ಶ್ರಮ ಮತ್ತು ಸಮಯ:
ಯಶಸ್ಸಿನ ಸುವರ್ಣ ಸೂತ್ರ
ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಆದರೆ ಆ ಕನಸುಗಳನ್ನು ಸಾಕಾರಗೊಳಿಸುವ ಎರಡು ಅಮೂಲ್ಯ ಸಂಪನ್ಮೂಲಗಳೇ ಶ್ರಮ ಮತ್ತು ಸಮಯ. ಇವೆರಡನ್ನೂ ನಾವು ಸಮರ್ಥವಾಗಿ ಬಳಸಿಕೊಳ್ಳಬೇಕು ಹಾಗೂ ಗೌರವಿಸಬೇಕು. ಶ್ರಮ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ದರೆ, ಸಮಯ ನಮ್ಮ ಬದುಕಿಗೆ ನಿಜವಾದ ಮೌಲ್ಯವನ್ನು ನೀಡುತ್ತದೆ. ಇವೆರಡರ ಮಹತ್ವವನ್ನು ಅರಿತು, ಜೀವನದಲ್ಲಿ ಇವೆರಡನ್ನೂ ಗೌರವಿಸುವ ವ್ಯಕ್ತಿ ಮಾತ್ರ ಜೀವನದಲ್ಲಿ ನಿಜವಾದ ಸಾಧಕನಾಗಲು ಸಾಧ್ಯ.
“ಸಮಯ ಯಾರಿಗಾಗಿಯೂ ಕಾಯುವುದಿಲ್ಲ. ಒಮ್ಮೆ ಕಳೆದ ಕ್ಷಣ ಮತ್ತೆ ಮರಳಿ ಬರುವುದಿಲ್ಲ.”
ಪ್ರತಿಯೊಂದು ನಿಮಿಷವನ್ನೂ ಸದುಪಯೋಗ ಪಡಿಸಿಕೊಳ್ಳುವುದು ಅತ್ಯಗತ್ಯ. ಅನೇಕರು “ನಾಳೆ ಮಾಡೋಣ” ಎಂಬ ಆಲಸ್ಯದ ಮನೋಭಾವದಿಂದ ಕೆಲಸಗಳನ್ನು ಮುಂದೂಡುತ್ತಾರೆ. ಆದರೆ, ಹೀಗೆ ಮುಂದೂಡುವ ಅಭ್ಯಾಸವು ನಮ್ಮಿಂದ ಉತ್ತಮ ಅವಕಾಶಗಳನ್ನು ದೂರ ಮಾಡುತ್ತದೆ. ಸಮಯದ ಮೌಲ್ಯ ಅರಿತವರು ಪ್ರತಿಯೊಂದು ದಿನವನ್ನೂ ಹೊಸದೊಂದು ಅವಕಾಶವಾಗಿ ಸ್ವೀಕರಿಸುತ್ತಾರೆ.
ಅದೇ ರೀತಿ, ಶ್ರಮವಿಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲ. ಅದೃಷ್ಟವು ಕೆಲವೊಮ್ಮೆ ನಮ್ಮ ಬಾಗಿಲು ತಟ್ಟಬಹುದು, ಆದರೆ ನಿರಂತರ ಶ್ರಮ ಮಾತ್ರ ಯಶಸ್ಸಿನ ಬಾಗಿಲನ್ನು ಶಾಶ್ವತವಾಗಿ ತೆರೆದಿಡುತ್ತದೆ. ರೈತನು ಬೀಜ ಬಿತ್ತದೆ ಉತ್ತಮ ಬೆಳೆ ನಿರೀಕ್ಷಿಸಲು ಸಾಧ್ಯವಿಲ್ಲ; ಒಬ್ಬ ವಿದ್ಯಾರ್ಥಿ ಅಭ್ಯಾಸ ಮಾಡದೆ ಉತ್ತಮ ಅಂಕಗಳ ಕನಸು ಕಾಣಲು ಸಾಧ್ಯವಿಲ್ಲ. ಹಾಗೆಯೇ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಪರಿಶ್ರಮವೇ ಪ್ರಗತಿಯ ಮೂಲಮಂತ್ರ.
ಶ್ರಮ ಮತ್ತು ಸಮಯ ಒಂದಕ್ಕೊಂದು ಪೂರಕ ಪದಗಳು,ಸಮಯವನ್ನು ಸರಿಯಾಗಿ ಬಳಸಿಕೊಂಡಾಗ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ; ಶ್ರಮಪಟ್ಟು ಕೆಲಸ ಮಾಡಿದಾಗ ಸಮಯದ ಮೌಲ್ಯ ಹೆಚ್ಚುತ್ತದೆ. ಇವೆರಡನ್ನೂ ನಿರ್ಲಕ್ಷಿಸಿದವರು ಜೀವನದಲ್ಲಿ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಆದರೆ, ಇವುಗಳನ್ನು ಗೌರವಿಸಿದವರು ಯಶಸ್ಸಿನ ಶಿಖರವನ್ನು ತಲುಪುತ್ತಾರೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಯಪಾಲನೆ ಮತ್ತು ನಿರಂತರ ಪರಿಶ್ರಮಕ್ಕೆ ಹೆಚ್ಚಿನ ಮಹತ್ವವಿದೆ. ಇತಿಹಾಸದ ಯಶಸ್ವಿ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಗಮನಿಸಿದರೆ, ಅವರ ಸಾಧನೆಯ ಹಿಂದೆ ಅಡಗಿರುವುದು ಕಟ್ಟುನಿಟ್ಟಾದ ಸಮಯದ ಶಿಸ್ತು ಮತ್ತು ಕಠಿಣ ಪರಿಶ್ರಮವೇ ಎಂಬುದು ಸ್ಪಷ್ಟವಾಗುತ್ತದೆ.
ನಾವುಗಳು, ನಮ್ಮ ಯಶಸ್ವಿ ಬದುಕಿಗಾಗಿ ಇಂದೇ ಒಂದು ದೃಢ ಸಂಕಲ್ಪ ಮಾಡೋಣ — “ಸಮಯವನ್ನು ವ್ಯರ್ಥ ಮಾಡದೆ, ಶ್ರಮವನ್ನು ಆರಾಧಿಸಿ ಮುಂದೆ ಸಾಗೋಣ.” ಏಕೆಂದರೆ ಶ್ರಮ ನಮ್ಮ ಕನಸುಗಳಿಗೆ ರೆಕ್ಕೆ ನೀಡಿದರೆ, ಸಮಯ ಅವುಗಳನ್ನು ಗಮ್ಯಸ್ಥಾನಕ್ಕೆ ತಲುಪಿಸುತ್ತದೆ.
ಕೊನೆಯದಾಗಿ “ಸಮಯವನ್ನು ಗೌರವಿಸುವವನು ಅವಕಾಶಗಳನ್ನು ಗೆಲ್ಲುತ್ತಾನೆ;ಶ್ರಮವನ್ನು ಗೌರವಿಸುವ ವನು ಯಶಸ್ಸನ್ನು ಗೆಲ್ಲುತ್ತಾನೆ.”