ನಮ್ಮ ಬದುಕು ನಮ್ಮ ಆಯ್ಕೆ ಇದಕ್ಕೆ ಅನ್ಯರ ಹಂಗೇಕೆ ?
ಬದುಕು ಎಂಬುದು ಕೇವಲ ಉಸಿರಾಟದ ಪ್ರಕ್ರಿಯೆಯಲ್ಲ, ಅದೊಂದು ಅನಿರೀಕ್ಷಿತ ತಿರುವುಗಳ ಪಯಣ. ನಾವು ಅಂದುಕೊಂಡಂತೆ ಇಲ್ಲಿ ಎಲ್ಲವೂ ನಡೆಯುವುದಿಲ್ಲ, ಆದರೆ ನಡೆದದ್ದನ್ನು ಸ್ವೀಕರಿಸಿ ಮುನ್ನಡೆಯುವುದರಲ್ಲೇ ಬದುಕಿನ ನಿಜವಾದ ಸೌಂದರ್ಯವಿದೆ. ನಮ್ಮ ಬದುಕಿನ ಆಗುಹೋಗುಗಳಿಗೆ ನಾವೇ ಜವಾಬ್ದಾರರು ಎಂಬ ಸತ್ಯವನ್ನು ಅರಿತಾಗ ಮಾತ್ರ ಬದುಕುನ ನೈಜ ಅರ್ಥ ತಿಳಿಯುತ್ತದೆ.
ಜಗತ್ತಿನಲ್ಲಿ ಪ್ರತಿಯೊಬ್ಬರ ಬದುಕು ಒಂದು ವಿಶಿಷ್ಟ.ಇಲ್ಲಿ ನೋವು-ನಲಿವು, ಸೋಲು-ಗೆಲುವಿನ ಹಾವು-ಏಣಿ ಆಟ ಸಹಜ ಆದರೆ, ಆಟದ ನಿಯಮಗಳನ್ನು ಅರಿತು, ಸಮಯ ಮತ್ತು ಸಂದರ್ಭಗಳನ್ನು ನಮ್ಮದಾಗಿಸಿಕೊಂಡಾಗ ಮಾತ್ರ ಬದುಕುವ ಕಲೆ ಎಲ್ಲರಿಗೂ ಸಿದ್ಧಿಸುತ್ತದೆ. ನಮ್ಮ ಬದುಕಿಗೆ ನಾವೇ ಶಿಲ್ಪಿಗಳಾಗುವುದು ಹೇಗೆ ? ಇಲ್ಲಿದೆ ಒಂದು ವಿವರಣೆ.

ಬದುಕೆಂಬದು ಸಾಗರದಲ್ಲಿ ಬರುವ ಅಲೆಗಳಂತೆ ಪ್ರತಿ ದಾರಿಯು ಸಹ ನೋವು-ನಲಿವು, ಸೋಲು-ಗೆಲುವಿನ, ಸಿಹಿ-ಕಹಿ ಘಟನೆಗಳ ಸರಮಾಲೆ. ನಮ್ಮ ಜೀವನದಲ್ಲಿ ಬರುವಂತಹ, ಮಾಡಿರುವಂತಹ ಸಣ್ಣ ತಪ್ಪುಗಳನ್ನು ತಿದ್ದಿಕೊಂಡು ಸರಿ ಮಾರ್ಗದಲ್ಲಿ ನಡೆಯುವುದೇ ನಿಜವಾದ ಬದುಕು. ಬದುಕು ನಾವು ಅಂದುಕೊಂಡಂತೆ ಖಂಡಿತಾ ಸಾಗುವುದಿಲ್ಲ ಆದರೆ ನಮ್ಮ ಬದುಕು ನಮ್ಮ ಆಯ್ಕೆ ಮಾತ್ರ, ಇದಕ್ಕೆ ಅನ್ಯರ ಹಂಗೇಕೆ ? ನಮ್ಮ ಸುಂದರ ಬದುಕು ಹಾವು-ಏಣಿಯಂತೆ. ಕೆಲವೊಮ್ಮೆ ಸಿರಿತನ ಹುಡುಕಿ ನಮ್ಮ ಮನೆ ಬಾಗಿಲ ತಟ್ಟ ಬಹುದು, ನಮ್ಮ ಹಣೆಬರಹ ಬದಲಾದರೆ ಒಂದು ತುತ್ತಿನ ಒಂದು ಹೊತ್ತಿನ ಊಟಕ್ಕೂ ಅಲೆದಾಡ ಬೇಕಾಗಬಹುದು ಅದಕ್ಕೆ ತಿಳಿದವರು ಹೇಳುತ್ತಾರೆ ಬದುಕು ಒಂದು ಮಾಯಾ ಲೋಕದಂತೆ. ಇಲ್ಲಿ ಮೆರೆದವರು ನಾಳೆ ವ್ಯಥೆಪಡಬೇಕು, ಬಡತನದಲ್ಲಿ ಬೆಂದು, ನೊಂದವರು ಮುಂದೆ ಸಿರಿವಂತರಾಗಬಹುದು ಈ ಜಗತ್ತಿನಲ್ಲಿ ಎಲ್ಲವೂ ಸಾಧ್ಯ !
‘’ ಬುದ್ಧನ ಮಾತಿನ ಪ್ರಕಾರ ಎಲ್ಲಾ ದುಃಖಗಳು ಅಜ್ಞಾನದಿಂದ ಉಂಟಾಗುತ್ತವೆ. ಜನರು ತಮ್ಮ ಸ್ವಂತ ಸಂತೋಷಕ್ಕಾಗಿ ಸ್ವಾರ್ಥದಿಂದ ಇತರರಿಗೆ ನೋವುಂಟು ಮಾಡುತ್ತಾರೆ.ಈ ಮಾತು ಪ್ರಸ್ತುತ ಸಮಾಜಕ್ಕೆ ಕನ್ನಡಿ ಹಿಡಿದಂತಿದೆ.’’
ಬದುಕಿನಲ್ಲಿ ನೂರಾರು ಜನರ ನಿರೀಕ್ಷೆ, ಅಭಿಪ್ರಾಯ, ನಿರ್ಧಾರಗಳ ಮೇಲೆ ಬಿಡಬಾರದು. ಇದು ನಮ್ಮ ಬದುಕು, ಅವರದ್ದಲ್ಲ! ನಮಗೆ ಹೆಚ್ಚು ಮುಖ್ಯವಾದದ್ದನ್ನು ನಾವೇ ಮಾಡಬೇಕು. ನಮ್ಮನ್ನು ಜೀವಂತವಾಗಿ ಹಾಗೂ ಸಂತೋಷವಾಗಿಡುವಂತೆ ಮಾಡಿಕೊಳ್ಳುವುದು ಕೂಡ ನಾವೇ. ಇತರರ ನಿರೀಕ್ಷೆಗಳು, ಆಲೋಚನೆಗಳು ನೀವು ಯಾರೆಂದು ಪ್ರಶ್ನೆ ಮಾಡಲು ಬಿಡಬಾರದು. ನಮ್ಮ ಗುರುತಿಸುವಿಕೆಯನ್ನು ಮಿತಿಗೊಳಿಸಲು ಬಿಡಬಾರದು. ನಾವು ಯಾರೆಂದು ಇತರರು ಹೇಳಲು ಬಿಟ್ಟರೆ, ನೀವು ಅವರ ವಾಸ್ತವವನ್ನು ಅರಿತು ಜೀವಿಸುತ್ತಿದ್ದೀರಿ ಎಂದರ್ಥ !
ನಮ್ಮ ಬದುಕಿನಲ್ಲಿ ಬರುವಂತಹ ಉತ್ತಮ ಜನರ ಜೊತೆ ಮಾತ್ರ ನಮ್ಮ ಕಷ್ಟ, ಸುಖ, ಹಂಚಿಕೊಳ್ಳಬೇಕು. ಇತರರು ಸೂಚಿಸಿದ ಮಾರ್ಗವನ್ನು ಅನುಸರಿಸುವುದಕ್ಕಿಂತ ನಮ್ಮ ಬದುಕಿನ ಮಾರ್ಗವನ್ನು ನಾವೇ ಅನುಸರಿಸಿಕೊಂಡು ಹೋಗುವುದು ಬಹುಮುಖ್ಯ. ನಾವು ಅನುಭವಿಸುವುದಕ್ಕಿಂತ ಹೆಚ್ಚಾಗಿ ಇತರರು ಬದುಕಿನಲ್ಲಿ ಕಲಿಸುವ ತಿಳುವಳಿಕೆ, ಪಾಠ ಹೆಚ್ಚಿದೆ. ನಾವು ಯಾರೆಂದು ನಾವೇ ನಿರ್ಧರಿಸಬೇಕು ! ಪೂರ್ಣ ಬದುಕಿನ ಸುಖ ಕಾಣಬಯಸಬೇಕು !
ಬದುಕು ಒಂದು ಸಾಗರದಂತೆ ಅಲೆಗಳಂತೆ ಬರುವ ನೋವು-ನಲಿವು, ಸೋಲು-ಗೆಲುವುಗಳ ಮಿಶ್ರಣ.ಹಾವು-ಏಣಿಯ ಆಟದಂತೆ ಸಿರಿತನ ಮತ್ತು ಬಡತನಗಳು ಶಾಶ್ವತವಲ್ಲ. ಬದುಕಿನಲ್ಲಿ ಮೆರೆದವರು ನಾಳೆ ವ್ಯಥೆ ಪಡಬಹುದು, ಬೆಂದವರು ಸಿರಿವಂತರಾಗಬಹುದು ನಮ್ಮ ಹಣೆಬರಹ ಏನೇ ಇರಲಿ, ಬದುಕನ್ನು ರೂಪಿಸಿಕೊಳ್ಳುವ ಮುಖ್ಯ ರೂವಾರಿ ನಾವೇ. ಹರಿಕಾರರು ನಾವೇ !
ಅನುಭವ ಪ್ರಕಾರ ಬದುಕು ಎಂದರೆ ‘’ ಕಲಿತು, ಅನುಭವಿಸ ಬೇಕು, ನೋವುಂಡು ಬದಲಾವಣೆ ಆಗಬೇಕು, ಬದುಕಿನಲ್ಲಿ ಬರುವಂತಹ ಕೆಲವು ಸಂಬಂದವೇ ಇಲ್ಲದೆ ಇರುವಂತಹ ವಿಷಯಕ್ಕೆ ಮೌನವಹಿಸಿ ಅದರೆ ಅಂತಹ ವಿಚಾರಗಳಿಗೆ ವಕಾಲತ್ತು ವಹಿಸಬಾರದು. ಬದುಕಿನಲ್ಲಿ ನಿಮ್ಮ ಜೊತೆ ನಿಂತವರಿಗೆ ಭರವಸೆ ನೀಡಬೇಡಿ ಅವರೊಟ್ಟಿಗೆ ಭರವಸೆಯನ್ನು ಸಾಬೀತುಪಡಿಸಿ, ಯಾರನ್ನು ಜೀವನದಲ್ಲಿ ಟೀಕಿಸಬೇಡಿ, ಅತೀ ಹೆಚ್ಚು ಪ್ರೋತ್ಸಾಹಿಸಿ, ಮುಖ್ಯವಾಗಿ ಈ ಮೂರು ಪದಗಳನ್ನು ನಮ್ಮ ಬದುಕಿನ ಉತ್ತಮ ಬೆಳವಣಿಗೆಗೆ ಬಳಸಿಕೊಳಬೇಕು ‘’ ಸಮಯ, ಸನ್ನೀವೇಶ, ಸಂದರ್ಭ ’’ ವಿನಾ:ಕಾರಣ ಈ ಪದಗಳು ದುರ್ಬಳಕೆ ಆಗಬಾರದು ಅದು ವ್ಯಕ್ತಿಗತವಾಗಿರಲಿ ಅಥವಾ ವ್ಯವಹಾರವಾಗಿರಲಿ
ನಮ್ಮ ಬದುಕು ನಮ್ಮದೇ ವಿನಹಃ ಬೇರೆಯವರ ಅಭಿಪ್ರಾಯಗಳು ನಮ್ಮನ್ನು ನಿಯಂತ್ರಿಸಬಾರದು. ನಮ್ಮನ್ನು ಸಂತೋಷವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮದು. ಬೇರೆಯವರು ನಮ್ಮನ್ನು ಮಿತಿಗೊಳಿಸಲು ಬಿಡಬಾರದು. ನಾವು ಯಾರೆಂದು ನಾವೇ ನಿರ್ಧರಿಸಬೇಕು. ಬದುಕಿನಲ್ಲಿ ಬರುವ ಸ್ನೇಹ, ಸಂಬಂಧಗಳ ನಿರ್ವಹಣೆಯ ಸೂತ್ರಗಳು ಬಹಳ ಮುಖ್ಯ. ಪ್ರತಿಯೊಬ್ಬರ ಬದುಕಿನ ಬೆಳವಣಿಗೆಗೆ ಈ ಮೂರು ಅಂಶಗಳನ್ನು ವಿವೇಚನೆಯಿಂದ ಬಳಸಬೇಕು. ಸಮಯ, ಸನ್ನಿವೇಶ ಸಂದರ್ಭ ನಿಮ್ಮನ್ನು ಗೌರವಿಸದವರ ಮೇಲೆ ಸಮಯ, ಪ್ರೀತಿಯನ್ನು ವ್ಯರ್ಥ ಮಾಡದೆ, ನಿಮ್ಮನ್ನು ಪ್ರೀತಿಸುವವರೊಂದಿಗೆ ಬದುಕು ಸಾಗಿಸುವುದು ಜಾಣತನ.
ವಾಸ್ತವ ಪ್ರಜ್ಞೆ ಮತ್ತು ಆಧುನಿಕತೆಯ ಬದುಕಿನಲ್ಲಿ ಯುಗದಲ್ಲಿ ನಾವು ಸಾಗುತ್ತಿದೇವೆ. ಬದುಕಿನಲ್ಲಿ ಉತ್ತಮ ಸಂವಹನ ಕೂಡ ಅನಿವಾರ್ಯ. ಯಾರಿಂದಲೂ ಏನನ್ನೂ ನಿರೀಕ್ಷಿಸಬಾರದು, ಆದರೆ ಸಹಜವಾಗಿ ಬರುವ ಪ್ರೀತಿ-ಗೌರವಗಳನ್ನು ಸ್ವೀಕರಿಸಬೇಕು. ಪ್ರಾಮಾಣಿಕತೆ, ಕಠಿಣ ಪರಿಶ್ರಮವಿದ್ದರೆ ಮಾತ್ರ ಬದುಕು ಬಂಗಾರವಾಗುತ್ತದೆ ಹಾಗೂ ಸಾರ್ಥಕವಾಗುತ್ತದೆ.
ನಮ್ಮ ಸುತ್ತಲಿನ ಎಲ್ಲಾ ಜನರನ್ನು ನಾವು ಬದಲಾಯಿಸಲು ಸಾಧ್ಯವಾಗದಿದ್ದರೂ, ನಾವು ಆಯ್ಕೆ ಮಾಡಿಕೊಳ್ಳುವ ಜನರ ಬದುಕನ್ನು ಬದಲಾಯಿಸಬಹುದು. ನಮ್ಮನ್ನು ಗೌರವಿಸದ ಜನರ ಮೇಲೆ ನಮ್ಮ ಸಮಯ, ಶ್ರಮ, ಪ್ರೀತಿ, ಕರುಣೆ ವ್ಯರ್ಥ ಮಾಡಬಾರದು, ನಮ್ಮನ್ನು ಅರ್ಥೈಸುವ, ಪ್ರೀತಿಸುವ ಜನರೊಂದಿಗೆ ನಮ್ಮ ಬದುಕು ಸಾಗಿಸಿ ಎಂಬುದು ವಾಖ್ಯಾನದ ಸಾರಾಂಶ.
ಕೊನೆಯದಾಗಿ ಬದುಕಿನ ಬಗ್ಗೆ ಸಮಾಜದಲ್ಲಿ ನೋಡುವುದಾದರೆ ಮನೆ-ಮನಗಳಲ್ಲಿ ಯಾರೊಬ್ಬರ ಬಗ್ಗೆಯೂ ಋಣಾತ್ಮಕ ಮಾತುಗಳು ಬಾಯಿ ಮಾತಿಗೆ ಆಷ್ಟೆ ? ಅಯ್ಯೋ ಕಾಲ ಬದಲಾಗಿದೆ ? ಜನ ಬದಲಾಗಿದ್ದಾರೆ ? ಎಂದು ಹೇಳುತ್ತಲೇ ಸುಮ್ಮನೆ ಕುಳಿತಿದ್ದರೆ ಫಲಿತಾಂಶ ನಮಗೆ ಸಿಗುವುದಿಲ್ಲ. ಅವರಿಗೆ ಏನಾದರೂ ಸಹಾಯ ಬೇಕಿದ್ದರೆ ಮಾತ್ರ ನಮಗೆ ಕರೆ ಮಾಡುತ್ತಾರೆ ಎನ್ನುವ ಮನಸ್ಥಿತಿಯನ್ನು ನಾವು ಬದಲಿಸಲು ಸಾದ್ಯವಿಲ್ಲ. ನಾವು ಬದುಕಿನಲ್ಲಿ ಎಲ್ಲರೊಂದಿಗೂ ಕನಿಷ್ಟ ಬಾಂಧವ್ಯವನ್ನು ಹೊಂದಿದ್ದೇವೆ ಎಂದು ಕೊಳ್ಳಬೇಕು ಏಕೆಂದರೆ ಇಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಲೋಕದಲ್ಲಿ ಬದುಕುವ ನಾವು ಬದುಕಿಗೆ ಉತ್ತಮ ದಾರಿಯನ್ನು ಆಯ್ಕೆ ಮಾಡಿಕೊಳುವುದು ಅನಿವಾರ್ಯ ವಾಗಲಿದೆ.
ಬದುಕಿನಲ್ಲಿ ಯಾವುದನ್ನೂ ಉಚಿತವೆಂದು ಅತಿ ಹೆಚ್ಚು ಪಡೆಯಬಾರದು, ಯಾರಿಗೂ ಬಿಟ್ಟಿ ಮಾಡಬಾರದು, ಯಾರಿಂದಲೂ ಯಾವುದನ್ನು ನಿರೀಕ್ಷಿಸಲೂ ಬಾರದು ಆದರೆ ತಾನಾಗಿ ಬರುವಂತಹ ಪ್ರೀತಿ, ವಿಶ್ವಾಸ ಗೌರವ, ಮಮತೆ, ಸತ್ಕಾರ್ಯ ಸನ್ಮಾನಗಳನ್ನು, ಸ್ವಾಭಾವಿಕವಾಗಿ ಸ್ವೀಕರಿಸಲೇಬೇಕು. ಇಲ್ಲದಿದ್ದರೆ ಸತ್ಕಾರ್ಯಗಳು ಅರ್ಥಹೀನವಾಗುತ್ತದೆ. ಗರಿಷ್ಟ ಮಾನದಂಡ ಇಲ್ಲದಿದ್ದರೂ ಬದುಕಿನಲ್ಲಿ ಕನಿಷ್ಟ ಮಾನದಂಡಗಳನ್ನು ಅನುಸರಿಸಿಕೊಳ್ಳುವ ಮೂಲಕ ಸತ್ಯ ಧರ್ಮ ನ್ಯಾಯ ನೀತಿ, ಪ್ರಾಮಾಣಿಕತೆ ಜೊತೆ ಪರಿಶ್ರಮ ಬಹಳ ಮುಖ್ಯ. ಇದುವೇ ಸಾಮಾನ್ಯ ಜನಸೇವೆ ಆದಾಗ ಮಾತ್ರ ಒಂದಿಷ್ಟು ಬದುಕು ಬಂಗಾರವಾಗವುದು, ಆಗಲೇ ಬದುಕಿನ ಸಾರ್ಥಕತೆ ಸಾಧ್ಯ ಎಂಬುದು ಅರ್ಥಗರ್ಭಿತ.
ಒಟ್ಟಾರೆ ಬದುಕು ನಮಗೆ ಕಲಿಸುವುದು ಇಷ್ಟೇ- ಯಾರನ್ನೂ ಮೆಚ್ಚಿಸಲು ನಮ್ಮತನವನ್ನು ಕಳೆದುಕೊಳ್ಳಬಾರದು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮವನ್ನೇ ಬಂಡವಾಳವಾಗಿಸಿಕೊಂಡು, ಸಿಗುವ ಅಲ್ಪ ಸಮಯದಲ್ಲೇ ಅರ್ಥಪೂರ್ಣವಾಗಿ ಬದುಕೋಣ. ನೆನಪಿಡಿ, ನಮ್ಮ ಸಂತೋಷದ ಕೀಲಿ ನಮ್ಮ ಕೈಯಲ್ಲೇ ಇರಲಿ ಹೊರತು, ಪರರ ಕೀಸೆಯಲ್ಲಿ ಅಲ್ಲ. ಬದುಕು ಸುಂದರವಾಗಿದೆ, ಅದನ್ನು ಪ್ರೀತಿಸೋಣ.
ಬದುಕು ಒಂದು ಶಾಲೆಯಿದ್ದಂತೆ; ಇಲ್ಲಿ ಕಲಿಯುವುದು, ಅನುಭವಿಸುವುದೇ ಮುಖ್ಯ. ಸಮಯ, ಸನ್ನಿವೇಶ ಮತ್ತು ಸಂದರ್ಭಗಳನ್ನು ವಿವೇಚನೆಯಿಂದ ಬಳಸಿಕೊಂಡು, ಪ್ರೀತಿ-ವಿಶ್ವಾಸಗಳನ್ನು ಹಂಚುತ್ತಾ ಸಾಗಿದರೆ ಬದುಕು ಬಂಗಾರವಾಗುವುದರಲ್ಲಿ ಸಂಶಯವಿಲ್ಲ. ಬದುಕಿನ ಹಾದಿಯನ್ನು ನಾವೇ ರೂಪಿಸಿಕೊಳ್ಳೋಣ, ಸಾರ್ಥಕತೆಯನ್ನು ಮೆರೆಯೋಣ. ನಾವು ಜಗತ್ತನ್ನು ಬದಲಾಯಿಸಲು ಆಗದಿದ್ದರೂ, ನಮ್ಮ ದೃಷ್ಟಿಕೋನ ಮತ್ತು ನಮ್ಮ ಆಯ್ಕೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ನೆಮ್ಮದಿಯ ಜೀವನ ನಡೆಸಬಹುದು ಎಂಬ ಸಂದೇಶ ಸ್ಪೂರ್ತಿದಾಯಕವಾಗಬಹುದು.