ಒಳ್ಳೆಯ ಹವ್ಯಾಸ ಮತ್ತು ಅಭ್ಯಾಸ ಉತ್ತಮ ಜೀವನಕ್ಕೆ ರಹದಾರಿ !

ಮನುಷ್ಯ ಜನ್ಮದ ಸಾರ್ಥಕತೆ ಆತನ ನಡತೆಯನ್ನೇ ಅವಲಂಬಿಸಿದೆ. ಸನ್ನಡತೆ-ಸದ್ಗುಣಗಳನ್ನು ರೂಢಿಯಾಗಿಸಿಕೊಂಡು ಸ್ವಕಾರ್ಯಗಳನ್ನು ತಾನೇ ಮಾಡಿಕೊಂಡು, ಸಮಾಜ ಕಾರ್ಯಗಳಲ್ಲೂ ಭಾಗಿಯಾಗಿ, ಬದುಕುವುದರಿಂದ ತನ್ನೊಂದಿಗೆ ಸಮಾಜವೂ ಸುಧಾರಣೆಯಾಗುತ್ತದೆ ಎಂಬುದು ನನ್ನ ಅನಿಸಿಕೆ. ಸರ್ವರಲ್ಲಿಯೂ ಬೆರೆತುಕೊಂಡು, ಸರ್ವರ ಸತ್ಕಾರ್ಯಗಳಲ್ಲಿಯೂ ಭಾಗಿಯಾಗಿ, ಸದ್ಗುಣಗಳೇ ಉತ್ತಮ ಜೀವನವನ್ನು ಯಶಸ್ವಿಯಾಗಿ ನಿಭಾಯಿಸಬಲ್ಲ, ಬದುಕಿಗೆ ಬಸವಾದಿ ಶಿವಶರಣರು ಮನುಕುಲಕ್ಕೇ ಮಾದರಿಯಾಗಿದ್ದಾರೆ ಅವರು ತಮ್ಮ ಜೀವನಾನುಭವವನ್ನು ತಮ್ಮ ವಚನಗಳಲ್ಲಿ ನಿರೂಪಿಸಿದ್ದಾರೆ. ಸಂಸಾರ ಸಾಗರದಲ್ಲಿದ್ದೂ ಸದ್ಗತಿ ಎಂದಿದ್ದಾರೆ. ಅದರಂತೆ ನಡೆ-ನುಡಿ-ಆಚಾರ-ವಿಚಾರಗಳನ್ನು ಕ್ರಿಯಾಶೀಲಗೊಳಿಸಿದ್ದಾರೆ.
ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿದಂತೆ: ತನ್ನ ಲಿಂಗಕ್ಕೆ ನಿತ್ಯ ಕರ್ಮ ಮಾಡಬೇಕಲ್ಲದೆ ಬೇರೆ ಮತ್ತೊಬ್ಬರ ಕೈಯಲಿ ಮಾಡಿಸಬಹುದೆ, ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ, ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ.
ಸ್ವ ಕಾರ್ಯವನ್ನು ತಾನು ಮಾಡಿಕೊಂಡರೆ ದೇಹದಾರ್ಢ್ಯ ಪುಷ್ಠಿಯಾಗಿ ಆರೋಗ್ಯ ಲಭಿಸುತ್ತದೆ. ಗುರುವಿನಿಂದ ದೀಕ್ಷೆ ಪಡೆದುಕೊಂಡ ಲಿಂಗದೇವನ ಪೂಜೆ, ಜಪ, ತಪ, ಅನುಷ್ಠಾನ, ನಿತ್ಯನೇಮಗಳನ್ನು ತಾನು ಮಾಡಿದರೆ ಅದರಿಂದ ಮಾನಸಿಕ ನೆಮ್ಮದಿ ಹಾಗೂ ಪ್ರತಿಫಲ ದೊರೆತೀತು. ಇವುಗಳನ್ನು ಬೇರೆಯವರ ಕಡೆಯವರಿಂದ ಮಾಡಿಸಿದರೆ ತನಗಾಗುವ ಲಾಭವೇನು, ಅಂದರೆ ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ ಲಿಂಗವಿದ್ದು ಫಲವೇನು? ಶಿವಪಥವನರಿಯದನ್ನಕ್ಕ ಎಂದಂತಾಗುತ್ತದೆ. ಗುರುವಿನಿಂದ ಸಲಹೆಗಳನ್ನು ಪಡೆದಾಗಲೂ ಬೇರೆ ದಾರಿ ಹಿಡಿದು ನಡೆದರೆ ಜೀವನ ಯಶಸ್ವಿಯಾದೀತೆ ? ಎಂಬುದರ ಅರಿವು, ಆಲೋಚನೆ ಶಿಷ್ಯನಾದವನಲ್ಲಿರಬೇಕಾಗುತ್ತದೆ.
ನಾವು ಮನಬಂದಂತೆ ಹರಿದಾಡುವುದು ಯೋಗ್ಯವಲ್ಲ. ತನಗೆ ಅರಿವಿಗೆ ಬಾರದಿದ್ದರೂ ಬೇರೆಯವರನ್ನು ಕೇಳಿ ಅದರಂತೆ ನಡೆದರೆ ಬದುಕು ಸ್ಫಟಿಕದಷ್ಟು ಶುಭ್ರವಾಗಲು ಸಾಧ್ಯವಿದೆ ಎಂಬುದಕ್ಕೆ ಸಾಕಷ್ಟು ಸಂತ ಶರಣರ ಆದರ್ಶ ಚರಿತ್ರೆಗಳುಂಟು! ಸಂಸಾರದ ದಂದುಗದಲ್ಲಿ ಸಿಲುಕಿದ ನಾವು ಬಸವಣ್ಣನವರೆಂದಂತೆ. ತನ್ನ ವಿಚಾರಿಸಲೊಲ್ಲದು, ಇದಿರ ವಿಚಾರಿಸಹೋಹುದೀ ಮನವು. ಏನ ಮಾಡುವೆನೀ ಮನವನು, ಎಂತು ಮಾಡುವೆನೀ ಮನವನು. ಕೂಡಲ ಸಂಗಮದೇವನ ಶರಣರ ನಚ್ಚದ ಮಚ್ಚದ ಬೆಂದ ಮನವನು ಎಂದಿರುವುದನ್ನು ಗಮನಿಸಬೇಕು. ಮನ ಬಂದತ್ತ ನಡೆಯುವುದಕ್ಕೆ ಹುಟ್ಟು ಪಡೆದಿಲ್ಲ. ಗುರು-ಹಿರಿಯರ ಮಾರ್ಗದರ್ಶನದಂತೆ ನಡೆದು ಜೀವನ ಸಾಫಲ್ಯ ಮಾಡಿಕೊಳ್ಳಬೇಕಾಗಿದೆ. ಅದ ಕಾರಣ ಕೂಡಲಸಂಗನ ಶರಣರು ವಿವರಿಸಿದ್ದಾರೆ.

ಮನುಷ್ಯ ಪಂಚೇಂದ್ರಿಯ ಸುಖದ ಲೋಲುಪತೆಯಲ್ಲಿಯೇ ಸಿಲುಕಿ ಹೊರಳಾಡಲಾರದೇ ಅವುಗಳನ್ನು ಕಳಚಿ ಹಾಕಲು ಪ್ರಯತ್ನಿಸಬೇಕು. ಏಕೆಂದರೆ ಮನುಷ್ಯ ಜನ್ಮ ಪದೇ ಪದೇ ಬರುವಂತಹುದಲ್ಲವೆಂಬುದರ ಅರಿವಿರಲೆಂದು ಹೇಳಿದ ಅನುಭವಿಗಳ ಮಾತು ಸತ್ಯ ಎಂದು ಪ್ರಾರ್ಥಿಸಿಕೊಂಡ ಬಸವಣ್ಣನವರ ಈ ಬಗೆಯನ್ನು ನಾವು ಅರ್ಥೈಸಿಕೊಂಡು ನಡೆಯಬೇಕಾಗಿದೆ.
‘’ಮಾಡುವಂತಿರಬೇಕು ಮಾಡದಂತಿರಬೇಕು.ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು. ಕೂಡಲಸಂಗಮ ದೇವರ ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು’’. ಈ ಸಾಲುಗಳ ಅರ್ಥವೆಂದರೆ: ಯಾವ ಕೆಲಸವನ್ನೂ ‘ನಾನು’ ಎಂಬ ಅಹಂ ಇಲ್ಲದೆ ಮಾಡಬೇಕು, ಮಾಡದೆ ಇರಬೇಕಾದ ಕೆಲಸ ವನ್ನು ಮಾಡದೆ ಇರಬೇಕು. ಮಾಡುವ ಕ್ರಿಯೆಯಲ್ಲಿ “ನಾನು ಮಾಡುತ್ತಿದ್ದೇನೆ” ಎಂಬ ಭಾವನೆ ಇರಬಾರದು, ಬದಲಾಗಿ “ತಾನಿಲ್ಲದಂತೆ”, ಅಂದರೆ ಕರ್ತೃತ್ವದ ಭಾವನೆ ಇಲ್ಲದಂತೆ ಇರಬೇಕು. ಹೀಗೆ ಮಾಡುತ್ತಾ, ಕೂಡಲಸಂಗಮದೇವರನ್ನು ನೆನೆಯುತ್ತಲೇ, ನೆನೆಯದಂತೆ ಅಂದರೆ ಮನಸ್ಸಿನಲ್ಲಿ ಯಾವ ಕೃತಜ್ಞತೆಯ ಭಾವನೆಯೂ ಅಂಟಿಕೊಳ್ಳದಂತೆ, ನಿರ್ಲಿ ಪ್ತವಾಗಿ ಇರಬೇಕು.
ನಮ್ಮ ವ್ಯಕ್ತಿತ್ವದ ಅವಗುಣಗಳನ್ನು ಕಳಚಿ ಹಾಕಿದಾಗ ತಂದೆ-ತಾಯಿ, ಬಂಧು-ಬಳಗ, ದೇಶ-ನಾಡು, ಸಮಾಜದ ಬಗೆಗೆ ಕಾಳಜಿ ಹುಟ್ಟಲು ಸಾಧ್ಯವಾದೀತೆ. ಒಳ್ಳೆಯ ಜೀವನ ಕ್ರಮಕ್ಕೆ ಸದ್ಗುಣಗಳೇ ಊರುಗೋಲು. ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡು ನಡೆಯುವವನಿಗೆ ಸಮಾಜದಲ್ಲಿ ಆತನಿಗೆ ಯಾವತ್ತೂ ಮನ್ನಣೆ ದೊರೆಯುತ್ತದೆ. ಸಮುದಾಯದವರು ಒಂದಲ್ಲ ಒಂದು ಕ್ರಮದಲ್ಲಿ ಗುರುತಿಸಿಕೊಳ್ಳುತ್ತಾರೆ.
ತಾನು ಹುಟ್ಟಿ ಬೆಳೆಯುವ ಕುಟುಂಬ, ಅಲ್ಲಿಯ ಪರಿಸರ, ಸಾರ್ವಜನಿಕರೊಂದಿಗಿನ ನಿರಂತರ ಸಂಪರ್ಕ, ಇತರರ ಸಂಗ ಸಂಸ್ಕಾರದ ಕಲಿಕೆಯ ಮುಖಾಂತರ ಹವ್ಯಾಸಗಳು ವ್ಯಕ್ತಿಯಲ್ಲಿ ಗಾಢವಾಗಿ ಬೇರೂರುತ್ತವೆ. ಇಂತಹ ಆರೋಗ್ಯಕರ ಅಭ್ಯಾಸಗಳ ಪೈಕಿ ಯಾವುದು ವ್ಯಕ್ತಿಯ ದಿನನಿತ್ಯದ ಕೆಲಸಗಳ ಜೊತೆಯಲ್ಲಿ ಬದುಕಿನ ಒಂದು ಭಾಗವಾಗಿ ಬಿಡುತ್ತದೆಯೋ ಅವುಗಳನ್ನೇ ಹವ್ಯಾಸಗಳು ಎಂದು ಕರೆಯುತ್ತಾರೆ.
ನಮ್ಮ ಆರೋಗ್ಯ ವೃದ್ಧಿಗಾಗಿ ಉತ್ತಮ ಹವ್ಯಾಸಗಳೇ ಪೂರಕವಾಗುತ್ತವೆಯೇ ಹೊರತು ಔಷಧೋಪಚಾರಗಳಿಂದಲ್ಲ. ಪ್ರತಿನಿತ್ಯವೂ ಕೋಳಿಕೂಗುವ ಮುನ್ನ ಅಂದರೆ ಸೂರ್ಯೋದಯಕ್ಕೂ ಮುನ್ನವೇ ಎದ್ದು ಪ್ರಾತರ್ವಿಧಿಗಳನ್ನು ಪೂರೈಸುವ ಮೂಲಕ ದಿನವನ್ನು ಧನಾತ್ಮಕವಾಗಿ ಪ್ರಾರಂಭಿಸುವಲ್ಲಿ ಮುನ್ನುಡಿ ಹಾಕುವುದು. ಬೆಳಗಿನ ಸಮಯವನ್ನು ಬ್ರಾಹ್ಮೀ ಮುಹೂರ್ತವೆನ್ನುತ್ತಾರೆ.
ಅದು ಆರೋಗ್ಯಕ್ಕೆ ಬಲುಹಿತಕರ. ಅಂತಹ ವಾತಾವರಣವು ಅತ್ಯಂತ ಪರಿಶುದ್ಧವಾಗಿರುವುದರಿಂದ ಗಾಳಿಯಲ್ಲಿ ಹೆಚ್ಚು ಶುದ್ಧವಾದ ಆಮ್ಲಜನಕ ಇರುವುದರಿಂದ ಸೂಕ್ತವಾದ ಸಡಿಲವಾದ ಉಡುಪು ಧರಿಸಿ ನಡೆದಾಡುವುದು, ಸ್ವಲ್ಪು ಹೊತ್ತು ಬರಿಗಾಲಿನಿಂದ ನಡೆದಾಡುವುದು, ಬೆವರು ಬರುವಂತೆ ವ್ಯಾಯಾಮ ಮಾಡುವುದು, ಯೋಗಾಸನಗಳನ್ನು ಮಾಡುವುದು, ಇಂತಹ ಕಾರ್ಯಗಳನ್ನು ಮಾಡುವ ಪೂರ್ವದಲ್ಲಿ ಅನ್ನ-ಪಾನಾದಿಗಳನ್ನು ಸೇವಿಸದಿರುವುದು, ಬದುಕಿನ ಪ್ರತೀಕ್ಷಣದಲ್ಲೂ ತನ್ನ ಬದುಕಿನ ಪ್ರಮುಖ ಗುರಿಯ ಬಗ್ಗೆ ಚಿಂತಿಸುತ್ತಾ ಅದನ್ನು ಸಾಧಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳುತ್ತಾ ಇರುವುದು ಉತ್ತಮ ಹವ್ಯಾಸಗಳು.
ಪ್ರತಿ ದಿನ ನಿಯಮಿತ ವಿಹಾರ ಮಾಡಿ ಮನೆಗೆ ಹೋಗಿ ಸ್ನಾನ ಮಾಡಿ, ಪ್ರಾರ್ಥನೆ, ಪೂಜಾದಿಗಳನ್ನು ಮಾಡಿಕೊಂಡು, ಉಪಹಾರ ಸೇವಿಸಿ, ಕಾಯಕ-ಕರ್ತವ್ಯಕ್ಕೆ ತೊಡಗುವುದು. ತಕ್ಕ ಮಟ್ಟಿಗಿನ ಆಹಾರ ಪದಾರ್ಥಗಳ ಸೇವನೆ ಅತ್ಯಗತ್ಯ. ಸಾಧ್ಯವಿದ್ದಷ್ಟು ಹಣ್ಣು-ಹಂಪಲ, ಗಜ್ಜರಿ, ಸವತೆಕಾಯಿ, ತರಕಾರಿ ಸೊಪ್ಪು, ಹಾಕರಕಿ, ಮೆಂತೆ, ಮೂಲಂಗಿ ಈ ಮುಂತಾದ ಹಸಿ ತರಕಾರಿಗಳನ್ನು ಸೇವಿಸುವುದನ್ನು ಹವ್ಯಾಸ ಅಭ್ಯಾಸ ಮಾಡಿಕೊಳ್ಳುವುದು ಸೂಕ್ತ. ಇದು ನಿಯತತನದ ಕ್ರಮಬದ್ಧ ಪಾಲನೆಯನ್ನಾಗಿ ರೂಢಿಸಿಕೊಳ್ಳುವುದು ಇನ್ನೂ ಉತ್ತಮ-ಆರೋಗ್ಯದ ಒಳಗುಟ್ಟು! ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ತನ್ನದೇ ಆದ ಅಚ್ಚುಕಟ್ಟುತನವನ್ನು ಅಳವಡಿಸಿಕೊಳ್ಳು ವುದು ಉತ್ತಮ ಹವ್ಯಾಸದ ಪ್ರಮುಖ ಲಕ್ಷಣ.
ಯಾವುದೇ ವೃತ್ತಿಯನ್ನು ಅಥವಾ ಕಾಯಕವನ್ನು ದೇವರ ಸೇವೆಯೆಂದೇ ಮಾಡುವುದು. ಸಮಾಜದ ಹಿತಾಸಕ್ತಿ ಬಯಸುವುದು. ಒಳಿತು ಕಾರ್ಯವನ್ನು ಮಾಡಿ ಪುಣ್ಯ ಗಳಿಸಿಕೊಳ್ಳುವುದು, ಇವು ಉತ್ತಮ ಹವ್ಯಾಸಗಳೇ. ನಿತ್ಯ ಹೊಸ ಹೊಸ ವಿಚಾರಗಳನ್ನು ಬಲ್ಲವರಿಂದ, ತಜ್ಞರಿಂದ ತಿಳಿದುಕೊಳ್ಳುವುದೂ ಒಂದು ಸದಭಿರುಚಿಯ ಹವ್ಯಾಸವಾಗಿದೆ. ? ಗೆದ್ದರೆ ಮನಸ್ಸಿಗೆ ಸಾಧನೆಯ ನೆಮ್ಮದಿ, ಸೋತಲ್ಲಿ ಹೊಸ ಪಾಠದ ಕಲಿಕಗೆ ಅವಕಾಶ ? ಅಂದರೆ ಸೋಲೇ ಗೆಲುವಿನ ಪ್ರಚೋದಕ ಎಂಬ ಮನೋಧರ್ಮದೊಂದಿಗೆ ಅಸಾಧ್ಯ ಹಾಗೂ ಕಠಿಣವಾದ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿ ಅದರಲ್ಲಿ ಗೆಲುವನ್ನು ಸಾಧಿಸಲು ಸದಾ ಪ್ರಯತ್ನಿಸುತ್ತಿರುವುದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ, ಇತರರ ಮಾತುಗಳನ್ನು ವಿಧೇಯತೆಯಿಂದ ಕೇಳಿ ಗೌರವಿಸುವ, ಸಹನೆ ಮತ್ತು ತಾಳ್ಮೆಯಂತಹ ಸದ್ಗುಣಗಳನ್ನು ರೂಢಿಸಿಕೊಳ್ಳುವುದು ಒಂದು ಉತ್ತಮ ಹವ್ಯಾಸ.
ಪ್ರತಿಯೊಬ್ಬರೊಳಗೂ ಒಬ್ಬ ಸುಪ್ತವಾದ ಕಲೆ ಅಡಗಿರುತ್ತೆದೆ. ಆ ಕಲೆಯನ್ನು ಹುಡುಕಿ ಹೊರಗೆ ತೆಗೆಯಬೇಕಷ್ಟೇ. ಪ್ರಯತ್ನ ಪಡದೇ ಯಾವುದೂ ಲಭಿಸದು. ಕುಂಚವನ್ನು ಹಿಡಿದು ಬಣ್ಣದಲ್ಲಿ ಅದ್ದಿ ನಮ್ಮ ಕಲ್ಪನೆಯ ಕನಸುಗಳಿಗೆ ಜೀವ ತುಂಬಬಹುದು. ನಮ್ಮ ಕನಸಿನ ಹಕ್ಕಿಗೆ ಹೇಗೆ ರೆಕ್ಕೆ ಮೂಡುವುದೆಂಬುದನ್ನು ಕಣ್ಣಾರೆ ಕಾಣಬಹುದು. ಸಂಗೀತದಿಂದ ಮನಸ್ಸು ಪ್ರಸನ್ನವಾಗುತ್ತದೆ. ನಿತ್ಯವಲ್ಲದಿದ್ದರೂ ವಾರದಿಂದ ಒಂದು ದಿನವಾದರೂ ಸಂಗೀತ ತರಗತಿಗೆ ಹೋಗುವುದು, ವಿವಿಧ ಸಂಗೀತ ವಾದ್ಯಗಳನ್ನು ನುಡಿಸಲು ಕಲಿಯುವುದು, ಸಂಗೀತ, ತಾಳ-ಲಯದೊಂದಿಗೆ ಹಾಡು ಹಾಡುವುದನ್ನು ರೂಢಿಸಿಕೊಳ್ಳುವುದು, ಕೊನೆಯ ಪಕ್ಷ ಹಾಡುಗಳನ್ನು ಕೇಳಿಸಿಕೊಳ್ಳುವುದು, ಸಂಗ್ರಹಿಸಿಕೊಳ್ಳುವುದು ಮುಂತಾದ ಹವ್ಯಾಸಗಳನ್ನು ಇಂದಿನ ಯುವಕರು ಮೈಗೂಢಿಸಿಕೊಳ್ಳುವುದು ಶ್ರೇಷ್ಠವಾದುದು. ಇದರಿಂದ ದುರ್ವ್ಯಸನಗಳಿದ್ದರೂ ದೂರವಾಗಲು ಸಾಧ್ಯವಾಗುತ್ತದೆ.
ಅದೇ ರೀತಿಯಾಗಿ ವಿವಿಧ ರೀತಿಯ ಪುಸ್ತಕಗಳನ್ನು ಓದುವುದು ತುಂಬಾ ಶ್ರೇಷ್ಠವಾದ ಹವ್ಯಾಸ. ದೂರದರ್ಶನದಲ್ಲಿ ಪ್ರಸಾರವಾಗುವ ಕೆಲವು ಕಾರ್ಯಕ್ರಮಗಳು, ಸಂಗೀತ, ಸಾಹಿತ್ಯ, ಉತ್ತಮ ಅನುಭವಿ ವ್ಯಕ್ತಿಗಳು ಚರಿತ್ರೆಗಳು ಬದುಕಿನ ದಾರಿಯನ್ನು ಮುನ್ನಡೆಸುತ್ತವೆ, ಇತ್ತೀಚಿನ ದಿನಗಳಲ್ಲಿ YouTube, Instagram, WhatsApp, Snapchat, X, LinkedIn, Pinterest, Telegram, Reddit, WeChat, Discord, and Threads. ಮುಂತಾದ ಮಾಧ್ಯಮಗಳಲ್ಲಿ ಕಲಿಕೆ, ತಿಳುವಳಿಕೆ ಹೆಚ್ಚು ಆಕರ್ಷವಾಗಿದ್ದರೂ ಸಹ ಪುಸ್ತಕ ಪ್ರೇಮಿಯಾಗಿ ಓದುವುದು, ಸಂಗ್ರಹಿಸುವುದು ಇನ್ನೂ ಉತ್ತಮ ಹವ್ಯಾಸ, ಮನೆ-ಮನೆಗಳಲ್ಲಿ ಅಂದರೆ ಮನೆಯಲ್ಲಿ ಮಿನಿ ಗ್ರಂಥಾಲಯವನ್ನಾಗಿ ರೂಪಿಸಿದರೆ ಮುಂಬರುವ ಪೀಳಿಗೆಗೂ ಉಪಯೋಗಕ್ಕೆ ಬಂದೀತು ಎಂಬ ಮನೋಭಾವನೆಯ ಹವ್ಯಾಸ ರೂಢಿಸಿಕೊಳ್ಳುವುದು ಉತ್ತಮ.
ವಿನಾಕಾರಣ ಹರಟೆ ಹೊಡೆದು ಸಮಯ ಹರಣ ಮಾಡುವುದು ಉಚಿತವಾದುದಲ್ಲ. ಜೀವನದ ಸ್ಪಷ್ಟ ಗುರಿಯ ಬಗೆಗೆ ಅರಿವು ಇದ್ದಲ್ಲಿ ನಾನೇನು ಮಾಡುತ್ತಿದ್ದೇನೆ, ನಾನೇನು ಮಾಡಬೇಕು ಎಂಬ ಪರಿಜ್ಞಾನವಿರಬೇಕು. ? ಅರಿತರೆ ಶರಣ-ಮರೆತರೆ ಮಾನವ? ಎಂದಂತೆ ಅರಿತು ಆಚರಣೆಯಲ್ಲಿ ತರುವುದೇ ನಿಜವಾದ ಬದುಕು. ಇಲ್ಲದಿದ್ದರೆ ನಾಮಫಲಕವಿಲ್ಲದ ಬಸ್ಸಿಗೆ ಹತ್ತಿದ ಪ್ರಯಾಣಿಕನಂತಾಗುವುದು ಖಂಡಿತ. ಜೀವನದಲ್ಲಿ ಬರಬಹುದಾದ ವಿವಿಧ ಅಡೆತಡೆಗಳು, ಗಂಡಾಂತರ, ನಿವಾರಿಸುವ ವಿಧಾನದ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಹೊಂದಿರುವುದು ಉತ್ತಮ. ನಿತ್ಯ ಬದುಕಿನ, ಬಿಡುವಿನ ಅವಧಿಯಲ್ಲಿ ನಿಮ್ಮ ಆಸಕ್ತಿಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಂತೆಯೇ ವೈಯಕ್ತಿಕ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಇಂತಹ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡು ಮುನ್ನಡೆಯುವುದು ಸೂಕ್ತವೆಂಬುದು ನನ್ನ ಗ್ರಹಿಕೆ.