ತವ ಮತ್ತು ಸಾಧ್ಯತೆಗಳು
ಒಂದು ರಾಷ್ಟ್ರದ ಅಥವಾ ರಾಜ್ಯದ ಭವಿಷ್ಯವು ಶಿಕ್ಷಣದ ಮೂಲಕ ನಿರ್ಮಾಣವಾಗುತ್ತದೆ. ಕರ್ನಾಟಕ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಶಿಕ್ಷಣ ಗ್ಯಾರಂಟಿ’ ಯೋಜನೆಯು ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳ ಪುನಶ್ಚೇತನಕ್ಕೆ ಹೊಸ ಆಶಾವಾದವನ್ನು ನೀಡಿದೆ. ೨೦೨೫-೨೬ನೇ ಸಾಲಿನ ಎಸ್ಎಸ್ಎಲ್ಸಿ (೯೪.೧೦%) ಮತ್ತು ದ್ವಿತೀಯ ಪಿಯುಸಿ (೮೬.೪೮%) ಫಲಿತಾಂಶಗಳು ಶೈಕ್ಷಣಿಕ ಪ್ರಗತಿಯನ್ನು ಬಿಂಬಿಸುತ್ತಿದ್ದರೂ, ಕೇವಲ ಅಂಕಿ-ಅAಶಗಳ ಆಚೆಗೆ ನಾವು ಶಿಕ್ಷಣದ ಗುಣಮಟ್ಟ ಮತ್ತು ಸುಸ್ಥಿರತೆಯನ್ನು ವಿಶ್ಲೇಷಿಸಬೇಕಿದೆ.
ಹೊಸ ಆಲೋಚನೆಗಳ ಅಳವಡಿಕೆ
‘ಶಿಕ್ಷಣ ಗ್ಯಾರಂಟಿ’ ಯೋಜನೆಯಲ್ಲಿ ಎಂಟು ಪ್ರಮುಖ ಆಲೋಚನೆಗಳು ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಒಂದು ರಚನಾತ್ಮಕ ಬದಲಾವಣೆಗೆ ನಾಂದಿ ಹಾಡುತ್ತಿವೆ.

ವಿಷಯವಾರು ತಜ್ಞ ಶಿಕ್ಷಕರ ನೇಮಕ
ಶಿಕ್ಷಣದ ಗುಣಮಟ್ಟ ನಿರ್ಧರಿತವಾಗು ವುದು ಶಿಕ್ಷಕರ ಜ್ಞಾನದ ಆಳದ ಮೇಲೆ. ಈ ಯೋಜನೆಯಡಿ ೫ನೇ ತರಗತಿಯವರೆಗೆ ತರಗತಿಗೊಬ್ಬ ಶಿಕ್ಷಕ ಹಾಗೂ ೬ನೇ ತರಗತಿಯಿಂದ ವಿಷಯವಾರು (ಗಣಿತ, ವಿಜ್ಞಾನ, ಸಮಾಜ ಇತ್ಯಾದಿ) ತಜ್ಞ ಶಿಕ್ಷಕರನ್ನು ನೇಮಿಸಲು ಆದ್ಯತೆ ನೀಡಲಾಗಿದೆ. ಇದು ಮಗುವಿನ ಅಡಿಪಾಯವನ್ನು ಗಟ್ಟಿಗೊಳಿಸುತ್ತದೆ. ಒಬ್ಬನೇ ಶಿಕ್ಷಕ ಎಲ್ಲ ವಿಷಯಗಳನ್ನು ಬೋಧಿಸುವುದಕ್ಕಿಂತ, ಆಯಾ ವಿಷಯದಲ್ಲಿ ಪರಿಣತಿ ಹೊಂದಿದವರು ಬೋಧಿಸಿದಾಗ ಮಗುವಿನಲ್ಲಿ ಆ ವಿಷಯದ ಬಗ್ಗೆ ಆಳವಾದ ಆಸಕ್ತಿ ಮೂಡಲು ಸಾಧ್ಯವಾಗುತ್ತದೆ. ಹತ್ತಾರು ವರ್ಷಗಳಿಂದ ಶಿಕ್ಷಕರ ನೇಮಕಾತಿಯೇ ಇಲ್ಲದೆ, ಶಾಲೆಗಳು ತತ್ತರಿಸಿವೆ. ಈ ಯೋಜನೆಯಿಂದ ಸರ್ಕಾರಿ ಶಾಲಾ ಕಾಲೇಜುಗಳ ಕುರಿತು ಶ್ರೀಸಾಮಾನ್ಯರಿಗೆ ಭರವಸೆ ಮೂಡುತ್ತದೆ.
ಮಾಧ್ಯಮದ ಆಯ್ಕೆ ಮತ್ತು ಇಂಗ್ಲಿಷ್ ಭಾಷಾ ಪ್ರೌಢಿಮೆ
ಕನ್ನಡದ ಸೊಗಡನ್ನು ಉಳಿಸಿಕೊಳ್ಳುತ್ತಲೇ ಜಾಗತಿಕ ಸ್ಪರ್ಧೆಗೆ ಮಕ್ಕಳನ್ನು ಸಜ್ಜುಗೊಳಿಸುವುದು ಇಂದಿನ ಅಗತ್ಯ. ಪೋಷಕರ ಬಯಕೆಯಂತೆ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮದ ಆಯ್ಕೆಯನ್ನು ನೀಡುವುದು ಸ್ವಾಗತಾರ್ಹ. ಕೇವಲ ಮಾಧ್ಯಮ ಬದಲಾವಣೆಯಲ್ಲದೆ, ಇಂಗ್ಲಿಷ್ ಬೋಧಿಸುವ ಶಿಕ್ಷಕರಿಗೆ ವಿಶೇಷ ತರಬೇತಿ ನೀಡುವ ಮೂಲಕ ಗುಣಮಟ್ಟದ ಕಲಿಕೆಯನ್ನು ಖಚಿತಪಡಿಸಿಕೊಳ್ಳಬೇಕಿದೆ. ಇದು ಗ್ರಾಮೀಣ ಮಕ್ಕಳಿಗೆ ಜಾಗತಿಕ ವೇದಿಕೆಯಲ್ಲಿ ಸಮಾನ ಅವಕಾಶ ಕಲ್ಪಿಸುವ ‘ಸಮಾನತೆಯ ಹಾದಿ’ಯಾಗಿದೆ.
ಉಚಿತ ಸಾರಿಗೆ ಸೌಲಭ್ಯ
ಅನೇಕ ಬಾರಿ ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳು ಶಾಲೆಯಿಂದ ದೂರ ಉಳಿಯಲು ಸಾರಿಗೆಯ ಕೊರತೆಯೇ ಮುಖ್ಯ ಕಾರಣವಾಗಿರುತ್ತದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸುವುದರಿಂದ ಶಾಲಾ ದಾಖಲಾತಿ ಹೆಚ್ಚುವುದಲ್ಲದೆ, ಮಕ್ಕಳ ಸುರಕ್ಷತೆಯೂ ಖಚಿತವಾಗುತ್ತದೆ. ಇದು ಶಿಕ್ಷಣವನ್ನು ಮಗುವಿನ ಮನೆಬಾಗಿಲಿಗೆ ತಲುಪಿಸುವ ಒಂದು ಸಾರ್ಥಕ ಪ್ರಯತ್ನ. ಇದರಿಂದ ಎಲ್ಲಾ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಗಳಾಗಿ ಪರಿವರ್ತಿಸುವ, ಸಂಯೋಜಿಸುವ ಹೊಸ ಕಾರ್ಯವಾಗಬೇಕಿದೆ. ಇಲ್ಲದಿದ್ದರೆ ಇತರೆ ಸರ್ಕಾರಿ ಶಾಲೆಗಳು ಮುಚ್ಚಿಹೋಗುವ ದುರಂತವೂ ಇದೆ.
ಡಿಜಿಟಲ್ ಕ್ರಾಂತಿ ಮತ್ತು AI ಶಿಕ್ಷಣ: ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಮತ್ತು ಮೂರನೇ ತರಗತಿಯಿಂದ ಕೃತಕ ಬುದ್ಧಿಮತ್ತೆಯ (AI) ಕಲಿಕೆಯನ್ನು ಪರಿಚಯಿಸುತ್ತಿರುವುದು ಜಾಗತಿಕ ಸ್ಪರ್ಧೆಗೆ ಮಕ್ಕಳನ್ನು ಸಜ್ಜುಗೊಳಿಸುವ ಪ್ರಶಂಸನೀಯ ಹೆಜ್ಜೆ. ಇದು ಕೇವಲ ನಗರದ ಮಕ್ಕಳಿಗೆ ಸೀಮಿತವಾಗಿದ್ದ ತಂತ್ರಜ್ಞಾನವನ್ನು ಹಳ್ಳಿಯ ಮಕ್ಕಳಿಗೂ ತಲುಪಿಸುವ ‘ಪ್ರಜಾಪ್ರಭುತ್ವೀಕರಣ’ ಪ್ರಕ್ರಿಯೆಯಾಗಿದೆ. ಆದರೆ ಈ ಪ್ರಕ್ರಿಯೆಗೆ ಶಿಕ್ಷಕರನ್ನು ತರಬೇತುಗೊಳಿಸುವುದು ಹಾಗೂ ಸಾಂಪ್ರದಾಯಿಕ ಪದ್ಧತಿಯಲ್ಲೇ ತೊಡಗಿರುವ ಶಿಕ್ಷಕರನ್ನು ಉನ್ನತೀಕರಿಸುವ ಜವಾಬ್ದಾರಿಯು ಇದೆ. ಇಪ್ಪತ್ತು ವರ್ಷಗಳ ಹಿಂದೆ ಖಾಸಗೀ ಸಹಭಾಗಿತ್ವದಲ್ಲಿ ‘ಮಾಹಿತಿ ಸಿಂಧು’ ಯೋಜನೆ ರೂಪಿಸಿದ ಫಲವೇ ಗ್ರಾಮೀಣ ಭಾಗದ ಡಿಜಿಟಲ್ ಕ್ರಾಂತಿ. ಅದೇ ಮಾದರಿಯಲ್ಲಿ ಸೂಕ್ತ ಕಟ್ಟಡ, ಪರ್ಯಾಯ ಶಿಕ್ಷಕರು ಮೊದಲಾದ ಆಲೋಚನೆಗಳು ಇಲ್ಲಿ ಅಗತ್ಯ ಇವೆ.
ಕಲೆ ಮತ್ತು ದೈಹಿಕ ಶಿಕ್ಷಣಕ್ಕೆ ಮಾನ್ಯತೆ: ಕೇವಲ ಅಂಕಗಳಿಕೆಯ ಯಂತ್ರಗಳನ್ನಾಗಿ ಮಾಡದೆ, ಸಂಗೀತ, ಕಲೆ ಮತ್ತು ಕ್ರೀಡೆಗೆ ಪ್ರತ್ಯೇಕ ಶಿಕ್ಷಕರನ್ನು ನೇಮಿಸುತ್ತಿರುವುದು ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಕಾರಿ. ಇದು ‘ವ್ಯಕ್ತಿತ್ವ ಚಿಂತನೆ’ಯನ್ನು ಶಿಕ್ಷಣದ ಭಾಗವಾಗಿಸುವ ಮಹತ್ವದ ಕ್ರಮ. ಕಲೆಯ ವಿಭಾಗದಲ್ಲಿ ಸಾಹಿತ್ಯವನ್ನು ಪ್ರಧಾನವಾಗಿ ಸೇರಿಸುವುದು, ಭಾಷಾ ಶಿಕ್ಷಣದ ವಿಶೇಷ ಒತ್ತು ಇಂದಿನ ಶಿಕ್ಷಣ ಕ್ರಮಕ್ಕೆ ಅಗತ್ಯವಿದೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳನ್ನು ಬರವಣಿಗೆ ಮತ್ತು ಮಾತನಾಡುವ ಕೌಶಲ ಬೆಳೆಸುವ ಹೊಸ ಪರ್ಯಾಯ ಆಲೋಚನೆಯು ಅಗತ್ಯವಿದೆ.
ಬೋಧಕೇತರ ಹೊರೆ ಮುಕ್ತಿ: ಶಿಕ್ಷಕರಿಗೆ ಕೇವಲ ಬೋಧನೆಗೆ ಮಾತ್ರ ಆದ್ಯತೆ ನೀಡಲು ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡುತ್ತಿರುವುದು ಕ್ರಾಂತಿಕಾರಿ ನಿರ್ಧಾರ. ಶಿಕ್ಷಕರು ಜನಗಣತಿ ಅಥವಾ ಇನ್ಯಾವುದೋ ಆಡಳಿತಾತ್ಮಕ ಕೆಲಸಗಳಲ್ಲಿ ಸಿಲುಕದೆ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಗಮನ ನೀಡಲು ಇದು ಪೂರಕವಾಗಿದೆ. ಈ ಕಾರ್ಯ ಜಾರಿಗೊಂಡರೆ, ಸರ್ಕಾರದ ಇದುವರೆಗಿನ ಎಲ್ಲಾ ಸಾಧನೆಗಳನ್ನು ಹಿಂದಿಕ್ಕಿ ಶಿಕ್ಷಣ ಕ್ರಾಂತಿಯ ಹೊಸ್ತಿಲು ತಲುಪುವ ಮೊದಲ ಹೆಜ್ಜೆಯಾಗಿ ಭಾವಿಸಬಹುದು.
ಮಗುವಿನ ಪ್ರಗತಿಯ ಮನೋವೈಜ್ಞಾನಿಕ ವಿಶ್ಲೇಷಣೆ
ಪ್ರತಿ ಎರಡು ತಿಂಗಳಿಗೊಮ್ಮೆ ನಡೆಸುವ ಪೋಷಕರು-ಶಿಕ್ಷಕರ ಸಭೆ ಮತ್ತು ‘Lesson Based Assessment’ ಕೇವಲ ಅಂಕಪಟ್ಟಿಯ ವಿಚಾರವಲ್ಲ. ಇದು ಮಗುವಿನ ಕಲಿಕೆಯ ಹಂತಗಳನ್ನು ಪೋಷಕರಿಗೆ ತಿಳಿಸುವ ಮತ್ತು ಮಗುವಿನ ಮನೋವಿಜ್ಞಾನವನ್ನು ಅರ್ಥೈಸಿಕೊಳ್ಳುವ ವೇದಿಕೆಯಾಗಿದೆ. ಮಗು ಯಾವ ಹಂತದಲ್ಲಿದೆ? ಎಲ್ಲಿ ಹಿನ್ನಡೆ ಅನುಭವಿಸುತ್ತಿದೆ? ಎಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲು ಇದು ಸಹಕಾರಿ. ಈ ಯೋಜನೆಯು ಖಾಸಗೀ ಶಾಲೆಗಳಲ್ಲಿಯೂ ಇಲ್ಲದೆ ಇರುವ ಕಾರಣ, ವಿನೂತನ ಯೋಜನೆಯಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಉನ್ನತಪಡಿಸುವಲ್ಲಿ ಮಹತ್ತರ ಕಾರ್ಯವಾಗುತ್ತದೆ.
ವೃತ್ತಿ ಕೌಶಲ್ಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ
೬ನೇ ತರಗತಿಯಿಂದಲೇ ವೃತ್ತಿ ಕೌಶಲ್ಯದ ಪರಿಚಯ ಮತ್ತು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (NTSE, Olympiads ಇತ್ಯಾದಿ) ವಿಶೇಷ ತರಬೇತಿ ನೀಡುವುದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಶಿಕ್ಷಣ ಮುಗಿದ ನಂತರ ‘ಮುಂದೇನು?’ ಎಂಬ ಗೊಂದಲಕ್ಕೆ ಇದು ಬಾಲ್ಯದಲ್ಲೇ ಉತ್ತರ ಕಂಡುಕೊಡುವ ಪ್ರಯತ್ನವಾಗಿದೆ. ಇಂದಿನ ವಿಶ್ವ ಓದುವಿನ ತಳಹದಿಯಾಗಿ ಈ ಆಲೋಚನೆ ಕಾರ್ಯನಿರ್ವಹಿಸುತ್ತದೆ.
ಅನುಷ್ಠಾನದ ಹಾದಿಯಲ್ಲಿನ ಸವಾಲುಗಳು
ಯೋಜನೆಗಳು ಕಾಗದದ ಮೇಲೆ ಆಕರ್ಷಕವಾಗಿದ್ದರೂ, ಅವುಗಳನ್ನು ತಳಮಟ್ಟದಲ್ಲಿ ಜಾರಿಗೆ ತರುವಾಗ ಹಲವು ಸವಾಲುಗಳು ಎದುರಾಗುತ್ತವೆ:
ಮೂಲಸೌಕರ್ಯದ ಕೊರತೆ: ಡಿಜಿಟಲ್ ಶಿಕ್ಷಣದ ಮಾತು ಆಡುವಾಗ, ಹಳ್ಳಿಗಳಲ್ಲಿನ ಅನೇಕ ಶಾಲೆಗಳಿಗೆ ಇಂದಿಗೂ ಸುಭದ್ರವಾದ ಕಟ್ಟಡ, ನಿರಂತರ ವಿದ್ಯುತ್ ಸಂಪರ್ಕ ಮತ್ತು ಇಂಟರ್ನೆಟ್ ಸೌಲಭ್ಯವಿಲ್ಲ. ತಾಂತ್ರಿಕ ಸೌಲಭ್ಯಗಳಿಗಿಂತ ಮೊದಲು ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದು ಅನಿವಾರ್ಯವಿದೆ. ಇದು ಅತ್ಯಂತ ಗುಣಮಟ್ಟ ಮತ್ತು ತುರ್ತಿನ ಕಾರ್ಯವೂ ಆಗಿದೆ.
ಶಿಕ್ಷಕರ ತರಬೇತಿಯ ಗುಣಮಟ್ಟ: ಇಂಗ್ಲಿಷ್ ಮಾಧ್ಯಮ ಮತ್ತು AI ಬೋಧನೆಗೆ ಶಿಕ್ಷಕರಿಗೆ ‘ವಿಶೇಷ ತರಬೇತಿ’ ನೀಡಲಾಗುವುದು ಎಂದು ಹೇಳಲಾಗಿದೆ. ಆದರೆ, ಈ ತರಬೇತಿಯ ಗುಣಮಟ್ಟ ಹೇಗಿರುತ್ತದೆ? ತಾಂತ್ರಿಕ ಜ್ಞಾನವಿಲ್ಲದ ಶಿಕ್ಷಕರು ಕೇವಲ ಕೆಲವೇ ದಿನಗಳ ತರಬೇತಿಯಿಂದ ಮಕ್ಕಳನ್ನು ಜಾಗತಿಕ ಮಟ್ಟಕ್ಕೆ ಸಜ್ಜುಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಉಳಿಯುತ್ತದೆ.
ಫಲಿತಾಂಶ ಕೇಂದ್ರಿತ ಶಿಕ್ಷಣ: ೯೪% ಫಲಿತಾಂಶವು ಗುಣಮಟ್ಟದ ಮಾನದಂಡವಾಗಬಾರದು. ಪರೀಕ್ಷೆಯಲ್ಲಿ ಅಂಕ ಪಡೆಯುವುದು ಮತ್ತು ಜೀವನದ ಸವಾಲುಗಳನ್ನು ಎದುರಿಸುವ ‘ಜೀವನ ಕೌಶಲ್ಯ’ಗಳನ್ನು ಪಡೆಯುವುದು ಬೇರೆ ಬೇರೆ. ಬಾಯಿಪಾಠ ಮಾಡುವ ಪದ್ಧತಿಯಿಂದ ಮಕ್ಕಳನ್ನು ಹೊರತರಬೇಕಿದೆ. ಅತ್ಯಂತ ಕಡಿಮೆ ಅಂಕದಿAದಲೂ ಪಾಸಾಗುವ ಶಿಕ್ಷಣವು ಮಗುವನ್ನು ಮತ್ತೊಂದು ಅಪಾಯಕ್ಕೆ ಸಿಲುಕಿಸುವ ಸಮಸ್ಯೆ ಇದೆ. ಸಮಗ್ರ ಕಲಿಕೆಯ ಹೊಣೆಗಾರಿಕೆ ಬಹುಮುಖ್ಯವಾಗಿದೆ.
ಪರ್ಯಾಯ ಚಿಂತನೆ ಮತ್ತು ಭವಿಷ್ಯದ ಹಾದಿ
ಕರ್ನಾಟಕದ ಶಿಕ್ಷಣ ವ್ಯವಸ್ಥೆಯು ಕೇವಲ ‘ಗ್ಯಾರಂಟಿ’ಗಳ ಮೇಲೆ ಅವಲಂಬಿತವಾಗದೆ ‘ಗುಣಮಟ್ಟ’ದ ಮೇಲೆ ನಿಲ್ಲಬೇಕು.
೧. ಮಾನಸಿಕ ಆರೋಗ್ಯಕ್ಕೆ ಆದ್ಯತೆ: ಮನೋವಿಜ್ಞಾನದ ಆಳವಾದ ತಿಳುವಳಿಕೆಯುಳ್ಳ ಶಿಕ್ಷಕರು ಇಂದು ಅಗತ್ಯವಿದ್ದಾರೆ. ಮಕ್ಕಳ ಕಲಿಕಾ ದೌರ್ಬಲ್ಯಗಳನ್ನು ಗುರುತಿಸುವ ತರಬೇತಿ ಶಿಕ್ಷಕರಿಗೆ ಸಿಗಬೇಕು.
೨. ಕೌಶಲ್ಯಾಧಾರಿತ ಶಿಕ್ಷಣ: ಆರನೇ ತರಗತಿಯಿಂದಲೇ ವೃತ್ತಿ ಕೌಶಲ್ಯ ನೀಡುವ ನಿರ್ಧಾರವು ಸ್ವಾಗತಾರ್ಹ. ಇದು ಪದವಿ ಮುಗಿಸಿ ನಿರುದ್ಯೋಗಿಗಳಾಗುವ ಬದಲು, ಸ್ವಾವಲಂಬಿಗಳಾಗಿ ಹೊರಬರಲು ದಾರಿ ಮಾಡಿಕೊಡುತ್ತದೆ. ಆದರೆ, ಮೌಲ್ಯ ಶಿಕ್ಷಣವನ್ನು ಹೊರಗಿಡುವ ಆಲೋಚನೆ ಆಗಬಾರದು.
೩. ಸಮುದಾಯದ ಸಹಭಾಗಿತ್ವ: ಪೋಷಕರು ಮತ್ತು ಶಿಕ್ಷಕರ ಸಭೆಗಳು ಕೇವಲ ಔಪಚಾರಿಕವಾಗದೆ, ಮಗುವಿನ ಪ್ರಗತಿಯಲ್ಲಿ ಪೋಷಕರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು.
ಸರ್ಕಾರದ ಈ ೮ ಗ್ಯಾರಂಟಿಗಳು ಈ ಸಮಾಜಕ್ಕೆ ಒಂದು ‘ಸಾಂಸ್ಥಿಕ ಚೌಕಟ್ಟು’ ನೀಡಲು ಶಕ್ತವಾಗಿವೆ. ಆದರೆ ಇದರ ಯಶಸ್ಸು ಅಡಗಿರುವುದು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಾಮಾಣಿಕ ಅನುಷ್ಠಾನ ಮತ್ತು ಸಕ್ರಿಯ ಕಾರ್ಯ ಚಿಂತನೆಯಲ್ಲಿ ಎನ್ನಬಹುದು. ಕರ್ನಾಟಕದ ಶಿಕ್ಷಣವು ಕೇವಲ ಸಾಕ್ಷರತೆಯನ್ನು ನೀಡುವುದಲ್ಲದೆ, ವಿವೇಚನಾಶಕ್ತಿಯುಳ್ಳ ಪ್ರಜೆಗಳನ್ನು ರೂಪಿಸಲಿ. ಯೋಜನೆಯಲ್ಲಿರುವಂತೆ ‘ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಶಾಲಾ ವ್ಯವಸ್ಥೆ ನಮ್ಮದಾಗಲಿ’ ಎಂಬುದು ಕೇವಲ ಘೋಷಣೆಯಾಗದೆ, ಪ್ರತಿ ಹಳ್ಳಿಯ ಮಗುವಿನ ಭವಿಷ್ಯದ ಭರವಸೆಯಾಗಿ ಮೂಡಿಬರಲಿ.