ವೈಯಕ್ತಿಕ ಪ್ರಗತಿಯ ಪಯಣ!
ಬದುಕಿನ ಹಾದಿಯಲ್ಲಿ ಮುನ್ನಡೆಯಲು ನಮಗೆ ನಿರಂತರ ಸ್ಫೂರ್ತಿ ಬೇಕು. ಈ ಸ್ಫೂರ್ತಿಯೇ ನಮ್ಮ ಕನಸುಗಳಿಗೆ ಜೀವ ತುಂಬಿ, ನಮ್ಮನ್ನು ಮುನ್ನಡೆಸುತ್ತದೆ. ನಮ್ಮ ಮನಸ್ಸು ಒಂದು ವಿಶೇಷ ಶಕ್ತಿಯನ್ನು ಹೊಂದಿದೆ. ಈ ಶಕ್ತಿಯನ್ನು ಬಳಸಿಕೊಂಡು ನಾವು ನಮ್ಮ ದಾರಿಗಳನ್ನು ಆಯ್ದುಕೊಳ್ಳಬೇಕು, ಹೊಸ ವಿಷಯಗಳನ್ನು ಕಲಿಯಬೇಕು ಮತ್ತು ಮುನ್ನಡೆಯಬೇಕು. ಆತ್ಮವಿಶ್ವಾಸ ಮತ್ತು ದೃಢನಿಶ್ಚಯವೇ ನಮ್ಮ ಶಕ್ತಿ. ಅವುಗಳನ್ನು ಬಳಸಿಕೊಂಡು ವೈಫಲ್ಯಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಬಹುದು.
ಮಹಾನ್ ಚಿಂತಕರಾದ ಸ್ವಾಮಿ ವಿವೇಕಾನಂದರು ಹೇಳಿದಂತೆ, “ಭಯ ಮತ್ತು ಹೇಡಿತನ ಮನುಷ್ಯನನ್ನು ಊನಗೊಳಿಸಿದರೆ, ಆತ್ಮಸ್ಥೈರ್ಯವು ಅದೇ ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.” ಪ್ರಪಂಚದಲ್ಲಿ ಇತರರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ, ಹೇಗೆ ವರ್ತಿಸುತ್ತಾರೆ ಎಂಬುದರ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟುಬಿಡೋಣ. ವಾಸ್ತವದಲ್ಲಿ, ನಮ್ಮಲ್ಲಿ ಹೆಚ್ಚಿನವರು ಇನ್ನೊಬ್ಬರು ನಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂದು ಚಿಂತಿಸುವುದರಲ್ಲೇ ತಮ್ಮ ಅಮೂಲ್ಯ ಸಮಯ ಮತ್ತು ಶ್ರಮವನ್ನು ವ್ಯರ್ಥ ಮಾಡುತ್ತಾರೆ.

ಉತ್ತಮ ಹಾದಿಯನ್ನು ಆಯ್ದುಕೊಳ್ಳುವುದು.
ಪ್ರತಿಯೊಬ್ಬರ ಸಾಧನೆಗೆ ಹಲವು ಕಾರಣಗಳಿರಬಹುದು. ಆದರೆ, ನೋವು, ಹತಾಶೆ ಮತ್ತು ಕಷ್ಟಗಳೂ ಕೂಡ ಪ್ರೇರಣೆಯ ಕಥೆಗಳಾಗಬಹುದು. ಕೆಲವರು ಈ ಕಥೆಗಳನ್ನು ಮುಕ್ತವಾಗಿ ಹೇಳಿಕೊಂಡರೆ, ಮತ್ತೆ ಕೆಲವರು ಕೃತಿಗಳು ಮತ್ತು ಬರಹಗಳ ಮೂಲಕ ಓದುಗರ ಮನಸ್ಸನ್ನು ಸೆಳೆಯುತ್ತಾರೆ. ಪ್ರಸಿದ್ಧ ಇಂಗ್ಲಿಷ್ ಕವಿ ರಾಬರ್ಟ್ ಫ್ರಾಸ್ಟ್ ತಮ್ಮ “ದಿ ರೋಡ್ ನಾಟ್ ಟೇಕನ್” (The Road Not Taken) ಎಂಬ ಕವನದಲ್ಲಿ, ಕಡಿಮೆ ಜನರು ಪ್ರಯಾಣಿಸಿದ ಹಾದಿಯನ್ನು ಆರಿಸಿಕೊಂಡಿದ್ದರಿಂದಲೇ ತಮ್ಮ ಬದುಕಿನಲ್ಲಿ ದೊಡ್ಡ ಬದಲಾವಣೆ ಬಂದಿದೆ ಎಂದು ವಿವರಿಸಿದ್ದಾರೆ. ಈ ಕವನವು, ಸರಿಯಾದ ಆಯ್ಕೆಗಳು ನಮ್ಮ ಬದುಕಿನಲ್ಲಿ ಎಷ್ಟು ಮಹತ್ವದ ಪಾತ್ರವಹಿಸುತ್ತವೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಪ್ರಯತ್ನವೇ ನಮ್ಮ ಯಶಸ್ಸು.
ಈ ಸಮಾಜದಲ್ಲಿ ಯಾರ ಬದುಕು ಯಶಸ್ಸಿನಲ್ಲಿ ಸಾಗುತ್ತಿದೆಯೋ ಅದು ಅವರ ನಿರಂತರ ಪ್ರಯತ್ನದ ಮೇಲೆ ಹೊರತು, ಅದೃಷ್ಟದ ಮೇಲಲ್ಲ. ಬದುಕಿನಲ್ಲಿ ಬರುವ ಸಾವಿರಾರು ಅಡೆತಡೆಗಳನ್ನು ನಾವು ದಾಟಲೇಬೇಕು. ಈ ವಿಷಯವಾಗಿ ಸ್ವಾಮಿ ವಿವೇಕಾನಂದರು, “ಎಲ್ಲಾ ಶಕ್ತಿಯೂ ನಮ್ಮೊಳಗಿದೆ” ಎಂದು ಜಗತ್ತಿಗೆ ಸಾರಿದ್ದಾರೆ. ನಮಗೆ ಬೇಕಾದ ಎಲ್ಲ ಆಸೆಗಳು ಮತ್ತು ಅವಕಾಶಗಳು ದೊರೆಯಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ನಮ್ಮ ಆಲೋಚನೆಗಳನ್ನು ಬದಲಾಯಿಸಿದರೆ, ಹೊಸ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಯಾರಿಗೂ ತೊಂದರೆ ಮಾಡದೆ, ಜನಸಾಮಾನ್ಯರೊಂದಿಗೆ ಹೊಂದಿಕೊಂಡು ಏನನ್ನಾದರೂ ಸಾಧಿಸುವುದು ಬಹಳ ಮುಖ್ಯ.
ಸವಾಲುಗಳನ್ನು ಎದುರಿಸುವುದು ಜೀವನದ ಭಾಗ.
ನಮಗೆ ಅತಿ ಮುಖ್ಯವಾದ ವ್ಯಕ್ತಿಯೊಬ್ಬರು ನಮ್ಮ ಜೀವನದಿಂದ ದೂರವಾದಾಗ, ಅವರೇ ನಮ್ಮನ್ನು ಕಳೆದುಕೊಂಡಿರುತ್ತಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆ ಸಮಯದಲ್ಲಿ ಗಟ್ಟಿಯಾದ ಮನಸ್ಸು, ದೃಢವಾದ ಪರಿಶ್ರಮ ಮತ್ತು ಸರಿಯಾದ ವ್ಯಕ್ತಿಗಳ ಆಯ್ಕೆಯು ನಿಮ್ಮನ್ನು ಮತ್ತೆ ಯಶಸ್ಸಿನತ್ತ ಕೊಂಡೊಯ್ಯಬಹುದು. ಬದುಕಿನ ಈ ಪ್ರಯಾಣದಲ್ಲಿ ನಾವು ಅನೇಕ ತ್ಯಾಗಗಳು ಮತ್ತು ಹೊಂದಾಣಿಕೆಗಳನ್ನು ಮಾಡಬೇಕಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು.
ನಿಮ್ಮನ್ನು ಎಷ್ಟೇ ಜನರು ಕೆಳಕ್ಕೆ ತಳ್ಳಲು ಪ್ರಯತ್ನಿಸಿದರೂ, ಆ ದೈವಿಕ ಶಕ್ತಿ ನಿಮ್ಮನ್ನು ಮತ್ತೆ ಮೇಲೆತ್ತಲು ಪ್ರಯತ್ನಿಸುತ್ತದೆ. ಇಂದು ಏನೇ ಸಂಭವಿಸಿದರೂ, ಎಷ್ಟೇ ಕೆಟ್ಟದಾಗಿ ಕಂಡರೂ, ಜೀವನ ಸದಾ ಮುಂದುವರಿಯುತ್ತದೆ. ನಾಳೆಗಳು ಉತ್ತಮವಾಗಿರುತ್ತವೆ ಎಂದು ನಾವು ತಿಳಿಯಬೇಕು. ನಿಮಗೆ ನೋವುಂಟು ಮಾಡಿದವರನ್ನು ಮರೆತು, ಹೊಸ ಜೀವನ ಮತ್ತು ಹೊಸ ವ್ಯಕ್ತಿಯ ಆಯ್ಕೆಗೆ ನೀವೇ ಸ್ಫೂರ್ತಿಯಾಗಬೇಕು. ಏರಿಳಿತಗಳು ಬದುಕಿನ ಪಯಣದ ಅವಿಭಾಜ್ಯ ಅಂಗ. ನೀವು ಸಂಕಷ್ಟದಲ್ಲಿ ಸಿಲುಕಿದಾಗ, ನಿಮ್ಮ ಸುತ್ತಲೂ ನಿಮ್ಮವರ ಬೆಂಬಲ ಇದೆ ಎಂದು ಖಚಿತಪಡಿಸಿಕೊಳ್ಳಿ.
ಒಟ್ಟಾರೆಯಾಗಿ ನಾವು ಎಲ್ಲವನ್ನೂ ಜಯಿಸಲು ಸಾಧ್ಯವಿಲ್ಲ ಆದರೆ, ಕಷ್ಟಗಳನ್ನು ದೃಢ ಮನಸ್ಸಿನಿಂದ ಎದುರಿಸಲು ನಾವು ಸಿದ್ಧರಾಗಬೇಕು. ಇಂದು ಏನೇ ಸಂಭವಿಸಿದರೂ, ನಾಳೆಯ ಬದುಕು ಉತ್ತಮವಾಗಿರುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ.
ಪಟೇಲ್. ಎಸ್