ಹಿರಿಯ ನಾಗರಿಕರ ಹಿತರಕ್ಷಣೆ ಸರ್ಕಾರ
ಆದ್ಯಕರ್ತವ್ಯ !
ಮನುಜರ ಜೀವಿತಾವಧಿ ಹೆಚ್ಚಾಗುತ್ತಿರುವುದು ವಿಶ್ವ ವಿದ್ಯಮಾನ. ಸರಾಸರಿ ಆಯುಷ್ಯಾವಧಿ 70 ವರ್ಷಗಳಿಗಿಂತ ಹೆಚ್ಚಾಗಿದೆ. ವಿಶ್ವದಾದ್ಯಂತ ಹಿರಿಯ ನಾಗರಿಕರ (60 ವರ್ಷ ಮೀರಿದವರ) ಸಂಖ್ಯೆ ವೃದ್ಧಿಸುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಲಭ್ಯವಿರುವ ಅಂಕಿ-ಅಂಶಗಳ ಅನ್ವಯ 2030 ರ ವೇಳೆಗೆ ವಿಶ್ವದಲ್ಲಿನ ಹಿರಿಯ ನಾಗರಿಕರ ಸಂಖ್ಯೆ 140 ಕೋಟಿ ಆಗಲಿದೆ. 2050 ರ ವೇಳೆಗೆ ಇದು 200 ಕೋಟಿಗೆ ವೃದ್ಧಿಸಲಿದೆ.
2025 ಅಕ್ಟೋಬರ್ 28 ರ ಪಿ.ಟಿ.ಐ. ವರದಿಯಂತೆ 2036 ರ ವೇಳೆಗೆ ಭಾರತದಲ್ಲಿ 23 ಕೋಟಿ ಹಿರಿಯರಿರುತ್ತಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಸುಮಾರು 15% ಆಗಿರುತ್ತದೆ. 2050 ರ ವೇಳೆಗೆ ಇದು 32 ಕೋಟಿಗೆ (ಒಟ್ಟು ಜನಸಂಖ್ಯೆಯ ಶೇಕಡ 19.5 ರಷ್ಟು) ತಲುಪಲಿದೆ. ಈ ಬೆಳವಣಿಗೆ ಆಶಾದಾಯಕವಾದರೂ ಸಮಾಜದಲ್ಲಿನ ಆರೋಗ್ಯ, ಸಾಮಾಜಿಕ, ಮತ್ತು ಆರ್ಥಿಕ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರುತ್ತದೆ. ಹಿರಿಯ ನಾಗರಿಕರ ವೈದ್ಯಕೀಯ ವೆಚ್ಚವೂ ಹೆಚ್ಚಾಗಿರುತ್ತದೆ. ಈ ವರ್ಗ ಹೆಚ್ಚಿನ ಆರೋಗ್ಯ ಸೇವೆಗಳನ್ನು ಬಳಸಿಕೊಳ್ಳುತ್ತದೆ. ಇವುಗಳನ್ನು ಸಮರ್ಪಕವಾಗಿ ಒದಗಿಸುವುದು ಸವಾಲಿನ ಕೆಲಸವೇ ಸರಿ.

ಭಾರತದಲ್ಲಿನ ಹಿರಿಯ ನಾಗರಿಕರ ಕುರಿತ ಕೆಲವು ಪ್ರಮುಖ ಮಾಹಿತಿ ಈ ಸವಾಲಿನ ಅಗಾಧತೆಯನ್ನು ಸೂಚಿಸುತ್ತದೆ.
- 58% ಮಹಿಳೆಯರಲ್ಲಿ 54% ವಿಧವೆಯರು
- 9% ಮಹಿಳೆಯರು ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ
- ಹಿರಿಯರಲ್ಲಿ ಶೇಕಡ 75 ರಷ್ಟು ಮಂದಿ ಒಂದು ಅಥವಾ ಹೆಚ್ಚಿನ ನಿಡುಗಾಲದ ಕಾಯಿಲೆಯಿಂದ ಬಳಲುತ್ತಿರುತ್ತಾರೆ
- 18% ಮಂದಿಗೆ ಮಾತ್ರ ಆರೋಗ್ಯವಿಮೆ ಇದೆ
- 28% ಹಿರಿಯ ನಾಗರಿಕರಿಗೆ ಸರ್ಕಾರ ಒದಗಿಸುವ ಸೌಲಭ್ಯಗಳ ತಿಳಿವಳಿಕೆ ಇಲ್ಲ
- 24% ಹಿರಿಯರ ಬಳಿ ಈ ಸೌಲಭ್ಯಗಳ ಉಪಯೋಗ ಪಡೆಯಲು ಬೇಕಾದ ದಾಖಲೆಗಳಿಲ್ಲ
- 70% ಹಿರಿಯರು ತಮ್ಮ ದೈನಂದಿನ ನಿರ್ವಹಣೆಗಾಗಿ ಇತರರ ಮೇಲೆ ಅವಲಂಬಿತರಾಗಿದ್ದಾರೆ
- 78% ಹಿರಿಯರಿಗೆ ಯಾವುದೇ ಪಿಂಚಿಣಿ ಲಭ್ಯವಿಲ್ಲ
- 5% ಹಿರಿಯ ನಾಗರಿಕರು ಕಿರುಕಳ ಅನುಭವಿಸುತ್ತಾರೆ
- ಹಿರಿಯ ಮರೆಗುಳಿಗಳ ಸಂಖ್ಯೆ ಈಗಿನ 4 ದಶಲಕ್ಷದಿಂದ 2050 ರ ವೇಳೆಗೆ 13.4 ದಶಲಕ್ಷಕ್ಕೆ ಏರಿಕೆಯಾಗಲಿದೆ
- ಸಮಾಜದಲ್ಲಿ ಹಿರಿಯರು ಹೊರೆ ಎಂಬ ಭಾವ ಬೆಳೆಯುತ್ತಿದೆ
- ಹಿರಿಯರಿಗಿರುವ ಗಳಿಕೆಯ ಅವಕಾಶಗಳು ಅಲ್ಪ
- ಸಾಮಾಜಿಕ ಭದ್ರತೆ ಹಾಗು ನೆರವಿನ ಕೊರತೆಗಳಿವೆ
- ಸಾಮಾಜಿಕ ತಾರತಮ್ಯ (ಅಸಮಾನತೆ) ಹೆಚ್ಚಾಗುತ್ತಿದೆ
- ತಿಳಿವಳಿಕೆಯ ಅಭಾವವಿದೆ
- ಡಿಜಿಟಲ್ ತಂತ್ರಜ್ಞಾನವನ್ನು ಬಳಸುವ ಸಾಮರ್ಥ್ಯದ ಕೊರತೆಯಿದೆ
- ವೃದ್ಧರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ
- ಸೈಬರ್ ಅಪರಾಧಗಳಿಗೆ ಹಿರಿಯರು ಸುಲಭವಾಗಿ ಬಲಿಪಶುಗಳಾಗುತ್ತಿದ್ದಾರೆ
ಆರೋಗ್ಯ ಕ್ಷೇತ್ರವೊಂದರಲ್ಲೇ ಹಲವಾರು ಕೊರತೆಗಳಿವೆ. ಅವುಗಳಲ್ಲಿ ಕೆಲವು ಇಂತಿವೆ:
- ಸಮಗ್ರ ಹಾಗು ಸಂಯೋಜಿತ ಸೇವಾ ಪ್ಯಾಕೇಜ್ ಇಲ್ಲದಿರುವುದು
- ಹಿರಿಯರ ವೈದ್ಯಕೀಯ ಸೇವೆಯ ಮೂಲಭೂತ ಸೌಲಭ್ಯಗಳ ಅಲಭ್ಯತೆ
- ನುರಿತ ಅರೆಸೇವಾ ಸಿಬ್ಬಂದಿಯ ಅಭಾವ
- ಹಿರಿಯರ ವೈದ್ಯಕೀಯ ಸೇವೆಗೆ ನಿಯಮಿತ ಆರ್ಥಿಕ ನೆರವು ಇಲ್ಲದಿರುವುದು
- ತುರ್ತು ಪ್ರತಿಕ್ರಿಯೆಯ ಸೌಲಭ್ಯವಿಲ್ಲದಿರುವುದು
- ನಿರ್ವಹಣಾ ಚೌಕಟ್ಟು ಸಮರ್ಪಕವಾಗಿಲ್ಲದಿರುವುದು
ಗ್ರಾಮೀಣ ಪ್ರದೇಶದಲ್ಲಿರುವ ಹಿರಿಯರಿಗೆ ಕ್ಷಿಪ್ರ ಹಾಗು ಅಗತ್ಯ ಆರೋಗ್ಯ ಸೇವೆ ದೊರಕುವುದು ಕಷ್ಟ ಎನ್ನುವ ಪರಿಸ್ಥಿತಿ ಇದೆ.
ಈ ಸವಾಲುಗಳನ್ನು ಎದುರಿಸಲು ಸರ್ಕಾರ ಮತ್ತು ಸಮಾಜ ಸನ್ನದ್ಧವಾಗಬೇಕಿದೆ. ಭಾರತದ ಸಂವಿಧಾನದಲ್ಲಿ ನಾಗರಿಕರ ಹಕ್ಕುಗಳ ರಕ್ಷಣೆಯ ಉಲ್ಲೇಖವಿದೆ. ವೃದ್ಧರ ಹಿತರಕ್ಷಣೆಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ವೃದ್ಧರು ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಹಾಗು ಹಿರಿಯ ನಾಗರಿಕರ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸಲು ಭಾರತ ಸರ್ಕಾರವು ಹಲವಾರು ಉಪಕ್ರಮಗಳು, ನೀತಿಗಳು, ಮತ್ತು ಕ್ರಿಯಾಯೋಜನೆಗಳನ್ನು ರೂಪಿಸಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯಾಲಯವು ಹಿರಿಯ ನಾಗರಿಕರ ಕಲ್ಯಾಣವನ್ನು ಖಾತ್ರಿಪಡಿಸುವ ಸಮನ್ವಯ ಸಚಿವಾಲಯವಾಗಿ ಕಾರ್ಯ ನಿರ್ವಹಿಸುತ್ತಿದೆ. 2024 ರ ಫೆಬ್ರವರಿಯಲ್ಲಿ ನೀತಿ ಆಯೋಗವು ಭಾರತದಲ್ಲಿ ಹಿರಿಯ ನಾಗರಿಕರ ಆರೈಕೆಯಲ್ಲಿನ ಸುಧಾರಣೆಗಳನ್ನು ಸವಿವರವಾಗಿ ಚರ್ಚಿಸಿರುವ ಪತ್ರಿಕೆಯೊಂದನ್ನು ಪ್ರಕಟಿಸಿದೆ. ಇದರನ್ವಯ ಆರೋಗ್ಯ ಸಬಲೀಕರಣ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ, ಕಾನೂನು ರಕ್ಷಣೆಗಳು, ಡಿಜಿಟಲ್ ಮತ್ತು ನಾವೀನ್ಯತೆ, ಹಾಗು ಮೂಲ ಸೌಕರ್ಯಗಳು ಪ್ರಮುಖ ಸುಧಾರಣಾ ಕ್ಷೇತ್ರಗಳಾಗಿವೆ.
ಸರ್ಕಾರದ ಹಲವು ಮುಖ್ಯ ಯೋಜನೆಗಳು ಇಂತಿವೆ :
- ಅಟಲ್ ಪಿಂಚಿಣಿ ಯೋಜನೆ
- ಅಟಲ್ ವಯೋ ಅಭ್ಯುದಯ ಯೋಜನೆ
- ರಾಷ್ಟ್ರೀಯ ವಯೋಶ್ರೀ ಯೋಜನೆ
- ಸೇಜ್ (ಸೀನಿಯರ್ ಕೇರ್ ಏಜಿಂಗ್ ಗ್ರೋತ್ ಎಂಜಿನ್) ಪೋರ್ಟಲ್
- ಸೇಕ್ರೆಡ್ (ಸೀನಿಯರ್ ಏಬಲ್ ಸಿಟಿಜನ್ಸ್ ಫಾರ್ ರಿ-ಎಂಪ್ಲಾಯ್ಮೆಂಟ್ ಇನ್ ಡಿಗ್ನಿಟಿ) ಪೋರ್ಟಲ್
- ನ್ಯಾಷನಲ್ ಪ್ರೋಗ್ರಾಂ ಫಾರ್ ದ ಹೆಲ್ತ್ ಕೇರ್ ಆಫ್ ದ ಎಲ್ಡರ್ಲೀ
- ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ
- ಇಂದಿರಾ ಗಾಂಧಿ ನ್ಯಾಷನಲ್ ಓಲ್ಡ್ ಏಜ್ ಪೆನ್ಷನ್ ಸ್ಕೀಂ
- ಸೀನಿಯರ್ ಸಿಟಿಜನ್ ವೆಲ್ಫೇರ್ ಫಂಡ್
- ಸೋಷಿಯಲ್ ಅಂಡ್ ಕಮ್ಯುನಿಟಿ ಸಪೋರ್ಟ್ ಫಾರ್ ಎಲ್ಡರ್ಲೀ
- ಫ್ಯಾಮಿಲಿ ಸಪೋರ್ಟ್
- ಸೀನಿಯರ್ ಸಿಟಿಜನ್ ವೆಲ್ಫೇರ್ ಪೋರ್ಟಲ್
- ಹಿರಿಯ ನಾಗರಿಕರ ಸಹಾಯವಾಣಿ (14567) – ಬೆಳಗಿನ ಎಂಟು ಗಂಟೆಯಿಂದ ರಾತ್ರಿ ಎಂಟರ ತನಕ ಮಾತ್ರ
ಇವಲ್ಲದೆ ಹಿರಿಯ ನಾಗರಿಕರಿಗೆ ಠೇವಣಿಗಳ ಮೇಲೆ ಅಧಿಕ ಬಡ್ಡಿದರ, ತೆರಿಗೆ ವಿನಾಯಿತಿ / ರಿಯಾಯಿತಿ, ಪ್ರಯಾಣ ದರದಲ್ಲಿ ರಿಯಾಯಿತಿ, ಮುಂತಾದ ಆರ್ಥಿಕ ಸೌಲಭ್ಯಗಳನ್ನೂ ಸರ್ಕಾರ ನೀಡುತ್ತಿದೆ. ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ (ತಿದ್ದುಪಡಿ) ಕಾಯಿದೆ 2015 ಮಕ್ಕಳು ಮತ್ತು ಉತ್ತರಾಧಿಕಾರಿಗಳು ಪೋಷಕರಿಗೆ ಜೀವನಾಂಶ ಒದಗಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ ಬಹುತೇಕ ಹಿರಿಯರಿಗೆ (ಅಥವಾ ಅವರನ್ನು ನೋಡಿಕೊಳ್ಳುವವರಿಗೆ) ಇವುಗಳ ಸಂಪೂರ್ಣ ಮಾಹಿತಿ ಇಲ್ಲದಿರುವುದರಿಂದ ಈ ಯೋಜನೆಗಳು ಎಲ್ಲ ಹಿರಿಯರನ್ನು ತಲುಪುವಲ್ಲಿ ಸಂಪೂರ್ಣ ಸಫಲವಾಗಿಲ್ಲ. ಈ ಕೊರತೆಯನ್ನು ನಿವಾರಿಸಲು ಸೂಕ್ತ ಕ್ರಮದ ಅಗತ್ಯವಿದೆ.
ಸರ್ಕಾರ ಹಲವಾರು ಯೋಜನೆಗಳು ಹಾಗು ಪೂರಕ ಕಾನೂನುಗಳನ್ನು ಅನುಷ್ಠಾನಗೊಳಿಸಿದ್ದರೂ ಭಾರತದಲ್ಲಿ ಹಿರಿಯ ನಾಗರಿಕರು ಹಲವಾರು ಸವಾಲುಗಳನ್ನು ಎದುರಿಸುತ್ತಲೇ ಇದ್ದಾರೆ.
ಆರೋಗ್ಯ ಸೇವೆಯ ಸೀಮಿತ ಲಭ್ಯತೆ : ಸೀಮಿತ ವೃದ್ಧಾಪ್ಯದ ಆರೈಕೆ ಸೌಲಭ್ಯಗಳು, ನಿಯಮಿತ ಆರೋಗ್ಯ ತಪಾಸಣೆಗಳ ಕೊರತೆ ಮತ್ತು ಹೆಚ್ಚುತ್ತಿರುವ ಆರೋಗ್ಯ ಸಂಬಂಧಿತ ಖರ್ಚುಗಳು ಕಳವಳಕಾರಿಯಾಗಿವೆ.
ಆರ್ಥಿಕ ಅಭದ್ರತೆ : ಅನೇಕ ವೃದ್ಧರು ಔಪಚಾರಿಕ ಪಿಂಚಣಿ ವ್ಯವಸ್ಥೆಗಳಿಲ್ಲದೆ ಅನೌಪಚಾರಿಕ ಕುಟುಂಬ ಬೆಂಬಲವನ್ನು ಅವಲಂಬಿಸಿದ್ದಾರೆ. ಇದು ವಲಸೆ ಮತ್ತು ನಗರೀಕರಣದಿಂದಾಗಿ ಕ್ಷೀಣಿಸುತ್ತಿದೆ.
ಸಾಮಾಜಿಕ ಪ್ರತ್ಯೇಕತೆ ಮತ್ತು ನಿಂದನೆ : ಬದಲಾಗುತ್ತಿರುವ ಕುಟುಂಬ ಸಂರಚನೆಗಳು, ತಲೆಮಾರುಗಳ ನಡುವಿನ ಅಂತರ ಮತ್ತು ನಿರ್ಲಕ್ಷ್ಯವು ವೃದ್ಧರ ಮೇಲೆ ಭಾವನಾತ್ಮಕ ಹಾಗು ಕೆಲವೊಮ್ಮೆ ದೈಹಿಕ ದೌರ್ಜನ್ಯಕ್ಕೆ ಕಾರಣವಾಗಿವೆ.
ಡಿಜಿಟಲ್ ತಂತ್ರಜ್ಞಾನ / ಕೌಶಲ್ಯದ ಕೊರತೆ : ಒಂದೆಡೆ ಸೇವೆಗಳ ಡಿಜಿಟಲೀಕರಣ ಹೆಚ್ಚುತ್ತಿದೆ. ಇನ್ನೊಂದೆಡೆ ಡಿಜಿಟಲ್ ಕೌಶಲ್ಯದ ಕೊರತೆಯಿದೆ. ಇದರಿಂದಾಗಿ ಹಿರಿಯ ನಾಗರಿಕರು ಬ್ಯಾಂಕಿಂಗ್, ಆರೋಗ್ಯ ರಕ್ಷಣೆ, ಸರ್ಕಾರಿ ನೆರವು ಮುಂತಾದ ಅಗತ್ಯ ಸೌಲಭ್ಯಗಳನ್ನು ಪಡೆಯುವುದು ಕಷ್ಟವಾಗುತ್ತಿದೆ. ಇದಕ್ಕಾಗಿ ಅವರು ಇತರರನ್ನು ಅವಲಂಬಿಸಬೇಕಾಗುತ್ತಿದೆ.
ಅಸಮರ್ಪಕ ಮೂಲಸೌಕರ್ಯ : ವೃದ್ಧಾಶ್ರಮಗಳು ಮತ್ತು ಆರೈಕೆ ಕೇಂದ್ರಗಳು ಅಸಮಾನವಾಗಿ ವಿತರಿಸಲ್ಪಟ್ಟಿವೆ ಮತ್ತು ಸಾಮಾನ್ಯವಾಗಿ ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾಗುತ್ತವೆ.
ಒಟ್ಟಾರೆಯಾಗಿ, ಕೆಳಗಾಣಿಸಿದ ಪ್ರಕ್ರಿಯೆಗಳತ್ತ ಸರ್ಕಾರ ಗಮನ ಹರಿಸುವ ಜರೂರಿದೆ :
- ಹಿರಿಯರು ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳುವ ವ್ಯವಸ್ಥೆ
- ಆರಂಭದಲ್ಲಿಯೇ ರೋಗಪತ್ತೆ ಹಾಗು ಚಿಕಿತ್ಸೆ, ಆಹಾರ, ವ್ಯಾಯಾಮ, ಸ್ವಾವಲಂಬನೆಗೆ ಒತ್ತು ನೀಡಲು ಜಾಗೃತಿ ಮೂಡಿಸುವ ಪ್ರಕ್ರಿಯೆ
- ವೈದ್ಯಕೀಯ ಹಾಗು ಶುಶ್ರೂಷಕರ ಸಂಖ್ಯೆ ಹೆಚ್ಚಿಸಲು ದೀರ್ಘಾವಧಿ ಯೋಜನೆ
- ವಿಶೇಷ ಆರೋಗ್ಯವಿಮೆಗಳನ್ನು ರೂಪಿಸುವುದು
- ಪಿಂಚಿಣಿ ವ್ಯಾಪ್ತಿಯನ್ನು ವಿಸ್ತರಿಸುವುದು
- ಹಿರಿಯರು ಮೂಲಭೂತ ಅಗತ್ಯಗಳನ್ನು ಸುಲಭದಲ್ಲಿ ಪಡೆಯಲು ಸಾಧ್ಯವಾಗುವಂತಹ ಸಾಮಾಜಿಕ ಸುರಕ್ಷತಾ ವ್ಯವಸ್ಥೆ ರೂಪಿಸುವುದು
- ಹಿರಿಯರು ಸಕ್ರಿಯರಾಗಿರಲು ಸೂಕ್ತ ಅವಕಾಶಗಳನ್ನು ಕಲ್ಪಿಸುವುದು
- ಅಸಿಸ್ಟೆಡ್ ಲಿವಿಂಗ್ ವ್ಯವಸ್ಥೆಯನ್ನು ಸುದೃಢಗೊಳಿಸುವುದು
- ತೆರಿಗೆ ವಿನಾಯಿತಿ, ರಿಯಾಯಿತಿ, ಇತ್ಯಾದಿಗಳನ್ನು ಕಾಲಕಾಲಕ್ಕೆ ಪರಿಷ್ಕರಿಸುವುದು
- ರಿವರ್ಸ್ ಮಾರ್ಟ್ಗೆಜ್ ಪ್ರಕ್ರಿಯೆಯನ್ನು ಸರಳ ಮತ್ತು ಸಬಲೀಕರಿಸುವುದು
- ಕಾನೂನಿನ ಜಾಗೃತಿ ಮೂಡಿಸುವುದು
- ಡಿಜಿಟಲ್ ಲಿಟರೆಸಿ ಹೆಚ್ಚಿಸುವುದು
- ಡಿಜಿಟಲ್ ವ್ಯವಹಾರಗಳನ್ನು ಸರಳೀಕರಿಸುವುದು, ಸುರಕ್ಷತೆ ಹೆಚ್ಚಿಸುವುದು
ಸರ್ಕಾರವು ಹಿರಿಯರ ಹಿತರಕ್ಷಣೆಗೆ ಅಗತ್ಯವಾದ ಸಂಪನ್ಮೂಲಗಳನ್ನು ಸಮರೋಪಾದಿಯಲ್ಲಿ ಒದಗಿಸಬೇಕಿದೆ. ಆರ್ಥಿಕವಾಗಿ ಸಬಲರಲ್ಲದವರೂ ಸೇರಿದಂತೆ ನಮ್ಮ ದೇಶದ ಎಲ್ಲ ವೃದ್ಧರಿಗೂ ಈ ಸೌಲಭ್ಯಗಳು ಸುಲಭದಲ್ಲಿ, ಸಕಾಲದಲ್ಲಿ ದೊರಕಿ ಅವರು ಘನತೆಯಿಂದ ಜೀವಿಸು ವಂತಾಗ ಬೇಕೆಂಬ ಆಶಯವನ್ನು ಸಾಕಾರಗೊಳಿಸಬೇಕಿದೆ.
ಮಂಜುನಾಥ. ಡಿ. ಎಸ್.
ಹಿರಿಯ ಅಂಕಣಕಾರರು, ಬೆಂಗಳೂರು.