ಉತ್ತಮ ಹವ್ಯಾಸಗಳೇ ವ್ಯಕ್ತಿತ್ವ ವಿಕಸನದ ಮೆಟ್ಟಿಲು !
ಮನುಷ್ಯ ಜನ್ಮದ ಸಾರ್ಥಕತೆ ಆತನ ನಡತೆಯನ್ನೇ ಅವಲಂಬಿಸಿದೆ. ಸನ್ನಡತೆ-ಸದ್ಗುಣಗಳನ್ನು ರೂಢಿಯಾಗಿಸಿಕೊಂಡು ಯಾವತ್ತೂ ತನ್ನ ಸ್ವಕಾರ್ಯಗಳನ್ನು ತಾನೇ ಮಾಡಿಕೊಂಡು, ಸಮಾಜ ಕಾರ್ಯಗಳಲ್ಲೂ ಭಾಗಿಯಾಗಿದ್ದುಕೊಂಡು ಬದುಕುವುದರಿಂದ ತನ್ನೊಂದಿಗೆ ಸಮಾಜವೂ ಸುಧಾರಣೆಯಾಗುತ್ತದೆಯೆಂಬುದು ನನ್ನ ಅಂಬೋಣವಾಗಿದೆ. ಸರ್ವರಲ್ಲಿದ್ದುಕೊಂಡು, ಸರ್ವರಲ್ಲಿಯೂ ಬೆರೆತುಕೊಂಡು, ಸರ್ವರ ಸತ್ಕಾರ್ಯಗಳಲ್ಲಿಯೂ ಭಾಗಿಯಾಗಿದ್ದುಕೊಂಡು, ಸದ್ಗುಣಗಳೇ ನನ್ನ ಜೀವನದ ಸಂಗಾತಿಗಳೆಂದು ಅದರಂತೆ ನಡೆಯುವವನೇ ಜೀವನವನ್ನು ಯಶಸ್ವಿಯಾಗಿ ನಿಭಾಯಿಸಬಲ್ಲ, ಪಾರುಗಾಣಿಸಬಲ್ಲ. ಇಂತಹ ಬದುಕಿಗೆ ಬಸವಾದಿ ಶಿವಶರಣರ ಜೀವನ ಮನುಕುಲಕ್ಕೇ ಮಾದರಿಯಾಗಿದೆ. ಅವರು ತಮ್ಮ ಜೀವನಾನುಭವವನ್ನು ತಮ್ಮ ವಚನಗಳಲ್ಲಿ ನಿರೂಪಿಸಿದ್ದಾರೆ. ಸಂಸಾರ ಸಾಗರದಲ್ಲಿದ್ದೂ ಸದ್ಗತಿ, ಸ್ವರ್ಗವನ್ನೈದಬಲ್ಲರು ಎಂದಿದ್ದಾರೆ. ಅಲ್ಲದೇ ಅದರಂತೆ ನಡೆ-ನುಡಿ-ಆಚಾರ-ವಿಚಾರಗಳನ್ನು ಕ್ರಿಯಾಶೀಲ ಗೊಳಿಸಿದ್ದಾರೆ.

ತನ್ನ ಸ್ವ ಕಾರ್ಯವನು ತಾನು ಮಾಡಿಕೊಂಡಡೆ ದೇಹದಾರ್ಢ್ಯ ಪುಷ್ಠಿಯಾಗಿ ಆರೋಗ್ಯ ಲಭಿಸುತ್ತದೆ. ಗುರುವಿನಿಂದ ದೀಕ್ಷೆ ಪಡೆದುಕೊಂಡ ಲಿಂಗದೇವನ ಪೂಜೆ, ಜಪ, ತಪ, ಅನುಷ್ಠಾನ, ನಿತ್ಯನೇಮಗಳನು ತಾನು ಮಾಡಿದರೆ ಅದರಿಂದ ಮಾನಸಿಕ ನೆಮ್ಮದಿ ಹಾಗೂ ಪ್ರತಿಫಲ ದೊರೆತೀತು. ಇವುಗಳನ್ನು ಬೇರೆಯವರ ಕಡೆಯವರಿಂದ ಮಾಡಿಸಿದರೆ ತನಗಾಗುವ ಲಾಭವೇನು? ನಷ್ಟವೇ ಅಲ್ಲವೆ? ಅಂದರೆ ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ ಲಿಂಗವಿದ್ದು ಫಲವೇನು? ಶಿವಪಥವನರಿಯದನ್ನಕ್ಕ ಎಂದಂತಾಗುತ್ತದೆ. ಆದುದರಿಂದ ಗುರುವಿನಿಂದ ಸಲಹೆಗಳನ್ನು ಪಡೆದಾಗಲೂ ಬೇರೆ ದಾರಿ ಹಿಡಿದು ನಡೆದರೆ ಜೀವನ ಯಶಸ್ವಿಯಾದೀತೆ? ಎಂಬುದರ ಅರಿವು, ಆಲೋಚನೆ ಶಿಷ್ಯನಾದವನಲ್ಲಿರಬೇಕಾಗುತ್ತದೆ. ಮನಬಂದಂತೆ ಹರಿದಾಡುವುದು ಯೋಗ್ಯವಲ್ಲ. ತನಗೆ ಅರಿಕೆಗೆ ಬಾರದಿದ್ದರೂ ಬೇರೆಯವರನ್ನು ಕೇಳಿ ಅದರಂತೆ ನಡೆದರೆ ಬದುಕು ಸ್ಫಟಿಕದಷ್ಟು ಶುಭ್ರವಾಗಲು ಸಾಧ್ಯವಿದೆ ಎಂಬುದಕ್ಕೆ ಸಾಕಷ್ಟು ಸಂತ ಶರಣರ ಆದರ್ಶ ಚರಿತ್ರೆಗಳುಂಟು! ಸಂಸಾರದ ದಂದುಗದಲ್ಲಿ ಸಿಲುಕಿದ ನಾವು ಬಸವಣ್ಣನವರೆಂದಂತೆ-?ತನ್ನ ವಿಚಾರಿಸಲೊಲ್ಲದು, ಇದಿರ ವಿಚಾರಿಸಹೋಹುದೀ ಮನವು. ಏನ ಮಾಡುವೆನೀ ಮನವನು, ಎಂತು ಮಾಡುವೆನೀ ಮನವನು. ಕೂಡಲಸಂಗಮದೇವನ ಶರಣರ ನಚ್ಚದ ಮಚ್ಚದ ಬೆಂದ ಮನವನು?- ಎಂದಿರುವುದನ್ನು ಗಮನಿಸಬೇಕು- ಮನ ಬಂದತ್ತ ನಡೆಯುವುದಕ್ಕೆ ಹುಟ್ಟು ಪಡೆದಿಲ್ಲ. ಗುರು-ಹಿರಿಯರ ಮಾರ್ಗದರ್ಶನದಂತೆ ನಡೆದು ಜೀವನ ಸಾಫಲ್ಯ ಮಾಡಿಕೊಳ್ಳಬೇಕಾಗಿದೆ. ಅದು ಕಾರಣ ಕೂಡಲಸಂಗನ ಶರಣರ, ಸತ್ಯವಂತರ ಮಾರ್ಗದಲ್ಲಿ ನಡೆದೊಡೆ ಯಾವುದಕ್ಕೂ ಅಳುಕಿಲ್ಲ, ಅಂಜಿಕೆಯಿಲ್ಲ. ?ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ? ಎಂದ ಸರ್ವಜ್ಞಕವಿಯ ಮಾತೂ ಇದನ್ನೇ ಪ್ರತಿಪಾದಿಸುತ್ತದೆ. ?ಜೈಸಾ ಸಂಗ ವೈಸಾ ರಂಗ? ಎಂಬಂತೆ.
ಪಂಚೇಂದ್ರಿಯ ಸುಖದ ಲೋಲುಪತೆಯಲ್ಲಿಯೇ ಸಿಲುಕಿ ಹೊರಳಾಡಲಾರದೇ ಅವುಗಳನ್ನು ಕಳಚಿ ಹಾಕಲು ಪ್ರಯತ್ನಿಸಬೇಕು. ಏಕೆಂದರೆ ಮನುಷ್ಯ ಜನ್ಮ ಪದೇ ಪದೇ ಬರುವಂತಹುದಲ್ಲವೆಂಬುದರ ಅರಿಕೆಯಿರಲೆಂದು ಹೇಳಿದ ಅನುಭಾವಿಗಳ ಮಾತು ನಿತ್ಯಸತ್ಯ.
ಬಸವಣ್ಣನವರೆಂದಂತೆ:
ಆಸೆ, ಆಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ, ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ ಅದೇ ಕೆಂದಡೆ, ನಿನ್ನತ್ತಲೆನ್ನ ಬರಲೀಯವು,ಇದು ಕಾರಣ, ಇವೆಲ್ಲವ ಕಳೆದು ಎನ್ನ ಪಂಚೈವರ, ಭಕ್ತರ ಮಾಡು ಕೂಡಲಸಂಗಮದೇವಾ !
ಎಂದು ಸೆರಗೊಡ್ಡಿ ಪ್ರಾರ್ಥಿಸಿಕೊಂಡ ಬಸವಣ್ಣನವರ ಈ ಬಗೆಯನ್ನು ನಾವು ಅರ್ಥೈಸಿಕೊಂಡು ನಡೆಯಬೇಕಾಗಿದೆ. ಇದುವೇ ವ್ಯಕ್ತಿತ್ವ ವಿಕಸನದ ಮೊದಲ ಮೆಟ್ಟಲು. ಅವಗುಣಗಳನ್ನು ಕಳಚಿ ಹಾಕಿದಾಗ ತಂದೆ-ತಾಯಿ, ಬಂಧು-ಬಳಗ, ದೇಶ-ನಾಡು, ಸಮಾಜದ ಬಗೆಗೆ ಕಾಳಜಿ ಹುಟ್ಟಲು ಸಾಧ್ಯವಾದೀತೆಂಬ ಭಾವವಿದರಲ್ಲಿ ಹೆಪ್ಪುಗಟ್ಟಿದೆ. ಒಳ್ಳೆಯ ಜೀವನ ಕ್ರಮಕ್ಕೆ ಸದ್ಗುಣಗಳೇ ಊರುಗೋಲು. ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡು ನಡೆಯುವವನಿಗೆ ಸಮಾಜದಲ್ಲಿ ಆತನಿಗೆ ಯಾವತ್ತೂ ಮನ್ನಣೆ ದೊರೆಯುತ್ತದೆ. ಮತ್ತು ಸಮುದಾಯದವರು ಒಂದಲ್ಲ ಒಂದು ಕ್ರಮದಲ್ಲಿ ಗುರುತಿಸಿಕೊಳ್ಳುತ್ತಾರೆ. ಆದುದರಿಂದ ತಾನು ಹುಟ್ಟಿ ಬೆಳೆಯುವ ಕುಟುಂಬ, ಅಲ್ಲಿಯ ಪರಿಸರ, ಸಾರ್ವಜನಿಕರೊಂದಿಗಿನ ನಿರಂತರ ಸಂಪರ್ಕ, ಇತರರ ಸಂಗ ಸಂಸ್ಕಾರದ ಕಲಿಕೆಯ ಮುಖಾಂತರ ಹವ್ಯಾಸಗಳು ವ್ಯಕ್ತಿಯಲ್ಲಿ ಗಾಢವಾಗಿ ಬೇರೂರುತ್ತವೆ. ಇಂತಹ ಆರೋಗ್ಯಕರ ಅಭ್ಯಾಸಗಳ ಪೈಕಿ ಯಾವುದು ವ್ಯಕ್ತಿಯ ದಿನನಿತ್ಯದ ಕೆಲಸಗಳ ಜೊತೆಯಲ್ಲಿ ಬದುಕಿನ ಒಂದು ಭಾಗವಾಗಿ ಬಿಡುತ್ತದೆಯೋ ಅವುಗಳನ್ನೇ ಹವ್ಯಾಸಗಳು ಎಂದು ಕರೆಯುತ್ತಾರೆ. ತನ್ನ ಆರೋಗ್ಯ ವೃದ್ಧಿಗಾಗಿ ಉತ್ತಮ ಹವ್ಯಾಸಗಳೇ ಪೂರಕವಾಗುತ್ತವೆಯೇ ಹೊರತು ಔಷಧೋಪಚಾರಗಳಿಂದಲ್ಲ.
ಪ್ರತಿನಿತ್ಯವೂ ಕೋಳಿಕೂಗುವ ಮುನ್ನ ಅಂದರೆ ಸೂರ್ಯೋದಯಕ್ಕೂ ಮುನ್ನವೇ ಎದ್ದು ಪ್ರಾತರ್ವಿಧಿಗಳನ್ನು ಪೂರೈಸುವ ಮೂಲಕ ದಿನವನ್ನು ಧನಾತ್ಮಕವಾಗಿ ಪ್ರಾರಂಭಿಸುವಲ್ಲಿ ಮುನ್ನುಡಿ ಹಾಕುವುದು. ಬೆಳಗಿನ ಸಮಯವನ್ನು ಬ್ರಾಹ್ಮೀ ಮುಹೂರ್ತವೆನ್ನುತ್ತಾರೆ. ಅದು ಆರೋಗ್ಯಕ್ಕೆ ಬಲು ಹಿತಕರ. ಅಂತಹ ವಾತಾವರಣವು ಅತ್ಯಂತ ಪರಿಶುದ್ಧವಾಗಿರುವುದರಿಂದ ಗಾಳಿಯಲ್ಲಿ ಹೆಚ್ಚು ಶುದ್ಧವಾದ ಆಮ್ಲಜನಕ ಇರುವುದರಿಂದ ಸೂಕ್ತವಾದ ಸಡಿಲವಾದ ಉಡುಪು ಧರಿಸಿ ನಡೆದಾಡುವುದು, ಸ್ವಲ್ಪು ಹೊತ್ತು ಬರಿಗಾಲಿನಿಂದ ನಡೆದಾಡುವುದು, ಬೆವರು ಬರುವಂತೆ ವ್ಯಾಯಾಮ ಮಾಡುವುದು, ಯೋಗಾಸನಗಳನ್ನು ಮಾಡುವುದು, ಇಂತಹ ಕಾರ್ಯಗಳನ್ನು ಮಾಡುವ ಪೂರ್ವದಲ್ಲಿ ಅನ್ನ-ಪಾನಾದಿಗಳನ್ನು ಸೇವಿಸದಿರುವುದು, ಬದುಕಿನ ಪ್ರತೀಕ್ಷಣದಲ್ಲೂ ತನ್ನ ಬದುಕಿನ ಪ್ರಮುಖ ಗುರಿಯ ಬಗ್ಗೆ ಚಿಂತಿಸುತ್ತಾ ಅದನ್ನು ಸಾಧಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳುತ್ತಾ ಇರುವುದು ಉತ್ತಮ ಹವ್ಯಾಸಗಳು. ಹೀಗೆ ವಿಹಾರ ಮಾಡಿ ಮನೆಗೆ ಹೋಗಿ ಸ್ನಾನ ಮಾಡಿ, ಪ್ರಾರ್ಥನೆ, ಪೂಜಾದಿಗಳನ್ನು ಮಾಡಿಕೊಂಡು, ಉಪಹಾರ ಸೇವಿಸಿ, ಕಾಯಕ-ಕರ್ತವ್ಯಕ್ಕೆ ತೊಡಗುವುದು. ತಕ್ಕ ಮಟ್ಟಿಗಿನ ಆಹಾರ ಪದಾರ್ಥಗಳ ಸೇವನೆ ಅತ್ಯಗತ್ಯ. ಸಾಧ್ಯವಿದ್ದಷ್ಟು ಹಣ್ಣು-ಹಂಪಲ, ಗಜ್ಜರಿ, ಸವತೆಕಾಯಿ, ತರಕಾರಿ ಸೊಪ್ಪು, ಹಾಕರಕಿ, ಮೆಂತೆ, ಮೂಲಂಗಿ ಈ ಮುಂತಾದ ಹಸಿ ತರಕಾರಿಗಳನ್ನು ಸೇವಿಸುವುದನ್ನು ಹವ್ಯಾಸ ಅಭ್ಯಾಸ ಮಾಡಿಕೊಳ್ಳುವುದು ಸೂಕ್ತ.
ಇದು ನಿಯತತನದ ಕ್ರಮಬದ್ಧ ಪಾಲನೆಯನ್ನಾಗಿ ರೂಢಿಸಿಕೊಳ್ಳುವುದು ಇನ್ನೂ ಉತ್ತಮ-ಆರೋಗ್ಯದ ಒಳಗುಟ್ಟು! ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ತನ್ನದೇ ಆದ ಅಚ್ಚುಕಟ್ಟುತನವನ್ನು ಅಳವಡಿಸಿಕೊಳ್ಳುವುದು ಉತ್ತಮ ಹವ್ಯಾಸದ ಪ್ರಮುಖ ಲಕ್ಷಣ. ಯಾವುದೇ ವೃತ್ತಿಯನ್ನು ಅಥವಾ ಕಾಯಕವನ್ನು ದೇವರ ಸೇವೆಯೆಂದೇ ಮಾಡುವುದು. ಸಮಾಜದ ಹಿತಾಸಕ್ತಿ ಬಯಸುವುದು. ಒಳಿತು ಕಾರ್ಯವನು ಮಾಡಿ ಪುಣ್ಯ ಗಳಿಸಿಕೊಳ್ಳುವುದು, ಇವು ಉತ್ತಮ ಹವ್ಯಾಸಗಳೇ. ನಿತ್ಯ ಹೊಸ ಹೊಸ ವಿಚಾರಗಳನ್ನು ಬಲ್ಲವರಿಂದ, ತಜ್ಞರಿಂದ ತಿಳಿದುಕೊಳ್ಳುವುದೂ ಒಂದು ಸದಭಿರುಚಿಯ ಹವ್ಯಾಸವಾಗಿದೆ. ?ಗೆದ್ದರೆ ಮನಸ್ಸಿಗೆ ಸಾಧನೆಯ ನೆಮ್ಮದಿ, ಸೋತಲ್ಲಿ ಹೊಸ ಪಾಠದ ಕಲಿಕಗೆ ಅವಕಾಶ? ಅಂದರೆ ಸೋಲೇ ಗೆಲುವಿನ ಪ್ರಚೋದಕ ಎಂಬ ಮನೋಧರ್ಮದೊಂದಿಗೆ ಅಸಾಧ್ಯ ಹಾಗೂ ಕಠಿಣವಾದ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿ ಅದರಲ್ಲಿ ಗೆಲುವನ್ನು ಸಾಧಿಸಲು ಸದಾ ಪ್ರಯತ್ನಿಸುತ್ತಿರುವುದು.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ, ಇತರರ ಮಾತುಗಳನ್ನು ವಿಧೇಯತೆಯಿಂದ ಕೇಳಿ ಗೌರವಿಸುವ, ಸಹನೆ ಮತ್ತು ತಾಳ್ಮೆಯಂತಹ ಸದ್ಗುಣಗಳನ್ನು ರೂಢಿಸಿಕೊಳ್ಳುವುದು ಒಂದು ಉತ್ತಮ ಹವ್ಯಾಸವೇ. ಉಪಕಾರ ಮನೋಭಾವನೆಯಿಂದ ಸಮಾಜದ ಜೊತೆ ಬೆರೆಯುವುದು, ಕಡುಬಡತನದವರಿಗೆ ಸಾಧ್ಯವಿದ್ದಷ್ಟು ಅನುಕೂಲ ಒದಗಿಸುವುದು, ತನಗೆ ಉಳಿಯುವ ವೇಳೆಯಲ್ಲಿ ಉತ್ತಮ ಗುಣಗಳನ್ನು ಇತರರೊಂದಿಗೆ ಚರ್ಚಿಸಿ ಹಂಚಿಕೊಳ್ಳುವುದು. ಅನವರತವೂ ಸತ್ಯವಂತರ ಸಂಗಸಹವಾಸದಲ್ಲಿರುವುದೂ ಉತ್ತಮ ಹವ್ಯಾಸಗಳೇ! ಪ್ರತಿಯೊಬ್ಬರೊಳಗೂ ಒಬ್ಬ ಸುಪ್ತವಾದ ಕಲಾವಿದ ಅಡಗಿರುತ್ತಾನೆ. ಆತನನ್ನು ಹುಡುಕಿ ಹೊರಗೆ ತೆಗೆಯಬೇಕಷ್ಟೇ. ಪ್ರಯತ್ನಪಡದೇ ಯಾವುದೂ ಲಭಿಸದು. ಕುಂಚವನ್ನು ಹಿಡಿದು ಬಣ್ಣದಲ್ಲಿ ಅದ್ದಿ ನಮ್ಮ ಕಲ್ಪನೆಯ ಕನಸುಗಳಿಗೆ ಜೀವ ತುಂಬಬಹುದು. ಈ ಮೂಲಕ ನಮ್ಮ ಕನಸಿನ ಹಕ್ಕಿಗೆ ಹೇಗೆ ರೆಕ್ಕೆ ಮೂಡುವುದೆಂಬುದನ್ನು ಕಣ್ಣಾರೆ ಕಾಣಬಹುದು.
ಸಂಗೀತದಿಂದ ಮನಸ್ಸು ಪ್ರಸನ್ನವಾಗುತ್ತದೆ. ನಿತ್ಯವಲ್ಲದಿದ್ದರೂ ವಾರದಿಂದ ಒಂದು ದಿನವಾದರೂ ಸಂಗೀತ ತರಗತಿಗೆ ಹೋಗುವುದು, ವಿವಿಧ ಸಂಗೀತ ವಾದ್ಯಗಳನ್ನು ನುಡಿಸಲು ಕಲಿಯುವುದು, ಸಂಗೀತ ತಾಳ-ಲಯದೊಂದಿಗೆ ಹಾಡು ಹಾಡುವುದನ್ನು ರೂಢಿಸಿಕೊಳ್ಳುವುದು, ಕೊನೆಯ ಪಕ್ಷ ಹಾಡುಗಳನ್ನು ಕೇಳಿಸಿಕೊಳ್ಳುವುದು ಮತ್ತು ಸಂಗ್ರಹಿಸಿಕೊಳ್ಳುವುದು- ಈ ಮುಂತಾದ ಹವ್ಯಾಸಗಳನ್ನು ಇಂದಿನ ಯುವಕರು ಮೈಗೂಢಿಸಿಕೊಳ್ಳುವುದು ಶ್ರೇಷ್ಠವಾದುದು. ಇದರಿಂದ ದುರ್ವ್ಯಸನಗಳಿದ್ದರೂ ದೂರವಾಗಲು ಸಾಧ್ಯವಾಗುತ್ತದೆ. ಅದೇ ರೀತಿಯಾಗಿ ವಿವಿಧ ರೀತಿಯ ಪುಸ್ತಕಗಳನ್ನು ಓದುವುದು ತುಂಬಾ ಶ್ರೇಷ್ಠವಾದ ಹವ್ಯಾಸ. ದೂರದರ್ಶನ, ವಾಟ್ಸ್ಯಾಪ್, ಮೊಬಾಯಿಲ್ ಮುಂತಾದ ಮಾಧ್ಯಮಗಳನ್ನು ಬಳಸಿ ಸಮಯ ಹರಣ ಮಾಡುವುದಕ್ಕಿಂತ ಪುಸ್ತಕ ಪ್ರೇಮಿಯಾಗಿ ಓದುವುದು, ಸಂಗ್ರಹಿಸುವುದು ಇನ್ನೂ ಉತ್ತಮ ಹವ್ಯಾಸ. ಮನೆ-ಮನೆಗಳಲ್ಲಿ ಶೋಕೇಸ್ಗಳಿಗಿಂತಲೂ ಬುಕ್ ಕೇಸಗಳಿರುವುದು ಉತ್ತಮ. ಅಂದರೆ ಮನೆಯಲ್ಲಿ ಮಿನಿ ಗ್ರಂಥಾಲಯವನ್ನಾಗಿ ರೂಪಿಸಿದರೆ ಮುಂಬರುವ ಪೀಳಿಗೆಗೂ ಉಪಯೋಗಕ್ಕೆ ಬಂದೀತು ಎಂಬ ಮನೋಭಾವನೆಯ ಹವ್ಯಾಸ ರೂಢಿಸಿಕೊಳ್ಳುವುದು ಉತ್ತಮ.
ವಿನಾಕಾರಣ ಹರಟೆ ಹೊಡೆದು ಸಮಯ ಹರಣ ಮಾಡುವುದು ಉಚಿತವಾದುದಲ್ಲ. ಜೀವನದ ಸ್ಪಷ್ಟ ಗುರಿಯ ಬಗೆಗೆ ಅರಿವು ಇದ್ದಲ್ಲಿ ನಾನೇನು ಮಾಡುತ್ತಿದ್ದೇನೆ ಮತ್ತು ನಾನೇನು ಮಾಡಬೇಕು ಎಂಬ ಪರಿಜ್ಞಾನವಿರಬೇಕು. ?ಅರಿತರೆ ಶರಣ-ಮರೆತರೆ ಮಾನವ? ಎಂದಂತೆ ಅರಿತು ಆಚರಣೆಯಲ್ಲಿ ತರುವುದೇ ನಿಜವಾದ ಬದುಕು. ಇಲ್ಲದಿದ್ದರೆ ಸಮರ್ಪಕವಾದ ನಾಮಫಲಕವಿಲ್ಲದ ಬಸ್ಸಿಗೆ ಹತ್ತಿದ ಪ್ರಯಾಣಿಕನಂತಾಗುವುದು ಖಂಡಿತ. ಜೀವನದಲ್ಲಿ ಬರಬಹುದಾದ ವಿವಿಧ ಅಡೆತಡೆಗಳ ಹಾಗೂ ಗಂಡಾಂತರದ ಬಗ್ಗೆ ಹಾಗೂ ಅರಿವು ಮತ್ತು ಗಂಡಾಂತರವನ್ನು ನಿವಾರಿಸುವ ವಿಧಾನದ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಹೊಂದಿರುವುದು ಉತ್ತಮ. ನಿತ್ಯ ಬದುಕಿನ, ಬಿಡುವಿನ ಅವಧಿಯಲ್ಲಿ ನಿಮ್ಮ ಆಸಕ್ತಿಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಂತೆಯೇ ವೈಯಕ್ತಿಕ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಇಂತಹ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡು ಮುನ್ನಡೆಯುವುದು ಸೂಕ್ತವೆಂಬುದು ನನ್ನ ಗ್ರಹಿಕೆಯಾಗಿದೆ. ತಮ್ಮದೂ ಆಗಿರಲೆಂದುದಾಗಿ ನನ್ನ ಅಭೀಪ್ಸೆಯಾಗಿದೆ.