ವನ್ಯಜೀವಿಗಳ ಸಂರಕ್ಷಣೆ ಇಲ್ಲದೆ ಮಾನವನ ಉಳಿವು ಒಂದು ಮರೀಚಿಕೆ !
ವನ್ಯಜೀವಿ ಎಂದರೇನು? ಎಂದು ಯಾರನ್ನಾದರೂ ಪ್ರಶ್ನೆ ಮಾಡಿ.ಸಾಮಾನ್ಯವಾಗಿ ಎಲ್ಲರೂ ಥಟ್ಟನೆ ನೆನಪಿಸಿಕೊಂಡು ಕೊಡುವ ಉತ್ತರ;ಕಾಡಿನಲ್ಲಿ ವಾಸಿಸುವ ನರಿ, ಮೊಲ, ಜಿಂಕೆ, ಆನೆ, ಕರಡಿ, ಚಿರತೆ, ಹುಲಿ, ಸಿಂಹ ಇತ್ಯಾದಿ ಎಂದು. ಇದು ಸರಿಯಾದ ಉತ್ತರವೇ ಆದರೂ ಇಲ್ಲಿ ಹೆಸರಿಸಿರುವ ಹೆಸರುಗಳು ಕೇವಲ ಪ್ರಾಣಿ ಪ್ರಪಂಚದ್ದಾಗಿದೆ. ಆದರೆ ಸಾಮಾನ್ಯರು ತಿಳಿಯದಿರುವ ಮತ್ತೊಂದು ಸತ್ಯ ಸಂಗತಿ ಒಂದಿದೆ.
ವನ್ಯಜೀವಿ ಸಂಶೋಧಕರ ಪ್ರಕಾರ ಸಾಮಾನ್ಯವಾಗಿ ಮನುಷ್ಯನು ಸಾಕಲು ಆಗದಿರುವ ಸಸ್ಯಗಳು, ಪ್ರಾಣಿಗಳು, ಪಕ್ಷಿಗಳು ಮತ್ತು ಇತರ ಜೀವಿಗಳೆಲ್ಲವನ್ನೂ ವನ್ಯಜೀವಿಗಳೆನ್ನುತ್ತಾರೆ. ಇದು ಬಹಳಷ್ಟು ಜನರಿಗೆ ತಿಳಿದಿಲ್ಲವಾದರೂ ಸಂಶೋಧನೆಗಳಿಂದ ದೃಢಪಟ್ಟಿರುವುದಂತೂ ನಿಜ. ಈಗಿನ ಮಾನವನ ನಾಗರೀಕತೆಯ ಸಂದರ್ಭದಲ್ಲಿ ಇಲ್ಲೊಂದು ಪ್ರಶ್ನೆ ಉದ್ಭವಿಸಬಹುದು. ಅದೇನೆಂದರೆ; ಈಗಿನ ಮಾನವ ಸಾಕದೇ ಇರುವ ಯಾವುದೇ ಸಸ್ಯ, ಪ್ರಾಣಿ ಪ್ರಬೇಧ ಪ್ರಪಂಚದಲ್ಲಿದೆಯೇ? ಎಂಬುದು. ಈ ಪ್ರಶ್ನೆಗೂ ಉತ್ತರ ಇಲ್ಲ; ಇತ್ತೀಚಿನ ಮಾನವ ಎಲ್ಲವನ್ನೂ ಸಾಕಿದ್ದಾನೆ ಮತ್ತು ಪಳಗಿಸಿದ್ದಾನೆ ಎನ್ನುವುದೂ ನಿಜವೇ ಆದರೆ ಮೂಲತಃ ಮಾನವನಿಗೂ ಮತ್ತು ವನ್ಯಜೀವಿ ಪ್ರಪಂಚಕ್ಕೂ ಯಾವುದೇ ಹೊಂದಿಕೆಯಾಗುವ ನಾಗರೀಕತೆ ಹಾಗೂ ಸಂಸ್ಕೃತಿ ಇಲ್ಲ. ಮಾನವ ಅಭಿವೃದ್ಧಿಯಾಗುತ್ತಿದ್ದಂತೆ ತನ್ನ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುತ್ತಾ ಬಂದಿದ್ದಾನೆಯಷ್ಟೇ. ತನ್ನ ಬುದ್ಧಿಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಾ ಬಂದ ಮಾನವ ತನ್ನದೇ ಆದ ನಾಗರೀಕತೆ, ಸಂಸ್ಕೃತಿ ಹಾಗೂ ಧರ್ಮವನ್ನು ಸೃಷ್ಠಿಸಿಕೊಂಡು ಮುಂದುವರೆಯುತ್ತಾ ಬಂದಿದ್ದಾನೆ. ಈ ವೇಳೆ ಕೆಲವು ಸಸ್ಯ ಮತ್ತು ಪ್ರಾಣಿಗಳನ್ನು ಪವಿತ್ರವೆಂದು ಬಿಂಬಿಸಿ ಅವುಗಳನ್ನು ಸಾಕಲು, ಪೂಜಿಸಲು ಆರಂಭಿಸಿದ್ದಾನೆ. ಮತ್ತೊಂದು ವಿಧಾನದಲ್ಲಿ ಇದೇ ಮಾನವ ಕೆಲವು ಸಸ್ಯಜನ್ಯ ಮತ್ತು ಪ್ರಾಣಿಜನ್ಯ ವನ್ಯಜೀವಿಗಳನ್ನು ಆಹಾರ, ಔಷಧ ಮತ್ತು ವ್ಯಾಪಾರ; ಹಣ ಗಳಿಕೆ ವಿಚಾರದಲ್ಲಿ ಬಳಸುತ್ತಾ ಬಂದಿದ್ದಾನೆ. ಇದು ಇಂದು ಅತಿರೇಕದ ಪರಾಕಾಷ್ಟೆಯನ್ನು ತಲುಪಿರುವುದರಲ್ಲಿ ಯಾವುದೇ ಸಂಶಯವಿಲ್ಲ.

ಮಾನವನಿಗೆ ಮೂಲದಲ್ಲಿ ವನ್ಯಜೀವಿಗಳು ಆಹಾರವೂ ಅಲ್ಲ; ಆವಾಸ ಸ್ಥಾನವೂ ಅಲ್ಲ. ಕೇವಲ ಗೆಡ್ಡೆ-ಗೆಣಸು ತಿಂದು, ನೀರು ಕುಡಿದು ಮಲಗುತ್ತಿದ್ದ ಎನ್ನುವುದು ನಮ್ಮ ಮಾನವನ ಹಿಂದಿನ ಇತಿಹಾಸ. ಆಗ ಕಾಡಿನಲ್ಲೇ ವಾಸವಾಗಿದ್ದರೂ ಯಾವುದೇ ವನ್ಯಜೀವಿ ಮಾನವನ ಪ್ರಕೃತಿಧರ್ಮದ ಜೀವನಕ್ಕೆ ತೊಂದರೆಯನ್ನು ಕೊಟ್ಟಿರುವ ಸಾಕ್ಷಿಗಳಿಲ್ಲ. ಆದರೆ ಮಾನವ ತನ್ನ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಆರಂಭಿಸುತ್ತಿದ್ದಂತೆ ಅತಿಕ್ರಮಣಗಳಿಗೂ ಕೈ ಹಾಕುವ ದುಸ್ಸಾಹಸಕ್ಕೆ ಮುಂದಾಗುತ್ತಾನೆ. ತನ್ನ ಬುದ್ಧಿ ಮತ್ತು ಮಾತಿನ ಚಾಕಚಕ್ಯತೆಯಿಂದಾಗಿ ದುರಾಸೆಯನ್ನು ಮೈಗೂಡಿಸಿಕೊಂಡ ಮೇಲೆ ವನ್ಯಜೀವಿ ಪ್ರಪಂಚದೊಳಗೆ ನುಗ್ಗಿಬಿಡುತ್ತಾನೆ. ಅಂದಿನಿಂದಲೇ ವನ್ಯಜೀವಿ ಮತ್ತು ಮಾನವನ ಮಧ್ಯೆ ಸಂಘರ್ಷ ಏರ್ಪಡಲು ಮೊದಲಾಗಿದ್ದು.
ಏನಿದು ಸಂಘರ್ಷ: ನಾಗರೀಕ ಮನುಷ್ಯ ತನ್ನ ನಾಡನ್ನು ವಿಸ್ತರಿಸಲು ವನ್ಯಜೀವಿಗಳ ವಾಸಸ್ಥಾನಗಳಾಗಿದ್ದ ಅರಣ್ಯ, ಕಾಡು, ಕಣಿವೆ, ಬೆಟ್ಟ, ಗುಡ್ಡ, ಗವಿ, ಪೊದೆ, ಪೊಟರೆ, ಕೆರೆ, ಕುಂಟೆ ಇತ್ಯಾದಿ ಎಲ್ಲವನ್ನೂ ಅತಿಕ್ರಮಣ ಮಾಡಿಕೊಂಡು, ನೆಲಸಮ ಮಾಡಿ ಕಾಂಕ್ರೆಟ್ ಕಟ್ಟಡಗಳನ್ನು, ರೆಸಾರ್ಟ್, ಕಾರ್ಖಾನೆಗಳನ್ನು ಕಟ್ಟುತ್ತಿದ್ದಾನೆ. ಹೈವೇಯಂತಹ ರಸ್ತೆಗಳನ್ನು ಮಾಡುತ್ತಿದ್ದಾನೆ. ಗಗನಚುಂಬಿ ಟವರ್ಗಳನ್ನು ನಿರ್ಮಿಸುತ್ತಿದ್ದಾನೆ. ಕಟ್ಟಡ, ಕಾರ್ಖಾನೆ, ರಸ್ತೆ, ಟವರ್ಗಳ ನಿರ್ಮಾಣದಿಂದ ವನ್ಯಜೀವಿಗಳು ಜೀವಿಸಲು ಸ್ಥಳದ ಸಮಸ್ಯೆಯಾಗುತ್ತಿದೆ. ಕಾರ್ಖಾನೆ ಮತ್ತು ವಾಹನಗಳ ಕರ್ಕಶ ಶಬ್ಧಗಳಿಂದ ಹಾಗೂ ಟವರ್ಗಳ ಕಂಪನಗಳಿಂದ ಮಾನಸಿಕ ನೆಮ್ಮದಿಗೆ ಧಕ್ಕೆಯಾಗುತ್ತಿದೆ.ಜೊತೆಗೆ ಕೆಲವು ವನ್ಯಜೀವಿಗಳನ್ನು ಹಿಡಿದು ಕೊಂದು ತಿನ್ನುತ್ತಿದ್ದಾನೆ. ಕೆಲವನ್ನು ಸೌಂದರ್ಯದ ನೆಪದಲ್ಲಿ ಬೋನಿನಲ್ಲಿ ಬಂಧಿಸಿ ಆನಂದಪಡುತ್ತಿದ್ದಾನೆ. ಮತ್ತೆ ಕೆಲವನ್ನು ಆಟೋಟಗಳ ನೆಪದಲ್ಲಿ ಪಳಗಿಸುತ್ತಿದ್ದಾನೆ. ಇನ್ನೂ ಕೆಲವನ್ನು ಹಣದಾಸೆಗೆ ಮಾರಾಟ ಮಾಡುತ್ತಿದ್ದಾನೆ. ಹೀಗೆ ಮಾಡುವುದರಿಂದ ಮಾನವನ ತೆಕ್ಕೆಗೆ ಬೀಳದೆ ಬಚಾವಾಗಿರುವ ವನ್ಯಜೀವಿಗಳಿಗೆ ಆಹಾರ, ನೀರು, ವಾಸಸ್ಥಳದ ಸಮಸ್ಯೆ ತೀವ್ರಗತಿಯಲ್ಲಿ ಎದುರಾಗುತ್ತಿದೆ.
ಹೀಗೆ ನಗರೀಕರಣ, ಕೈಗಾರೀಕರಣ, ಪ್ರವಾಸೋದ್ಯಮ, ಆರ್ಥಿಕ ಪ್ರಗತಿಯಂತಹ ಮಾನವನ ಕೆಟ್ಟ ದೃಷ್ಠಿಕೋನಕ್ಕೆ ಕಂಗೆಟ್ಟ ವನ್ಯಜೀವಿಗಳು ತಮ್ಮ ಆಹಾರವನ್ನು ಹುಡುಕಿಕೊಂಡು ಬರಲು ಆರಂಭಿಸಿವೆ. ಈ ದಾರಿಯಲ್ಲಿ ಅವುಗಳಿಗೆ ಸಿಗುತ್ತಿರುವುದು ಮಾನವ ನಿರ್ಮಿತ ನಾಡು. ನಗರ ಪ್ರದೇಶವಾದರೆ ಕೋತಿ, ಹಾವುಗಳುಹೆಚ್ಚಾಗಿ ನುಸುಳುತ್ತವೆ. ಗ್ರಾಮೀಣ ಪ್ರದೇಶವಾದರೆ ಕಾಡು ಹಂದಿ, ನರಿ, ಕರಡಿ, ಚಿರತೆಗಳು ದಾಳಿಯಿಡುತ್ತವೆ. ದೊಡ್ಡ ಕಾಡುಗಳಂಚಿನ ಪ್ರದೇಶಗಳಾದರೆ ಆನೆ, ಹುಲಿ, ಕಾಡು ಹಂದಿ, ಕಡವೆಗಳು ಹಾವಳಿ ಮಾಡುತ್ತವೆ. ಹೀಗೆ ದಾಳಿ ಮಾಡುವಾಗಲೂ ಈ ವನ್ಯಜೀವಿಗಳ ಆಹಾರ ಮಾತ್ರ ಮಾನವ ಅಲ್ಲವೇ ಅಲ್ಲ. ದಾಳಿಯ ವೇಳೆ ಮಾನವನೇನಾದರೂ ಅಡ್ಡಿಪಡಿಸಿದರೆ ಮಾತ್ರ ಅವನ ಮೇಲೆ ಆಕ್ರಮಣ ಮಾಡಿದ ಸಂದರ್ಭದಲ್ಲಿ ಅವನು ಗಾಯಗೊಳ್ಳಬಹುದು ಅಥವಾ ಪ್ರಾಣಾಪಾಯಕ್ಕೊಳಗಾಗಬಹುದು. ಈ ಸಂದರ್ಭದಲ್ಲಿ ಮಾನವನ ರಕ್ತದ ರುಚಿ ಕಂಡ ಚಿರತೆ ಅಥವಾ ಹುಲಿ ಎಲ್ಲೋ ಅಪರೂಪಕ್ಕೆ ಒಂದೆರಡಿದ್ದಿರ ಬಹುದಾಂತಹ ಸಾಕ್ಷಿಗಳನ್ನು ನಾವು ಕಂಡಿದ್ದೇವೆ. ಆದರೆ ಮೂಲತಃ ವನ್ಯಜೀವಿಗಳ ಬೇಟೆ ಮಾನವನಂತೂ ಅಲ್ಲವೇ ಅಲ್ಲ.
ಸಂಘರ್ಷಕ್ಕೆ ಮಾನವನ ಪ್ರತಿವಾದ: ಇತ್ತೀಚೆಗೆ ವನ್ಯಜೀವಿಗಳಾದ ಆನೆ, ಚಿರತೆ, ಹುಲಿಯ ದಾಳಿಗಳು ತುಂಬಾ ಆಗುತ್ತಿರುವುದು ಬೆಳಕಿಗೆ ಬರುತ್ತಿವೆ. ಕಾಡಾನೆಗಳು ರೈತರ ತೋಟಗಳಿಗೆ ನುಗ್ಗಿ ಬೆಳೆಯನ್ನು ನಾಶ ಮಾಡಿರುವ ಹಾಗೂ ಕಾವಲು ರೈತರ ಮೇಲೆ ದಾಳಿ ಮಾಡಿರುವ ದೃಶ್ಯಗಳು, ಚಿರತೆಗಳು ದನ-ಕುರಿಗಾಹಿಗಳ ಮೇಲೆ ದಾಳಿ ಮಾಡಿರುವ ದೃಶ್ಯಗಳು ಮತ್ತು ಹುಲಿಗಳುಮನುಷ್ಯರ ಮೇಲೆ ಮಾಡಿರುವ ದಾಳಿಯ ದೃಶ್ಯಗಳು ಮಾಧ್ಯಮಗಳ ಮೂಲಕ ನೋಡುತ್ತಿದ್ದೇವೆ. ಹಾಗೆಯೇ ವನ್ಯಜೀವಿಗಳ ಜೊತೆ ಸಂಘರ್ಷಕ್ಕೆ ಇಳಿದಿರುವ ಮಾನವರು ಆನೆಗಳ ದಾರಿಗಳಲ್ಲಿ ಕಂದಕಗಳನ್ನು ನಿರ್ಮಿಸಿ ಸಾಯಿಸಲು ಪ್ರಯತ್ನಿಸಿರುವ ಸಾಕ್ಷಿಗಳಿವೆ. ಚಿರತೆ, ಹುಲಿಗಳನ್ನು ಅಟ್ಟಾಡಿಸಿ ಕಲ್ಲು, ದೊಣ್ಣೆಗಳಿಂದ; ಮಾರಕಾಸ್ತ್ರಗಳಿಂದ ಸಾಯಿಸಿರುವ ದೃಶ್ಯಾವಳಿಗಳೂ ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಇನ್ನು ಅದೆಷ್ಟು ವನ್ಯಜೀವಿಗಳ ಮಾರಣಹೋಮ ಬೆಳಕಿಗೆ ಬಾರದೇ ನಡೆದು ಹೋಗುತ್ತಿದೆಯೋ ಬಲ್ಲವರ್ಯಾರು? ಗ್ರಾಮೀಣ ಪ್ರದೇಶದ ಹೊಲ, ಗದ್ದೆ, ಸಣ್ಣ ತೋಟಗಳ ರಕ್ಷಣೆಗಾಗಿ ಉರುಳು ಹಾಕುವುದು, ವಿದ್ಯುತ್ ತಂತಿ ಕಟ್ಟುವುದು, ಸಿಡಿಮದ್ದು ಸಿಡಿಸುವುದು, ವಿಷಾನ್ನ ಇಡುವುದು, ಬೇಟೆಯಾಡುವುದು ಸೇರಿದಂತೆ ಹಲವು ವಿಧ್ವಂಸಕ ಉಪಾಯಗಳನ್ನು ಮಾಡಿ ಇಲಿ, ಹೆಗ್ಗಣ ಮೊಲ, ಜಿಂಕೆ, ಕೋತಿ, ಕಾಡು ಹಂದಿ ಹಾಗೂ ಕೆಲವು ಪಕ್ಷಿಗಳ ಸಂತತಿಯನ್ನೇ ಮನುಷ್ಯ ನಾಶಗೊಳಿಸುತ್ತಿದ್ದಾನೆ.
ಈ ಬಗ್ಗೆ ಮನುಷ್ಯರನ್ನು ಪ್ರಶ್ನಿಸಿದರೆ ಮಾಡುವುದು ಒಂದೇ ವಾದ; ಮಳೆ ಇಲ್ಲದೆ ನಾಡಿಗೆ ಬರಗಾಲ ಬಂದಿದೆ. ಜಲ ಮೂಲಗಳು ಬತ್ತಿ ಹೋಗಿವೆ. ಅಂತರ್ಜಲ ಪಾತಾಳ ಮುಟ್ಟಿದೆ. ಇರುವ ಒಂದಿಷ್ಟು ನೀರನ್ನು ಬಳಸಿಕೊಂಡು ಅಪರೂಪಕ್ಕೆ ಒಂದಿಷ್ಟು ಬೆಳೆ ಬೆಳೆದರೆ ಅದನ್ನು ವನ್ಯಜೀವಿಗಳು ನಮ್ಮ ಕೈಗೆಟುಕದಂತೆ ಮಾಡುತ್ತಿದ್ದರೆ ನಾವು ಹೇಗೆ ಸಹಿಸಿಕೊಂಡು ಇರುವುದು. ನಾವು ಅನ್ನ ತಿನ್ನುವುದು ಬೇಡವೇ? ನಮ್ಮ ಮಕ್ಕಳನ್ನು ಸಾಕುವುದು ಹೇಗೆ? ನಾವು ಸಾಲ ಸೋಲಾ ತೀರಿಸಿ ಬದುಕುವುದಾದರೂ ಹೇಗೆ? ಅದಕ್ಕಾಗಿ ನಾವೂ ಕೂಡ ಪ್ರತೀಕಾರ ತೀರಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಎನ್ನುತ್ತಾರೆ ರೈತರು.
ಇನ್ನು ದನ-ಕುರಿಗಾಹಿಗಳನ್ನು ಕೇಳಿದರೆ ಅವರ ವಾದ; ?ನಾವು ಸಾಲ ಮಾಡಿಯೋ, ಸರ್ಕಾರದ ಸಹಾಯಧನದಿಂದಲೋ ಒಂದಿಷ್ಟು ದನ, ಕುರಿ, ಜಾನುವಾರಗಳನ್ನು ಸಾಕಿಕೊಂಡು ಅವುಗಳಿಂದ ಬಂದ ಹಣದಲ್ಲಿ ಜೀವನವನ್ನು ಮಾಡುತ್ತಿರುವವರು. ಮೇಯಿಸಲು ಹೋದ ಕಡೆ ನಮ್ಮ ಜಾನುವಾರಗಳನ್ನು ತೋಳ, ನರಿ, ಚಿರತೆಗಳು ಬೇಟೆಯಾಡಿದರೆ ನಾವೇನು ಮಾಡಬೇಕು? ಬೆದರಿಸಲು ಹೊದರೆ ನಮ್ಮ ಮೇಲೆಯೇ ದಾಳಿಯಿಟ್ಟರೆ ನಮ್ಮ ಜೀವ ಉಳಿಸಿಕೊಳ್ಳುವುದು ಬೇಡವೇ? ಇಂತಹ ಸಂದರ್ಭದಲ್ಲಿ ನಾವು ಪ್ರತಿರೋಧ ಒಡ್ಡುವುದರಲ್ಲಿ ತಪ್ಪೇನಿದೆ?? ಎನ್ನುತ್ತಾರೆ ಈ ಜನ. ಒಮ್ಮೊಮ್ಮೆ ದಾರಿ ತಪ್ಪಿಯೋ ಇಲ್ಲ ಆಹಾರ ಹುಡುಕಿಯೋ ಊರೊಳಗೇನಾದರೂ ವನ್ಯಜೀವಿಗಳು ನುಗ್ಗಿದರೆ ಅವುಗಳನ್ನು ಓಡಿಸುವ ನೆಪದಲ್ಲೇ ಜೀವ ಹಿಂಡಿ ಹಿಪ್ಪೆ ಮಾಡಿಬಿಡುತ್ತಿರುವುದು ಸಾಮಾನ್ಯವಾಗಿದೆ.
ವನ್ಯಜೀವಿಗಳ ನಾಶದಿಂದಾಗುವ ದುಷ್ಪರಿಣಾಮ:ನಾವಿಂದು ಅತಿವೃಷ್ಠಿ ಹಾಗೂ ಅನಾವೃಷ್ಠಿಯನ್ನು ಎದುರಿಸುತ್ತಿದ್ದೇವೆ. ಕೆಲವು ಪ್ರದೇಶಗಳಲ್ಲಿ ಮಳೆ ಹೆಚ್ಚಾಗಿ ನದಿ, ಅಣೆಕಟ್ಟುಗಳು ಬೋರ್ಗರೆದು ಹರಿಯುತ್ತಿವೆ. ಪ್ರವಾಹಗಳುಂಟಾಗಿವೆ. ಕಟ್ಟಡಗಳು ಕುಸಿಯುತ್ತಿವೆ. ಜನ, ಜಾನುವಾರುಗಳು, ವಾಹನಗಳು ಕೊಚ್ಚಿ ಹೋಗುತ್ತಿವೆ. ಬೆಳೆ ನೀರು ಪಾಲಾಗುತ್ತಿದೆ. ಪ್ರಕೃತಿ ವಿಕೋಪದಿಂದ ನೋಡು ನೋಡುತ್ತಿದ್ದಂತೆ ವಿನಾಶದ ಹೊಳೆ ಹರಿಯುತ್ತಿದೆ. ಆ ಭಾಗದ ಜೀವ ಸಂಕುಲ ಸಂಕಷ್ಟದ ಕೊಚ್ಚೆಯಲ್ಲಿ ನಲುಗಿ ಹೋಗುತ್ತಿದೆ. ಜೀವ ಸಂಕುಲವನ್ನು ಸದಾ ಕಾಯಲೆಂದು ಭಕ್ತಿ ಭಾವದಿಂದ ನಿರ್ಮಿಸಿಕೊಂಡು ಆರಾಧಿಸುತ್ತಿದ್ದಂತಹ ದೇವಾಲಯ; ದೇವರು ಕೂಡ ನೀರಿನಲ್ಲಿ ಮುಳುಗಿ ಹೋಗುತ್ತಿದ್ದಾನೆ. ಇನ್ನು ನಂಬಿದ್ದವರನ್ನು ರಕ್ಷಿಸುವವರು ಯಾರು? ಪುಣ್ಯದಂತೆ ಬದುಕುಳಿದವರಿಗೆ ಸಾಂಕ್ರಾಮಿಕ ರೋಗ ಭೀತಿ. ಆಹಾರ, ವಸತಿ ಸಮಸ್ಯೆ. ಒಂದೇ ಎರಡೇ ಈ ಅತಿವೃಷ್ಠಿಯಿಂದಾಗುತ್ತಿರುವ ದುಷ್ಪರಿಣಾಮ!
ಇನ್ನು ಬಯಲು ಸೀಮೆ ಪ್ರದೇಶದಲ್ಲಿನ ಅನಾವೃಷ್ಠಿಯ ಕರ್ಮಕಾಂಡ ಹೇಗಿದೆ ನೋಡಿ; ಮಳೆ ಇಲ್ಲ. ಕೆರೆ, ಕುಂಟೆ, ನದಿ ನಾಲೆಗಳು ಇವೆ ಎನ್ನುವ ಕುರುಹುಗಾದರೂ ಒಂದು ಹನಿ ನೀರು ಸಂಗ್ರಹವಾಗುತ್ತಿಲ್ಲ. ಜನ, ಜಾನುವಾರುಗಳಿಗೆ ಕುಡಿಯಲೂ ನೀರಿಲ್ಲ. ರೈತರು ಇಟ್ಟ ಬೆಳೆ ಕೈಗೆಟುಕುತ್ತಿಲ್ಲ. ಬದಲಾಗಿ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗುವ ರೋಚಕ ಸ್ಥಿತಿಗೊಳಪಡುತ್ತಿದ್ದಾನೆ. ಕೂಲಿ ಮಾಡುವ ಜನ ಊರುಗಳನ್ನೇ ಬಿಟ್ಟು ಪ್ರಮುಖ ನಗರಗಳ ಕಡೆ ಗುಳೆ ಹೊರಟಿದ್ದಾರೆ. ಅವರ ಕುಟುಂಬದಲ್ಲಿನ ಮುದುಕರು ಮತ್ತು ಮಕ್ಕಳು ಅನಾಥರಾಗುತ್ತಿದ್ದಾರೆ. ಪೌಷ್ಠಿಕ ಆಹಾರವಿಲ್ಲದೆ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ದುಡಿಯಲೋದವರು ಬರುವತನಕವೂ ಕಾಯದ ಅದೆಷ್ಟೋ ಬಡ ಜೀವಗಳು ಮಣ್ಣು ಪಾಲಾಗುತ್ತಿವೆ. ಹೀಗೂ ಜೀವ ಸಂಕುಲ ನಾಶವಾಗುತ್ತಿದೆ.
ಈ ಅತಿವೃಷ್ಠಿ ಹಾಗೂ ಅನಾವೃಷ್ಠಿಗೂ ವನ್ಯಜೀವಿಗಳಿಗೂ ಏನು ಸಂಬಂಧ ಎಂದ ಒಂದೊಂದು ಸಲ ನಮ್ಮಲ್ಲಿ ಸಂದೇಹ ಮೂಡಬಹುದು. ಪರಮಾವಲೋಕಿಸಿ ನೋಡಿದಾಗ ಸುಲಭವಾಗಿಯೇ ಅರ್ಥವಾಗುವಂತಹ ವಿಚಾರ ನಮ್ಮಲ್ಲಿ ಮೂಡುತ್ತದೆ. ಅದೇನೆಂದರೆ; ಪ್ರಕೃತಿ ಅಸಮತೋಲನವಾದಾಗ ಹವಾಮಾನದಲ್ಲಿ ಏರುಪೇರಾಗುವುದು ಸಹಜ. ಈ ಹವಾಮಾನದ ವೈಪರಿತ್ಯದಿಂದಾಗಿಯೇ ಅತಿವೃಷ್ಠಿ ಹಾಗೂ ಅನಾವೃಷ್ಠಿ ಸಂಭವಿಸುತ್ತದೆ ಎನ್ನುವುದು ವೈಜ್ಞಾನಿಕ ಸತ್ಯ. ಹೀಗೆಯೇ ಹವಾಮಾನವನ್ನು ವನ್ಯಜೀವಿ ಲೋಕ ಸಮತೋಲನದಲ್ಲಿ ಇಡುತ್ತದೆ ಎನ್ನುವುದೂ ಅಷ್ಟೇ ಸತ್ಯ. ಹೇಗೆಂದರೆ; ಈಗಿನ ಬಯಲುಸೀಮೆ ಪ್ರದೇಶದಲ್ಲಿ ಬರಗಾಲ ಬಂದಿರುವ ದಿನಗಳನ್ನು ನೋಡಿದರೆ ಇಪ್ಪತ್ತು ವರ್ಷಗಳಿಂದೀಚೆಗೆ ಹೆಚ್ಚಾಗಿ ಗೋಚರಿಸುತ್ತದೆ. ಆ ಹಿಂದೆ ಸಮೃದ್ಧವಾಗಿತ್ತು ಎಂದೇ ಅರ್ಥ. ಅಂದರೆ ಪ್ರಾಕೃತಿಕ ಸಮತೋಲನ ಇತ್ತು ಎನ್ನುವ ನಿದರ್ಶನ. ವನ್ಯಜೀವಿ ಲೋಕದ ಸಸ್ಯ, ಪ್ರಾಣಿ, ಪ್ರಾಕೃತಿಕ ಎಲ್ಲಾ ಪ್ರಬೇಧಗಳನ್ನೂ ಮನುಷ್ಯ ಹಾಳು ಮಾಡಿರಲಿಲ್ಲ ಎನ್ನುವುದೇ ಇದಕ್ಕೆ ಸಾಕ್ಷಿ.
ವನ್ಯಜೀವಿಗಳಿಂದ ಪ್ರಾಕೃತಿಕ ಸಮತೋಲನ: ವನ್ಯಜೀವಿಗಳಿಂದ ಪ್ರಾಕೃತಿಕ ಸಮತೋಲನ ಮೂಡುವುದು ಅಕ್ಷರಶಃ ಸತ್ಯ. ಸಸ್ಯ ಸಂಪತ್ತು ಮಣ್ಣನ್ನು ಹಿಡಿದಿಟ್ಟುಕೊಂಡು ಮೋಡಗಳನ್ನು ತಡೆದು, ಮಳೆಯನ್ನು ಸುರಿಯಿಸಿ ಪ್ರಾಣಿ, ಪಕ್ಷಿಗಳಿಗೆ ಆಹಾರ, ಆಶ್ರಯವನ್ನು ಒದಗಿಸುತ್ತದೆ. ಭೂಮಿಯನ್ನು ಫಲವತ್ತನ್ನಾಗಿಸಿ ಬೆಳೆಗೆ ಪುಷ್ಠಿ ನೀಡುತ್ತದೆ. ಪಕ್ಷಿ ಸಂಕುಲ ಹಣ್ಣು-ಹಂಪಲುಗಳನ್ನು ತಿಂದು ಹೆಕ್ಕೆಯ ರೂಪದಲ್ಲಿ ಸಸ್ಯ ಸಂಪತ್ತಿನ ವೃದ್ಧಿಗೆ ಸಹಕರಿಸುತ್ತದೆ. ಹುಳ, ಹುಪ್ಪಟೆಗಳನ್ನು ತಿಂದು ಬೆಳೆ ನಾಶಕ ಕ್ರಿಮಿ-ಕೀಟಗಳನ್ನು ನಾಶಗೊಳಿಸಿ ಆಹಾರ ಪದಾರ್ಥಗಳ ಸಮೃದ್ಧಿಗೆ ಕಾರಣವಾಗುತ್ತದೆ. ದುಂಬಿ ಪ್ರಬೇಧ ವನ್ಯಜೀವಿಗಳು ಪರಾಗಸ್ಪರ್ಷ ಹಾಗೂ ಸಸ್ಯ ಸಂತಾನೋತ್ಪತ್ತಿಗೆ ಸಹರಿಸುವ ಮೂಲಕ ಪ್ರಾಣಿ ಸಂಕುಲಕ್ಕೆ ಬೇಕಾದ ಜೇನನ್ನೂ ನೀಡುತ್ತವೆ. ಹೀಗೆ ಸಸ್ಯ ಮತ್ತು ಅದನ್ನವಲಂಬಿತ ವನ್ಯಜೀವಿಗಳಿಂದ ಮಣ್ಣು, ಅರಣ್ಯ, ಕಾಡು, ಮಳೆ, ಕೆರೆ, ಕುಂಟೆ, ನದಿ, ನಾಲೆಯಂತಹ ನೀರಿನ ಮೂಲಗಳು ಸಮೃದ್ಧವಾಗುತ್ತದೆ. ಈ ಪ್ರದೇಶದಲ್ಲಿ ಎಲ್ಲ ಜೀವಿ ಸಂಕುಲವೂ ಯತೇಚ್ಚವಾಗಿ ಸಂತಾನಾಭಿವೃದ್ಧಿಯೊಂದಿಗೆ ಉಳಿಯಲಾರಂಭಿಸುತ್ತದೆ. ಪ್ರಕೃತಿ ಧರ್ಮದಂತೆ ಇರುವೆಯಿಂದ ಹುಲಿ, ಸಿಂಹದತನಕ, ಆನೆಯಿಂದ ತಿಮಿಂಗಲತನಕ ಅದರದೇ ಆದ ಆವಾಸ ಸ್ಥಳಗಳನ್ನು ಗುರುತಿಸಿಕೊಂಡು ಆಹಾರ ಸರಪಳಿಯನ್ನು ಅವಲಂಬಿಸಿ ಬದುಕುತ್ತವೆ. ಈ ಮೂಲಕ ಜೀವಿಪ್ರಪಂಚವೂ ಸಮತೋಲನದಲ್ಲಿರುತ್ತದೆ.
ಹೀಗಿದ್ದಾಗ ಮಾನವನ ತಂಟೆಗೆ ವನ್ಯಜೀವಿಗಳು ಯಾಕಾದರೂ ಬರಬೇಕು? ಅವುಗಳ ಆವಾಸ ಸ್ಥಾನ ಮತ್ತು ಆಹಾರಕ್ಕೆ ತೊಂದರೆಯಿಲ್ಲದಿರುವಾಗ ನಾಡಿಗೇಕೆ ಬರುತ್ತವೆ? ಅವು ಎಲ್ಲ ಜೀವ ಮೂಲಗಳನ್ನು ಸಂತುಲಿತವಾಗಿ ಕಾಪಾಡುವ ಮನುಷ್ಯನ ಹಿತೈಸಿಗಳೇ ವಿನಃ ಶತೃಗಳಲ್ಲ. ಆದರೆ ಅತಿ ಬುದ್ಧಿವಂತ ಮನುಷ್ಯ ಮಾತ್ರ ಅವುಗಳೆಲ್ಲವನ್ನೂ ಅತಿಕ್ರಮಿಸುವ ಮೂಲಕ ಇಂದು ಸರ್ವಾಧಿಕಾರಿಯಾಗುತ್ತಾ ತನಗೆ ತಾನೇ ಅವಸಾನದ ಗುಂಡಿ ತೋಡಿಕೊಳ್ಳಲು ಹೊರಟಿದ್ದಾನೆಂದರೆ ತಪ್ಪಾಗಲಾರದು.
ವನ್ಯಜೀವಿರಕ್ಷಣೆಯೇನಮ್ಮ ರಕ್ಷಣೆ: ಸರ್ಕಾರ ವನ್ಯಜೀವಿ ಸಂರಕ್ಷಣೆ ಕಾಯ್ದೆ ತಂದರೆ ಸಾಲದು. ವನ್ಯಜೀವಿ ಸಂರಕ್ಷಣಾ ದಿನಾಚರಣೆ ಮಾಡಿದರೆ ಆಗದು. ವನ್ಯಜೀವಿಗಳನ್ನು ಅವುಗಳ ನೈಸರ್ಗಿಕ ಸ್ಥಳಗಳಿಂದ ಸ್ಥಳಾಂತರಿಸುವ ಬದಲಿಗೆ ಅವುಗಳ ಆವಾಸ ಸ್ಥಳಗಳನ್ನು ಪುನರ್ ಸ್ಥಾಪಿಸಬೇಕು. ಅರಣ್ಯೀಕರಣ ಹೆಚ್ಚಾಗಬೇಕು. ಜಲ ಮೂಲಗಳ ಒತ್ತುವರಿಯನ್ನು ತೆರವುಗೊಳಿಸ ಬೇಕು.ವನ್ಯಜೀವಿಗಳ ಚಲನವಲನ ಮತ್ತು ಜೀವನ ಕ್ರಮದ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡುವಂತಹ ಬೀದಿ ನಾಟಕ, ಕಿರುಚಿತ್ರ ಪ್ರದರ್ಶನ, ವಿಚಾರಗೋಷ್ಠಿಗಳಂತಹಕಾರ್ಯಕ್ರಮಗಳನ್ನುಯೋಜಿಸಬೇಕು. ವನ್ಯಜೀವಿಗಳಿರುವ ಪ್ರದೇಶದ ಸುತ್ತಮುತ್ತ ಅವುಗಳು ದಾಳಿಗೆ ಪ್ರೇರಕವಾಗುವಂತಹ ಬೆಳೆಗಳನ್ನು ಇಡದಂತೆ ರೈತರು ಕ್ರಮವಹಿಸಬೇಕು. ವನ್ಯಜೀವಿ ಸಂತತಿ ಹೆಚ್ಚಾದಾಗ ಅಪ್ಪಿತಪ್ಪಿ ಜನವಸತಿಪ್ರದೇಶಗಳಲ್ಲಿ ಕೆಲವು ಪ್ರಾಣಿಗಳು ಕಾಣಿಸಿಕೊಂಡಾಗ ಜನರು ಅವುಗಳನ್ನು ಗಾಬರಿಗೊಳಿಸುವುದು, ಮರಳಿ ಕಾಡಿಗೆ ಹೋಗದಂತೆ ದಿಕ್ಕು ತಪ್ಪಿಸುವುದು, ಸಾಯಿಸುವುದು ಮತ್ತಿತ್ಯಾದಿ ಕ್ರಮಗಳನ್ನು ಕೈಗೊಂಡು ವೀಡಿಯೋ ಮಾಡಿ ವೈರಲ್ ಮಾಡುವ ಬದಲು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಹಕರಿಸಿ ಭಯಾನಕ ಸುದ್ಧಿ ಹರಡದಂತೆ ಮಾಡಬೇಕು. ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ಚಿರತೆ, ತೋಳ, ನರಿಗಳು ಕಾಣಿಸಿಕೊಳ್ಳುತ್ತಿದ್ದರೂ ಅವು ಬೀದಿ ನಾಯಿ, ಹಂದಿ, ಕುರಿಗಳನ್ನಷ್ಟೇ ತಿನ್ನಲು ಬರುತ್ತವೆ. ಸಾಕು ಪ್ರಾಣಿಗಳನ್ನು ಭದ್ರಿಸಿಕೊಂಡರೆ ಆ ವನ್ಯಜೀವಿಗಳಿಂದ ಯಾರಿಗೂ ತೊಂದರೆಯಾಗುವುದಿಲ್ಲ.
ವನ್ಯಜೀವಿಗಳನ್ನು ಸಾಕುವ, ಪೂಜಿಸುವ ಸೌಂದರ್ಯೋಪಾಸನ ನೆಪದಲ್ಲಿ ಅಥವಾ ತಿನ್ನುವ, ಮಾರಾಟ ಮಾಡುವ ಹೀನ ಕೃತ್ಯಗಳಿಂದ ಅವುಗಳ ಆಹಾರ ಸರಪಳಿಯ ಕೊಂಡಿಯನ್ನು ಕಳಚುವ ಕಾರ್ಯಕ್ಕೆ ಮನುಷ್ಯ ಕೈ ಹಾಕಬಾರದು. ವನ್ಯಜೀವಿಗಳೆಂದರೆ ಕೇವಲ ಕ್ರೂರ ಪ್ರಾಣಿಗಳಷ್ಟೇ ಎನ್ನುವುದನ್ನು ಬಿಟ್ಟು ನಮ್ಮ ರಕ್ಷಣೆಗಿರುವ ಎಲ್ಲಾ ಸಸ್ಯ, ಪಕ್ಷಿ, ಪ್ರಾಣಿ ಪ್ರಪಂಚ ಎಂದು ತಿಳಿದು ಅವುಗಳ ರಕ್ಷಣೆ ಮೂಲಕ ನಮ್ಮನ್ನು ನಾವು ಕಾಪಾಡಿಕೊಳ್ಳುವ ದಾರಿಯಲ್ಲಿ ಸಾಗಲು ಇಂದೇ ಅಣಿಯಾಗಬೇಕು. ಪ್ರಕೃತಿಯಲ್ಲಿ ಸೃಷ್ಠಿಯಾಗಿರುವ ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇರುವುದರಿಂದಲೇ ಮನುಷ್ಯರಾದ ನಾವು ಬದುಕಲು ಸಾಧ್ಯ ಎನ್ನುವ ಸತ್ಯವನ್ನು ಎಲ್ಲರಿಗೂ ತಿಳಿಸಬೇಕು. ಚಲನೆಯಿರುವ ಎಲ್ಲ ಜೀವಿಗಳೂ ಪರಾವಲಂಬಿಗಳೇ ಎನ್ನುವ ಸತ್ಯದ ಪ್ರಪಂಚದಲ್ಲಿಯೇ ನಾವೂ ಇದ್ದೇವೆ ಎನ್ನುವುದನ್ನು ಅರಿತು ?ಬದುಕಲುಬಿಡೋಣ, ನಾವೂ ಬದುಕೋಣ? ಎನ್ನುವಸಿದ್ಧಾಂತಕ್ಕೆ ಎಲ್ಲರೂಬದ್ಧರಾಗಬೇಕಿದೆ.