ದತ್ತು
(ಪೋಷಕರಾಗಲು ಇಲ್ಲಿದೆ ಅವಕಾಶ)
‘ಮಕ್ಕಳಿರಲವ್ವ ಮನೆತುಂಬ’ ‘ಮಕ್ಕಳು ದೇವರಿಗೆ ಸಮಾನ’ ಎಂಬ ನಾಣ್ಣುಡಿಗಳನ್ನು ನಾವೆಲ್ಲರು ಕೇಳಿದ್ದೇವೆ. ಮಕ್ಕಳು ಎಂದರೆ ಸಾಕು ಎಲ್ಲರ ಮನಸ್ಸು ಪುಳಕಗೊಳ್ಳುತ್ತದೆ ಮತ್ತು ಮಕ್ಕಳನ್ನು ನೋಡಿದ ತಕ್ಷಣ ಮನಸ್ಸಿನ ಬೇಸರ ನಿರಾಸೆ ಕೋಪ ಎಲ್ಲವು ದೂರವಾಗಿ ನಮ್ಮಲ್ಲಿ ಶಾಂತಿ ನೆಮ್ಮದಿ ಹಾಗು ಅಗಾದ ಶಕ್ತಿ ನಮ್ಮನ್ನು ಆವರಿಸುತ್ತದೆ ಅದಕ್ಕೆ ಹೇಳುವುದು ಮಕ್ಕಳೆಂದರೆ ಪ್ರೀತಿ, ಮಕ್ಕಳೆಂದರೆ ಭರವಸೆ, ಮಕ್ಕಳೆಂದರೆ ಚೈತನ್ಯದ ಚಿಲುಮೆ, ಮಕ್ಕಳೆಂದರೆ ಚಲುವು, ಮಕ್ಕಳೆಂದರೆ ಒಲವು ಮತ್ತು ಮಕ್ಕಳೆಂದರೆ ಅವರು ನಮ್ಮ ಭವಿಷ್ಯ.
ಹೌದು ಮಕ್ಕಳು ನಮ್ಮ ಹರುಷದ ಮೂಲ ಬದಲಾದ ದಿನಗಳಲ್ಲಿ ಬಹಳಷ್ಟು ಮಂದಿ ಪೋಷಕರು ಮಕ್ಕಳಾಗದೆ ಪರಿತಪಿಸುತಿದ್ದರೆ ಮತ್ತೊಂದು ಕಡೆ ತಮ್ಮ ಜೈವಿಕ ಪೋಷಕರಿಂದ ಶಾಶ್ವತವಾಗಿ ದೂರವಾದಂತಹ ಹಾಗು ಪೋಷಕರಿಂದ ತ್ಯೆಜಿಸಲ್ಪಟ್ಟ ಸಾವಿರಾರು ಮಕ್ಕಳನ್ನು ನಾವು ಇಂದು ಗಮನಿಸುತ್ತಿರುವುದು ಶೋಚನೀಯ ಸಂಗತಿಯೇ ಸರಿ. ಹೀಗೆ ಸಮಾಜದಲ್ಲಿ ಉಂಟಾಗಿರುವ ಅಸಮತೋಲನಗಳನ್ನು ಗಮನಿಸಿದಾಗ ಸಾವಿರಾರು ಮಕ್ಕಳು ತಮ್ಮ ಕೌಟುಂಬಿಕ ಹಕ್ಕನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ ಹೀಗೆ ಸಾವಿರಾರು ಮಕ್ಕಳು ಉತ್ತಮ ಕೌಟುಂಬಿಕ ವ್ಯವಸ್ಠೆ ದೊರೆಯದೆ ಅವರ ಹಕ್ಕುಗಳ ಉಲ್ಲಂಘನೆ ಒಂದು ಕಡೆಯಾದರೆ ಮತೊಂದು ಕಡೆ ಭಾವನಾತ್ಮಕ ಮತ್ತು ವರ್ತನಾತ್ಮಕ ಸಮಸ್ಯೆಯನ್ನು ಹೆದರಿಸುವಂತಾವಾಗಿದ್ದು ಸಮಾಜದಲ್ಲಿ ಉಂಟಾಗಿರುವ ಈ ರೀತಿಯ ಅಸಮತೋಲನವನ್ನು ಸರಿಪಡಿಸುವುದು ನಮ್ಮೆಲ್ಲರ ಕರ್ತವ್ಯ ಅದಕ್ಕೆ ಸೂಕ್ತ ಪರಿಹಾರವೆಂದರೆ ದತ್ತು.
ದತ್ತು ಎಂದರೇನು?
ದತ್ತು ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಉತ್ತರ ಮಕ್ಕಳಿಲ್ಲದವರು ಅಥವಾ ದೈಹಿಕವಾಗಿ ಮಕ್ಕಳನ್ನು ಪಡೆಯಲು ಸಾಮರ್ಥ್ಯವಿಲ್ಲದವರು ಮಕ್ಕಳನ್ನು ಪಡೆಯುವ ಒಂದು ಪ್ರಕ್ರಿಯೆ ಎಂಬ ಪರಿಕಲ್ಪನೆಯನ್ನು ನಾವು ಹೊಂದಿದ್ದು ಅದನ್ನು ಮೀರಿ ಅರ್ಥಯಿಸಿಕೊಳ್ಳುವುದು ಅತ್ಯಗತ್ಯ. ಮೂಲತ: ದತ್ತು ಎಂದರೆ ಯಾವ ಮಕ್ಕಳು ತಮ್ಮ ಜೈವಿಕ ಪೋಷಕರಿಂದ ಶಾಶ್ವತಗಾಗಿ ಬೇರ್ಪಟ್ಟಿರುವರೋ, ಯಾವ ಮಕ್ಕಳಿಗೆ ಕುಟುಂಬದ ವ್ಯವಸ್ಥೆ ಇರುವುದಿಲ್ಲವೋ, ಯಾವ ಮಗುವು ತನ್ನ ಜೈವಿಕ ಪೋಷಕರಿಂದ ಪರಿತ್ಯಜಿಸಲ್ಪಟ್ಟಿರುವುದೋ ಅಂತಹ ಮಕ್ಕಳನ್ನು ಸೂಕ್ತ ರೀತಿಯ ಅವರ ಕೌಟುಂಬಿಕ ಹಕ್ಕನ್ನು ಅನುಭವಿಸುವಂತೆ ವಾತಾವರಣವನ್ನು ಕಲ್ಪಿಸಲು ಶಕ್ತರಿರುವ ಸೂಕ್ತ ಪೋಷಕರನ್ನು ಗುರುತಿಸಿ ಅವರಿಗೆ ಕಾನೂನು ಮತ್ತು ನಿಯಮಾನುಸಾರ ಕೊಡುವ ಪ್ರಕ್ರಿಯೆಯನ್ನು ದತ್ತು ಎಂದು ಕರೆಯಲಾಗಿದೆ.
ಮೂಲತ: ದತ್ತು ಎಂಬ ಪರಿಕಲ್ಪನೆಯು ವಿಶ್ವ ಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ನಮೂದಿಸಿರುವಂತೆ 54 ಮಕ್ಕಳ ಹಕ್ಕುಗಳಿದ್ದು ಅವುಗಳನ್ನು ಒಪ್ಪಿಕೊಂಡು ಅವುಗಳನ್ನು ಪಾಲಿಸಲು ನಿರ್ಧರಿಸಿದ ಭಾರತ ಸರ್ಕಾರವು 1972 ಡಿಸಂಬರ್ 11 ವಿಶ್ವಸಂಸ್ಥೆಯ ಒಡಂಬಡಿಕೆಗೆ ಸಹಿ ಹಾಕಲಾಯಿತು. ಅದರ ಅನ್ವಯ ಕಲಂ 20 ರ ಅನ್ವಯ ಕುಟುಂಬ ವಂಚಿತ ಮಕ್ಕಳಿಗೆ ಕುಟುಂಬ ಒದಗಿಸುವ ಪರ್ಯಾಯ ವ್ಯವಸ್ಥೆಯನ್ನು ಕಲ್ಲಿಸುವ ದೃಷ್ಟಿಯಿಂದ ಹುಟ್ಟಿಕೊಂಡ ಪರಿಹಾರವೇ ದತ್ತು. ಮಕ್ಕಳ ನ್ಯಾಯ, ಮಕ್ಕಳ ಪೋಷಣೆ ಮತ್ತು ರಕ್ಷಣಾ ಕಾಯ್ದೆ 2015 ಕಲಂ 2(2) ರ ಅನ್ವಯ ಶಾಶ್ವತವಾಗಿ ಜೈವಿಕ ಪೋಷಕರಿಂದ ಬೇರ್ಪಟ್ಟ ಮಕ್ಕಳಿಗೆ ನಿಯಮಾನುಸಾರ ಉತ್ತಮ ಪೋಷಕರನ್ನು ಹುಡುಕಿ ನೀಡುವ ಪ್ರಕ್ರಿಯೇ ದತ್ತು.
ಹೀಗೆ ಮಕ್ಕಳ ಕೌಟುಂಬಿಕ ಹಕ್ಕನ್ನು ನೀಡುವ ದೃಷ್ಟಿಯಿಂದ ದತ್ತು ಆಗಿದ್ದರೂ ಜನರಲ್ಲಿ ಅದರ ಬಗ್ಗೆ ಅನೇಕ ರೀತಿಯ ಗೊಂದಲಗಳು ಪ್ರಶ್ನೆಗಳು ಇರುವುದು ಅಕ್ಷರಶ: ಸತ್ಯ ಇದನ್ನು ಅರಿತ ಘನ ಸರ್ಕಾರವು ಜನರಿಗೆ ದತ್ತು ಪ್ರಕ್ರಿಯೆದಲ್ಲಿ ಇರುವ ಅನೇಕ ಗೊಂದಲ ಮತ್ತು ಅನುಮಾನಗಳನ್ನು ನಿಯಂತ್ರಿಸಲು ಸರ್ಕಾರವು ಮಕ್ಕಳ ರಕ್ಷಣಾ ನಿರ್ದೇಶನಾಲಯವು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹ ಯೋಗದೊಂದಿಗೆ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯು ಪ್ರತಿ ವರ್ಷ ನವಂಬರ್ ತಿಂಗಳಲ್ಲಿ ದತ್ತು ಮಾಸಾಚರಣೆಯ ಮುಖಾಂತರ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿತಪ್ತ ಮಕ್ಕಳಿಗೆ ಕೌಟುಂಬಿಕ ಹಕ್ಕನ್ನು ಒದಗಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ.

ಸದರಿ ದತ್ತು ಮಾಸಾಚರಣೆಯಲ್ಲಿ ಪ್ರತೀ ವರ್ಷವೂ ಒಂದು ಉದ್ದೇಶವನ್ನಿಟು ಕೊಂಡು ಜಾಗೃತಿ ಮೂಡಿಸುತ್ತಾ ಬಂದಿದ್ದು ಪ್ರಸ್ತುತ ವರ್ಷದಲ್ಲಿ. ವಿಶೇಷ ಚೇತನ Special Need Children’s ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತಿರುವುದು ಸ್ವಾಗತಾರ್ಹ. ಹೌದು ಈ ಬಾರಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ವಿಶೇಷ ಚೇತನ ಮಕ್ಕಳನ್ನು ದತ್ತು ನೀಡಲು ಅದ್ಯತೆ ನೀಡಿದ್ದು ಬದಲಾದ ಸಂದರ್ಭದಲ್ಲಿ ವಿಶೇಷ ಚೇತನ ಮಕ್ಕಳ ಸಂಖ್ಯೆ ಹೆಚ್ಚುತಿದ್ದು ಅಂತಹ ಮಕ್ಕಳಿಗೆ ಕೌಟುಂಬಿಕ ಹಕ್ಕನ್ನು ಒದಗಿಸುವು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಗತ್ಯತೆ ಹೆಚ್ಚಿದೆ. ವಿಶೇಷ ಚೇತನರಿಗೆ ಪ್ರೀತಿ ವಾತ್ಸಲ್ಯ ಹಾಗು ಕೌಟುಂಬಿಕ ಹಕ್ಕನ್ನು ನೀಡುವುದು ಮಾನವರಾದ ನಮೆಲ್ಲರ ಕರ್ತವ್ಯವಾಗಿದೆ.
ಹೀಗೆ ಮಕ್ಕಳನ್ನು ದತ್ತು ಪಡೆಯಲು ಕಾನೂನಾತ್ಮಕವಾಗಿ ಅವಕಾಶಗಳಿದ್ದು ಮಕ್ಕಳ ನ್ಯಾಯ ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ 2015 ತಿದ್ದುಪಡಿ 2021 ರ ಅಡಿಯಲ್ಲಿ ಮತ್ತು ಕಾರ ಎಂಬ ಸಂಸ್ಥೆಯು 2022 ರಲ್ಲಿ ದತ್ತು ಮಾರ್ಗಸೂಚಿಯನ್ನು ರೂಪಿಸಿದ್ದು ಅದರ ಅಡಿಯಲ್ಲಿ ಮಗುವನ್ನು ದತ್ತು ಪಡೆಯಬಹುದಾಗಿದೆ.
ಈ ಮೇಲಿನ ಅಂಶವನ್ನು ಗಮನಿಸಿದಾಗ ಯಾರು ದತ್ತು ಪಡೆಯಲು ಅರ್ಹ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ ಮಕ್ಕಳಿಗೆ ಕುಟುಂಬ ವ್ಯವಸ್ಥೆಯನ್ನು ಕಲ್ಪಿಸಲು ಶಕ್ತರಿರುವ ಯಾವ ಪೋಷಕರು ಬೇಕಾದರು ದತ್ತು ಪಡೆಯಬಹುದಾಗಿದೆ. ಯಾವುದೇ ಮಕ್ಕಳನ್ನು ದತ್ತು ಪಡೆಯಲು ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿರುತ್ತದೆ ಅದರಲ್ಲೂ ಪೋಷಕರ ವಯಸ್ಸನ್ನು ಆಧಾರವಾಗಿಟ್ಟುಕೊಂಡು ದತ್ತು ನೀಡಲಾಗುತ್ತದೆ. ಪೋಷಕರು 2 ವರ್ಷದೊಳಗಿನ ಮಕ್ಕಳನ್ನು ದತ್ತು ಪಡೆಯಲು ಇಚ್ಚಿಸಿದ್ದಲ್ಲಿ ಇಬ್ಬರ ಪೋಷಕರ ವಯಸ್ಸನ್ನು ಕೂಡಿಸಿದಾಗ 85 ವರ್ಷವಾಗಿರಬೇಕು, 2 ವರ್ಷದಿಂದ 4 ವರ್ಷದ ಮಗುವನ್ನು ದತ್ತು ಪಡೆಯಲು ಇಚ್ಚಿಸಿದ್ದಲ್ಲಿ ಇಬ್ಬರೂ ಪೋಷಕರ ವಯಸ್ಸು 99 ಆಗಿರಬೇಕು, 04 ರಿಂದ 08 ವರ್ಷದ ಮಗುವನ್ನು ದತ್ತು ಪಡೆಯಲು ಇಚ್ಚಿಸಿದ್ದಲ್ಲಿ ಇಬ್ಬರೂ ಪೋಷಕರ ವಯಸ್ಸು 100 ಆಗಿರಬೇಕು ಮತ್ತು 8 ರಿಂದ 18 ವರ್ಷದ ವಯಸ್ಸಿನ ಮಗುವನ್ನು ದತ್ತು ಪಡೆಯಲು ಇಬ್ಬರೂ ಪೋಷಕರ ವಯಸ್ಸು 100 ಆಗಿರಬೇಕು.
ಒಂದು ವೇಳೆ ಏಕ ಪೋಷಕರು ದತ್ತು ಪಡೆಯಲು ಇಚ್ಚಿಸಿದಲ್ಲಿ ಒಬ್ಬ ಪುರುಷ ಹೆಣ್ಣು ಮಗುವನ್ನು ದತ್ತು ಪಡೆಯಲು ಅವಕಾಶವಿರುವುದಿಲ್ಲ ಅದರೆ ಒಬ್ಬ ಮಹಿಳೆ ಇಚ್ಚಿಸಿದಲ್ಲಿ ಗಂಡು ಅಥವ ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಬಹುದು. ಏಕ ಪೋಷಕರು ದತ್ತುವಿಗೆ ವಯಸ್ಸನ್ನು ನಿರ್ದರಿಸಿದ್ದು 02 ವರ್ಷದೊಳಗಿನ ಮಕ್ಕಳನ್ನು ದತ್ತು ಪಡೆಯಲು ಇಚ್ಚಿಸಿದ್ದಲ್ಲಿ 40 ವರ್ಷವಾಗಿರಬೇಕು, 02 ವರ್ಷದಿಂದ 04 ವರ್ಷದ ಮಗುವನ್ನು ದತ್ತು ಪಡೆಯಲು ಇಚ್ಚಿಸಿದ್ದಲ್ಲಿ 45 ವರ್ಷವಾಗಿರಬೇಕು, 4 ರಿಂದ 5 ವರ್ಷದ ಮಗುವನ್ನು ದತ್ತು ಪಡೆಯಲು ಇಚ್ಚಿಸಿದ್ದಲ್ಲಿ 50 ವರ್ಷವಾಗಿರಬೇಕು, 4 ರಿಂದ 15 ವರ್ಷದ ವಯಸ್ಸಿನ ಮಗುವನ್ನು ದತ್ತು ಪಡೆಯಲು 55 ವರ್ಷವಾಗಿರಬೇಕು.
ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಬಗೆ ಹೇಗೆ?
ಮಕ್ಕಳನ್ನು ಕಾನೂನಾತ್ಮಕವಾಗಿ ದತ್ತು ತೆಗೆದುಕೊಳ್ಳಲು ಎಲ್ಲಾ ವ್ಯಕ್ತಿಗಳಿಗೂ ಸೂಕ್ತ ಅವಕಾಶವಿದ್ದು ಮಾರ್ಗಸೂಚಿಗಳ ಅನ್ವಯ ನಿಯಮಾವಳಿಗಳಿದ್ದು ಅರ್ಹ ವ್ಯಕ್ತಿ ದತ್ತು ಪಡೆಯಬಹುದಾಗಿದೆ.
ನಮ್ಮ ಪ್ರತೀ ರಾಜ್ಯದಲ್ಲಿ ತಮ್ಮ ಜಿಲ್ಲೆಗಳಲ್ಲಿಯೇ ದತ್ತು ತೆಗೆದುಕೊಳ್ಳಲು ಸರ್ಕಾರವು ಸಂಸ್ಥೆಗಳನ್ನು ನೇಮಿಸಿದ್ದು ಪ್ರತಿ ರಾಜ್ಯದಲ್ಲಿ ಸಾರ SARA (State Adoption Resource Agency)” ಎಂಬ ಸಂಸ್ಥೆಗಳಿರುತ್ತವೆ. ಸಂಸ್ಥೆಗಳು ಪ್ರತಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತವೆ ಸಾರ ಎಂದರೆ ವಿಷೇಷ ದತ್ತು ಕೇಂದ್ರಗಳಾಗಿರುತ್ತವೆ. ನಿಮ್ಮ ಜಿಲ್ಲೆಯಲ್ಲಿ ದತ್ತು ತೆಗೆದುಕೊಳ್ಳಲು ಇಚ್ಚಿಸಿದ ವ್ಯಕ್ತಿ ಹೆಚ್ಚಿನ ಮಾಹಿತಿ ಅಗತ್ಯವಿದ್ದಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಹಾಗು ಸಾರ ಗಳನ್ನು ಸಂಪರ್ಕಿಸಬಹುದಾಗಿದೆ.
ಮಗುವನ್ನು ನೇರವಾಗಿ ದತ್ತು ತೆಗೆದುಕೊಳ್ಳಲು ಇಚ್ಚಿಸಿದಲ್ಲಿ ಕಾರ CARA (central adoption resource Center) web site:cara.wcd.gov.in ಮೂಲಕ ಮಗುವನ್ನು ದತ್ತು ಪಡೆಯಲು ಇಚ್ಚಿಸಿದ ವ್ಯಕ್ತಿ ಈ ವೆಬ್ ಸೈಟ್ ಗಳ ಮುಖಾಂತರ ತೆಗೆದುಕೊಳ್ಳಬಹುದಾಗಿದ್ದು ಅದಕ್ಕೆ ಬೇಕಾದಂತಹ ಸೂಕ್ತ ದಾಖಲೆ ಈ ಕೆಳಕಂಡಂತಿವೆ.
- ದತ್ತು ಪಡೆಯಲು ಇಚ್ಚಿಸುವ ವ್ಯಕ್ತಿಯ ವಾಸಸ್ಥಳ ದೃಡೀಕರಣ ಪತ್ರ
- ಅದಾಯ ದೃಡೀಕರಣ ಪತ್ರಅಥವ ಐಟಿ ರಿಟರ್ನ್ಸ್ ದೃಡೀಕರಣ ಪತ್ರ
- ವಿವಾಹ ನೋದಣಿ ಪ್ರಮಾಣ ಪತ್ರ
- ಅದಾರ್ಕಾರ್ಡ್
- ಕುಟುಂಬದ ಪೋಟೋ
- ಜನನ ಪ್ರಮಾಣ ಪತ್ರ
- ಪ್ಯಾನ್ಕಾರ್ಡ್
- ವ್ಯಕ್ತಿಗೆ ಸಂಬದಿಸಿದ ಮೂಲ ದಾಖಲೆಗಳು
- ವೈದ್ಯಕೀಯ ಪ್ರಮಾಣ ಪತ್ರ
ಈ ಮೇಲ್ಕಂಡ ದಾಖಲೆಗಳನ್ನು ಅಪ್ ಲೋಡ್ ಮಾಡಿದ ನಂತರ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ನಿಮ್ಮ ಜಿಲ್ಲೆಯ ಸಾರ ಗಳನ್ನು ಸಂಪರ್ಕಿಸಬಹುದಾಗಿದೆ.
ನಿಮ್ಮ ಮೂಲ ದಾಖಲೆಗಳನ್ನು ವೆಬ್ಸೈಟ್ನಲ್ಲಿ ಅಪ್ ಲೋಡ್ ಮಾಡಿದ ನಂತರ ಸಂಬದಪಟ್ಟ ದತ್ತು ಕೇಂದ್ರದ ವ್ಯಕ್ತಿಗಳು ನಿಮ್ಮ ಮನೆಗೆ ಬೇಟಿ ನೀಡಿ ವಸ್ತು ಸ್ಥಿತಿಯನ್ನು ಗಮನಿಸಿ ಗೃಹ ಅಧ್ಯಯನ ವರದಿ HSR (home study report) ತಯಾರಿಸುತ್ತಾರೆ.
ಈ ವರದಿಯ ಪ್ರಕಾರ ನೀವು ಮಗುವನ್ನು ದತ್ತು ತೆಗೆದುಕೊಳ್ಳಲು ಅರ್ಹ ವ್ಯಕ್ತಿ ಎಂದು ವರದಿ ಮಾಡಿದ ನಂತರ ನೀವು 6000 ರೂ ಗಳನ್ನು ದತ್ತು ಶುಲ್ಕ ವನ್ನು ನೀಡಬೇಕಾಗುತ್ತದೆ ನಂತರದಲ್ಲಿ ಆಡಾಪ್ ಷನ್ ಏಜೆನ್ಸಿಯ ಮುಖಾಂತರ ಕಾರ ಸಂಸ್ಥೆಗೆ 50000 ರೂ ಶುಲ್ಕವನ್ನು ನೀಡಬೇಕಾಗುತ್ತದೆ. ನಂತರದಲ್ಲಿ ನಿಮ್ಮ ಸಂಪೂರ್ಣ ದಾಖಲೆಗಳು ವೆಬ್ ಸೈಟ್ ನಲ್ಲಿ ದಾಖಲಿಸಿದ ನಂತರ ನಿಮಗೆ ಅಗತ್ಯವಿರುವ ಮಕ್ಕಳನ್ನು ನಿಮ್ಮ ವೈಯಕ್ತಿಕ ಸಾಮರ್ಥ್ಯ ಮತ್ತು ದಾಖಲೆಗಳನ್ನು ಆದಾರವನ್ನಾಗಿಸಿ ಮಗುವನ್ನು ಆಯ್ಕೆ ಮಾಡಬಹುದಾಗಿದೆ ಸಂಪೂರ್ಣವಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಟ 2 ರಿಂದ 4 ವರ್ಷಗಳು ಕಾಯುವ ಅನಿವಾರ್ಯವಾಗಿರುತ್ತದೆ.
ಹೀಗೆ ದತ್ತು ಒಂದು ಕ್ಲಿಷ್ಟ ಪ್ರಕ್ರಿಯೆ ಎನಿಸಿದರೂ ಸಹ ಒಂದು ಮಗುವನ್ನು ಶಾಶ್ವತವಾಗಿ ಒಂದು ಉತ್ತಮ ಕುಟುಂಬಕ್ಕೆ ಸೇರಿಸಲು ಈ ಪ್ರಕ್ರಿಯೆ ಅನಿವಾರ್ಯವಾಗಿದೆ. ಮೇಲೆ ತಿಳಿಸಿದ ಈ ಪ್ರಕ್ರಿಯೆಯಲ್ಲಿ ಒಳಪಡದೆ ಅನ್ಯ ಮಾರ್ಗದಲ್ಲಿ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದಲ್ಲಿ ಅದು ಶಿಕ್ಷಾರ್ಹ ಅಪರಾದ ವಾಗಿದ್ದು ಅಂತಹ ವ್ಯಕ್ತಿಗಳ ವಿರುದ್ದ ದೂರು ದಾಖಲಾದಲ್ಲಿ JJ Act sec 80 ರ ಅಡಿಯಲ್ಲಿ ವ್ಯಕ್ತಿಗೆ ಕನಿಷ್ಟ 4 ರಿಂದ 7 ವರ್ಷಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಈ ಮೇಲ್ಕಂಡ ಅಂಶವನ್ನು ಗಮನಿಸಿದಾಗ ಕಾನೂನು ಮುಖಾಂತರ ದತ್ತು ಸ್ವಾಗತಾರ್ಹವಾಗಿದ್ದು ತಪ್ಪಿದ್ದಲ್ಲಿ ಶಿಕ್ಷಾರ್ಹವಾಗಿದೆ. ದತ್ತು ನಾವು ನಮ್ಮ ಜೀವನದಲ್ಲಿ ಮಾಡುವ ಒಂದು ಉನ್ನತ ಕಾರ್ಯವಾಗಿದ್ದು ಜೈವಿಕ ಪೋಷಕರಿಂದ ಬೇರ್ಪಟ್ಟ ಮಗುವಿಗೆ ಕೌಟುಂಬಿಕ ಹಕ್ಕನ್ನು ನೀಡಲು ಸಾಧ್ಯವಾದರೆ ಅದರಲ್ಲಿಯೂ ಬಹಳ ಮುಖ್ಯವಾಗಿ ವಿಶೇಷ ಚೇತನರಿಗೆ ಪ್ರೀತಿ ವಾತ್ಸಲ್ಯ ನೀಡಲು ಸಾಧ್ಯವಾದರೆ ಅವರಿಗೆ ಉತ್ತಮ ಕೌಟುಂಬಿಕ ಹಕ್ಕನ್ನು ನೀಡಿದರೆ ಅದು ನೀವು ನಿಮ್ಮ ಜೀವನದಲ್ಲಿ ಮಾಡುವ ಶ್ರೇಷ್ಟ ಕಾರ್ಯವಾಗುತ್ತದೆ.
ಡಾ. ಟವಿಕುಮಾರ್.ಎಸ್ ಪಿ
ಅಂಕಣಕಾರರು. ಮನಶಾಸ್ತ್ರಜ್ಞರು
ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು,
ಕೆಂಗೇರಿ, ಬೆಂಗಳೂರು ದಕ್ಷಿಣ ಜಿಲ್ಲೆ.