ನಾವು ಮತ್ತು ನಮ್ಮ ಒತ್ತಡದ ಜೀವನ
ಒತ್ತಡ……….. ! ಒತ್ತಡ ಎಂದರೇನು ? ಎಂದು ನಿಮ್ಮನ್ನು ಪ್ರಶ್ನಿಸಿದರೆ ಇದಕ್ಕೆ ವ್ಯಾಖ್ಯಾನ ಹುಡುಕುವುದು ಕಷ್ಟವಾದರೂ ಇದನ್ನು ಅನುಭವಿಸದವರು ಯಾರು ಇಲ್ಲ. ಇತ್ತೀಚಿನ ದಿನಗಳಲ್ಲಿ ಈ ಪದವನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚುತ್ತಿದ್ದು ಹುಟ್ಟಿದ ಮಗುವಿನಿಂದ ಪ್ರಾರಂಭವಾಗಿ ಜೀವನದ ಯಾತ್ರೆಯನ್ನು ಮುಗಿಸಿ ಹೊರಡಲು ಸಿದ್ದವಿರುವ ವೃದ್ದರಲ್ಲಿಯೂ ಕಾಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.

ಒತ್ತಡ ಮಾನವನ ಜೀವನದ ಜೀವಾಳವಾಗಿದ್ದು ಇದು ಮಾನವನ ಸಾಧನೆಗೆ ಅಡ್ಡಿಯಾಗುವುದಲ್ಲದೆ ಮಾನಸಿಕ ಸಮಸ್ಯೆಗಳ ಮೂಲವಾಗಿದೆ. ಇನ್ನು ಕೆಲವೊಮ್ಮೆ ಮಾನಸಿಕ ರೋಗಗಳು ಉಲ್ಬಣಗೊಳ್ಳಲು ಇವು ಪೂರಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ಒತ್ತಡ ನಮ್ಮಲ್ಲಿ ಕಂಡುಬರುವ ಸಾಧಾರಣ ವಿಷಯವಾದರು ಅದು ನೀಡುವ ಕೊಡುಗೆ ಮಾನವ ಜೀವನದ ದಿಕ್ಕನ್ನೆ ಬದಲಿಸುವ ಶಕ್ತಿ ಈ ಒತ್ತಡಗಳಿಗಿವೆ. ಒತ್ತಡ ಮನವನಲ್ಲಿ ಋಣಾತ್ಮಕವಾಗಿ ಕಾರ್ಯ ನಿರ್ವಹಿಸುವುದಷ್ಟೆ ಆಲ್ಲ ಧನಾತ್ಮಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಒತ್ತಡ ನಮ್ಮಲ್ಲಿಯೇ ಹುಟ್ಟುವಂತಹ ಸಂಗತಿಯಾಗಿದ್ದು ಅದರ ಹುಟ್ಟಿಗೆ ಕಾರಣಕರ್ತರೂ ನಾವೆ ,ಹೆಚ್ಚುತ್ತಿರುವ ಜನಸಂಖ್ಯೆ ,ನಗರೀಕರಣ, ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳಿಂದ ಪ್ರಗತಿಯನ್ನು ಕಾಣುತಿದ್ದು ಮಾನವನಲ್ಲಿನ ಒತ್ತಡವೂ ಪ್ರಗತಿಯನ್ನು ಕಾಣುತ್ತಿದೆ. ಹೆಚ್ಚುತಿರುವ ಜನಸಂಖ್ಯೆಗೆ ಪೂರಕವಾಗಿ ಮೂಲ ಅವಶ್ಯಕತೆಯ ಪೂರೈಕೆಯಾಗದ ಕಾರಣ ಪ್ರತಿಯೊಂದು ವಿಷಯದಲ್ಲಿಯೂ ಪೈಪೋಟಿ ಅನಿವಾರ್ಯವಾಗಿದೆ. ನಿರುದ್ಯೋಗ ಲಂಚಗುಳಿತನ, ದಗಾ,ಮೋಸ, ದರೋಡೆ ,ಲೂಟಿ, ಪ್ರತಿಭಟನೆ, ಅತ್ಯಾಚಾರ,ಕೊಲೆ ಭಯೋತ್ಪಾದೆನೆ ಮುಂದಾದ ನೂರಾರು ಸಮಸ್ಯೆಗಳು ಉದ್ಭವವಾಗಿ ಸಾಮಾಜಿಕ ಮೌಲ್ಯಗಳನ್ನು ಮೂಲೆ ಗುಂಪಾಗಿಸಿವೆ. ಇಷ್ಟೇ ಅಲ್ಲದೆ ಜನಾಂಗೀಯ ,ಧಾರ್ಮಿಕ ,ಪ್ರಾಂತೀಯ ಮತ್ತು ಭಾಷೆಗಳ ಮೇಲೆ ಪೂರ್ವಾಗ್ರಹ ಪೀಡಿತರಾಗಿ ಅನೇಕ ಸಮಸ್ಯೆಯನ್ನು ಹುಟ್ಟಿ ಹಾಕುತ್ತಿದ್ದು ಜನರ ನಿದ್ದೆಯನ್ನು ಕೆಡಿಸಿದೆ. ಈ ಕಾರಣಗಳು ಅನೇಕ ರೀತಿಯ ಒತ್ತಡಗಳಿಗೆ ಕಾರಣವಾಗಿವೆ.
ಒತ್ತಡ ಒಂದು ರೀತಿಯ ಭಯಾನಕ ರೋಗವಿದ್ದಂತೆ, ಮನಸ್ಸಿನಲ್ಲಿ ಉಂಟಾಗುವ ಮಾನಸಿಕ ತುಮಲಗಳೆಂಬ ವೈರೆಸ್ ನಮಗರಿವಿಲ್ಲದಂತೆ ನಮ್ಮಲ್ಲಿ ಸೇರಿ ಕಾರ್ಕೋಟಕ ವಿಷವಾಗಿ ರೂಪುಗೊಂಡು ನಮ್ಮನ್ನೇ ಬಲಿ ತೆಗೆದುಕೊಂಡು ಬಿಡುತ್ತದೆ. ಬದಲಾದ ಭಾರತದ ಸನ್ನಿವೇಶದಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿ ರುವವರ ಸಂಖ್ಯೆ ಹೆಚ್ಚಿದ್ದು ಇದಕ್ಕೆ ಬಹುಮುಖ್ಯ ಕಾರಣ ಒತ್ತಡವಾಗಿ ರುವುದು ಆಂತಕವನ್ನುಂಟುಮಾಡಿದೆ.
ವ್ಯಕ್ತಿಗಳಲ್ಲಿ ಒತ್ತಡ ಉಂಟಾಗಲು ಮೂಲ ಕಾರಣಗಳು:
ಒತ್ತಡಕ್ಕೆ ಅನೇಕ ಕಾರಣಳನ್ನು ನಾವು ಕಾರಣಬಹುದಾದರೂ ಅವುಗಳಲ್ಲಿ ಮುಖ್ಯವಾದವುಗಳು ಈ ಕೆಳಕಂಡತಿವೆ.
- ಹತಾಶೆ ಮತ್ತು ನಿರಾಶೆಯ ಭಾವನೆ, ಕುಟುಂಬದ ಅಂತರ್ ವ್ಯಕ್ತಿ ಸಂಬದದಲ್ಲಿನ ವೈಪರಿತ್ಯ
- ಮಕ್ಕಳು ಮತ್ತು ಕುಟುಂಬದವರೊಂದಿಗೆ ಅತಿಯಾದ ನಿರೀಕ್ಷೆ,ಮದ್ಯ ಮತ್ತು ಮಾದಕ ವಸ್ತುಗಳ ಚಟ
- ಅನವಶ್ಯಕವಾಗಿ ಕೆಲಸವನ್ನು ಮುಂದೂಡುವುದು,ಅತಿಯಾದ ತಂತ್ರಜ್ಞಾನದ ಅವಲಂಬನೆ
- ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಅವಲಂಬನೆ,ಮಾನಸಿಕ ಘರ್ಷಣೆಗಳು ಮತ್ತು ಅಸಂಬದ್ದ ನಿರ್ಧಾರಗಳು, ಎರಡೂ ಬೇಕು (ಬೇಕು-ಬೇಕು) ನಡುವಿನ ಗೊಂದಲ
- ಎರಡೂ ಬೇಡ(ಬೇಡ-ಬೇಡ)ನಡುವಿನ ಘರ್ಷಣೆ,ಒಂದು ಬೇಕು-ಮತ್ತೊಂದು ಬೇಡ, ನಡುವಿನ ಘರ್ಷಣೆ
- ಹಣಕಾಸಿನ ಸಮಸ್ಯೆ,ಅಂತರ್ ವ್ಯಕ್ತಿ ಸಂಬಂದಗಳ ಅಸಮರ್ಪಕ ನಿರ್ವಹಣೆ
- ಬದಲಾದ ಜೀವನಶೈಲಿ ಮತ್ತು ಹವ್ಯಾಸಗಳು, ನಮ್ಮ ಕೆಲಸ ಮತ್ತು ಕೆಲಸಕ್ಕೆ ಸಂಬದಿಸಿದ ಒತ್ತಡಗಳು
- ಸಹೋದ್ಯೋಗಿಗಳೊಂದಿಗಿನ ಗೊಂದಲ ಮತ್ತು ಅಸಮರ್ಪಕ ಸಂಬಂದಗಳ ನಿರ್ವಹಣೆ
- ನಮ್ಮನ್ನು ಯಾರು ಗುರುಸುತ್ತಿಲ್ಲ ಎಂಬ ಭಾವನೆ ನಕಾರಾತ್ಮಕ ಆಲೋಚನೆಗಳು ಆತಂಕ ಮತ್ತು ಭಯದ ವಾತಾವರಣ
ಒತ್ತಡದಿಂದ ಉಂಟಾಗುವ ದೈಹಿಕ ಪ್ರತಿಕ್ರಿಯೆಗಳು:
ಒತ್ತಡಗಳಿದ ಮಾನವನ ಮೆದುಳಿನ ತಳಭಾಗದಲ್ಲಿ ಹೈಪೋತಲಾಮಸ್ ಕಾರ್ಯಾರಂಬಿಸಿ ಪಿಟ್ಯೂಟರಿ ಗ್ರಂಥಿಯನ್ನು ಪ್ರಚೋದಿಸಿ ಟ್ರೋಫಿಕ್ ಅಂತ:ಸ್ರಾವವನ್ನು ಬಿಡುಗಡೆ ಮಾಡುತ್ತದೆ. ಈ ಟ್ರೋಪಿಕ ಅಂತ:ಸ್ರಾವ ಗಳಲ್ಲಿ ಒಂದು? ಅಡ್ರಿನೋಟ್ರೋಪಿಕ್ ಸ್ರಾವ? ಇದು ಅಡ್ರಿನಲ್ ಗ್ರಂಥಿಯನ್ನು ಪ್ರಚೋದಿಸಿ ಅಡ್ರಿನಲಿನ್ ಅಂತಸ್ರಾವವನ್ನು ಬಿಡುಗಡೆ ಮಾಡಿಸುತ್ತದೆ. ಈ ಸ್ರಾವ ಶರೀರದಲ್ಲಿ ಅನೇಕ ರೀತಿಯ ಮಾರ್ಪಾಡು ಮಾಡುವುದರಿಂದ ಈ ಕೆಳಗಿನ ಅಂಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಅವುಗಳೆಂದರೆ.
ಕೆಲವು ಚಟುವಟಿಕೆಯಲ್ಲಿ ತೀವ್ರವಾಗಿದ್ದು ಮತ್ತೆ ಕೆಲವು ಚಟುವಟಿಕೆಗಳು ನಿಧಾನಗತಿಯಲ್ಲಿರುತ್ತವೆ. ಮೈ ಕೈ ನೋವು ತಲೆನೋವು ಮುಂತಾದವುಗಳು ಕಾಣಿಸಿಕೊಳ್ಳುತ್ತವೆ. ದೇಹದ ತೂಕದಲ್ಲಿ ಗಣನೀಯ ಪ್ರಮಾಣದ ಏರಿಕೆ ಮತ್ತು ಇಳಿಕೆ.ದೇಹದಲ್ಲಿ ರಕ್ತ ಕಡಿಮೆಯಾಗುವುದು. ಲಾಲಾರಸ ಗ್ರಂಥಿಗಳ ಗಣನೀಯ ಪ್ರಮಾಣದ ಇಳಿಕೆಯಿಂದ ಪದೇಪದೆ ಬಾಯಿ ಒಣಗುವುದು. ಜೀರ್ಣಾಂಗ ವ್ಯವಸ್ಥೆಯಲ್ಲಿ ವೈಪರಿತ್ಯವಾಗುವುದು. ದೇಹದಲ್ಲಿ ರಕ್ತದ ಒತ್ತಡ ಮತ್ತು ಹೃದಯದ ಬಡಿತ ಹೆಚ್ಚುವುದು. ನಿದ್ರೆ ಮತ್ತು ದೈನಂದಿನ ಕಾರ್ಯದಲ್ಲಿನ ಅಸಮತೋಲನ, ಲೈಂಗಿಕತೆಯ ಬಯಕೆ, ಆನಂದ ಕ್ಷೀಣಿಸುತ್ತಿರುವುದು.
ಮಧ್ಯಪಾನ ಮತ್ತು ಧೂಮಪಾನವನ್ನು ಹೆಚ್ಚಾಗಿ ಮಾಡುವುದು. ಬಾಲ್ಯದ ಅನುಭವಗಳಾದ ಮೂತ್ರ ವಿಸರ್ಜನೆ, ಮಲವಿಸರ್ಜನೆ ,ಹಟಮಾರಿತನ, ಬೆರೆಳು ಚೀಪುವುದು ಮುಂತಾದಂತಹ ಅಭ್ಯಾಸಗಳು ಮರುಕಳಿಸುವುದು.
ಒತ್ತಡದಿಂದ ಉಂಟಾಗುವ ಮಾನಸಿಕ ಪ್ರತಿಕ್ರಿಯೆಗಳು:
ಅತಿಯಾದ ಭಯ ಭೀತಿ ಕಾಡುತ್ತಿರುವುದು. ಆತ್ಮ ವಿಶ್ವಾಸದಲ್ಲಿ ಗಣನೀಯವಾದ ಇಳಿಕೆ. ಅಪರಾದಿ ಭಾವನೆ ಸದಾ ಕಾಡುತ್ತಿರುವುದು. ಭವಿಷ್ಯದಲ್ಲಿ ಯಾವುದೋ ಅಪಾಯ ಸಂಭವಿಸಬಹುದೆಂಬ ಭಯ ಕಾಡುತ್ತಿರುವುದು.ಅತಿಯಾದ ಮರೆವು ಮತ್ತು ಯಾವುದೇ ಕಾರ್ಯದಲ್ಲಿ ಏಕಾಗ್ರತೆ ವಹಿಸಲು ಸಾಧ್ಯವಾಗದ ಸ್ಥಿತಿ. ಹಿಡಿದ ಕಾರ್ಯವನ್ನು ಪೂರ್ಣಗೊಳಿಸದೆ ಅರ್ದದಲ್ಲಿಯೇ ಕೈಬಿಡುವುದು. ಸಿಟ್ಟು ಮತ್ತು ಕೋಪ ಪದೇಪದೆ ಕಾಡುವುದು. ತಾನು ಒಂಟಿ ಎಂಬ ಭಾವನೆ ಕಾಡುವುದು. ನಿರ್ಧಾರ ತೆಗೆದುಕೊಳ್ಳುವಲ್ಲಿ ಅಸಮರ್ಥತೆ. ಸದಾಯಾವ ಪ್ರಯೋಜನಕ್ಕೂ ಬಾರದ ಕೆಲಸವನ್ನು ಮಾಡುವುದು. ಪದೆ ಪದೆ ಅಳಬೇಕೆಂದೆನಿಸುವುದು. ಯಾವುದೇ ಕಾರ್ಯದಲ್ಲಿಯೂ ಆಸಕ್ತಿ ವಹಿಸಲು ಸಾಧ್ಯವಾಗದೆ ಮನಸ್ಸು ಅಲೆಯುತ್ತಿರುವುದು.
ಈ ಮೇಲ್ಕಂಡ ಲಕ್ಷಣಗಳು ಒತ್ತಡದಿಂದ ಬಲಳುತ್ತಿರುವ ವ್ಯಕ್ತಿಯ ಲಕ್ಷಣಗಳಾಗಿದ್ದು ಈ ರೀತಿಯ ಅನೇಕ ಲಕ್ಷಣಗಳು ಕಂಡುಬಂದಲ್ಲಿ ಅವುಗಳನ್ನು ನುರಿತ ಮನಶಾಸ್ತ್ರಜ್ಞಾರು ಅಥವ ಮನೋವಿಜ್ಞಾನಿಗಳ ಸಹಾಯ ಪಡೆಯುವುದು ಬಹುಮುಖ್ಯವಾಗಿದೆ.
ಒತ್ತಡ ನಿರ್ವಹಣಾ ತಂತ್ರಗಳು:
ಒತ್ತಡಗಳಿಂದ ಆಗಬಹುದಾಂತಹ ತೊಂದರೆಯನ್ನು ಅರಿತುಕೊಂಡ ನಂತರ ಅದನ್ನು ತಡೆಗಟ್ಟುವ ಮಾರ್ಗಗಳನ್ನು ತಿಳಿದುಕೊಳ್ಳುವುದು ಅಷ್ಟೆ ಪ್ರಮುಖವಾಗಿದ್ದು ಕೆಲವು ಅಂಶಗಳು ಈ ಕೆಳಕಂಡಂತಿವೆ.
ನಿಮ್ಮ ದಿನನಿತ್ಯದ ಕಾರ್ಯನಿರ್ವಹಣೆಯಲ್ಲಿ ನೀವು ಮುಖ್ಯವಾಗಿ ಮಾಡಬೇಕಾದಂತಹ ಕಾರ್ಯಗಳ ಬಗ್ಗೆ ಗಮನಹರಿಸಿ. ಅಗತ್ಯವಿದ್ದಲ್ಲಿ ನಿಮ್ಮ ಜವಾಬ್ದಾರಿಯನ್ನು ಹಂಚಿಕೊಂಡು ಕಾರ್ಯನಿರ್ವಹಿಸಿ. ಉತ್ತಮವಾದ ಸಂಬಂದವನ್ನು ಬೆಳೆಸಿಕೊಂಡು ಅವರೊಡನೆ ಆರೋಗ್ಯದಾಯಕ ಸಂವಹನ ನೆಡೆಸಿ. ಉದ್ಯೋಗದಲ್ಲಿನ ಕೆಲಸವನ್ನು ಮನೆಗೆ ಕೊಂಡೊಯ್ಯದೆ ಕೆಲಸವನ್ನು ಕಛೇರಿಯಲ್ಲಿಯೇ ಮಾಡಿ ಮುಗಿಸಿ. ಸಾಧ್ಯವಾದಷ್ಟು ನಿಮ್ಮ ಕುಟುಂಬದವರ ಜೊತೆ ಗುಣಮಟ್ಟದ ಸಮಯವನ್ನು ಕಳೆಯಿರಿ.
ಸಾಧ್ಯವಾದಲ್ಲಿ ಉತ್ತಮ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಿ.ಹೆಚ್ಚು ಹೆಚ್ಚು ಪರಿಸರ ಮತ್ತು ಪ್ರಾಣಿಗಳ ಜೊತೆ ಸಮಯವನ್ನು ಬೆಳೆಸಿಕೊಳ್ಳಿ. ದೇಹಕ್ಕೆ ಅಗತ್ಯವಿರುವಷ್ಟು ವ್ಯಾಯಾಮ ಮಾಡುವ ಅವ್ಯಾಸ ಬೆಳೆಸಿಕೊಳ್ಳಿ.
ಉತ್ತಮ ಹವ್ಯಾಸಗಳನ್ನು ವೃದ್ದಿಸಿಕೊಂಡು ಅದರಕಡೆ ಗಮನಹರಿಸಿ. ಸಮತೋಲನ ಆಹಾರ ಸೇವನೆಯ ಹವ್ಯಾಸವನ್ನು ಬೆಳಸಿಕೊಳ್ಳಿ. ಸಮಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ನಿಮ್ಮ ಕೆಲಸವನ್ನು ಆಯಾ ಸಮಯದಲ್ಲಿಯೇ ಪೂರ್ಣಗೊಳಿಸಿ. ವಿಶ್ರಾಂತಿದಾಯಕ ತಂತ್ರಗಳಾದ ಧ್ಯಾನ, ಪ್ರಾಣಯಾಮ ಮುಂತಾದ ಹವ್ಯಾಸಗಳನ್ನು ಬೆಳಸಿಕೊಳ್ಳಿ. ನಿಮ್ಮ ಕುಟುಂಬದ ಸಮಸ್ಯೆಯನ್ನು ಅರ್ಥೈಸಿಕೊಂಡು ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಿ.
ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಪೂರ್ವಾಪರ ಯೋಚಿಸಿ ನಿರ್ಧಾರಕ್ಕೆ ಬನ್ನಿ. ಅಸಂಬದ್ದ ವಿಷಯಗಳ ಬಗ್ಗೆ ಗಮನಹರಿಸದೆ ನಿಮ್ಮ ಕಾರ್ಯಗಳ ಬಗ್ಗೆ ಗಮನ ಹರಿಸಿ. ಹೆಚ್ಚು ಹೆಚ್ಚು ಧನಾತ್ಮಕ ಆಲೋಚನೆಗಳ ಬಗ್ಗೆ ಗಮನಹರಿಸಿ. ಅಹಿತಕರ ವಿಷಯವನ್ನು ನಿಮ್ಮ ನೆನಪಿನಿಂದ ದೂರಮಾಡಿ.
ನಿಮ್ಮ ಆತ್ಮ ಶಕ್ತಿಯಿಂದ ಯಾವ ಸಮಸ್ಯೆಯನ್ನು ಬೇಕಾದರು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಸಾತ್ವಿಕ ಆಹಾರವನ್ನು ಹೆಚ್ಚಾಗಿ ಸೇವಿಸಿ. ಮನಸ್ಸಿಗೆ ಸಂತೋಷವನ್ನು ನೀಡುವ ಸಂಗೀತವನ್ನು ಆಲಿಸಿ. ಹಾಸ್ಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ. ನಿಮ್ಮ ಬಿಡುವಿನ ಸಮಯದಲ್ಲಿ ಸಮಾಜಿಕ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ಈ ರೀತಿಯಾಗಿ ಮೇಲ್ಕಂಡ ಅಂಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ನಮ್ಮ ಜೀವನದಲ್ಲಿ ಬರಹುದಾದಂತಹ ಒತ್ತಡವನ್ನು ಸಮರ್ಥ ರೀತಿಯಲ್ಲಿ ಎದುರಿಸಲು ಸಹಕಾರಿಯಾಗುತ್ತದೆ.