ಕಣ್ಣ ಮುಂದಿನ ಕಂಟಕ ವಾಯುಮಾಲಿನ್ಯ
ಭೂಮಿ, ನೀರು, ಗಾಳಿ, ಆಕಾಶ, ಬೆಂಕಿ ಈ ಪಂಚಭೂತಗಳು ಮಲಿನಗೊಂಡರೆ ಇಲ್ಲಿನ ಪ್ರತಿಯೊಂದು ಜೀವಿಯೂ ವಿನಾಶದ ಅಂಚು ತಲುಪುತ್ತವೆ. ಇವೆಲ್ಲವುಗಳ ಮಲಿನವು ನೇರವಾಗಿ ವಾಯುವಿನ ಮೂಲಕ ವೇಗವಾಗಿ ಪರಿಣಾಮ ಬೀರುತ್ತದೆ. ವಿಶ್ವದಲ್ಲಿಯೇ ಚಾಡ್ ಎಂಬ ದೇಶವು ವಾಯು ಮಾಲಿನ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತವು ಐದನೇ ಸ್ಥಾನದಲ್ಲಿದೆ ಎಂಬ ಎಚ್ಚರ ಪ್ರತಿಯೊಬ್ಬರಿಗೂ ತಿಳಿಯಬೇಕಿದೆ. ನಮ್ಮಜೊತೆಯಿರುವ ಬಾಂಗ್ಲಾದೇಶವುಎರಡನೇ ಸ್ಥಾನದಲ್ಲಿದೆ.
ಭಾರತದಲ್ಲಿ ಅಸ್ಸಾಂ ಮೊದಲ ಸ್ಥಾನವಾದರೆ, ದೆಹಲಿ ಮೊದಲ ಸ್ಥಾನ ರಾಜಧಾನಿ. ಆದರೆ, ದೆಹಲಿಯ ವಾಯುಮಾಲಿನ್ಯವುಇಂದುಜಗತ್ತಿನ ಪ್ರಮುಖ ಸುದ್ಧಿಯಾಗಿದೆ. ಇದು ಭಾರತಕ್ಕೆ ಬೃಹತ್ ಸಮಸ್ಯೆಯ ಸೂಚನೆಯಾಗಿದೆ. ದೆಹಲಿಯ ಜನರೆಲ್ಲಾ ಬೆಂಗಳೂರಿನಂತಹ ಸ್ಥಳಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಇಂತಹ ಮಾಲಿನ್ಯವು ಮನುಷ್ಯನ ಬದುಕನ್ನೇ ನಿತ್ಯ ಪ್ರಶ್ನಿಸುತ್ತಿದೆ. ಶ್ರೀಮಂತರು ಉಳಿಯಲು ಇರುವಂತಿಕೆ ಬಳಸುತ್ತಾರೆ. ಬಡವರು ಶೋಷಣೆಯಲ್ಲೇ ಸಾಯುತ್ತಾರೆ. ಆದರೆ, ಮಧ್ಯಮ ವರ್ಗದವರು ಯಾವ ಸ್ಥಿತಿಯನ್ನು ತಲುಪದ ತ್ರಿಶಂಕುಸ್ಥಿತಿಯಲ್ಲಿ ನರಕ ಅನುಭವಿಸುತ್ತಾರೆ. ಸಾವು ಯಾರನ್ನೂ ಕಾಯುವುದಿಲ್ಲ, ಯಾವ ಆಮಿಷಕ್ಕೂ ನಿಲ್ಲುವುದಿಲ್ಲ. ಕೊರೋನಾದಂತಹ ಒಂದು ವೈರಸ್ನಿಂದ ಹತ್ತಿರದ ಅದೆಷ್ಟೋ ಬಂಧುಗಳನ್ನು ಕಳೆದುಕೊಂಡು, ಇನ್ನೂ ಮಾಸ್ಕ್ ತೆಗೆಯದೆ ಬದುಕುತ್ತಿರುವ ಹಲವು ಚಿತ್ರಗಳು ನಮ್ಮಕಣ್ಣ ಮುಂದಿವೆ.
ವಾಯು ಮಾಲಿನ್ಯದಲ್ಲಿ ಕರ್ನಾಟಕವು ಅಷ್ಟೇನೂ ಹಾಳಾಗಿಲ್ಲ. ಈ ಕಾರಣದಿಂದಲೇ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಇವರಿಂದ ನಿರ್ಮಾಣವಾದ ಬಳಸಿ-ಬಿಸಾಡುವ ಕೆಟ್ಟ ಸಂಸ್ಕೃತಿಯು ನಮ್ಮ ಪರಿಸರದ ವಿನಾಶಕ್ಕೆ ಮೊದಲ ಕಾರಣವಾಗಿದೆ. ಇವರನ್ನು, ಇವರ ಕಾರ್ಯವನ್ನು ನಮ್ಮ ಸರ್ಕಾರ, ಅಧಿಕಾರಗಳು ನಿಯಂತ್ರಿಸಲು ಸಾಧ್ಯವಿಲ್ಲ. ಇವರನ್ನು ನೋಡಿ ಕಲಿಯುತ್ತಿರುವ ನಮ್ಮ ಸ್ಥಳಿಯರೇ ನಿಯಂತ್ರಿಸಬೇಕಿದೆ. ಪ್ರತಿ ಮಣ್ಣಿನ ಕಣ್ಣುಗಳು ಸರಿಯಾಗಿ ತೆರೆದರೆ, ಸ್ಥಳೀಯತೆಯೆಂಬುದು ಉಳಿಯುತ್ತದೆ.

ನಮ್ಮ ಹಿರಿಯವರು ಉಳಿಸಿದ ಈ ಭೂಮಿಯಿಂದ ನಾವು ಇಂದು ಬದುಕಿದ್ದೇವೆ. ಅಲ್ಲಲ್ಲೇಇನ್ನೂ ಸ್ವಲ್ಪ ಕಾಡುಇದೆ. ನದಿ, ಬೆಟ್ಟಗಳಿವೆ. ಹಣದಾಸೆಗೆ ಬಿದ್ದು, ಭೂಮಿಯನ್ನು ಮಾರುವ ಹೀನ ಹಂತಕ್ಕೆ ಹೊರಟರೆ, ಮುಂದಿನ ನಮ್ಮ ಮಕ್ಕಳಿಗೆ ಉಳಿಯುವುದಾದರೂ ಏನು! ಕಾಡನ್ನು ಕಡಿದು ಕಾಂಕ್ರಿಟ್ಕಾಡು ನಿರ್ಮಿಸುವ ನಮ್ಮ ಗುಣದಿಂದಲೇ ಪರಿಸರ ಚಕ್ರದ ವ್ಯತ್ಯಾಸ ಉಂಟಾಗುತ್ತಿದೆ. ನಾವು ಸೃಷ್ಟಿಸುವ ಪ್ರತಿಯೊಂದು ಮಲಿನವನ್ನು ಈ ಪರಿಸರವೇ ಕಾಲಕಾಲಕ್ಕೆ ಶುದ್ಧಮಾಡಿಕೊಳ್ಳುವ ನಿರಂತರ ಚಕ್ರವೊಂದಿದೆ. ಅದಕ್ಕೆ ಸಿದ್ಧಮಾದರಿಯ ಬದುಕಿಗಾಗಿ ತಡೆಗೋಡೆಗಳನ್ನು ನಿಲ್ಲಿಸಬಾರದು. ಚಕ್ರದ ವ್ಯತ್ಯಾಸದಿಂದ ಮಳೆ, ಬೆಳೆ, ಕಾಡ್ಗಿಚ್ಚು, ಚಂಡಮಾರುತ ಎಲ್ಲವೂ ದರ್ಶನವಾಗುತ್ತಿವೆ. ಆದರೆ, ಇವೆಲ್ಲವೂ ನಿಧಾನವಾಗಿ ಪರಿಣಾಮ ಬೀರಬಹುದು. ಬೀಸುವ ಗಾಳಿಗೆ ಮಾತ್ರ ಲಾಕ್ಡೌನ್ ನಂತೆ ಯಾವಾಗ ಬೇಕಾದರೂ, ಮನುಷ್ಯನ ಈ ಎಲ್ಲಾ ಆಟಗಳನ್ನು ಸ್ಥಬ್ಧ ಮಾಡುವ ಶಕ್ತಿ ಇದೆ.
ಕಾರ್ಖಾನೆಗಳ ಹೊಗೆಯು ಮೊದಲ ಕಾರಣವಾದರೆ, ಸಿಗರೇಟು ಸೇವನೆಯಂತಹ ಕೊನೆಯ ಕಾರಣವೂ ವಾಯು ಮಾಲಿನ್ಯಕ್ಕೆ ನಿತ್ಯಕಾರಣವಾಗಿದೆ. ನಡುವೆ ಪಟಾಕಿ, ಪ್ಲಾಸ್ಟಿಕ್ ಸುಡುವುದು, ವಾಹನಗಳ ಹೊಗೆಯಂತ ವಿಷಕಾರಿ ಅನಿಲದ ಪ್ರವೇಶವು ಈ ಪಂಚಭೂತಗಳಲ್ಲಿ ಸೇರಿ, ಇಲ್ಲಿವಾಸಿಸುವ ಜೀವಿಗಳನ್ನು ವಿನಾಶಮಾಡುತ್ತಿದೆ. ಈಗಾಗಲೇ ಸುದ್ಧಿಯಾದ ಕೊಪ್ಪಳ ಜಿಲ್ಲೆಯ ಸಮಸ್ಯೆಯೇಕರ್ನಾಟಕಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಸುಮಾರು ಐವತ್ತು ಸ್ಪಾಂಜ್ ಕಬ್ಬಿಣ ಉಕ್ಕು, ಸಿಮೆಂಟ್, ರಾಸಾಯನಿಕ ಗೊಬ್ಬರ ತಯಾರಿಕೆಯ ಕಾರ್ಖಾನೆಗಳು ಉಂಟುಮಾಡಿರುವ ದುಷ್ಪರಿಣಾಮಗಳು ಹಲವು ರೀತಿಯಲ್ಲಿ ಇದೇ ವರ್ಷ ವರದಿಯಾಗಿದೆ. ಅಲ್ಲಿನ ಸಸ್ಯಗಳ ಮೇಲೆ ಕುಳಿತಿರುವ ಕಪ್ಪು ಹೊಗೆಯು ಜೀವಿಗಳ ದೇಹ ಸ್ಥಿತಿಯನ್ನೂ ಹೇಳುತ್ತಿದೆ. ಇದರಿಂದ ಕೂಲಿ, ಬದುಕಿಗೆ ಆಧಾರ ಏನೆಲ್ಲಾ ಇರಬಹುದು. ಆದರೆ, ವಿನಾಶ ತರುವಯಾವುದೇ ಸುಖವು ಭವಿಷ್ಯಕ್ಕೆ ಆಧಾರವಲ್ಲ. ಇದುಯಾರಿಗೂ ತಿಳಿಯದ ಸುಖದ ವಿನಾಶ. ನಿಧಾನವಾಗಿ ಎಲ್ಲಾ ಜಿಲ್ಲೆಗಳನ್ನು ವ್ಯಾಪಿಸಿರುವ ಕಾರ್ಖಾನೆಗಳು, ರಿಯಲ್ ಎಸ್ಟೇಟ್ ವ್ಯಾಪಾರಗಳು ಕೃಷಿ ಭೂಮಿಯನ್ನೂ, ಅಲ್ಲಿನ ಬದುಕನ್ನು ನಾಶಮಾಡುತ್ತಿವೆ.
ಜನಸಾಮಾನ್ಯರು ಎಚ್ಚರವಹಿಸದಿದ್ದರೆ, ಹಣದ ಆಸೆಗೆ ಬಲಿಯಾದರೆ, ಶುದ್ಧ ಎಂಬ ಪದವೂ ಕೂಡ ಹಣಕೊಟ್ಟು ಪಡೆಯುವ ಹಂತಕ್ಕೆ ಹೋಗುತ್ತೇವೆ. ನಮ್ಮ ವಾಯುಮಾಲಿನ್ಯಕ್ಕೆ ನೇರವಾದ ಕಾರಣವನ್ನು ಹುಡುಕುತ್ತಾ ಸರ್ಕಾರದ ಕಾನೂನುಗಳಿಗೆ ಕಾಯುವ ಬದಲು ಕಾರ್ಮಿಕರಾಗಿ ಹೋಗುವ ನಮ್ಮ ಕಾರ್ಯವನ್ನೇ ನಿಲ್ಲಿಸಬೇಕಿದೆ. ವಲಸಿಗರಿಗೆ ನೀಡುವ ಸೌಲಭ್ಯಕಡಿಮೆ ಮಾಡುತ್ತಾ ಸಾಗಿದರೆ ತಾನಾಗಿಯೇ ಎಲ್ಲವೂ ನಿಲ್ಲುತ್ತವೆ. ರೈತರ ಬಹುದೊಡ್ಡ ಕಾರಣವೆಂದರೆ ಬರಡುಭೂಮಿ, ಮಳೆಯಿಲ್ಲ ಬೆಳೆಯಿಲ್ಲ. ಈ ರೈತರಿಗೆ ಪ್ರತಿ ಭೂಮಿಯಲ್ಲೂ ಕೃಷಿಮಾಡುವ ಬದಲಿ ಉಪಾಯಗಳನ್ನು ತರಬೇತಿಗೊಳಿಸಬೇಕಿದೆ. ಇದಕ್ಕಾಗಿ ಸರ್ಕಾರ, ಸ್ವಯಂ ಸೇವೆಗಳು ತುರ್ತಾಗಿ ಕೆಲಸಮಾಡುವ ಮೂಲಕ ಮಾರುವ ಭೂಮಿಯನ್ನುತಡೆದು, ರೈತರ ಜೀವಗಳನ್ನು ಉಳಿಸಬೇಕಿದೆ. ರೈತರಿಗೆ ಯಾವುದನ್ನೂ ಕಾಣಿಕೆಯಾಗಿ ನೀಡಬೇಡಿ, ಆತ್ಮಸ್ಥೈರ್ಯ ತುಂಬುವ ಸ್ವಾಭಿಮಾನ ಬದುಕಿನ ತರಬೇತಿಗಳನ್ನು ನೀಡಬೇಕಿದೆ. ಓದದವರು ಮಾತ್ರ ಕೃಷಿಮಾಡುವ ಅನಿವಾರ್ಯ ಸ್ಥಿತಿ ಇಲ್ಲವಾಗಿ ಓದಿದವರೂ ಕೃಷಿಯ ಕಡೆ ವಾಲುತ್ತಾ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಆಲೋಚನೆಗಳಿಗೆ ಸಹಕಾರಬೇಕಿದೆ. ದೇಶದ ಮಾಲಿನ್ಯ ನಿಲ್ಲಬೇಕಾದರೆ, ಮನಸ್ಸಿನ ಮಲಿನ ಶುದ್ಧವಾಗಬೇಕಿದೆ. ಸರ್ಕಾರವೆಂದರೆ, ಅಧಿಕಾರಗಳ ಆಡಳಿತವಲ್ಲ, ಶ್ರೀಸಾಮಾನ್ಯರ ಸ್ವಾಭಿಮಾನದ ಬದುಕು. ನಾವು ಸರಿಯಾಗಿ ಆಲೋಚಿದರೆ, ನಮ್ಮ ನಾಡು, ಪರಿಸರ ಎಲ್ಲವೂ ಉಳಿಯುತ್ತವೆ. ನಾವು ಭವಿಷ್ಯಕ್ಕೆ ಉತ್ತಮ ಚರಿತ್ರೆಗಳಾಗಬಹುದು.