ಡಿಕೆ.ಶಿವಕುಮಾರ್ : ದೊಡ್ಡಆಲಹಳ್ಳಿಯಿಂದ ಆಡಳಿತ ಸೌಧದವರೆಗೆ !
ರಾಜ್ಯ ರಾಜಕಾರಣದಲ್ಲಿ ಸದ್ಯ ಅತ್ಯಂತ ಕುತೂಹಲಕಾರಿ ವಿಷಯವೆಂದರೆ “ಸಿಎಂ ಬದಲಾವಣೆ” ಇಂದು ಇಡೀ ರಾಜ್ಯದಲ್ಲಿ ಸಿಎಂ ಬದಲಾವಣೆಯದ್ದೇ ಸುದ್ದಿ. “ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ, ಆಗೋದಿಲ್ಲ, ಸಿದ್ದರಾಮಯ್ಯ ಅಧಿಕಾರ ಹಂಚಿಕೆ ಸೂತ್ರಕ್ಕೆ ಒಪ್ಪುತ್ತಾರ, ಅಕಸ್ಮಾತ್ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ನಂತರದ ರಾಜಕೀಯ ವಿದ್ಯಾಮಾನ ಯಾವ ರೀತಿ ತಿರುವು ಪಡೆದುಕೊಳ್ಳಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲಿಯೂ ಕೂಡ ಜೋರಾಗಿಯೇ ನಡೆಯುತ್ತಿದೆ.

ಹಾಗಾದರೆ ಡಿಕೆ ಸಿಎಂ ಆಗಬೇಕೇ, ಆಗಬಾರದೇ ಎನ್ನುವುದಕ್ಕಿಂತ ಡಿಕೆ ಅವರು ಯಾಕೆ ಸಿಎಂ ಆಗಬೇಕು ಎನ್ನುವುದಕ್ಕೆ ಬಹಳಷ್ಟು ಕಾರಣಗಳಿವೆ. ಅವರಿಗೆ ಸಿಎಂ ಆಗುವ ಎಲ್ಲಾ ಅರ್ಹತೆಗಳು ಇರುವುದನ್ನು ಅಲ್ಲಗಳೆಯಲಾಗದು. ಶಿವಕುಮಾರ್ ಅವರೊಬ್ಬ ಹುಟ್ಟು ಹೋರಾಟಗಾರ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಎಂತಹುದೇ ಸಂಕಷ್ಟದಲ್ಲಿದ್ದರು ನಾಯಕರ ಜೊತೆಗೆ ಬಂಡೆಯಂತೆ ನಿಂತವರು. ಕಾಂಗ್ರೆಸ್ ಪಕ್ಷ ಮತ್ತು ಅದರ ಸಿದ್ಧಾಂತವನ್ನು ರಕ್ತದ ನರನಾಡಿಯಲ್ಲಿ ಪ್ರವಹಿಸಿಕೊಂಡಿರುವ ಡಿಕೆಶಿ ಅವರು ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಇಲ್ಲಿವರೆಗೆ ಬೆಳೆದಿರುವ ಪರಿಯೇ ಅದ್ಭುತ.
ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರು ಈ ಎತ್ತರಕ್ಕೆ ಏರಲು ಪಟ್ಟಿರುವ ಪಡಿಪಾಟಲುಗಳು ಅಷ್ಟಿಷ್ಟಲ್ಲ. ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ತನ್ನ ರಾಜಕೀಯ ಜೀವನ ಆರಂಭಿಸಿದ ಇವರು ಪ್ರಥಮಬಾರಿಗೆ ಸಾತನೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎದುರಿಸಿದ್ದು ಸಾಮಾನ್ಯ ಅಭ್ಯರ್ಥಿಯನ್ನಲ್ಲ ಒಕ್ಕಲಿಗರ ಏಕಮಾದ್ವಿತೀಯ ನಾಯಕ ಜನತಾಪಕ್ಷದ ಪ್ರಮುಖ ನೇತಾರ H D ದೇವೇಗೌಡರನ್ನು. ಆ ಚುನಾವಣೆಯಲ್ಲಿ ಸೋತರೂ ಮುಂದಿನ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಪಾದರ್ಪಣೆ ಮಾಡಿದ ಡಿಕೆಶಿ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಬಂಗಾರಪ್ಪನವರ ಸರ್ಕಾರದಲ್ಲಿ ಬಂಧೀಖಾನೆ ಸಚಿವರಾಗಿ, ಎಸ್.ಎಂ ಕೃಷ್ಣ ಸಂಪುಟದಲ್ಲಿ ಸಹಕಾರ ಮತ್ತು ನಗರಾಭಿವೃದ್ಧಿ ಸಚಿವರಾಗಿ, 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಸಚಿವರಾಗಿ ಕೆಲಸ ಮಾಡಿದ್ದು ಪ್ರಸ್ತುತ ಭಾರಿ ನೀರಾವರಿ ಮತ್ತು ಬೆಂಗಳೂರು ನಗರ ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ದಿನಮಾನದಲ್ಲಿ ಡಿಕೆ ಮುಖ್ಯಮಂತ್ರಿ ಯಾಗಬೇಕೆಂಬ ಕೂಗು ಹೆಚ್ಚಾಗಿದ್ದು ಅವರ ಬೆಂಬಲಿಗರು ಅಧಿಕಾರ ಹಂಚಿಕೆ ಸೂತ್ರದಂತೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನವನ್ನು ಡಿಕೆ ಅವರಿಗೆ ಬಿಟ್ಟುಕೊಡಬೇಕೆಂದು ಅಗ್ರಹಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಜನ ಹಿರಿಯ ನಾಯಕರಿದ್ದಾಗಿಯೂ ಕೂಡ ಡಿಕೆಶಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿರುವುದಕ್ಕೆ ಕಾರಣಗಳು ಇಲ್ಲದಿಲ್ಲ.
ಶಿವಕುಮಾರ್ ಕಾಂಗ್ರೇಸ್ ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಒಪ್ಪಿಸಿದ ಕೆಲಸವನ್ನು ಚಾಚು ತಪ್ಪದೇ ನಿಷ್ಠೆಯಿಂದ ಪಾಲಿಸುವ ಒಬ್ಬ ಸೇನಾನಿ ಎಂದರೆ ತಪ್ಪಾಗಲಿಕ್ಕಿಲ್ಲ ,ಕಾಂಗ್ರೆಸ್ ಪಕ್ಷದ ಸಂಕಷ್ಟದ ಸಮಯದಲ್ಲಿ ಪಕ್ಷದ ಜೊತೆಗೆ ನಿಂತು ಎಲ್ಲಾ ರೀತಿಯ ಬೆಂಬಲವನ್ನು ವ್ಯಕ್ತಪಡಿಸುವ ಡಿಕೆಶಿ ಅವರು ಹೈಕಮಾಂಡ್ ಮಟ್ಟದಲ್ಲಿ ಅದರಲ್ಲೂ ವಿಶೇಷವಾಗಿ ಸೋನಿಯಾ ಗಾಂಧಿ ಅವರಿಗೆ ಅತ್ಯಂತ ಆಪ್ತರಾಗಿರುವುದು ಕೂಡ.
ಡಿಕೆಶಿ ಅವರು ಕಾಂಗ್ರೆಸ್ ಪಕ್ಷಕ್ಕೆ ಮಾಡಿರುವ ಸೇವೆ ಅನನ್ಯ ಹೈಕಮಾಂಡ್ ಯಾವುದೇ ಸೂಚನೆಯನ್ನು ಸಹ ತಲೆಯ ಮೇಲೆ ಹೊತ್ತು ಕೆಲಸ ಮಾಡಿ ಮುಗಿಸುವ ನಿಷ್ಠಾವಂತ ಕಾರ್ಯಕರ್ತ ಡಿಕೆ ಶಿವಕುಮಾರ್ ಅವರು ಹಿಂದೆ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಹ್ಮದ್ ಪಟೇಲ್ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಬೇಕಾದರೆ ಡಿಕೆ ಶಿವಕುಮಾರ್ ಪಾತ್ರ ಯಾರು ಮರೆಯಲಾಗದು. ಹಾಗೆಯೇ 2018ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಸರ್ಕಾರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಉಂಟಾದ ರಾಜಕೀಯ ವಿಪ್ರದ ನಡುವೆ ಬಿಜೆಪಿ ಪಕ್ಷವು ಕಾಂಗ್ರೆಸ್ ಪಕ್ಷದ ಶಾಸಕರುಗಳನ್ನು ಹೈಜಾಕ್ ಮಾಡಿದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ಸರ್ಕಾರವನ್ನು ಉಳಿಸುವ ಉದ್ದೇಶದಿಂದ ಮೂರು ದಿನಗಳ ಕಾಲ ಮುಂಬೈ ಹೋಟೆಲ್ ನ ಮುಂದೆ ಮಳೆ ಚಳಿ ಗಾಳಿ ಎನ್ನದೆ ನಡೆಸಿದ ಹೋರಾಟವನ್ನು ಈ ರಾಜ್ಯದ ಕಾಂಗ್ರೆಸ್ ಪಕ್ಷದ ನಾಯಕರುಗಳಾಗಲಿ ಅಥವಾ ಕಾರ್ಯಕರ್ತರುಗಳಾಗಲಿ ಹೈಕಮಾಂಡ್ ಆಗಲಿ ಮರೆಯಲಿಕ್ಕೆ ಸಾಧ್ಯವೇ ಇಲ್ಲ.
ಡಿಕೆ ಶಿವಕುಮಾರ್ ಎಂದರೆ ಹಾಗೆ ಅವರು ನಂಬಿದವರನ್ನು ಎಂದಿಗೂ ಕೈಬಿಟ್ಟವರಲ್ಲ ತಾನು ನಂಬಿದ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸುವ ಅವರ ನಿಷ್ಠೆ ಎಲ್ಲರಿಗೂ ಮಾದರಿಯಾಗಿರುವಂತದ್ದು. ಹೀಗೆ ಕಾಂಗ್ರೆಸ್ ಪಕ್ಷಕ್ಕಾಗಲಿ ಅಥವಾ ನಾಯಕರುಗಳಿಗೆ ಆಗಲಿ ಯಾವುದೇ ರೀತಿಯ ತೊಂದರೆ ಉಂಟಾದಾಗ ಅದನ್ನು ನಿವಾರಿಸುವಲ್ಲಿ ಡಿಕೆಶಿ ಅವರದು ಎತ್ತಿದ ಕೈ ಆದ್ದರಿಂದಲೇ ಅವರನ್ನು ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದು ಕರೆಯಲಾಗುವುದು.
ಸುಧೀರ್ಘ 40 ವರ್ಷಗಳ ರಾಜಕೀಯ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿರುವ ಡಿಕೆಶಿ ಅವರು ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯದ ನಾಯಕರಾಗಿಯೂ ಸಹ ಗುರುತಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಹಲವಾರು ಜನ ಒಕ್ಕಲಿಗ ನಾಯಕವರಿದ್ದಾಗಿಯೂ ಕೂಡ ದೇವೇಗೌಡ ಮತ್ತು ಅವರ ಕುಟುಂಬದವರನ್ನು ಡಿಕೆಶಿ ಅವರಷ್ಟು ಮೇಲೆ ಎಳೆದುಕೊಂಡು ರಾಜಕೀಯ ಮಾಡಿದ ನಾಯಕರು ತುಂಬಾನೇ ಕಡಿಮೆ. ದೇವೇಗೌಡರ ಕುಟುಂಬದ ವಿರುದ್ಧ ಧ್ವನಿಯತ್ತಲು ಹೆಣೆಗಾಡುವ ಒಕ್ಕಲಿಗ ನಾಯಕನ ಮಧ್ಯದಲ್ಲಿ ದೇವೇಗೌಡ ಕುಟುಂಬವನ್ನು ಅತ್ಯಂತ ಪರಿಣಾಮಕಾರಿಯಾಗಿ ರಾಜಕೀಯ ವಾಗಿ ಎದುರಿಸಿದ ಕೀರ್ತಿ ಡಿಕೆಶಿ ಅವರಿಗೆ ಸಲ್ಲಬೇಕು. ದೇವೇಗೌಡ ಕುಟುಂಬ ಮತ್ತು ಡಿಕೆ ಶಿವಕುಮಾರ್ ಮಧ್ಯದಲ್ಲಿ ಒಕ್ಕಲಿಗರ ನಾಯಕರ ಅಧಿಪತ್ಯ ಸ್ಥಾಪನೆಗಾಗಿ ನಡೆಯುವ ಹೋರಾಟದಲ್ಲಿ ದೇವೇಗೌಡರ ಕೈ ಮೇಲಾಗಿದ್ದರು ಕೂಡ ಡಿಕೆ ಶಿವಕುಮಾರ್ ಅವರು ಎಂದಿಗೂ ಕೂಡ ಛಲ ಬಿಡದ ತ್ರಿವಿಕ್ರಮನಂತೆ ಹೋರಾಟ ಮಾಡುತ್ತಿರುವುದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.
ಡಿಕೆಶಿ ಅವರು ದಿನಕಳೆದಂತೆ ವ್ಯಕ್ತಿಗತವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಬಹಳ ಪಕ್ವವಾದಂತೆ ಕಾಣುತ್ತಿದ್ದಾರೆ. ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅವರು ತೋರುವ ಚಾಣಾಕ್ಷತೆ ತಾಳ್ಮೆ ಪಕ್ಷದ ಆಂತರಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕವಾಗಿ ಅವರು ಮಾತನಾಡುವ ರೀತಿ ಪಕ್ಷವನ್ನು ಸಮರ್ಥಿಸಿಕೊಳ್ಳುವ ರೀತಿ ತಮ್ಮ ಪಕ್ಷದ ನಾಯಕರುಗಳನ್ನು ಯಾವುದೇ ಸಮಯದಲ್ಲಿ ಬಿಟ್ಟುಕೊಡದ ಅವರ ಬದ್ಧತೆ ಇವೆಲ್ಲವೂ ಅವರ ಮೇಲಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಬಿಜೆಪಿ ಪಕ್ಷದ ದಿಗ್ವಿಜಯದ ವರ್ಚಸ್ಸಿನಿಂದಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಆತ್ಮಬಲ ಕುಸಿದಿದ್ದ ಸಂದರ್ಭದಲ್ಲಿ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿ ಜವಾಬ್ದಾರಿ ತೆಗೆದುಕೊಂಡ ಡಿಕೆ ಶಿವಕುಮಾರ್ ಅವರು ಸಂಜೀವಿನಿಯಂತೆ ಕೆಲಸ ಮಾಡಿದ್ದು ನಮಗೆಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತತ್ತಕ್ಷಣದಲ್ಲಿ ಅವರು ಯುವ ಕಾಂಗ್ರೆಸ್ ಸೇವಾದಳ ಮಹಿಳಾ ಕಾಂಗ್ರೆಸ್ ಗೆ ಆಂತರಿಕ ಚುನಾವಣೆ ನಡೆಸುವ ಮೂಲಕ ಹೊಸ ಯುವಕರಿಗೆ ರಾಜಕೀಯವಾಗಿ ಅವಕಾಶ ನೀಡಿ ಅವರಲ್ಲಿ ಹೊಸ ಚೈತನ್ಯವನ್ನು ಹುಟ್ಟು ಹಾಕಿದರು. ಒಂದು ಕಾಲಕ್ಕೆ ಇದ್ದು ಇಲ್ಲದಂತೆ ಕೆಲಸ ಮಾಡುತ್ತಿದ್ದ ಈ ಅಂಗ ಸಂಸ್ಥೆಗಳಿಗೆಲ್ಲ ಬಿಸಿ ಮುಟ್ಟಿಸಿದ ಡಿಕೆ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿಬಿಟ್ಟಿದ್ದರು.
ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಅವರು ಆಯೋಜಿಸಿದ ಕಾರ್ಯಕ್ರಮಗಳು ಸಭೆ ಸಮಾರಂಭಗಳು, ಹೋರಾಟಗಳಿಗೆ ಲೆಕ್ಕವಿಲ್ಲದಷ್ಟು ಆರ್ಥಿಕ ಸಹಾಯವನ್ನು ಮಾಡಿರುತ್ತಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಕರ್ನಾಟಕದ ಮನೆ ಮನೆಗೆ ತಲುಪಿಸುವಲ್ಲಿ ಅವರು ನಡೆಸಿದ ಪೇಸಿಎಂ ಹೋರಾಟ ಮೇಕೆದಾಟು ಹೋರಾಟ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆಗೆ ಮಾಡಿದಂತಹ ಸಂಘಟನೆ ಮತ್ತು ಅದರ ಪ್ರಸ್ತುತಿ ಪ್ರತಿದಿನವೂ ಹೊಸ ಹೊಸ ರೀತಿಯ ಚುನಾವಣಾ ತಂತ್ರಗಾರಿಕೆ ಮತ್ತು ಅದನ್ನು ಚುನಾವಣೆಯವರೆಗೂ ಜೀವಂತವಾ ಗಿಟ್ಟು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೆರೆದಿಟ್ಟು 2023 ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ದೊರೆಯುವಲ್ಲಿ ಡಿಕೆ ಶಿವಕುಮಾರ್ ಅವರ ಪಾತ್ರ ನಿಜಕ್ಕೂ ಅವಿಸ್ಮರಣೀಯ. ನಿಷ್ಠೆಯ ಪರಕಾಷ್ಟತೆ ಡಿಕೆಶಿ ಅವರಿಗೆ ಸಿಎಂ ಸ್ಥಾನದ ಪ್ರಬಲ ಹಕ್ಕುದಾರರನ್ನಾಗಿ ಮಾಡಿದೆ ಎಂದರು ತಪ್ಪಾಗಲಾರದು.
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ ಗೊಂದಲವಾಗಿದೆ. ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ “ಸಿಎಂ ಬದಲಾವಣೆ” ಹಾಗೂ ಅಧಿಕಾರ ಹಂಸ್ತಾ0ತರ ಉಪ ಮುಖ್ಯಮಂತ್ರಿ ಡಿ.ಕೆ.ಶಿ ಅವರ “ಮುಖ್ಯಮಂತ್ರಿ ಕನಸು” ಅತ್ಯಂತ ಚರ್ಚಿತ ವಿಷಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು ಸುಭದ್ರ ಸರ್ಕಾರ ರಚಿಸಿದ ನಂತರವೂ, ಅಧಿಕಾರ ಹಂಚಿಕೆಯ ಒಪ್ಪಂದದ ಸುತ್ತ ಎದ್ದಿರುವ ಗೊಂದಲಗಳು ಹೈಕಮಾಂಡ್ ಅಂಗಳ ತಲುಪಿದ್ದು, ನಾಯಕತ್ವ ಬದಲಾವಣೆಯ ವಿಷಯವು ತಾರ್ಕಿಕ ಅಂತ್ಯ ಕಾಣುವ ಹಂತದಲ್ಲಿದೆ.
ಡಿಕೆಶಿ ಪಕ್ಷದ ಟ್ರಬಲ್ ಶೂಟರ್, ಪ್ರಬಲ ಹಕ್ಕುದಾರ, ರಾಜ್ಯದ ಮತದಾರ ಪ್ರಥಮ ಸೇವಕನಾಗಲು ಎಲ್ಲಾ ರೀತಿಯಿಂದಲೂ ಅರ್ಹರಾಗಿರುವ ಡಿಕೆಶಿ ಅವರಿಗೆ ಅವಕಾಶ ನೀಡುವುದು ಸಿ ಎಂ. ಸಿದ್ದರಾಮಯ್ಯ ನವರ ಜವಬ್ಧಾರಿಯಾಗಿದೆ.
ಈಗ ಕಾಲ ಪಕ್ವವಾಗಿದೆ. ಕಾಂಗ್ರೆಸ್ ಪಕ್ಷದ ಕಷ್ಟದ ಕಾಲದಲ್ಲಿ” ಬಂಡೆಯಂತೆ ನಿಂತು” ಕೆಲಸ ಮಾಡಿದ ಡಿ.ಕೆ. ಶಿವಕುಮಾರ್, ಕಾರ್ಯಕರ್ತರಲ್ಲಿ ಮತ್ತು ಪಕ್ಷದೊಳಗೆ ಹೊಸ ಹುರುಪು ತುಂಬಿದ್ದಾರೆ ಎನ್ನುವುದನ್ನು ರಾಜ್ಯಮಟ್ಟದ ನಾಯಕರಾದಿಯಾಗಿ ಹೈಕಮಾಂಡ್ ಕೂಡ ಮರೆಯುವಂತಿಲ್ಲ.
ರಾಜ್ಯದಲ್ಲಿ ಕಾಂಗ್ತೇಸ್ ಪಕ್ಷದ ಮೇಲೆ ಅಪಾರ ನಿಷ್ಠೆಯನ್ನು ಹೊಂದಿರುವ ಹಾಗೂ ಮೂಲ ಕಾಂಗ್ರೇಸ್ ಕಟ್ಟಾಳು ಎಂದರೆ ಅದು ಡಿಕೆ ಮಾತ್ರ ಎಂದರೆ ತಪ್ಪಾಗಲಾರದು. ರಾಜಕೀಯದಲ್ಲಿ ತಮ್ಮ ನಿಷ್ಠೆಯ ಮೂಲಕವೇ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎನ್ನುವುದಕ್ಕೆ ಹೆಚ್ಚಿನ ಪುರಾವೆಗಳ ಅವಶ್ಯಕತೆಯಿಲ್ಲ.
ಕಳೆದ ವಿಧಾನ ಸಬೆ ಚುನಾವಣೆಯಲ್ಲಿ ಗೆಲುವಿನ ರೂವಾರಿ 135 ಸ್ಥಾನಗಳನ್ನು ಗೆಲ್ಲಿಸಿಕೊಟ್ಟ ಶ್ರೇಯಸ್ಸು, ಕೆಪಿಸಿಸಿ ಅಧ್ಯಕ್ಷರಾಗಿ ಅವರು ನಿಭಾಯಿಸಿದ ಜವಾಬ್ದಾರಿ ಅವರನ್ನು ಸಿಎಂ ಕುರ್ಚಿಯ ನೈಜ ಹಕ್ಕುದಾರರನ್ನಾಗಿ ಮಾಡಿದೆ ಎಂಬುದು ಸರಿಯಷ್ಟೇ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ರಾಜ್ಯ ಕಾಂಗ್ರೇಸ ಪಕ್ಷದ ದೊಡ್ಡ ಮಟ್ಟದ ನಾಯಕರಾಗಿ ಬೆಳೆದಿರುವ ಸಿಎಂ ಸಿದ್ದರಾಮಯ್ಯ ತಂತ್ರ ಪ್ರತಿ ತಂತ್ರ, ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಎತ್ತಿದ ಕೈ. ಹಾಗಾಗಿ ಸಿದ್ದರಾಮಯ್ಯನವರ ಸೂಕ್ಷ್ಮ ನಡೆ, ಅಹಿಂದ ನಾಯಕರುಗಳ ಬೆಂಬಲ ಇಡೀ ಕುರುಬ ಸಮುದಾಯದ ಒತ್ತಾಸೆ, ಮೊನ್ನೆ ನಡೆದ ಬಿಹಾರ ಚುನಾವಣೆಯ ಫಲಿತಾಂಶ ಸಿದ್ದರಾಮಯ್ಯನವರ ಪಾಲಿಗೆ ವರದಾನವಾಗಿರುವುದರಿಂದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಜಟಿಲವಾಗಿದೆ ಎಂದು ಹೇಳಬಹುದು. ಸಧ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ನಿರ್ಧಾರ ಹೈಕಮಾಂಡ್ ಸಹ ಕಬ್ಬಿಣದ ಕಡಲೆಯಾಗಿದೆ.
ಹಾಗಾಗಿ ಈ ವಿಚಾರವನ್ನು ಬೆಳಗಾವಿ ಅಧಿವೇಶನದ ವರೆಗೆ ಮುಂದೂಡಿರುವುದನ್ನು ನೋಡಿದರೆ ನಾಯಕತ್ವ ಬದಲಾವಣೆಯ ವಿಚಾರಕ್ಕೆ ತಾತ್ಕಾಲಿಕ ತಡೆ ನೀಡಿ ಕೊಂಚ ಉಸಿರಾಡಲು ಅವಕಾಶ ಮಾಡಿಕೊಂಡಿದೆ ಎಂದರೆ ತಪ್ಪಾಗಲಾರದು.
ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತದಿಂದ ಖುಷಿಯಾಗಿರುವ ಬಿಜೆಪಿ-ಜೆಡಿಎಸ್ ಈ ವಿಚಾರವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ನಾಯಕರುಗಳ ಮಧ್ಯೆ ಒಮ್ಮತವಿಲ್ಲ, ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ರಾಜ್ಯದ ಅಭಿವೃದ್ಧಿಯಾಗುತ್ತಿಲ್ಲ, ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿದೆ ಎನ್ನುವ ಅಂಶಗಳನ್ನು ಮುಂದಿಟ್ಟುಕೊಂಡು ಅಧಿವೇಶನದಲ್ಲಿ ಆಡಳಿತ ಪಕ್ಷದ ವಿರುದ್ಧ ಮುಗಿಬೀಳಲು ತಯಾರಿ ನಡೆಸುತ್ತಿವೆ ಎನ್ನುವ ಮಾತುಗಳೂ ಸಹ ಕೇಳಿಬರುತ್ತಿದೆ. ಬೆಳಗಾವಿ ಅಧಿವೇಶನಕ್ಕೆ ಮುನ್ನವೇ ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆ ಮಾಡಿದರೆ, ಅದು ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಳ್ಳುವಂತೆ ಮಾಡುವ ಸಾಧ್ಯತೆಯಿದೆ.
ಇನ್ನು ಜನವರಿ ತಿಂಗಳಲ್ಲಿ ಈ ಅಧಿಕಾರ ಹಂಚಿಕೆ ಗೊಂದಲಕ್ಕೆ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆ ದಟ್ಟವಾಗಿದೆ. ಇನ್ನೂ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಷಯವು ಕೇವಲ ಇಬ್ಬರು ಪ್ರಭಲ ರಾಜಕೀಯ ನಾಯಕರ ನಡುವಿನ ಅಧಿಕಾರ ದಾಹವಾಗಿರಬಾರದು, ಅದು ಪ್ರಬಲ ಸಮುದಾಯಗಳ ಪ್ರತಿಷ್ಠೆಯಾಗದೆ, ಪಕ್ಷದ ರಾಷ್ಟ್ರೀಯ ಹಿತಾಸಕ್ತಿಯ ಪ್ರಶ್ನೆಯಾಗಿರಬೇಕು. ಮತ್ತೊಂದು ಲೆಕ್ಕಾಚಾರದಲ್ಲಿ ಹೇಳುವುದಾದರೆ ಒಕ್ಕಲಿಗರ ಅಸ್ಮಿತೆ ಮತ್ತು ಡಿ.ಕೆ. ಶಿವಕುಮಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಸಾಧಿಸಲು ಒಕ್ಕಲಿಗ ಸಮುದಾಯದ ಏಕೀಕರಣವೇ ಕಾರಣವಾಗಿತ್ತು ತಮ್ಮ ಸಮುದಾಯದ ನಾಯಕ (ಡಿ.ಕೆ.ಶಿವಕುಮಾರ್) ಮುಖ್ಯಮಂತ್ರಿಯಾಗುತ್ತಾರೆ” ಎಂಬ ಭಾವನೆಯೇ ಒಕ್ಕಲಿಗ ಮತಗಳು ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸಳೆಯಲು ಸಾಕಷ್ಟು ಅನುಕೂಲವಾಗಿತ್ತು. ಒಂದು ವೇಳೆ ಡಿಕೆಶಿಗೆ ಸಿಎಂ ಸ್ಥಾನ ನೀಡದಿದ್ದರೆ, ಒಕ್ಕಲಿಗ ಸಮುದಾಯ ಮತ್ತೆ ಕಾಂಗ್ರೆಸ್ ನಿಂದ ದೂರ ಸರಿಯುವ ಅಪಾಯವಿದೆ. ಮುಂಬರುವ ಲೋಕಸಭೆ ಅಥವಾ ಮುಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಬಹುದು ಎಂಬ ಅಂಶವನ್ನು ಮರೆಯುವಂತಿಲ್ಲ
ಹೈಕಮಾಂಡ್ ನಿಲುವು ಮತ್ತು ಇಕ್ಕಟ್ಟು ಸಮಸ್ಯೆಯನ್ನು ದೆಹಲಿ ಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೆ ಬಗೆಹರಿಸುವುದು “ಕತ್ತಿಯ ಅಂಚಿನ ನಡಿಗೆ”ಯಂತಾಗಿದೆ. ಒಂದು ಕಡೆ ಕನ್ನಡಿಗರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದ ವಾಸ್ತವದ ಅರಿವಿದೆ. ಸಿದ್ದರಾಮಯ್ಯನವರ ಜನಪ್ರಿಯತೆ ಮತ್ತು ಡಿಕೆಶಿ ಅವರ ಸಂಘಟನಾ ಚತುರತೆ ಈ ಎರಡನ್ನೂ ಅವರು ಕಳೆದುಕೊಳ್ಳಲು ಇಷ್ಟಪಡುತ್ತಿಲ್ಲ. ಮತ್ತೊಂದು ಕಡೆ ರಾಹುಲ್ ಗಾಂಧಿ ಮತ್ತು “ಮಾತು ಉಳಿಸಿಕೊಳ್ಳುವ ಒತ್ತಡ. ರಾಹುಲ್ ಗಾಂಧಿ ನೈತಿಕತೆಗೆ ಹೆಚ್ಚು ಒತ್ತು ನೀಡುತ್ತಾರೆ. ಸರ್ಕಾರ ರಚನೆಯ ಸಂದರ್ಭದಲ್ಲಿ ಡಿಕೆಶಿಗೆ ನೀಡಲಾದ ಭರವಸೆಯನ್ನು ಈಡೇರಿಸ ಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.