ಪರೀಕ್ಷೆಯನ್ನು ಸುಲಭವಾಗಿ ಎದುರಿಸುವುದು ಹೇಗೆ ?
ಪರೀಕ್ಷೆ ಎಂದರೆ ಬಹುತೇಕ ಪರೀಕ್ಷಾರ್ಥಿಗಳಲ್ಲಿ ಭಯ ತುಂಬಿಕೊಳ್ಳುವುದು ಸಾಮಾನ್ಯವಾಗಿರುತ್ತದೆ ಪರೀಕ್ಷಾ ದಿನಗಳು ಹತ್ತಿರವಾದಷ್ಟೂ ಮಾನಸಿಕ ದುಗುಡಕ್ಕೆ ಒಳಗಾಗುತ್ತಿರುತ್ತಾರೆ. ಆಹಾರ, ನಿದ್ರೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ. ಈ ಎರಡನ್ನೂ ನಿಯಂತ್ರಿಸಲು ಕಾಫಿ, ಟೀ ಹೆಚ್ಚಾಗಿ ಸೇವಿಸುತ್ತಾ ಅದಕ್ಕೆ ದಾಸರಾಗಿಬಿಡುತ್ತಾರೆ. ಸಮತೋಲನ ಆಹಾರ ಮತ್ತು ನಿಯಮಿತ ವಿಶ್ರಾಂತಿ (ನಿದ್ರೆ)ಯ ಕೊರತೆಯು ಹೆಚ್ಚಾಗಿ ಪರೀಕ್ಷೆಯಷ್ಟೊತ್ತಿಗೆ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ. ಸ್ನೇಹಿತರ, ಬಂಧು-ಬಳಗದವರ ಸಂಪರ್ಕದಿಂದ ಓದಿಗೆ ತೊಂದರೆಯಾಗುತ್ತದೆಂದು ತಿಳಿದು ಏಕಾಂತವನ್ನು ಬಯಸುತ್ತಾರೆ. ಕ್ರಮೇಣ ಒಂಟಿತನಕ್ಕೆ ಒಳಗಾಗಿ ಗೊಂದಲಕ್ಕೆ ಸಿಲುಕುತ್ತಾರೆ. ಈ ಎಲ್ಲ ಸಮಸ್ಯೆಗಳಿಗೆ ಓಳಗಾಗುವವರಲ್ಲಿ ಮೊದಲಿಗರು ಪ್ರಥಮವಾಗಿ ವಾರ್ಷಿಕ/ಸಾರ್ವಜನಿಕ ಪರೀಕ್ಷೆಯನ್ನು ಎದುರಿಸಲಿರುವ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು. ನಂತರ ಪಿ.ಯು.ಸಿ. ವಿದ್ಯಾರ್ಥಿಗಳು.
ಸಾಮಾನ್ಯವಾಗಿ ಪ್ರತಿ ವರ್ಷವೂ ಫೆಬ್ರವರಿ ತಿಂಗಳಲ್ಲಿ ಪೂರ್ವಭಾವಿ ಪರೀಕ್ಷೆಗಳು ಆರಂಭವಾಗುತ್ತವೆ. ವಾರ್ಷಿಕ ಪರೀಕ್ಷೆಗಳು ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗಿ ಏಪ್ರಿಲ್ ತಿಂಗಳಲ್ಲಿ ಕೊನೆಗೊಳ್ಳುತ್ತವೆ. ಹೆಚ್ಚಿನ ವಿದ್ಯಾರ್ಥಿಗಳು ವರ್ಷವಿಡೀ ಇಲ್ಲದ ಮಾನಸಿಕ ಒತ್ತಡವನ್ನು ಪರೀಕ್ಷೆ ಹತ್ತಿರವಾದಾಗ ಹೆಚ್ಚಾಗಿ ಅನುಭವಿಸುತ್ತಾರೆ. ಅದಕ್ಕೆ ಹಲವು ರೀತಿಯ ಕಾರಣಗಳು ಮುಖ್ಯವಾಗುತ್ತವೆ.
ವಿದ್ಯಾರ್ಥಿ ಕಾರಣಗಳು
* ಆರಂಭದಿಂದಲೇ ತರಗತಿಗಳಲ್ಲಿ ಶಿಕ್ಷಕರು ಬೋಧಿಸುವ ಪಾಠವನ್ನು ಸರಿಯಾಗಿ ಆಲಿಸದಿರುವುದು.
* ತರಗತಿಗಳಿಗೆ ಗೈರು ಹಾಜರಾಗುವುದು.
* ಪಠ್ಯ ವಿಷಯದಲ್ಲಿನ ಮುಖ್ಯಾಂಶಗಳನ್ನು ಪಟ್ಟಿ ಮಾಡಿಕೊಳ್ಳದಿರುವುದು.
* ಅಂದಿನ ಪಠ್ಯ ಬೋಧನೆಯ ಅಂಶಗಳನ್ನು ಅಂದಂದೇ ಓದಿ ಮನನ ಮಾಡಿಕೊಳ್ಳದಿರುವುದು.
* ಪಠ್ಯ ವಿಷಯವನ್ನು ಅರ್ಥೈಸಿ ಓದಿಕೊಳ್ಳದಿರುವುದು.
* ಓದಿದ್ದನ್ನು ಸ್ನೇಹಿತರೊಂದಿಗೆ ಅಥವಾ ಗುಂಪಲ್ಲಿ ಚರ್ಚಿಸದೇ ಇರುವುದು.
* ಚರ್ಚೆ ಮಾಡುವುದರಿಂದ ನಮ್ಮ ಅಂಕ ಬೇರೆಯವರಿಗೆ ಹೋಗಿಬಿಡುತ್ತದೆನ್ನುವ ತಪ್ಪು ಕಲ್ಪನೆ (ಕೆಲವರಲ್ಲಿ)ಇಟ್ಟುಕೊಂಡಿರುವುದು.
* ಅತಿಯಾದ ನಂಬಿಕೆ ಅಥವಾ ಉದ್ವೇಗಕ್ಕೆ ಒಳಗಾಗುವುದು.
* ಹೊತ್ತಿಗೆ ಸರಿಯಾಗಿ ಸಮತೋಲನ ಆಹಾರ ಸೇವಿಸದಿರುವುದು.
* ಪ್ರತಿ ನಿತ್ಯ ನಿಯಮಿತವಾದ ನಿದ್ರೆ ಮಾಡದಿರುವುದು.
* ದುಶ್ಚಟಗಳಿಗೆ ದಾಸರಾಗುವುದು. ಇತ್ಯಾದಿ.
ಶಿಕ್ಷಕರ ಕಾರಣಗಳು
* ತರಗತಿಗಳಲ್ಲಿ (ಕೆಲವು ಶಿಕ್ಷಕರ) ನೀರಸ ಬೋಧನೆ.
* ತರಗತಿಗಳಿಗೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯ.
* ಯೋಜನೆಯಂತೆ ಪಾಠ ಬೋಧನೆ ಮುಗಿಸದಿರುವುದು.
* ಅವಶ್ಯವಿದ್ದಲ್ಲಿ ವಿಶೇಷ ತರಗತಿಗಳನ್ನು ನಡೆಸದಿರುವುದು.
* ಪರೀಕ್ಷೆ ಹತ್ತಿರವಾದಾಗ ಅತಿಯಾದ ತರಗತಿಗಳನ್ನು ನಡೆಸುವುದು.
* ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳೊಂದಿಗೆ ಹೋಲಿಸಿ ನಿಂದಿಸುವುದು.
* ಇಂತಿಷ್ಟೇ ಅಂಕ ತೆಗೆಯಬೇಕೆಂದು ನಿರ್ಬಂಧ ಹೇರುವುದು.
* ವಿದ್ಯಾರ್ಥಿಗಳೊಂದಿಗೆ ಸ್ನೇಹದಿಂದ ವರ್ತಿಸಿ ಮಾನಸಿಕ ಸ್ಥೈರ್ಯ ಹಾಗೂ ಧೈರ್ಯ ತುಂಬದಿರುವುದು. ಇತ್ಯಾದಿ.
ಪೋಷಕರ ಕಾರಣಗಳು
* ಮಕ್ಕಳನ್ನು ಕಾಟಾಚಾರಕ್ಕೆ (ಕೆಲವರು) ಶಾಲೆಗೆ ಕಳುಹಿಸುವುದು.
* ಮಕ್ಕಳ ಕಲಿಕೆ ಮತ್ತು ವರ್ತನೆಗಳ ಬಗ್ಗೆ ನಿಗಾವಹಿಸದಿರುವುದು.
* ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಾಲೆಯಲ್ಲಿ ನಡೆಸುವ ಸಭೆ, ಸಮಾರಂಭಗಳಲ್ಲಿ ಭಾಗವಹಿಸದಿರುವುದು.
* ಮಕ್ಕಳ ಅಭಿವೃದ್ಧಿಗಾಗಿ ಶಿಕ್ಷಕರೊಂದಿಗೆ ಸದ್ಭಾವನಾ ಸಂಬಂಧ ಇಟ್ಟುಕೊಳ್ಳದಿರುವುದು.
* ಸದಾ ಪಕ್ಕದ ಮನೆ ಅಥವಾ ಪಕ್ಕದ ಶಾಲೆಯ ಮಕ್ಕಳೊಂದಿಗೆ ಹೋಲಿಸಿ ನಿಂದಿಸುವುದು.
* ಕಲಿಕೆಗೆ ಬೇಕಾದ ಸಾಮಗ್ರಿಗಳನ್ನು ಪೂರೈಸದಿರುವುದು.
* ಎಲ್ಲರಿಗಿಂತಲೂ ಹೆಚ್ಚಿನ ಅಂಕ ತೆಗೆಯಲೇಬೇಕೆಂದು ಒತ್ತಡ ಹೇರುವುದು.
* ಆರೋಗ್ಯದ ದೃಷ್ಟಿಯಲ್ಲಿ ಮಕ್ಕಳಿಗೆ ಸರಿಯಾದ ಪೌಷ್ಠಿಕ ಆಹಾರವನ್ನು ನೀಡದಿರುವುದು.
* ಸ್ನೇಹಿತರೊಂದಿಗೆ ಬೆರೆಯಲು ಬಿಡದಿರುವುದು.
* ಮಕ್ಕಳೊಂದಿಗೆ ಸ್ನೇಹದಿಂದ ವರ್ತಿಸಿ, ಮನೋಬಲ ತುಂಬದಿರುವುದು. ಇತ್ಯಾದಿ.
ಈ ಮೇಲಿನ ಕಾರಣಗಳೆಲ್ಲವೂ ಓದಬೇಕೆಂಬ ಹಂಬಲವಿರುವ ವಿದ್ಯಾರ್ಥಿಗಳಿಗೆ ಅಚಾತುರ್ಯವಾಗಿ ಆಗುವ ತೊಡಕುಗಳು. ಯಾರೂ ಬೇಕೆಂತಲೇ ತೊಂದರೆಗಳನ್ನು ಅನುಭವಿಸಲು ಸಿದ್ಧರಿರುವುದಿಲ್ಲ. ಅಥವಾ ತೊಂದರೆಯನ್ನು ಕೊಡಬೇಕೆಂಬ ಮನಸ್ಸೂ ಇರುವುದಿಲ್ಲ. ಆದರೆ ಗೊತ್ತಿಲ್ಲದೆಯೋ ಅಥವಾ ಅನಿವಾರ್ಯವಾಗಿಯೋ ಉಂಟಾಗಬಹುದಾದ ಸಮಯಪ್ರಜ್ಞೆಯ ಕೊರತೆಯಿಂದ ಇಂತಹ ಅನಾಹುತಗಳು ಆಗಿಬಿಡಬಹುದು. ಅದೇ ಮುಂದೆ ವಿದ್ಯಾರ್ಥಿಗಳಿಗೆ ಪರಿಕ್ಷಾ ಸಮಯದಲ್ಲಿ ಉಂಟಾಗುವ ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು.
ಆದರೂ ಮೇಲಿನ ಎಲ್ಲ ಕಾರಣಗಳ ಹೊರತಾಗಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ವಿದ್ಯಾರ್ಥಿಗಳು ಕೆಲವೊಂದು ಉಪಾಯಗಳನ್ನು ಮಾಡಿಕೊಳ್ಳಬೇಕಾಗಿದೆ. ಆಗ ಪರೀಕ್ಷೆಯ ಭಯ ದೂರವಾಗಿ ಯಶಸ್ಸು ಹೆಗಲೇರುತ್ತದೆ.
ಅಂತಹ ಮಾರ್ಗೋಪಾಯಗಳೆಂದರೆ
* ಪಠ್ಯವಿಷಯದಲ್ಲಿನ ಮುಖ್ಯಾಂಶಗಳನ್ನು ಬರೆದಿಟ್ಟುಕೊಳ್ಳುವುದು.
* ಬರೆದಿಟ್ಟುಕೊಂಡಿರುವ ಪಠ್ಯ ವಿಷಯದ ಮುಖ್ಯಾಂಶಗಳನ್ನು ಅರ್ಥೈಸಿ ಓದಿಕೊಳ್ಳುವುದು.
* ಓದಿದ್ದನ್ನು ಸ್ನೇಹಿತರೊಂದಿಗೆ ಅಥವಾ ಗುಂಪಲ್ಲಿ ಚರ್ಚಿಸಿ ಮನನ ಮಾಡಿಕೊಳ್ಳುವುದು.
* ಚರ್ಚೆ ಮಾಡುವುದರಿಂದ ನಮ್ಮ ಅಂಕ ಬೇರೆಯವರಿಗೆ ಹೋಗಿಬಿಡುತ್ತದೆನ್ನುವ ತಪ್ಪು ಕಲ್ಪನೆಯ ಬದಲಿಗೆ ಕಲಿಕೆ ಸದೃಢವಾಗುತ್ತದೆಂಬುವ ವಿಶ್ವಾಸವನ್ನು ಹೊಂದುವುದು.
* ಅತಿಯಾದ ನಂಬಿಕೆ ಅಥವಾ ಉದ್ವೇಗಕ್ಕೆ ಒಳಗಾಗದಿರುವುದು.
* ಪ್ರತಿ ನಿತ್ಯ ಒಂದಿಷ್ಟು ಧ್ಯಾನ, ಸಮತೋಲನ (ಮೃಧು) ಆಹಾರ ಹಾಗೂ ನಿಯಮಿತ ವಿಶ್ರಾಂತಿ (ನಿದ್ರೆ) ಮಾಡುವುದು.
* ಅತಿಯಾದ ಕಾಫಿ, ಟೀ, ಹಾಗೂ ನಿದ್ರೆಗೆಡಿಸುವ ಮತ್ತು ಪದಾರ್ಥಗಳಿಂದ ದೂರವಿರುವುದು.
* ಸ್ನೇಹಿತರ, ಶಿಕ್ಷಕರ ಹಾಗೂ ಕುಟುಂಬದವರ ಜೊತೆ ಒಂದಿಷ್ಟು ವೇಳೆ ಸ್ನೇಹ ಹಾಗೂ ಪ್ರೀತಿಯಿಂದ ಬೆರೆಯುವುದು.
* ಪರೀಕ್ಷೆ ಬರೆಯುವ ಮೊದಲು ಪ್ರಶ್ನೆಯನ್ನು ಚೆನ್ನಾಗಿ ಅರ್ಥೈಸಿ ಓದಿಕೊಂಡು ನಂತರ ಸರಿಯಾದ ಉತ್ತರವನ್ನು ಬರೆಯುವುದು.
* ನಿಖರ ಉತ್ತರಗಳನ್ನು ಮೊದಲು ಬರೆದುಬಿಡಬೇಕು. ಆ ನಂತರ ಉಳಿದುದರ ಬಗ್ಗೆ ಆಲೋಚಿಸಿ ಬರೆಯಬೇಕು.
* ಒಂದು ವೇಳೆ ಕೆಲವು ಪ್ರಶ್ನೆಗಳಿಗೆ ನಿಖರ ಉತ್ತರ ಬಾರದಿದ್ದರೆ; ನಿಕಟ ಉತ್ತರವನ್ನಾದರೂ ಬರೆಯಲು ಪ್ರಯತ್ನಿಸುವುದು.
* ಸೂಚಿತ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಮರೆಯದಿರುವುದು.
* ಪ್ರಶ್ನೆ ಪತ್ರಿಕೆ ಬಯಲು ಅಥವಾ ಕಾಪೀ ಹೊಡೆಸುವ ವದಂತಿಗಳಿಂದ ದೂರವಿರುವುದು. ಇತ್ಯಾದಿ.
ಒಟ್ಟಾರೆ ವಿದ್ಯಾರ್ಥಿಗಳೇ, ಒಂದು ವಿಷಯವಂತೂ ಗಮನದಲ್ಲಿರಲಿ; ಪರೀಕ್ಷೆಯನ್ನು ಸ್ಥೈರ್ಯ, ಧೈರ್ಯ, ದೃಢತೆ, ಛಲ ಹಾಗೂ ಮನೋಬಲದಿಂದ ಯಶಸ್ವಿಯಾಗಿ ಎದುರಿಸಿ. ಆ ನಂತರ ಬರುವ ಫಲಿತಾಂಶದ ಬಗ್ಗೆ ವಿಶ್ವಾಸವನ್ನಷ್ಟೇ ಇಟ್ಟಿರಿ. ಪ್ರಯತ್ನದಷ್ಟು ಫಲಿತಾಂಶ ಬಂದೇ ಬರುತ್ತದೆ.
ಕೆಲವು ವಿದ್ಯಾರ್ಥಿಗಳಿಗೆ ನನ್ನದೊಂದು ಕಿವಿಮಾತಿದೆ. ಪರೀಕ್ಷೆಯನ್ನು ಚೆನ್ನಾಗಿಯೇ ಬರೆದಿದ್ದಾಯಿತು. ಆದರೆ ಫಲಿತಾಂಶ ನಿರೀಕ್ಷೆಯಷ್ಟಾಗಲಿಲ್ಲ. ಈಗೇನ್ಮಾಡುವುದು? ಸ್ನೇಹಿತರಲ್ಲಿ ಅವಮಾನ; ಅಪ್ಪ-ಅಮ್ಮ ಬೈತಾರೆ ಅಂತ ಪ್ರಾಣ ಹಾನಿಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವರು ಹಲವರಿರಬಹುದು. ಅಂತಹ ಅಲೋಚನೆಯುಳ್ಳವರು ಮೊದಲು ಅರ್ಥಮಾಡಿಕೊಳ್ಳಿ; ನೀವು ಬರೆಯುವ ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. ಪರೀಕ್ಷೆಯ ಅಂಕಪಟ್ಟಿಯಿಂದ ನಿಮ್ಮ ಮುಂದಿನ ವಿದ್ಯಾಭ್ಯಾಸ ಮುಂದುವರೆಸಲು ಅನುಕೂಲವಾಗುತ್ತದಷ್ಟೆ. ಈ ಪರೀಕ್ಷೆಯಿಂದಲೇ ನಿಮ್ಮ ಬದುಕು ರೂಪುಗೊಳ್ಳುವುದಿಲ್ಲ. ಈಗಿನ ಸ್ಪರ್ಧಾತ್ಮಕ ದಿನಗಳಲ್ಲಿ ಮುಂದೆ ಯಾವುದೇ ಉದ್ಯೋಗವನ್ನು ಪಡೆದುಕೊಳ್ಳಲು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ಒಂದು ವೇಳೆ ಪರೀಕ್ಷೆಯಲ್ಲಿ ಅಪ್ಪಿ-ತಪ್ಪಿ ಕಡಿಮೆ ಅಂಕ ಬರಬಹುದು. ಅಥವಾ ಅನುತ್ತೀರ್ಣವೂ ಆಗಬಹುದು. ಅಷ್ಟು ಮಾತ್ರಕ್ಕೆ ಜೀವನದಲ್ಲಿ ಜಿಗುಪ್ಸೆಯಾಗದೆ ಮರಳಿ ಪ್ರಯತ್ನ ಮಾಡಿ ಯಶಸ್ಸನ್ನು ಪಡೆದುಕೊಳ್ಳಿ. ಮೊದಲಿನ ಪ್ರಯತ್ನದಲ್ಲೇ ಗೆಲುವಾಗಲು ಶ್ರಮಪಡಿ. ಪ್ರಯತ್ನ ಫಲ ನೀಡಲಿಲ್ಲ ಎಂದರೆ ?ಸೋಲೇ ಗೆಲುವಿನ ಮೆಟ್ಟಿಲು? ಎನ್ನುವುದನ್ನು ಮರೆಯದಿರಿ.
ಪೋಷಕರೂ ಒಂದು ಸರಳವಾದ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಪ್ರತಿಯೊಂದು ಮಗುವಿನ ರಕ್ತದ ಗುಂಪು ಭಿನ್ನವಾಗಿಯೇ ಇರುತ್ತದೆ. ಹಾಗೆಯೇ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳೂ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿಯೇ ಇರುತ್ತವೆ. ಹೀಗಿರುವಾಗ ಒಂದೇ ತರಗತಿಯ ಎಲ್ಲಾ ಮಕ್ಕಳೂ ಒಂದೇ ವೇಳೆಗೆ ಒಂದೇ ರೀತಿಯ ಸಾಮರ್ಥ್ಯವನ್ನು ಗಳಿಸಲು ಹೇಗೆ ಸಾಧ್ಯ? ಹೀಗಾಗಿ ತಮ್ಮ ಮಕ್ಕಳ ಸಾಮರ್ಥ್ಯವನ್ನು ಮತ್ತೊಬ್ಬರ ಮಕ್ಕಳ ಸಾಮರ್ಥ್ಯದೊಂದಿಗೆ ಹೋಲಿಸಿ ಜೀವನದಲ್ಲಿ ಜಿಗುಪ್ಸೆಗೊಳ್ಳುವಂತೆ ಮಾಡದಿರಿ. ಬದಲಿಗೆ ತಮ್ಮ ಮಕ್ಕಳು ಮಾಡಿರುವ ಸಾಧನೆಯನ್ನೇ ಶಹಭಾಷ್ ಎಂದು ಹೊಗಳಿ, ಬೆನ್ನು ತಟ್ಟಿ ಮುಂದಿನ ಭವಿಷ್ಯವನ್ನು ಕಂಡುಕೊಳ್ಳಲು ಆಶೀರ್ವದಿಸಿ.