ಪ್ರಶಸ್ತಿಗಳೆಂಬ ಪ್ರಲಾಪ
ಒಂದು ಕಾಲವಿತ್ತು, ಪ್ರಶಸ್ತಿ ಎಂದರೆ ಅದು ವ್ಯಕ್ತಿಯ ಬದುಕಿನ ತಪಸ್ಸಿಗೆ ದೊರೆತ ಮನ್ನಣೆ. ಒಬ್ಬ ಕಲಾವಿದನಿಗೆ, ಸಾಹಿತಿಗೆ ಅಥವಾ ಸಮಾಜ ಸೇವಕನಿಗೆ ದೊರೆಯುವ ಪ್ರಶಸ್ತಿಯು ಸಮಾಜದ ಕೃತಜ್ಞತೆಯ ಸಂಕೇತವಾಗಿತ್ತು. ಒಂದು ಪ್ರಶಸ್ತಿಯು ಅರ್ಜಿ ಸಲ್ಲಿಸಿ ಪಡೆಯುವ ಪ್ರಕ್ರಿಯೆಯಲ್ಲ. ಅದು ಸಮಾಜವೇ ಅವರ ಸೇವೆ, ಸಾಧನೆಯನ್ನು ಗಮನಿಸಿ ನೀಡಬೇಕಾದ ಗೌರವ. ಕೆಲವು ಪ್ರಶಸ್ತಿಗಳನ್ನು ನೀಡಿದಾಗ ಸಮಾಜವೇ ಮಾತನಾಡುತ್ತದೆ. ಈಗ ಆ ಪ್ರಶಸ್ತಿಗೆ ಗೌರವ ಬಂದಿತು ಎಂದು, ಇದೇ ತಾನೇ ವ್ಯಕ್ತಿ ಹಾಗೂ ವ್ಯಕ್ತಿತ್ವದ ನಡುವಿನ ಶ್ರೇಷ್ಠತೆ.
ಇಂದು, ‘ಪ್ರಶಸ್ತಿ’ ಎಂಬ ಪದವು ತನ್ನ ಮೂಲ ಅರ್ಥವನ್ನು ಕಳೆದುಕೊಂಡು, ಒಂದು ರೀತಿಯ ಅಬ್ಬರದ ಪ್ರಲಾಪವಾಗಿ ಮಾರ್ಪಟ್ಟಿದೆ. ಪ್ರಶಸ್ತಿಗಾಗಿ ನಡೆಯುವ ಲಾಬಿ, ಅದಕ್ಕಾಗಿ ಮೀಸಲಿಟ್ಟ ಬಜೆಟ್ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳ ಅತಿರೇಕದ ಪ್ರಚಾರಗಳು ಇಂದು ಗಂಭೀರವಾದ ಸಾಹಿತ್ಯ, ಕಲೆ ಮತ್ತು ಸಮಾಜ ಸೇವೆಯನ್ನು ಮರೆಮಾಚುತ್ತಿವೆ. ಒಬ್ಬ ವ್ಯಕ್ತಿ ಹತ್ತಾರು ಪ್ರಶಸ್ತಿಗಳಿಗೆ ಹಂಬಲಿಸುವ, ಬೆಂಬಲಕೋರುವ, ಹೇಳುವ, ಹೇಳಿಸುವ ಹೀನಹಂತಕ್ಕೆ ತಲುಪುವುದೆಂದರೆ ಇದನ್ನು ಯಾವ ಮಾಪನದಲ್ಲಿ ಅಳೆಯಬಹುದು? ಸಾಹಿತ್ಯ ಕ್ಷೇತ್ರದಲ್ಲಂತೂ ಸಂಪೂರ್ಣ ಹಾಳಾಗಿ ಕವಿ, ಲೇಖಕ, ಸಾಹಿತಿ ಎಂಬ ಪದದ ಗೌರವ ಪಡೆಯುವುದೇ ಕೆಲವರಿಗೆ ಬೇಸರ ತರಿಸುವಂತಾಗಿದೆ.
ಇಂದಿನ ವ್ಯವಸ್ಥೆಯಲ್ಲಿ ಪ್ರಶಸ್ತಿಗಳು ಸಾಧನೆಯನ್ನು ಗುರುತಿಸುವುದಕ್ಕಿಂತ ಹೆಚ್ಚಾಗಿ, ಸಾಧನೆಯನ್ನೇ ನಿರ್ಧರಿಸುವ ಶಕ್ತಿಯಾಗಿ ಬೆಳೆದಿವೆ. ಕೃತಿಯ ಗುಣಮಟ್ಟಕ್ಕಿಂತ, ಅದನ್ನು ಪ್ರಶಸ್ತಿಯ ಜ್ಯೂರಿಗಳಿಗೆ ಹೇಗೆ ತಲುಪಿಸುತ್ತೇವೆ ಎಂಬ ‘ಮ್ಯಾನೇಜ್ಮೆಂಟ್’ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದಕ್ಕಾಗಿ ಮಧ್ಯವರ್ತಿಗಳು ಸೃಷ್ಠಿಗೊಂಡಿದ್ದಾರೆ. ಅವರು ಎಲ್ಲರಿಗೂ ಪ್ರಿಯ ಹಾಗೂ ತಾಜಾಹಣ್ಣು. ಇವರಿಂದ ಇದರಿಂದ ನಿಜವಾದ ಸದ್ದಿಲ್ಲದ ಸಾಧಕರು ಮೂಲೆ ಗುಂಪಾಗುತ್ತಿದ್ದಾರೆ. ಪ್ರಶಸ್ತಿ ಸಿಗದೇ ಹೋದರೆ ಸಾಧನೆ ಅಪೂರ್ಣ ಎಂಬ ಭ್ರಮೆ ಸಮಾಜದಲ್ಲಿ ಮನೆ ಮಾಡಿದೆ. ವಾಸ್ತವದಲ್ಲಿ, ಪ್ರಶಸ್ತಿ ಪಡೆಯುವುದಕ್ಕಿಂತ ಮುನ್ನ ಆ ಸಾಧನೆಯು ಸಮಾಜದ ನೋವಿಗೆ ಅಥವಾ ಸಂತೋಷಕ್ಕೆ ಎಷ್ಟರ ಮಟ್ಟಿಗೆ ಸ್ಪಂದಿಸಿದೆ ಎಂಬುದು ಮುಖ್ಯವಲ್ಲವೇ?
‘ಪ್ರಶಸ್ತಿಗಳೆಂಬ ಪ್ರಲಾಪ’ ಎನ್ನುವುದು ಪ್ರಶಸ್ತಿಯನ್ನು ಪಡೆದ ನಂತರ ವ್ಯಕ್ತಿಯು ತನ್ನ ಮೂಲವನ್ನು ಮರೆತು, ತನ್ನನ್ನು ತಾನು ಮೇಲ್ವರ್ಗಕ್ಕೆ ಸೇರಿಸಿಕೊಳ್ಳುವ ಅಥವಾ ಒಂದು ವ್ಯವಸ್ಥೆಯ ಭಾಗವಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ಅದೆಷ್ಟೋ ಸಾರಿ ಪ್ರಶಸ್ತಿಗಳು ವ್ಯಕ್ತಿಯ ಸ್ವತಂತ್ರ ದನಿಯನ್ನು ಅಡಗಿಸಿ ಬಿಡುತ್ತವೆ. ಒಂದು ಪ್ರಶಸ್ತಿ ಸಿಕ್ಕ ನಂತರ ಆ ವ್ಯಕ್ತಿಯು ಸತ್ಯದ ಪರವಾಗಿ ಧ್ವನಿ ಎತ್ತಲು ಹಿಂದೇಟು ಹಾಕುವ ಪರಿಸ್ಥಿತಿ ಉಂಟಾಗುತ್ತದೆ. ಪ್ರಶಸ್ತಿ ಎಂಬುದು ಒಂದು ‘ಮೌನದ ಒಪ್ಪಂದ’ವಾಗಿ ಬದಲಾಗುತ್ತದೆಯೇ ಎಂಬ ಪ್ರಶ್ನೆ ಇಂದು ಬೌದ್ಧಿಕ ವಲಯದಲ್ಲಿ ಕಾಡುತ್ತಿದೆ.
ಸಾಧಕನೊಬ್ಬನಿಗೆ ತಾನು ಮಾಡಿದ ಕೆಲಸದ ತೃಪ್ತಿಯೇ ದೊಡ್ಡಪ್ರಶಸ್ತಿ. ಆದರೆ ಇಂದು, ಪ್ರಶಸ್ತಿಗಳಿಗಾಗಿ ಪೈಪೋಟಿ ನಡೆಯುತ್ತಿದೆ. ಈ ಪೈಪೋಟಿಯಲ್ಲಿ ಸತ್ಯವು ಬಲಿಯಾಗುತ್ತಿದೆ. ಯಾರು ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದಾರೋ ಅವರಿಗೇ ಪ್ರಶಸ್ತಿ ಸಿಗುತ್ತದೆ ಎಂಬ ನಿರ್ದಿಷ್ಟತೆ ಇಂದಿನ ವಾಸ್ತವ. ಆದರೆ, ಇತಿಹಾಸವನ್ನು ಗಮನಿಸಿದರೆ, ಜಗತ್ತಿನ ಶ್ರೇಷ್ಠ ಚಿಂತಕರು ಪ್ರಶಸ್ತಿಗಳಿಗಾಗಿ ಹಾತೊರೆಯಲಿಲ್ಲ. ಅವರು ಬದುಕಿನ ಸತ್ಯವನ್ನು ಅರಸಿದರು. ಪ್ರಶಸ್ತಿ ಬಂದರೆ ಸ್ವಾಗತಿಸಿದರು, ಬರದಿದ್ದರೆ ಅಸಡ್ಡೆಮಾಡಿದರು.
ಕುವೆಂಪು ಅವರಿಗೆ ಕನ್ನಡದ ಸಾಕಷ್ಟು ಮೊದಲ ಪ್ರಶಸ್ತಿಗಳು ಬಂದವು, ಅದು ಅವರ ಶ್ರೇಷ್ಠತೆಗೆ ದೊರೆತ ಮನ್ನಣೆಯಾಗಿತ್ತು.ಅವರ ಪದ್ಮವಿಭೂಷಣವನ್ನು ಕಳ್ಳನು ಕದ್ದಾಗ ಸಮಾಜವೇ ಮಾತಾಡಿತು. ಕಾನೂನು ಅದಕ್ಕಾಗಿ ಸಮಿತಿ ರಚಿಸಿತು. ಅವರ ಗೌರವಗಳೆಲ್ಲಾ ಇಂದು ಪ್ರೇಕ್ಷಣೀಯ ವಸ್ತುವಾಗಿವೆ. ಇವುಗಳಿಗಾಗಿ ಅವರು ಎಂದೂ ಕಾಯಲಿಲ್ಲ, ಅರ್ಜಿಸಲ್ಲಿಸಲಿಲ್ಲ. ಹೇಳಿಕೊಂಡು, ಹೆಸರಿನ ಪಕ್ಕನ ಮೂದಿಸಿಕೊಂಡು ಬದುಕಲಿಲ್ಲ. ಇಡೀ ಜೀವನ ಬರವಣಿಗೆ ಮತ್ತು ಬದುಕನ್ನೇ ಧರ್ಮವನ್ನಾಗಿಸಿಕೊಂಡರು. ಅದೇ ರೀತಿ, ತೇಜಸ್ವಿ ಮತ್ತು ಹಲವು ಸಾಹಿತಿಗಳು ಪ್ರಶಸ್ತಿಗಳನ್ನು ತಿರಸ್ಕರಿಸಿದ ಉದಾಹರಣೆಗಳಿವೆ. ಆ ತಿರಸ್ಕಾರದಲ್ಲಿ ಪ್ರಶಸ್ತಿಗಳಿಗಿಂತ ಸತ್ಯ ದೊಡ್ಡದು ಎಂಬ ದೃಢತೆ ಇತ್ತು.ಇವರೆಲ್ಲಾ ಶುದ್ಧವಾಗಿಯೇ ಉಳಿದರು.
ಸಾಮಾಜಿಕ ಜಾಲತಾಣಗಳ ಈ ಕಾಲದಲ್ಲಿ, ಪ್ರಶಸ್ತಿಯನ್ನು ಹೇಗೆ ಸಂಭ್ರಮಿಸುತ್ತೇವೆ ಎಂಬುದು ಮುಖ್ಯವಾಗಿದೆ. ಒಂದು ಪುಟ್ಟ ಪ್ರಮಾಣಪತ್ರವೋ ಅಥವಾ ಫಲಕವೋ ಸಿಕ್ಕರೆ ಅದನ್ನು ಸಾವಿರಾರು ಜನರಿಗೆ ತೋರಿಸಿ, ಲೈಕ್ಸ್ಮತ್ತು ಕಮೆಂಟ್ಸ್ಮೂಲಕ ಸಣ್ಣದಾದ ಸಾಧನೆಯನ್ನು ಬೃಹತ್ತಾಗಿ ಬಿಂಬಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ಒಂದು ರೀತಿಯ ‘ಪ್ರಶಸ್ತಿಗಳ ಪ್ರಲಾಪ’. ಇಲ್ಲಿ ಸಾಧನೆಯ ಗುಣಮಟ್ಟಕ್ಕಿಂತ ಅದರ ಪ್ರದರ್ಶನಕ್ಕೆ ಹೆಚ್ಚಿನ ಮೌಲ್ಯವಿದೆ. ಮೊನ್ನೆ ರಸ್ತೆಯಲ್ಲಿ ಚಲಿಸುತ್ತಿರುವಾಗ ರಸ್ತೆ ಪಕ್ಕ, ಕಸದ ರಾಶಿಯಲ್ಲಿ ಮರದ ಪ್ರಶಸ್ತಿ ಫಲಕಗಳು ರಾಶಿಯಾಗಿ ಬಿದ್ದಿದ್ದವು. ಕನ್ನಡ ರಾಜ್ಯೋತ್ಸವದಲ್ಲಿ ವಿವಿಧ ಪದನಾಮದಲ್ಲಿ ನೀಡಿದ, ನೀಡಬೇಕಿದ್ದ ಏನೇನೋ ಕತೆ ಹೊತ್ತು ಹಲವರ ಭಾವಚಿತ್ರಗಳ ಅಂಟಿಸಿಕೊಂಡು ಅನಾಥವಾಗಿದ್ದವು. ಇದು ಒಂದು ಕತೆಯಾದರೆ ಸಾಯುವ ತನಕ ಪ್ರಶಸ್ತಿಗಳಿಗೆ ಅಂಟಿದ ಮನುಷ್ಯನು ತನ್ನ ಸಾವಿನ ನಂತರ ಆತನ ಪುಸ್ತಕಗಳನ್ನು ಹಳೆ ಪುಸ್ತಕದಂಗಡಿಯವರು ಕೊಂಡು ಈ ಪ್ರಶಸ್ತಿ ಫಲಕಗಳನ್ನು ಪ್ರಯೋಜನವಿಲ್ಲವೆಂದು ಬಿಟ್ಟು ಹೋದ ಘಟನೆಯಂತೂ ಇಂದಿನ ಪ್ರಶಸ್ತಿ ರೋಗಿಗಳಿಗೆ ಮಾರ್ಗದರ್ಶನವೆನಿಸುತ್ತದೆ.
ಒಂದು ಕಾಲದಲ್ಲಿ ಪ್ರಶಸ್ತಿ ಎಂದರೆ ಸಮಾಜವು ಒಬ್ಬ ಸಾಧಕನಿಗೆ ಸಲ್ಲಿಸುವ ಸಾಷ್ಟಾಂಗ ನಮನವಾಗಿತ್ತು. ಆದರೆ ಇಂದು, ‘ಪ್ರಶಸ್ತಿ ನೀಡುವ ಸಂಘಗಳು’ ಉದ್ಯಮದಂತೆ ಕಾರ್ಯನಿರ್ವಹಿಸುತ್ತಿವೆ. ವಿಶ್ವಮಟ್ಟದ, ರಾಷ್ಟ ಮಟ್ಟದ ಅಥವಾ ರಾಜ್ಯ ಮಟ್ಟದ ಪ್ರಶಸ್ತಿಗಳು ಎಂಬ ಭರ್ಜರಿ ಹೆಸರನ್ನು ಬಳಸಿ, ತೆರೆಮರೆಯಲ್ಲಿ ‘ಇಂತಿಷ್ಟು ಹಣ’ಕ್ಕೆ ಪ್ರಶಸ್ತಿಯನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲವೆ ಇನ್ನೊಂದು ರೂಪದಲ್ಲಿ ಲಾಭ ಪಡೆಯಲಾಗುತ್ತದೆ. ಈ ಪ್ರಕ್ರಿಯೆಯು ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ಕೃಷಿ, ಕಂಪನಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಮಾಜ ಸೇವೆಯಂತಹ ಎಲ್ಲಾಕ್ಷೇತ್ರಗಳಿಗೂ ಹಬ್ಬಿದೆ. ಇದು ಗೌರವದ ಮಾರಾಟವೇ ಹೊರತು ಮನ್ನಣೆಯಲ್ಲ.
ಇಂದು ಪ್ರಶಸ್ತಿ ಎಂಬುದು ‘ಕೊಡು-ಕೊಳುಗೆ’ಯ ವ್ಯವಹಾರವಾಗಿದೆ. ಸಂಘಟನೆಗಳು ಪ್ರಶಸ್ತಿಯ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತವೆ, ಪ್ರಶಸ್ತಿ ಪಡೆಯುವವರು ತಮ್ಮ ವ್ಯಕ್ತಿತ್ವವನ್ನು ಬಲಪಡಿಸಿಕೊಳ್ಳಲು ಆ ಹಣವನ್ನು ಸುರಿಯುತ್ತಾರೆ. ಈ ‘ಪಾವತಿಸಿದ ಪ್ರಶಸ್ತಿ’ಗಳನ್ನು ಪಡೆದವರೇ ಶ್ರೇಷ್ಠರು ಎಂಬ ತಪ್ಪು ಚಿಂತನೆಯು ಸಮಾಜದಲ್ಲಿ ಬೆಳೆಯುತ್ತಿದೆ. ನಿಜವಾದ ಸಾಧಕರು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರೆ, ಹಣತೆತ್ತು ಪ್ರಶಸ್ತಿ ಪಡೆದವರು ಆ ಪ್ರಶಸ್ತಿಯ ಫಲಕವನ್ನು ಹಿಡಿದು ನಕಲಿ ಬಿಂಬವನ್ನು ಸೃಷ್ಟಿಸುತ್ತಿದ್ದಾರೆ. ಇದು ಸಮಾಜದ ಮಾನದಂಡಗಳನ್ನೇ ಬುಡಮೇಲು ಮಾಡುತ್ತಿದೆ. ಮೊನ್ನೆ ಯಾವುದೋ ಸಂಘದವರು ನಾವು ಬಡವರಿಗೆ ಸಹಾಯ ಮಾಡುತ್ತೇವೆ. ಆ ಸೇವೆಗೆ ಇಂತಿಷ್ಟು ಹಣ ನೀಡಿ, ನಿಮಗೆ ‘ಸೇವಾರತ್ನ ಪ್ರಶಸ್ತಿ’ ನೀಡಿ, ಶಾಲು, ಫಲ ಪುಷ್ಪದೊಂದಿಗೆ ಗೌರವಿಸುತ್ತೇವೆ ಎಂದು ಸಂದೇಶ ಬಂದಿದ್ದು ನೋಡಿದರೆ ಭಯವಾಗುತ್ತದೆ. ನಾವು ಶಿಕ್ಷಕರಾದರೆ ನಮ್ಮ ಪಾಠವನ್ನೂ ಕೇಳದೆ, ಮಕ್ಕಳಿಂದ ಅಭಿಪ್ರಾಯವನ್ನೂ ಸಂಗ್ರಹಿಸದೆ ‘ಶ್ರೇಷ್ಠಶಿಕ್ಷಕ, ಆಚಾರ್ಯ, ಗುರು ಈ ಬಿರುದುಗಳೆಲ್ಲಾ ರಾಷ್ಟ, ಅಂತರಾಷ್ಟಿಯ ಪದ ಕೊಂಡಿಯಲ್ಲಿ ದೊರೆಯುವ, ಅದನ್ನು ಧರಿಸಿ, ನಾನು ರಾಷ್ಟçಪ್ರಶಸ್ತಿ ವಿಜೇತ ಎಂದು ಮೆರೆಯುವ ಜೀವಿಗಳಿಗೆ ಏನೆನ್ನುವುದು. ಒಂದು ರಾಜ್ಯ ಪುರಸ್ಕಾರವನ್ನು ರಾಜ್ಯಪಾಲರು, ರಾಷ್ಟç ಪುರಸ್ಕಾರವನ್ನು ರಾಷ್ಟçಪತಿಗಳು ಗೌರವಿಸಬೇಕು. ಅದು ಹೊರೆತಾಗಿ ಬೀದಿಬೀದಿಗಳಲ್ಲಿ ಅಂಬೇಡ್ಕರ್, ಗಾಂಧಿ, ವಿವೇಕಾನಂದ ಹಾಗೂ ಕಲಾಮ್ವರೆಗೂ ಸಂಘ ಸಂಸ್ಥೆಗಳನ್ನು ಮಾಡಿಕೊಂಡು ಈ ‘ನಾಮಾವಶೇಷ’ಗಳನ್ನು ಸೃಷ್ಟಿಸುವುದು ಎಷ್ಟು ಸರಿ.
ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಈ ಪದ್ಧತಿ ಅತಿ ಹೆಚ್ಚಾಗಿದೆ. ಶಾಲಾ ಕಾಲೇಜುಗಳಿಗೆ ‘ಉತ್ತಮ ಶಿಕ್ಷಣ ಸಂಸ್ಥೆ’ ಎಂಬ ಪ್ರಶಸ್ತಿ ನೀಡುವ ಸಂಘಗಳು, ಆ ಸಂಸ್ಥೆಯ ಪ್ರಚಾರಕ್ಕಾಗಿ ಲಕ್ಷಾಂತರ ರೂಪಾಯಿ ಪಡೆಯುತ್ತವೆ. ಅದೇ ರೀತಿ, ಕಾರ್ಪೊರೇಟ್ ವಲಯದಲ್ಲಿ ‘ಬೆಸ್ಟ್ ಸಿಇಒ’ ಅಥವಾ ‘ಲೀಡರ್ ಆಫ್ ದಿ ಇಯರ್’ ಎಂಬ ಪ್ರಶಸ್ತಿಗಳು ಕಂಪನಿಯ ಬ್ರಾಂಡಿಗ್ ಆಗಿ ಬಳಸುವ ಕೇವಲ ಜಾಹೀರಾತು ತಂತ್ರಗಳಾಗಿವೆ. ಕೃಷಿ ಕ್ಷೇತ್ರದಲ್ಲಿಯೂ ಸಹ ರೈತರಿಗೆ ಪ್ರಶಸ್ತಿ ನೀಡುವ ನೆಪದಲ್ಲಿ ಅವರಿಂದಲೇ ದೇಣಿಗೆ ಪಡೆಯುವ ಸಂಘಟನೆಗಳ ಸಂಖ್ಯೆ ಹೆಚ್ಚಿದೆ. ಈ ಎಲ್ಲದರ ಹಿಂದೆ ಇರುವುದು ಮೌಲ್ಯಗಳಿಗಿಂತ ಲಾಭದ ಉದ್ದೇಶವೇ ಹೆಚ್ಚು.
‘ಇಂತಹ ಪ್ರಶಸ್ತಿ ಪಡೆದವರು ಶ್ರೇಷ್ಠರು’ ಎಂಬ ನಂಬಿಕೆ ಜನ ಸಾಮಾನ್ಯರಲ್ಲಿ ಆಳವಾಗಿ ಬೇರೂರುತ್ತಿದೆ. ಈ ಭ್ರಮೆಯು ನಿಜವಾದ ಪ್ರತಿಭೆಗಳನ್ನು ತುಳಿಯುತ್ತಿದೆ. ಒಬ್ಬ ವ್ಯಕ್ತಿ ಕಷ್ಟಪಟ್ಟು ಸಾಧನೆ ಮಾಡಿದರೂ, ಅವನಿಗೆ ಪ್ರಶಸ್ತಿ ನೀಡುವ ಸಂಘಗಳೊಂದಿಗೆ ಸಂಪರ್ಕ ಇಲ್ಲದಿದ್ದರೆ ಅಥವಾ ಹಣ ನೀಡುವ ಶಕ್ತಿ ಇಲ್ಲದಿದ್ದರೆ ಅವನು ಕಡೆಗಣಿಸಲ್ಪಡುತ್ತಾನೆ. ಇದು ಮೇಧಾವಿಗಳಿಗಿಂತ, ಸಂಪನ್ಮೂಲವಿರುವವರಿಗೆ ಸಿಗುವ ಮನ್ನಣೆಯಾಗಿದೆ. ಸಮಾಜವು ಈ ನಕಲಿ ಶ್ರೇಷ್ಠತೆಯನ್ನೇ ನಿಜವೆಂದು ನಂಬುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಇಂತಹ ಪ್ರಶಸ್ತಿಗಳನ್ನು ಪಡೆದವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಂದರ್ಶನಗಳಲ್ಲಿ ಅದನ್ನು ವೈಭವೀಕರಿಸುತ್ತಾರೆ. ಇದು ಒಂದು ರೀತಿಯ ‘ಆತ್ಮವಂಚನೆ’. ಹಣ ನೀಡಿ ತಂದ ಪ್ರಶಸ್ತಿಯನ್ನು ಶ್ರೇಷ್ಠತೆಯ ಲಾಂಛನ ಎಂದು ಪ್ರದರ್ಶಿಸುವುದು ಸಾಧಕನೊಬ್ಬನಿಗೆ ಭೂಷಣವಲ್ಲ. ಇಂತಹ ಪ್ರಶಸ್ತಿ ಪಡೆದವರು ತಾತ್ಕಾಲಿಕವಾಗಿ ಪ್ರಚಾರ ಪಡೆಯಬಹುದೇನೋ, ಆದರೆ ಇತಿಹಾಸದ ಪುಟಗಳಲ್ಲಿ ಅವರ ಹೆಸರು ಉಳಿಯುವುದಿಲ್ಲ. ಏಕೆಂದರೆ, ಇತಿಹಾಸವು ನೆನಪಿಡುವುದು ಪ್ರಶಸ್ತಿಯ ಪಟ್ಟಿಗಳನ್ನಲ್ಲ, ಬದಲಾಗಿ ವ್ಯಕ್ತಿಯ ನಿಜವಾದ ಕೊಡುಗೆಯನ್ನು ಅಳೆಯುತ್ತದೆ. ತನ್ನನ್ನು ತಾನೇ ಹೊಗಳಿಕೊಳ್ಳುವ, ಹೊಗಳಿಸಿಕೊಳ್ಳುವ ಅದಕ್ಕಾಗಿ ರಾಷ್ಟ್ರೀಯ-ಅಂತರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿಕೊಳ್ಳುವ ಬೆಂಬಲಯುಕ್ತ ‘ಆತ್ಮರತಿ’ಗಳಿಗೆ ಏನೆನ್ನಲಿ!
ಪ್ರಶಸ್ತಿಗಳ ಈ ಮಾರುಕಟ್ಟೆಯನ್ನು ನಾವು ಪ್ರಶ್ನಿಸಬೇಕಿದೆ. ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಗುಣಮಟ್ಟವನ್ನು ನಿರ್ಧರಿಸಲು ಅಂತಹ ಪ್ರಶಸ್ತಿಗಳ ಅವಶ್ಯಕತೆಯಿಲ್ಲ. ಅವರ ಕೆಲಸವೇ ಅವರ ಸಾಕ್ಷಿಯಾಗಬೇಕು. ನಾವೆಲ್ಲರೂ ಈ ‘ಪ್ರಶಸ್ತಿಗಳ ಪ್ರಲಾಪ’ವನ್ನು ನೋಡಿ ಮರುಳಾಗುವುದನ್ನು ಬಿಟ್ಟು, ಒಳಗಿನ ಸತ್ವವನ್ನು ಗುರುತಿಸಲು ಕಲಿಯಬೇಕು. ಹಣಕ್ಕೆ ಕೊಂಡುಕೊಳ್ಳಬಹುದಾದ ಯಾವುದೇ ಪ್ರಶಸ್ತಿಯು ಗೌರವವನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಅದನ್ನು ಪಡೆದವರ ವ್ಯಕ್ತಿತ್ವವನ್ನೇ ಕುಗ್ಗಿಸುತ್ತದೆ. ಪ್ರಶಸ್ತಿಗಳೆಂಬ ಈ ಕೊಡು-ಕೊಳುಗೆಯ ವ್ಯವಹಾರವನ್ನು ತಿರಸ್ಕರಿಸಿ, ನಿಜವಾದ ಪ್ರತಿಭೆಯನ್ನು ಗುರುತಿಸುವ ಸಂಸ್ಕೃತಿಯನ್ನು ಬೆಳೆಸಬೇಕಿದೆ.
ಪ್ರಶಸ್ತಿಗಳನ್ನು ತಿರಸ್ಕರಿಸಿ ಅಥವಾ ಅಸಡ್ಡೆಮಾಡಿ ಎನ್ನುವ ಅರ್ಥವಿದಲ್ಲ. ಬದಲಿಗೆ, ಪ್ರಶಸ್ತಿಯನ್ನು ಒಂದು ಸಾಧನೆಯ ಅಂತಿಮ ಗಮ್ಯ ಎಂದು ಭಾವಿಸಬೇಡಿ. ಸಾಧನೆಯು ಒಂದು ನಿರಂತರವಾದ ಪ್ರಕ್ರಿಯೆ. ಪ್ರಶಸ್ತಿಯೆಂಬುದು ಬಂದರೆ ಅದು ಮಳೆಯ ಹನಿ ಇದ್ದಂತೆ, ಬರದಿದ್ದರೆ ಬರಗಾಲ ಬರುವುದಿಲ್ಲ. ನಮ್ಮ ಸಾಧನೆಯ ಪಯಣವು ಪ್ರಶಸ್ತಿಗಳೆಂಬ ಪ್ರಲಾಪದಲ್ಲಿ ಕಳೆದು ಹೋಗದಂತೆ ಎಚ್ಚರ ವಹಿಸೋಣ. ಸತ್ಯ ಮತ್ತು ನಿರಂತರ ಕ್ರಿಯಾಶೀಲತೆಯೇ ನಮ್ಮ ನಿಜವಾದ ಪ್ರಶಸ್ತಿ.
ಬದಲಾವಣೆಯು ಇಲ್ಲಿಯೂ ಅಗತ್ಯವಿದೆ. ಪ್ರಶಸ್ತಿ ಸಿಗದಿರುವುದು ನಿಮ್ಮ ಅಸಾಮರ್ಥ್ಯವಲ್ಲ. ಪ್ರಶಸ್ತಿಯು ನಿಮ್ಮ ಮೌಲ್ಯವನ್ನು ನಿರ್ಧರಿಸುವ ಅಳತೆಗೋಲು ಆಗಬಾರದು. ಸಾಧಕನಾದವನಿಗೆ ತನ್ನ ಕೆಲಸದಲ್ಲಿ ಸಿಗುವ ತೃಪ್ತಿ, ಸಮಾಜಕ್ಕೆ ಅವನು ನೀಡುವ ಕೊಡುಗೆಯ ಫಲವೇ ದೊಡ್ಡದು. ನಾವು ಪ್ರಶಸ್ತಿಗಳ ಹಿಂದೆ ಓಡುವುದನ್ನು ಬಿಟ್ಟು, ನಮ್ಮ ಕೆಲಸದ ಗುಣಮಟ್ಟದ ಹಿಂದೆ ಗಮನ ಹರಿಸಿದಾಗ ಮಾತ್ರ ಪ್ರಶಸ್ತಿಗಳೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಶಾಶ್ವತವಾಗಿ ವ್ಯಕ್ತಿ-ವ್ಯಕ್ತಿತ್ವ ಉಳಿಯುವಂತಾಗುತ್ತದೆ.