ಕರ್ನಾಟಕದಲ್ಲಿ ಕನ್ನಡದ ಸ್ಥಿತಿ-ಗತಿ
ದೂರದ ವಿದೇಶಗಳ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಸುವ ನಿರ್ಧಾರ ಕೇಳಿ ನನ್ನ ಮನಸ್ಸಿಗೆ ಆನಂದವಾಯಿತು. ಬ್ರಿಟನ್ ಪಾರ್ಲಿಮೆಂಟಿನಲ್ಲಿ ಕನ್ನಡದ ನಟರೊಬ್ಬರಿಗೆ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ನೀಡಿದ್ದನ್ನು ಕೇಳಿ ಮಹದಾ ನಂದ ವಾಯಿತು. ಇವೆಲ್ಲವೂ ಕನ್ನಡ ರಾಜ್ಯೋತ್ಸವಕ್ಕೆ ಅನ್ಯ ದೇಶೀಯರು ನೀಡಿದ ಉಡುಗೊರೆಗಳೆಂದೆ ನಾನು ಭಾವಿಸಿ, ಅವರ ಕನ್ನಡ ಪ್ರೇಮಕ್ಕೆ ಮನದಲ್ಲೇ ವಂದಿಸಿದೆ ಆದರೆ ಈ ಸಂತಸ ನನ್ನಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಏಕೆಂದರೆ ಇದೇ ಸಮಯದಲ್ಲಿ ಅನ್ಯ ರಾಜ್ಯದಿಂದ ಬೆಂಗಳೂರಿಗೆ ಬಂದು ನೆಲಸಿರುವ ನನ್ನ ಸಹೋದ್ಯೋಗಿ ಯೊಬ್ಬರು ಕನ್ನಡ ಭಾಷೆಯ ಬಗ್ಗೆ ಮಾತನಾಡುತ್ತಾ, ‘ನೋಡಿ ಸಾರ್, ಬೆಂಗಳೂರಲ್ಲಿ ಬದುಕಬೇಕು ಅಂದರೆ, ಕನ್ನಡ ಬಿಟ್ಟು ಬೇರೆಲ್ಲಾ ಭಾಷೆಗಳು ಗೊತ್ತಿರಬೇಕು’ ಎಂದು ಹೇಳಿದರು. ಅವರ ಮಾತು ಕೇಳಿದೊಡನೆ ನನ್ನ ಕಣ್ಣು ಕೆಂಪಾದವು. ತದನಂತರ ಸ್ವಲ್ಪ ಯೋಚಿಸಿ ನೋಡಿದಾಗ, ಅವರ ಮಾತಿನಲ್ಲಿಯ ವಾಸ್ತವವನ್ನರಿತಾಗ ಭಯವಾಯಿತು.
ಹೌದು, ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಸ್ಥಿತಿ ಇದು. ಕನ್ನಡ ಕಲಿಯಲೇ ಬೇಕು ಎಂಬ ಅನಿವಾರ್ಯವಾದ ವಾತಾವರಣ ಕರ್ನಾಟಕದಲ್ಲಿ ಇದೆಯೇ? ಎಂದು ಕನ್ನಡಿಗರಾದ ನಾವು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕಿದೆ. ಹೊಟ್ಟೆ-ಬಟ್ಟೆಗಾಗಿ ಇಲ್ಲಿಗೆ ಬಂದು ಸುಂದರ ಬದುಕನ್ನು ಕಟ್ಟಿಕೊಂಡು ಇಲ್ಲೇ ನೆಲೆಸಿರುವ ಅನ್ಯರಾಜ್ಯದಿಂದ ಬಂದವರಿಗೆ, ಕನ್ನಡ ಕಲಿಯಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವಲ್ಲಿ ಕನ್ನಡಿಗರಾದ ನಾವು ಹಾಗೂ ನಮ್ಮಿಂದ ಆಯ್ಕೆಯಾದ ಸರ್ಕಾರಗಳು ಸಂಪೂರ್ಣ ಸೋತಿವೆಎಂದೆನೆಸುತ್ತೆ. ವ್ಯವಹಾರಿಕವಾಗಿ ಕನ್ನಡ ಕಲಿಯುವುದಿರಲಿ ಶಾಲೆಗಳಲ್ಲೂ ಮಕ್ಕಳು ಕನ್ನಡ ಕಲಿಸದೆ ಇರುವ ಪರಿಸ್ಥಿತಿಯನ್ನು ಕಾಣಬಹುದು. ಇಲ್ಲೇ ಹುಟ್ಟಿ ಬೆಳದ ಮಗು ಇಲ್ಲಿಯರಾಜ್ಯ ಭಾಷೆಯನ್ನೇ ಕಲಿಯದ್ದರೆ ಹೇಗೆ? ರಾಜ್ಯದ ಪಠ್ಯಕ್ರಮವೇ ಆಗಲೀ, ರಾಷ್ಟ್ರೀಯ ಪಠ್ಯಕ್ರಮವೇ ಆಗಲೀ ಮಾಧ್ಯಮ ಯಾವುದೇ ಆಗಿರಲಿ, ಕರ್ನಾಟಕದಲ್ಲಿ ಓದುವ ಪ್ರತಿಯೊಂದು ಮಗುವು ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಲೇಬೇಕು ಎಂಬ ಗಟ್ಟಿಯಾದ ನಿರ್ಧಾರ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರಗಳು ಸೋತಿವೆ.
ರಾಜ್ಯದ ಬುದ್ಧಿಜೀವಿಗಳೆಂದು ಹೇಳಿಕೊಳ್ಳುವವರು, ರಾಜಕಾರಣಿಗಳು ಕನ್ನಡ ಮಾಧ್ಯಮವೇ ಆಗಬೇಕು ಎಂಬ ಚರ್ಚೆಗಳನ್ನು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ವಾಸ್ತವದ ಸ್ಥಿತಿಯೇ ಬೇರೆಯಾಗಿದೆ. ಕನ್ನಡ ಮಾಧ್ಯಮ ಶಾಲೆಗಳೆಂದರೆ ಬಹುಪಾಲು ಸರ್ಕಾರಿ ಶಾಲೆಗಳೇ ಆಗಿವೆ. ಸರ್ಕಾರಿ ಆಸ್ಪತ್ರೆಗಳಂತೆ, ಸರ್ಕಾರಿ ಶಾಲೆಗಳು ಸುಧಾರಣೆಗೊಳ್ಳುವ ಯಾವುದೇ ಭರವಸೆಗಳು ಕಾಣುತ್ತಿಲ್ಲ. ಕೇವಲ ಕೊಳಚೆ ಪ್ರದೇಶದ ಮಕ್ಕಳು, ಗ್ರಾಮೀಣ ಭಾಗದ ಬಡಮಕ್ಕಳು, ವಿಧಿಯಿಲ್ಲದೆ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರುತ್ತಿದ್ದಾರೆ ಹೊರತು ಅಭಿಮಾನದಿಂದಲ್ಲ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಮಾಧ್ಯಮವೇ ಆಗಬೇಕು ಎಂದು ಹೇಳುವ ಬುದ್ಧಿಜೀವಿಗಳ ಧೋರಣೆ, ರಾಜಕಾರಣಿಗಳ ಭಾಷಣಗಳು ನಾನು ಹೇಳಿದಂತೆ ಮಾಡು, ನಾನು ಮಾಡಿದಂತೆ ಮಾಡಬೇಡ ಎಂಬ ಧೋರಣೆಯಾಗಿದೆ.
ಇನ್ನು ಔದ್ಯೋಗಿಕ ಕ್ಷೇತ್ರವನ್ನು ನೋಡುವುದಾದರೆ, ಖಾಸಗೀ ಕಂಪನಿಗಳೇ ತುಂಬಿರುವ ಬೆಂಗಳೂರಿನಲ್ಲಿ ಕನ್ನಡ ಭಾಷಿಕರ ಸಂಖ್ಯೆಯು ಕಡಿಮೆಯಾಗುತ್ತಿದೆ. ಖಾಸಗೀ ಕ್ಷೇತ್ರದಲ್ಲೂ ಕನ್ನಡಿಗರಿಗೆ ಮೀಸಲಾತಿ ಸಿಗಬೇಕೆಂಬ ಹೋರಟವು ಕೇವಲ ಅರಣ್ಯ ರೋಧನವಾಗಿದೆ. ಖಾಸಗೀ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕೌಶಲ್ಯವಿಬೇಕು. ಕೌಶಲ್ಯವಿರುವವರು ಉದ್ಯೋಗ ಪಡೆಯುತ್ತಿ ದ್ದಾರೆಂಬುದು ಸುಳ್ಳು. ಇಲ್ಲಿ ಕೆಲಸ ಸಿಗದೆ ಹೊರ ದೇಶಗಳಲ್ಲಿ ಒಳ್ಳೆಯ ಉದ್ಯೋಗವನ್ನು ಪಡೆದುಕೊಂಡ ಎಷ್ಟೋ ಕನ್ನಡಿಗರನ್ನು ಕಾಣಬಹುದು. ಕಂಪನಿಗಳಿಗೆ ಹೊರ ರಾಜ್ಯಬಂದ ಅಧಿಕಾರಿಗಳು ತಮ್ಮ ರಾಜ್ಯದ, ಭಾಷೆಯ ಜನರಿಗೆ ಮೊದಲ ಆದ್ಯತೆ ನೀಡುತ್ತಿರುವುದನ್ನು ಕಾಣುತ್ತೇವೆ. ಹೀಗಾಗಿ ಹೊರ ರಾಜ್ಯದವರಿಂದ ತುಂಬಿ ಹೋಗಿರುವ ಖಾಸಗೀ ಕಂಪನಿಗಳಲ್ಲಿ ಕನ್ನಡಿಗರಿಗೆ ಅವಕಾಶಗಳಿಲ್ಲದೆ ಕನ್ನಡದ ನೆಲದಲ್ಲೇ ಕನ್ನಡಿಗರು ಉದೋಗವಿಲ್ಲದಂತಾಗಿದ್ದಾರೆ: ನೆಲೆ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಲ್ಲಿ ಕನ್ನಡಿಗರಿಗೆ ಖಾಸಗೀ ಕ್ಷೇತ್ರದಲ್ಲಿ ಉದ್ಯೋಗದ ಮೀಸಲಾತಿಯನ್ನು ಒದಗಿಸಿಕೊಡಬೇಕಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರವು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕಿದೆ ಕನ್ನಡಿಗರಿಗೆ ನ್ಯಾಯ ದೊರಕಬೇಕಿದೆ.
ಕನ್ನಡಿಗರ ಹಿನ್ನೆಡೆಗೆ ಸಂಘಟನಾತ್ಮಕ ಹೋರಾಟದ ಕೊರತೆಯೂ ಒಂದು ಬಲವಾದ ಕಾರಣವಾಗಿದೆ. ಜನರ ನಿಷ್ಕ್ರಿಯ ಮನೋಭಾವ ಒಂದು ಕಡೆಯಾದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಇದಕ್ಕೆ ಒಂದು ಮುಖ್ಯ ಕಾರಣವಾಗಿದೆ. ನೆಲ, ಜಲ ಸಮಸ್ಯೆಗಳು ಬಂದಾಗ, ಒಕ್ಕೊರಲಿನಿಂದ ದನಿ ಎತ್ತಿ ನಿಲ್ಲುವವರು ಇಲ್ಲವಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಪ್ರಾದೇಶಿಕ ಭಿನ್ನತೆಗಳು ಎದ್ದು ಕಾಣುವುದು ಸ್ಪಷ್ಟ. ನಮ್ಮ ಹಿರಿಯರು ಕಂಡ ಅಖಂಡ ಕರ್ನಾಟಕದ ಕಲ್ಪನೆಯು ಅಲ್ಪರಿಗೆ ಹೊಳೆಯದೆ ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಒಡೆದು ಆಳುವ ನೀತಿಯನೇ ನಂಬಿರುವ ರಾಜಕಾರಣಿಗಳು ಕರ್ನಾಟಕವನ್ನು ಪ್ರದೇಶಿಕವಾಗಿ, ಜಾತಿ,ಧರ್ಮದ ಹೆಸರಿನಲ್ಲಿ ಹೊಡೆದು ಹೊಲಸೆಬ್ಬಿಸುತ್ತಿದ್ದಾರೆ. ಇಂತಹ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ಕನ್ನಡಿಗರು ಎತ್ತೆಚ್ಚುಕೊಳ್ಳಬೇಕಿದೆ. ಭಾಷೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಬೇಕಾದ ವಿಶ್ವವಿದ್ಯಾಲಯಗಳು ಕೇವಲ ಪ್ರಮಾಣ ಪತ್ರಗಳನ್ನು ಮುದ್ರಿಸುವ ಕಾರ್ಖಾನೆಗಳಾಗುತ್ತಿವೆ. ಪುಸ್ತಕಗಳ ತರ್ಜುಮೆ, ಹೊಸ ತಂತ್ರಾಂಶಗಳ ಬಳಕೆ, ಭಾಷೆಯ ಪರಿಣಾಮಕಾರಿ ಬಳಕೆಗೆ ಸಂಬಂಧಿಸಿದ ಸಂಶೋಧನೆ. ಭಾಷೆಯ ಸ್ಥಿತಿ-ಗತಿ ಕುರಿತಾದಚಿಂತನೆ, ಗುಣಾತ್ಮಕವಾದ ಪಠ್ಯರಚನೆ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳಬೇಕಾದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಬೆಳವಣಿಗೆಗೆ, ಉಳಿವಿಗೆ ಪ್ರಾಯೋಗಿಕವಾದ ಹಾಗೂ ಪರಿಣಾಮಕಾರಿಯಾದ ಕೆಲಸಗಳು ನಡೆಯುತ್ತಿರುವುದು ವಿರಳವಾಗಿದೆ.
ಹಿರಿಯ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರು ಒಂದೆಡೆ ಒಂದು ಭಾಷೆಯ ಅಳಿವು- ಉಳಿವು ಇಂದು ನಿರ್ಧಾರವಾ ಗುವುದು ಅದು ಎಷ್ಟು ಲೋಕೋಪಯೋಗಿಯಾಗಿ ತನ್ನ ಕಾರ್ಯ ನಿರ್ವಹಿಸಲು ಸಮರ್ಥವಾಗಿದೆ ಎನ್ನುವುದರ ಮೇಲೆ ಎಂದಿದ್ದಾರೆ. ಒಂದು ಭಾಷೆಯ ಅಳಿವು-ಉಳಿವು ಸಹ ನಿರ್ಧಾರವಾಗುವುದು ಆ ಭಾಷೆಯನ್ನಾಡುವ ಜನರು ಎಷ್ಟು ಬಳಸುತ್ತಿ ದ್ದಾರೆ? ಜನ ಜೀವನವನ್ನು ಎಷ್ಟು ತುಂಬಿಕೊಂಡಿದೆ? ಎಷ್ಟು ಮಹತ್ವ ನೀಡುತ್ತಿದ್ದಾರೆ? ಎಂಬುದರ ಮೇಲೆ. ನಮ್ಮ ರಾಜ್ಯದಲ್ಲೇ ಕನ್ನಡವನ್ನು ಸರಿಯಾಗಿ ಬಳಸಲಿಲ್ಲ, ಬೆಳಸಲಿಲ್ಲ ಎಂದ ಮೇಲೆ ಮತ್ತೆಲ್ಲಿ ಕಾಣಲು ಸಾಧ್ಯ? ಕೇಂದ್ರ ಸರ್ಕಾರಕ್ಕೆ ಸೇರಿದ ರಾಜ್ಯದಲ್ಲಿರುವ ಇಲಾಖೆಗಳು ತ್ರಿಭಾಷಾ ಸೂತ್ರದ ಅನ್ವಯ ಕಡ್ಡಾಯವಾಗಿ ಕನ್ನಡವನ್ನು ಬಳಸಬೇಕು. ಆದರೆ ಎಷ್ಟು ಕಡೆಗಳಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡಲಾಗುತ್ತಿದೆ? ಕನ್ನಡಿಗರೇ ಕೆಲಸ ಮಾಡುವ ರಾಜ್ಯ ಸರ್ಕಾದ ಕಛೇರಿಗಳಲ್ಲೂ ಸಹ ಸಂಪೂರ್ಣ ಕನ್ನಡವನ್ನು ಬಳಕೆ ಮಾಡುತ್ತಿಲ್ಲ. ನೋಂದಣಿ ಮುದ್ರಾಂಕ ಇಲಾಖೆಗಳಲ್ಲಿ, ಬ್ಯಾಂಕುಗಳಲ್ಲಿ, ಕೋರ್ಟುಗಳಲ್ಲಿ ಇನ್ನೂ ಹಲವು ಕಡೆ ಕನ್ನಡವನ್ನು ಸಂಪೂರ್ಣವಾಗಿ ಬಳಕೆ ಮಾಡುತ್ತಿಲ್ಲ. ಈ ಬಗ್ಗೆ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ.
ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕಿರುವುದು ಪ್ರತಿಯೊಬ್ಬ ತಂದೆ-ತಾಯಿಯರ ಆದ್ಯ ಕರ್ತವ್ಯ. ಆದರೆ ಕನ್ನಡ ಮಾತನಾಡಲು ಕೀಳಿರಿಮೆ ಎಂದು ಭಾವಿಸುವ ಅನೇಕ ಪೋಷಕರರಿದ್ದಾರೆ. ಮನೆಯಲ್ಲೂ ಮಕ್ಕಳೊಡನೆ ಇಂಗ್ಲೀಷ್ ಮಾತನಾಡುವುದು ಪ್ರತಿಷ್ಠೆ ಎಂದು ತಿಳಿಯುವ ಕೆಲವರು, ತಮ್ಮ ಮಕ್ಕಳನ್ನು ಕನ್ನಡ ಕಲಿಕೆಯಿಂದ ದೂರವಾಗು ವಂತೆ ಮಾಡುತ್ತಿದ್ದಾರೆ. ಬೆಂಗಳೂರಿನ ಮಾಲ್‌ಗಳಲ್ಲಿ, ಸಿನೆಮಾ ಮಂದಿರಗಳಲ್ಲಿ ದೊಡ್ಡದೊಡ್ಡ ಅಂಗಡಿಗಳಲ್ಲಿ ವ್ಯವಹರಿ ಸುವಾಗ, ಕನ್ನಡ ಬರುವವರೂ ಸಹ ಇಂಗ್ಲೀಷಿನ ಮೊರೆ ಹೋಗುವುದನ್ನು ಕಾಣಬಹುದು. ಹೀಗಾದರೆ ಕನ್ನಡದ ಬಗ್ಗೆ ಇತರರಲ್ಲಿ ಅಭಿಮಾನ ಮೂಡುವುದು ಯಾವಾಗ? ಆ ಸ್ಥಳಗಳಲ್ಲಿ ಕನ್ನಡ ಕಲಿಕೆಯ ವಾತಾವರಣ ಮೂಡುವುದೆಂತು? ಕನ್ನಡಿಗರು ಸಾಧ್ಯವೆಸುವ ಎಲ್ಲಾ ಕಡೆ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಆಗ ಮಾತ್ರ ಇತರರು ಕನ್ನಡ ಕಲಿಯಬೇಕಾದ ಅನಿವಾರ್ಯತೆ ಉಂಟಾಗುತ್ತದೆ.
ಇಷ್ಟಾಗಿಯೂ ಕನ್ನಡಿಗರು ಹೆಮ್ಮೆ ಪಡುವಂತಹ ವಿಷಯವೊಂದಿದೆಅದೆಂದರೆ, ಕನ್ನಡದಲ್ಲಿ ಪ್ರತಿವರ್ಷವೂ ಸಾವಿರಾರು ಪುಸ್ತಕಗಳು ಮುದ್ರಣಗೊಂಡು ಮಾರಾಟವಾಗುತ್ತಿರುವುದು. ಕನ್ನಡ ಕಥೆ-ಕಾದಂಬರಿಗಳ ಓದುಗರ ವರ್ಗ ಜೀವಂತವಾಗಿರುವುದು. ಅನ್ಯಭಾಷೆಗಳ ಚಲನ ಚಿತ್ರಗಳ ಪ್ರವಾಹದ ನಡುವೆ ಕನ್ನಡ ಚಿತ್ರಗಳು ತಮ್ಮ ತನವನ್ನು ಉಳಿಸಿಕೊಂಡು, ಪ್ರತಿವರ್ಷ ನೂರಾರು ಚಲನಚಿತ್ರಗಳು ಬಿಡುಗಡೆಯಾಗುತ್ತಿರುವುದು. ಪತ್ರಿಕೆ, ದೂರದರ್ಶನ, ರೇಡಿಯೋ, ಮುಂತಾದ ಸಮೂಹ ಮಾಧ್ಯಮಗಳಲ್ಲಿ ಕನ್ನಡವು ಇಂದಿಗೂ ವಿಜೃಂಭಿಸುತ್ತಿರುವುದು.ಕನ್ನಡಿಗರಾದ ನಾವು ಮೈ-ಮನಸ್ಸುಗಳ ತುಂಬ ಕನ್ನಡತನವನ್ನು ತುಂಬಿ ಕೊಳ್ಳೋಣ, ಅನ್ಯರಿಗೆಕನ್ನಡದಕಂಪನ್ನು ಹರಡೋಣ. ಕರ್ನಾಟಕದಏಕತೆಯನ್ನುಕಾಪಾಡೋಣ: ಕನ್ನಡಿಗರೆಲ್ಲಾ ನಿಜವಾದ ಕನ್ನಡಿಗರಾಗೋಣ ಎಂಬ ಶಪಥವನ್ನು ಮಾಡೋಣ.
- ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ? - April 1, 2025
- ಬೆಂಗಳೂರು ವಿಶ್ವವಿದ್ಯಾನಿಲಯ” ಸರ್ಕಾರ UVCE ಗೆ ನೀಡಿರುವ 50 ಎಕರೆ ಜಮೀನು ರದ್ದು ಪಡಿಸಿ ? - April 1, 2025
- April 2025 - April 1, 2025